ಒಬ್ಬ ವ್ಯಕ್ತಿ ನಮ್ಮೆದುರು ಏನೂ ಅಲ್ಲ ಎನ್ನುವಾಗ ತೃಣಕ್ಕೆ ಸಮಾನ ಎನ್ನುವುದುಂಟು. ಯಾವುದು ಲಘು, ಯಾವುದು ನಿಸ್ಸತ್ವ ,ಯಾವುದು ಏನೂ ಅಲ್ಲವೋ ಅಂತಹುದನ್ನು ಕುರಿತು ಹೇಳುವಾಗ ಹುಲ್ಲಿನ ಉದಾಹರಣೆಯನ್ನು ಕೊಡುತ್ತೇವೆ. ಮನುಷ್ಯನ ಸ್ವಭಾವವೇ ಇದು ಎಲ್ಲವನ್ನೂ ಕಡೆಗಣಿಸುವುದು, ಎಲ್ಲವನ್ನೂ ಕೀಳಾಗಿ ಕಾಣುವುದು, ನಾನೇ ಶ್ರೇಷ್ಠ ಎಂಬ ಭಾವನೆ ಅವನದ್ದು.

ಆದರೆ ಹುಲ್ಲು ಮಾಡಿದ್ದನ್ನು ನಮಗೆ ಮಾಡಲು ಸಾಧ್ಯವಿಲ್ಲ. ಬೇಸಿಗೆ ಕಾಲ ಪೂರ್ತಿ ಹುಲ್ಲು ಒಣಗಿರುತ್ತದೆ .ಅದರ ಬೀಜಗಳು ಎಲ್ಲೋ ಮರೆಯಾಗಿರುತ್ತದೆ. ಮತ್ತೆ ಮಳೆ ಬಂದಾಗ ಎದ್ದು ನಿಲ್ಲುತ್ತವೆ. ಮಳೆ ಬರದಿದ್ದರೆ ಅದು ಎಷ್ಟು ಕಾಲವಾದರೂ ನಾಶವಾಗದೆ ಉಳಿದಿರುತ್ತದೆ. ಯಾವಾಗ ಮಳೆ ಬಂತು ಆಗ ಅದು ಮತ್ತೆ ಚಿಗುರೊಡೆಯುತ್ತದೆ. ಹಸಿರಾಗಿ ಬೆಳೆಯುತ್ತದೆ . ಆ ಯೋಗ್ಯತೆ ಮನುಷ್ಯನಿಗಿಲ್ಲ. ನೀರಿಲ್ಲದೆ ಮನುಷ್ಯ ಎಷ್ಟು ಕಾಲ ಉಳಿಯಬಹುದು? ಹುಲ್ಲಿನಂತೆ ಮತ್ತೆ ಬದುಕು ಪಡೆಯುವ ಅವಕಾಶ ಮಾನವನಿಗಿದೆಯೇ? ಇಲ್ಲ. ಹಾಗಾದರೆ ಯಾರ ಶಕ್ತಿ ಹೆಚ್ಚು? ಕಷ್ಟ ಸಹಿಸುವ ಶಕ್ತಿ ಮನುಷ್ಯನಿಗಿಂತ ಹುಲ್ಲಿಗೇ ಹೆಚ್ಚು. ನಮ್ಮಲ್ಲಿ ಎಷ್ಟೋ ಪ್ರತಿಭೆಗಳು ಅವಕಾಶ ದೊರೆಯದಿದ್ದಾಗ ಕಮರಿ ಹೋಗುತ್ತವೆ. ಒಂದಿಲ್ಲೊಂದು ದಿನ ಬೆಳಕಿಗೆ ಬರುತ್ತದೆ ಎಂಬ ಆಶಾಭಾವನೆ ಹೊಂದುವಂತೆಯೂ ಇಲ್ಲ. ಯಾಕೆಂದರೆ ದೀರ್ಘ ಕಾಲ ಕಷ್ಟ ಸಹಿಸುವ ಶಕ್ತಿ ಮಾನವನಿಗೆ ಇಲ್ಲ. ಹುಲ್ಲಿನ ಸಹನೆ ಮಾನವನಿಗೆ ಇಲ್ಲ.

ಹುಲ್ಲು ಅವಕಾಶ ಸಿಕ್ಕಿದಲ್ಲಿ ಬೆಳೆಯುತ್ತದೆ. ನೆಲ ,ಕಲ್ಲು, ಮನೆ, ಮರ ಎಲ್ಲಾದರೂ ಆಗಬಹುದು. ಅದು ಚಿಗುರುತ್ತದೆ. ಆದರೆ ನಾವು ಯಾವಾಗ? ಹೇಗೆ? ಎಲ್ಲಿ? ಅವಕಾಶ ಸಿಗುತ್ತದೋ ಅದನ್ನು ಉಪಯೋಗಿಸಿಕೊಂಡು ಬೆಳೆ ಎಂದರೆ ನಮ್ಮಿಂದ ಸಾಧ್ಯವಿಲ್ಲ. ನಿಶ್ಶರ್ತವಾಗಿ ಬೆಳೆಯಲು ನಮ್ಮಿಂದ ಆಗುವುದಿಲ್ಲ. ನಮ್ಮ ಬದುಕಿನಲ್ಲಿ ನಿಶ್ಶರ್ತವಾಗಿ ನಾವು ಯಾವ ಕೆಲಸವನ್ನೂ ಮಾಡುವುದಿಲ್ಲ. ಹುಲ್ಲಿನಂತೆ ‘ರೆ’ ಇಲ್ಲದೆ ಕೆಲಸ ಮಾಡಬೇಕು. ನಾವು ಹೀಗಿದ್ದರೆ ಹಾಗೆ ಮಾಡುತ್ತೇವೆ ಎನ್ನುತ್ತೇವೆ. ‘ರೆ’ ಪ್ರಪಂಚದಲ್ಲಿ ವಿಹರಿಸುತ್ತೇವೆ. ದೇಶ, ಕಾಲ, ವಸ್ತು, ವ್ಯಕ್ತಿ, ಸಂದರ್ಭ, ವಿಷಯದಲ್ಲಿ ನಮಗೆ ‘ರೆ’ ಇದೆ. ಆ ಕಾಲ ಬಂದಿದ್ದರೆ…. ಆ ವಸ್ತು ಹೀಗಿದ್ದರೆ…… ಆ ವ್ಯಕ್ತಿ ಯಾಗಿದ್ದರೆ….. ಸಂದರ್ಭ ಕೂಡಿಬಂದರೆ ಹೀಗೆ ಎಲ್ಲದರಲ್ಲೂ ನಾವು ‘ರೆ’ ಎನ್ನುತ್ತಾ ಕಳೆಯುತ್ತೇವೆ. ಆದರೆ ಹುಲ್ಲಿಗೆ ಇದಿಲ್ಲ. ಅದಕ್ಕೆ ಸ್ಥಾನಮಾನ ಪ್ರಶ್ನೆ ಇಲ್ಲ. ನಾನು ಅಲ್ಲೇ….. ಅದೇ ಕಾಲಕ್ಕೆ…. ಹಾಗೆಯೇ ಬೆಳೆಯುವುದು ಎನ್ನುವುದಿಲ್ಲ. ಅದಕ್ಕೆ ಮೇಲು ಕೀಳು ಭಾವನೆ ಇಲ್ಲ. ಎಲ್ಲಾದರೂ ಬೆಳೆಯುತ್ತದೆ. ಇಟ್ಟ ಹಾಗೆ ಇರುವೆ ಎನ್ನುವ ಭಾವ ಅದರದ್ದು.

RELATED ARTICLES  ನಮ್ಮ ಮುಂದೆ ಶ್ರೀಗುರುಮೂರ್ತಿ ಬಂದು ನಿಂತರೂ ನಮ್ಮ ಚಿತ್ತ ಅವರೆಡೆ ಇಲ್ಲವಾದರೆ ನಮಗೆ ಆ ಭಾವನೆಯೂ ಆಗುವದಿಲ್ಲ!

ದೇವನಲ್ಲಿ ಕುಲಶೇಖರ ಕೇಳಿದ್ದು “ನಿನ್ನ ಪಾದ ಪದ್ಮ ಎದುರಿಗಿದ್ದರೆ ಸ್ವರ್ಗ ನರಕ ಯಾವುದಾದರೂ ಆದೀತು” ಎಂದು. ಅದೇ ಜಯ- ವಿಜಯರಲ್ಲಿ “ಮಿತ್ರರಾಗಿ ಏಳು ಜನ್ಮ ಬೇಕಾ?…. ಶತ್ರುಗಳಾಗಿ ಮೂರು ಜನ್ಮ ಸಾಕಾ?” ಎಂದಾಗ ಜಯ- ವಿಜಯರು ಹೇಳಿದ್ದು “ಶತ್ರುಗಳಾಗಿ ಮೂರು ಜನ್ಮವೇ ಇರಲಿ” ಅಂತ. ಹುಲ್ಲಿನಲ್ಲೂ ಮನುಷ್ಯನಲ್ಲೂ ಇರುವ ವ್ಯತ್ಯಾಸವೆಂದರೆ ಅದು ಕುಲಶೇಖರರಲ್ಲಿ ಹಾಗೂ ಜಯ- ವಿಜಯರಲ್ಲಿ ಇರುವ ವ್ಯತ್ಯಾಸ ದಂತೆ. ಹುಲ್ಲಿನ ಬದುಕು ಶಾಶ್ವತವಾದದ್ದು ಆದರೆ ಮಾನವನ ಬದುಕು ಕ್ಷಣಿಕವಾದದ್ದು . ನಾವು ಗೋವಿನ ಹಾಲು ಕುಡಿಯುತ್ತೇವೆ. ಗೋವಿಗೆ ಉಣಿಸು ನೀಡುವುದು ಹುಲ್ಲು. ಗೋವಿಗೆ ಉಣಿಸುವ ಅದು ಜಗತ್ತನ್ನು ತಣಿಸುವ ಶಕ್ತಿಯನ್ನು ಹೊಂದಿದೆ. ಎಷ್ಟೇ ದೊಡ್ಡ ಪರ್ವತವೂವಾದರೂ ಹುಲ್ಲು ಅದಕ್ಕೆ ಸೊಬಗನ್ನು ನೀಡುತ್ತದೆ. ಹುಲ್ಲು ಗುಣಶಾಲಿ….. ಮನುಷ್ಯರಂತಲ್ಲ.

RELATED ARTICLES  ಪಂಚಭೂತಗಳ ವಿಚಾರದ ಬಗ್ಗೆ ಶ್ರೀಧರರು ತಿಳಿಸಿದ್ದೇನು ಗೊತ್ತಾ?

ಕಾಡಿನಲ್ಲಿ ರಾಮ ಸೀತೆ ಇರುವಾಗ ಒಂದು ಕಾಗೆ ಸೀತೆಯನ್ನು ಕೆಣಕಿತಂತೆ. ಅದು ಆಗಾಗ ಬಂದು ಸೀತೆಗೆ ಕುಕ್ಕುತ್ತಿತ್ತು . ರಾಮ ಸೀತೆಯ ಮಡಿಲಲ್ಲಿ ಮಲಗಿದ್ದಾಗಲೂ ಅದು ಹಾಗೆ ಮಾಡಿತು. ಸೀತೆಯನ್ನು ಕುಟ್ಟಿ ಗಾಯಗೊಳಿಸಿತು. ಆದರೆ ಸೀತೆ ರಾಮನಿಗೆ ಎಚ್ಚರವಾಗಬಾರದೆಂದು ಆ ನೋವನ್ನು ಸಹಿಸಿಕೊಂಡಳು. ಆದರೆ ಸೀತೆಯ ಗಾಯದಿಂದ ಹರಿದ ರಕ್ತದ ಹನಿ ರಾಮನ ಮೇಲೆ ಬಿದ್ದು ರಾಮ ಎಚ್ಚರಗೊಂಡ. ಎಚ್ಚರಗೊಂಡ ರಾಮನಿಗೆ ಕಂಡಿದ್ದು ಆ ಕಾಗೆ. ರಾಮನಿಗೆ ಸಿಟ್ಟು ಬಂತು . ಕುಳಿತ ಆಸನದಿಂದ ಒಂದು ಹುಲ್ಲು ಕಡ್ಡಿ ತೆಗೆದು ಕಾಗೆಯ ಮೇಲೆ ಎಸೆದ. ಹಾಗೆ ಎಸೆಯುವಾಗ ಬ್ರಹ್ಮಾಸ್ತ್ರದಿಂದ ಹುಲ್ಲುಕಡ್ಡಿಯನ್ನು ಅಭಿಮಂತ್ರಣ ಮಅಡಿ ಬಿಟ್ಟ. ಬೆದರಿದ ಕಾಗೆ ಆಶ್ರಯಕ್ಕಾಗಿ ಮೂರು ಲೋಕ ಸುತ್ತಿತು. ಕಾಪಾಡಿ ಎಂದು ಎಲ್ಲರನ್ನೂ ಕೇಳಿತು. ಯಾರೂ ಕಾಪಾಡದಿದ್ದಾಗ ಶ್ರೀರಾಮನ ಕಾಲಿಗೆರಗಿ ಕ್ಷಮೆ ಕೇಳಿತು. ರಾಮನಿಗೆ ಕರುಣೆ ಬಂತು. ಆದರೆ ಬ್ರಹ್ಮಾಸ್ತ್ರ ವ್ಯರ್ಥವಾಗಬಾರದು ಎಂದು ಕಾಗೆಯ ಒಂದು ಕಣ್ಣಿನ ಮೇಲೆ ಪ್ರಯೋಗ ಮಾಡಿದನಂತೆ. ಅದಕ್ಕೆ ಕಾಗೆಗೆ ಕಣ್ಣು ಎರಡಿದ್ದರೂ ದೃಷ್ಟಿಯೊಂದೇ ಎನ್ನುತ್ತಾರೆ. ಅದಕ್ಕಾಗಿಯೇ ಅದು ನೋಡುವಾಗ ಕುತ್ತಿಗೆಯನ್ನು ವಾರೆ ಮಾಡಿಯೇ ನೋಡುತ್ತದೆ. ಈ ಕಥೆಯಲ್ಲಿ ಬರುವ ಕಾಗೆ ಇಂದ್ರನ ಮಗನಾಗಿದ್ದ ಎನ್ನುತ್ತಾರೆ. ಒಟ್ಟಿನಲ್ಲಿ ಹುಲ್ಲು ಕಡ್ಡಿ ಮನೆಯ ಮಾಡಾಗಿ ಆಶ್ರಯವನ್ನೂ ನೀಡಬಲ್ಲುದು… ಹಾಗೆಯೇ ಬೆಂಕಿಯಾಗಿ ಸುಡಲೂ ಬಲ್ಲುದು. ಧರ್ಮಾಸನವಾಗಲೂ ಬಲ್ಲುದು… ಧರ್ಮನಿಷ್ಠರ ಆಯುಧವೂ ಆಗಬಲ್ಲುದು. ಆದ್ದರಿಂದ ಹುಲ್ಲೆಂಬ ಕೀಳರಿಮೆ ಬೇಡ. ತೃಣಸಮಾನ ಎಂಬುದು ಲಘುವಲ್ಲ ಗುರು ಎಂಬುದರ ಅರಿವು ನಮಗಿರಲಿ

✍️ ಡಾ.ರವೀಂದ್ರ ಭಟ್ಟ ಸೂರಿ..