ಭಕ್ತಿ ಎನ್ನುವುದು ಎಂದಿನಿಂದ ಪ್ರಾರಂಭವಾಗಬೇಕು? ಹುಟ್ಟುವ ಮೊದಲೋ?… ಹುಟ್ಟಿದ ನಂತರವೋ?… ಹತ್ತು ವರ್ಷಕ್ಕೋ?…. ಇಪ್ಪತ್ತು ವರ್ಷಕ್ಕೋ?…. ಐವತ್ತು ವರ್ಷಕ್ಕೋ? ಎಂಬ ಪ್ರಶ್ನೆಗೆ ಉತ್ತರ ಭಕ್ತಿ ರಕ್ತದಲ್ಲಿ ಹರಿಯಬೇಕು….! ಯಾವತ್ತಿನಿಂದ ರಕ್ತ ನಮ್ಮಲ್ಲಿ ಹರಿಯಲು ಪ್ರಾರಂಭಿಸುತ್ತದೆಯೋ ಅಂದಿನಿಂದಲೇ ಭಕ್ತಿ ನಮ್ಮಲ್ಲಿ ಪ್ರಾರಂಭವಾಗಬೇಕು. ಆದರೆ ಇಂದು ಏನಾಗಿದೆ?. ಕಗ್ಗದ ಕವಿ ಅದನ್ನು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ….
ಯುಕ್ತಿ ಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ
ಶಕ್ತಿ ಚತುರತೆಯಡಗಿ ನೀನು ಸೋತಂದು
ಉತ್ಕೃಮಣದರೆ ಮನದಿ ದೈವವನು ಪಿಡಿದೇನು?
ಭಕ್ತಿ ರಕ್ತದಿ ಪರಿಗೇಂ- ಮಂಕುತಿಮ್ಮ.
ಅಂತ . ನಾವು ಭಕ್ತಿಯ ಸಮಯದ ಬಗ್ಗೆ ವ್ಯತಿರಿಕ್ತವಾಗಿ ಭಾವಿಸುತ್ತೇವೆ. ನಿವೃತ್ತರಾದ ನಂತರ…. ಎಲ್ಲ ಇಂದ್ರಿಯಗಳು ಸೋತ ನಂತರ…. ಮೋಜು ಮಸ್ತಿ ಮಾಡಲು ಸಾಧ್ಯವಿಲ್ಲವೆಂದಾದಾಗ… ಭಕ್ತಿ ಮಾರ್ಗ ಹಿಡಿಯಬೇಕು ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ನಚಿಕೇತನ ತಂದೆ ಯಾಗ ಕೈಗೊಂಡಿದ್ದ. ಆ ಸಂದರ್ಭದಲ್ಲಿ ಸಾಕಷ್ಟು ದಾನ ಧರ್ಮಗಳನ್ನು ಮಾಡಿದ. ಗೋವುಗಳನ್ನು ದಾನವಾಗಿ ಕೊಟ್ಟ. ಆ ಗೋವುಗಳು ಮುದಿ ಗೋವುಗಳಿದ್ದವು. ಅದನ್ನು ನೋಡಿದ ನಚಿಕೇತ ಅಪ್ಪ ಯಾಕೆ ದಾನ ಮಾಡುತ್ತೀಯಾ? ಎಂದು ಕೇಳಿದ. ಇವನ್ನೆಲ್ಲ ದಾನ ಮಾಡುವ ನೀನು ನನ್ನನ್ನು ಯಾರಿಗೆ ದಾನ ಕೊಡ್ತೀಯಾ? ಎಂದ. ದೇವರು ನಮಗೆ ಯಾವಾಗ ಬೇಕು ಎಂದರೆ ಆ ಗೋವುಗಳಂತಾದ ಮೇಲೆ ಅಲ್ಲ. ಆ ದೇವರ ಭಕ್ತಿ ನಮ್ಮ ರಕ್ತದಲ್ಲೇ ಬರಬೇಕು. ರಕ್ತದಲ್ಲಿ ಹರಿಯಬೇಕು.

ನಮ್ಮ ಬಾಲ್ಯ ಆಟಕ್ಕೆ ….ಯವ್ವನ ಹುಡುಗಾಟಕ್ಕೆ…… ಮುಪ್ಪು ಚಿಂತೆಯ ಕಾಟಕ್ಕೆ ವ್ಯಯವಾದರೆ ದೇವನ ಕೂಟ ಯಾವಾಗ? ಮುಕ್ತಿಯ ಕಡೆ ಓಟ ಯಾವಾಗ? ದೇವನ ಹುಡುಕಾಟ ಯಾವಾಗ? ಅದಕ್ಕೆ ಸಮಯವೆಲ್ಲಿ? ಮೂರು ಸಂಗತಿಗಳಲ್ಲಿ ಯಾವುದು ಶ್ರೇಷ್ಠ? ಶಕ್ತಿ , ಯುಕ್ತಿ ಮತ್ತು ಭಕ್ತಿ. ಶಕ್ತಿ ಎಂದರೆ ಶರೀರದ ತಾಕತ್ತು. ಯುಕ್ತಿ ಎಂದರೆ ಅದು ಮನಸ್ಸಿನ ತಾಕತ್ತು. ಭಕ್ತಿಯೆಂದರೆ ಅದು ಆತ್ಮದ ತೇಜಸ್ಸು… ಆತ್ಮದ ಓಜಸ್ಸು . ಇದರಲ್ಲಿ ಯಾವುದಕ್ಕಿಂತ ಯಾವುದು ಶ್ರೇಷ್ಠ ? ಯಾರು ಹಿತವರು ನಿನಗೆ ಈ ಮೂವರೊಳಗೆ?.

RELATED ARTICLES  ಶ್ರೀಧರ ಸ್ವಾಮಿಗಳು ಮಾತೋಶ್ರೀ ಜಾನಕೀದೇವಿಗೆ ಬರೆದ ಪತ್ರದಲ್ಲಿ ಜೀವನದ ಬಗ್ಗೆ ಹೀಗೆ ಹೇಳಿದರು.

ಒಂದು ರಾಜ್ಯ. ಆ ರಾಜ್ಯಕ್ಕೊಬ್ಬ ರಾಜ. ಅಲ್ಲೊಂದು ಸೇನೆ. ಅದಕ್ಕೊಬ್ಬ ಸೇನಾಪತಿ. ಆ ರಾಜ್ಯದ ಮಂತ್ರಿಗೂ ಸೇನಾಪತಿಗೂ ವಯಸ್ಸಾಗಿತ್ತು. ಉತ್ತರಾಧಿಕಾರಿಯ ಆಯ್ಕೆಗೆ ಅನ್ವೇಷಣೆ ನಡೆದಿತ್ತು. ಅಂತಿಮ ಪರೀಕ್ಷೆಯಲ್ಲಿ ಇಬ್ಬರೂ ಆಯ್ಕೆಯಾದರು. ಇಬ್ಬರಲ್ಲೂ ಯಾವ ಕೊರತೆಯೂ ಇರಲಿಲ್ಲ. ಇಬ್ಬರೂ ಉತ್ತಮ ಫಲಿತಾಂಶವನ್ನು ದಾಖಲಿಸಿದ್ದರು. ಹಾಗಾದರೆ ಯಾರನ್ನು ಆಯ್ಕೆ ಮಾಡುವುದು ಎಂದು ಮಂತ್ರಿ ಚಿಂತಿಸಿ ಒಂದು ಪರೀಕ್ಷೆ ಒಡ್ಡಲು ನಿರ್ಧರಿಸಿದ. ಇಬ್ಬರಿಗೂ ಒಂದೇ ಆಕಾರದ ಒಂದೇ ತೂಕದ ಮರದ ದಿಮ್ಮಿಯನ್ನು ಕೊಟ್ಟ . ಜೊತೆಗೆ ಒಂದೇ ತೆರದ ಕೊಡಲಿ…. ಯಾರು ಬೇಗ ಕಡಿದು ಮುಗಿಸುತ್ತಾರೋ ಅವರು ಮಂತ್ರಿಯಾಗುತ್ತಾರೆ ಎಂದ. ತಕ್ಷಣ ಒಬ್ಬ ಕಡಿಯಲು ಪ್ರಾರಂಭ ಮಾಡಿದ. ಇನ್ನೊಬ್ಬ ಕೊಡಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅದನ್ನು ಹರಿತ ಮಾಡಲು ಪ್ರಾರಂಭಿಸಿದ. ಆತ ಸಾಕಷ್ಟು ತಡವಾಗಿ ಪ್ರಾರಂಭ ಮಾಡಿದ್ದರೂ ಮೊದಲು ಆ ಕೆಲಸ ಮುಕ್ತಾಯ ಮಾಡಿದ. ಇವರಲ್ಲಿ ಒಬ್ಬ ಶಕ್ತಿಯನ್ನು ಪ್ರತಿನಿಧಿಸಿದರೆ ಮತ್ತೊಬ್ಬ ಯುಕ್ತಿಯನ್ನು ಪ್ರತಿನಿಧಿಸಿದ. ಆ ಕಾರ್ಯವನ್ನು ಮೊದಲು ಮುಗಿಸಿದವನಿಗೆ ಮಂತ್ರಿ ಸ್ಥಾನ ನೀಡಲಾಯಿತು . ಎರಡನೇ ಸ್ಥಾನ ಪಡೆದವನಿಗೆ ಸೇನಾ ಪತಿಯ ಸ್ಥಾನ ದೊರಕಿತು. ಇದರಲ್ಲಿ ಒಂದು ಮೆದುಳಾದರೆ ಇನ್ನೊಂದು ಬಾಹು…ಶಕ್ತಿಗಿಂತ ಯುಕ್ತಿ ಶ್ರೇಷ್ಠ. ದೈಹಿಕ ಬಲಕ್ಕಿಂತ ಮನೋಬಲ ಶ್ರೇಷ್ಠ. ದೇಹ ಬಹಿರಂಗವಾದರೆ ಅದರ ಜೀವ ಮನಸ್ಸು.

ಇಂದು ನಡೆಯುತ್ತಿರುವುದು ಯುಕ್ತಿ ಸಾಮ್ರಾಜ್ಯ. ಇದು ಕಂಪ್ಯೂಟರ್ ಯುಗ. ಕಂಪ್ಯೂಟರಿಗೆ ಹೃದಯವಿಲ್ಲ ಅದಕ್ಕೆ ಲೆಕ್ಕ ಮಾತ್ರ ಗೊತ್ತು. ಅದಕ್ಕೆ ಗಣಿತ ಗೊತ್ತು ಆದರೆ ಅಗಣಿತ ಗೊತ್ತಿಲ್ಲ . ಇಡೀ ಜಗತ್ತು ಇಂದು ನಡೆಯುತ್ತಿರುವುದು ಮೆದುಳಿನ ಆಧಾರದ ಮೇಲೆ. ಅಲ್ಲಿ ಭಕ್ತಿಗೆ ಯಾವ ಸ್ಥಾನವೂ ಇಲ್ಲ. ಮೊದಲು ಸಂತಶ್ರೇಷ್ಠರ ಮಾತು ಅಂತಿಮವಾಗಿತ್ತು. ಆದರೆ ಈಗ ಆ ಸ್ಥಾನ ಉಳಿದಿಲ್ಲ. ಸಮೂಹಕ್ಕೆ ಶಿಕ್ಷಣ ಬೇಕು, ಹಣಕಾಸು ವ್ಯವಸ್ಥೆ ಬೇಕು, ಮಿಲಿಟರಿ ವ್ಯವಸ್ಥೆ ಬೇಕು, ಕಾನೂನು ವ್ಯವಸ್ಥೆ ಬೇಕು. ಎಲ್ಲವೂ ಬೇಕು ಅಂತಾದರೆ ಭಕ್ತಿ ಏಕೆ ಬೇಡ? ಅತ್ಯಂತ ಮುಖ್ಯವಾದದ್ದು ಈಗ ನಮ್ಮಲ್ಲಿ ಅತ್ಯಂತ ಗೌಣವಾಗಿದೆ. ಅದಕ್ಕೆ ಭಕ್ತಿ ಬಡ ಪರದೇಶಿ ಎಂದಿದ್ದು.

RELATED ARTICLES  ‘ಶ್ರೀಧರಾಮೃತ ವಚನಮಾಲೆ’ಯಿಂದ ಆಯ್ದ ಶ್ರೀರಾಮನಿಂದ ನಾಸ್ತಿಕವಾದದ ಖಂಡನೆ.

ತರ್ಕಶಾಸ್ತ್ರ ಬುದ್ಧಿಯ ಮೇಲೆ ನಿಂತಿದ್ದರೆ ವೇದಾಂತ ಶಾಸ್ತ್ರ ಅನುಭೂತಿಯ ಮೇಲೆ ನಿಂತಿದೆ. ಶಂಕರಾಚಾರ್ಯರು ವೇದಾಂತವನ್ನು ಎತ್ತಿ ಹಿಡಿದರು. ವೇದವನ್ನು ಅನುಭವಿಸು… ವೇದ ನಿನ್ನ ಉಸಿರಾಗಲಿ… ಅದು ಹೇಗೆ ಬದುಕು ಎನ್ನುತ್ತದೆಯೋ ಹಾಗೆ ಬದುಕು ಎಂದರು. ಯುಕ್ತಿಗಿಂತ ಭಕ್ತಿ ಮೇಲು ಎಂಬುದನ್ನು ಅವರು ಪ್ರತಿಪಾದಿಸಿದರು.

ಒಂದು ಕೊಳದಲ್ಲಿ ಸಾವಿರಾರು ಮೀನುಗಳಿದ್ದವು. ಅದರಲ್ಲಿ ಏಕ ಬುದ್ಧಿ ….ಶತ ಬುದ್ಧಿ…. ಹಾಗೂ ಸಹಸ್ರಬುದ್ಧಿ ಎಂಬ ಮೂರು ಮೀನುಗಳು ಇದ್ದವು. ಸಹಸ್ರಬುದ್ಧಿ ಮೀನಿಗೆ ಅಹಂಕಾರ ನನಗೆ ಯಾರೂ ಸಮರಲ್ಲ ಎಂದು. ಶತ ಬುದ್ಧಿಗೂ ತಾನು ಬುದ್ಧಿವಂತ ನನಗೆ ಒಂದು ಸಮಸ್ಯೆಗೆ ನೂರು ದಾರಿ ಗೋಚರಿಸುತ್ತದೆ ಎಂಬ ಅಹಂ…. ಏಕ ಬುದ್ಧಿ ಯಾದರೋ ಸುಮ್ಮನಿತ್ತು. ಒಮ್ಮೆ ಮೀನುಗಾರನೊಬ್ಬ ಬಂದು ಆ ಕೊಳದಲ್ಲಿ ಬಲೆ ಬೀಸಿದ. ಇನ್ನೇನು ಎಲ್ಲ ಮೀನುಗಳನ್ನು ಬಲೆ ಆವರಿಸುತ್ತದೆ ಎನ್ನುವಾಗ ಸಹಸ್ರಬುದ್ಧಿ ಸಾವಿರ ರೀತಿಯಲ್ಲಿ ಆಲೋಚಿಸಿತು…. ಶತ ಬುದ್ಧಿ ನೂರು ರೀತಿಯಲ್ಲಿ ಯೋಚಿಸಿತು ಗೊಂದಲದಲ್ಲಿ ತಪ್ಪಿಸಿಕೊಳ್ಳುವ ಉಪಾಯ ಹೊಳೆಯಲಿಲ್ಲ . ಆದರೆ ಏಕ ಬುದ್ಧಿ ಒಂದೇ ರೀತಿಯಲ್ಲಿ ಯೋಚಿಸಿ ಒಂದು ಉಪಾಯ ಕಂಡುಕೊಂಡಿತು. ಅಲ್ಲಿಂದ ತಪ್ಪಿಸಿಕೊಂಡು ಬಲೆ ಇಲ್ಲದ ಸ್ಥಳವನ್ನು ಆಶ್ರಯಿಸಿತು. ಅಂತಿಮವಾಗಿ ಬದುಕಿದ್ದು ಏಕ ಬುದ್ಧಿ.

ನಮ್ಮ ಜೀವನದಲ್ಲೂ ನಾವು ಹೀಗಾಗುತ್ತೇವೆ. ತಂದೆ ತಾಯಿಗಳು ತಮ್ಮ ಮಕ್ಕಳು ಹೆಚ್ಚು ಬುದ್ಧಿವಂತರಾಗಬೇಕು ಎಂದು ಬಯಸುತ್ತಾರೆ . ಈ ಹೆಚ್ಚು ಎನ್ನುವುದು ಯಾವಾಗಲೂ ಅಪಾಯ…! ಎಷ್ಟು ಬೇಕೋ ಅಷ್ಟೇ ಇರಬೇಕು. ಅದು ಹಿತ. ಹಾಗಾಗಿ ಯುಕ್ತಿ ಹಿತವಾಗಿರಲಿ…. ಮಿತವಾಗಿರಲಿ ಅದರ ಜೊತೆಗೆ ಭಕ್ತಿಯೂ ಇರಲಿ.

✍️ *ಡಾ.ರವೀಂದ್ರ ಭಟ್ಟ ಸೂರಿ.
9448028443