IMG 20170821 WA0002

ಎನ್. ಮುರಳೀಧರ್
ವಕೀಲರು
ನೆಲಮಂಗಲ
9902772278
ಸೂರ್ಯ ಇರುವ ವೇಳೆಯಲ್ಲಿ ಮಳೆ ಬಂದು ನಿಂತ ಮೇಲೆ ಸೂರ್ಯನಿಗೆ ಎದುರಾಗಿ ಗೋಚರಿಸುವ ಕಾಮನಬಿಲ್ಲು ಒಂದು ಪ್ರಕೃತಿ ವಿಸ್ಮಯವೇ ಆಗಿದೆ. ಈ ಕಾಮನಬಿಲ್ಲು 7 ಬಣ್ಣಗಳಿಂದ ಕೂಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಾಮನ ಬಿಲ್ಲನ್ನು ನೋಡಿದಾಗ ಎಲ್ಲರಿಗೂ ಕೌತುಕವಾಗುತ್ತದೆ. ಏಳು ಬಣ್ಣ ಸೇರಿದರೆ ಬಿಳಿ ಬಣ್ಣವಾಗುವುದು ಎಂದರೆ ಆಶ್ಚರ್ಯವಾದರೂ ಸತ್ಯವಾದ ಸಂಗತಿ. ಇದನ್ನು ಸುಲಭವಾಗಿ ಜ್ಞಾಪಿಸಿಕೊಳ್ಳಲು ಇಂಗ್ಲೀಷ್‍ನಲ್ಲಿ “ವಿಬ್ ಗಯಾರ್” ಎಂದು ಕರೆಯುವುದು ರೂಢಿಯಾಗಿದೆ.
ಈ ಕಾಮನಬಿಲ್ಲಿಗೂ ಮನುಷ್ಯನ ಜೀವನಕ್ಕೂ ಏನು ಸಂಬಂಧ ಎಂದು ನೋಡಿದರೆ ಕಾಮನ ಬಿಲ್ಲು ಇರುವಷ್ಟು ಸಮಯವೇ ಮನುಷ್ಯನ ಜೀವನದ ಆಯುಷ್ಯ ಎಂದು ಪರಿಗಣಿಸಿ, ಮನುಷ್ಯನ ಅಲ್ಪ ಜೀವನದ ಅವಧಿಯಲ್ಲಿಯೂ ಒಳ್ಳೆಯ ಗುಣಗಳಿಂದ ಕಾಮನಬಿಲ್ಲಿನಂತೆ ಪ್ರಕಾಶಿಸುವುದಾದರೆ ಅವರ ಜೀವನ ಸಾರ್ಥಕವಾದಂತೆ ಆಗುತ್ತದೆ. ಕಾಮನಬಿಲ್ಲಿನಂತೆ ಮನುಷ್ಯನ ಜೀವನ ಪ್ರಕಾಶಮಾನವಾಗಲು ಅದರಲ್ಲಿರುವ ಏಳು ಬಣ್ಣಗಳಂತೆ, ಏಳು ಸೂತ್ರಗಳನ್ನು ಅಳವಡಿಸಿಕೊಂಡರೆ ತನ್ನ ಜೀವನವು ಪ್ರಕಾಶಿಸುವುದರಲ್ಲಿ ಸಂಶಯವೇ ಇಲ್ಲ.
(ಅ) ವಿದ್ಯೆ-ಬುದ್ದಿ (ಆ) ಶಿಸ್ತು-ಸಂಯಮ (ಇ) ಸದ್ಗುಣಗಳು (ಈ) ಸಂಸ್ಕಾರ (ಉ) ಶ್ರದ್ದೆ (ಊ) ಭಕ್ತಿ. (ಋ) ಧೈರ್ಯ.
ಇವುಗಳನ್ನು ಒಂದೊಂದಾಗಿ ವಿವರಿಸಿದರೆ,
ವಿದ್ಯೆ-ಬುದ್ದಿ: ವಿದ್ಯೆ ಎಂಬುದು ಎಲ್ಲರಿಗೂ ಅವಶ್ಯಕ, ವಿದ್ಯೆ ಇಲ್ಲದಿದ್ದರೆ ಜೀವನವೆಲ್ಲಾ ಬೆಳಕಿನಲ್ಲಿದ್ದರೂ ಸಹ ಕತ್ತಲಲ್ಲಿ ಬಾಳುವಂತಾಗುತ್ತದೆ. ವಿದ್ಯೆ ಕಲಿತರೆ ಕೆಲಸವನ್ನು ಮಾಡಿ ಹಣ ಸಂಪಾದಿಸಬಹುದು, ಒಳ್ಳೆಯ ಸ್ನೇಹಿತರನ್ನು ಮತ್ತು ಜನಗಳನ್ನು ಸಂಪಾದಿಸಬಹುದು. ರಾಜನಾದವನು ತನ್ನ ರಾಜ್ಯದಲ್ಲಿ ಮಾತ್ರ ಗೌರವಕ್ಕೆ ಒಳಪಡುತ್ತಾನೆ. ಆದರೆ ವಿದ್ಯೆ ಇರುವ ವಿಧ್ವಾಂಸನು ಎಲ್ಲಿಗೆ ಹೋದರೂ ಗೌರವ ಇರುತ್ತದೆ. ಎಲ್ಲಿ ಬೇಕಾದರೂ ಹೋಗಿ ನೆಲಸಿ ಜೀವಿಸಬಹುದು. ವಿದ್ಯೆ ಇಲ್ಲದಿದ್ದರೆ “ಮನುಷ್ಯ ರೂಪೇಣ ಮೃಗಾಶ್ಚರಂತಿ ಎಂಬಂತೆ” ವಿದ್ಯೆ ಇಲ್ಲದವನು ಮನುಷ್ಯರೂಪದಲ್ಲಿರುವ ಮೃಗವು ಸಂಚರಿಸಿದಂತೆ ಆಗುತ್ತದೆ. ವಿದ್ಯೆಯ ಜೊತೆಗೆ ಒಳ್ಳೆ ಬುದ್ದಿ ಕಲಿಯಲೇ ಬೇಕು, ಒಳ್ಳೆ ಬುದ್ದಿ ಇದ್ದರೆ ಎಲ್ಲರೂ ನಮ್ಮನ್ನು ಗೌರವಿಸುತ್ತಾರೆ. ವಿದ್ಯೆ ಇದ್ದು ಒಳ್ಳೆಯ ಬುದ್ದಿ ಇಲ್ಲದಿದ್ದರೆ ವಿದ್ಯೆ ಕಲಿತರೂ ಅದು ಶೋಭಿಸುವುದಿಲ್ಲ. ವಿದ್ಯೆಗೆ ತಕ್ಕಂತೆ ಬುದ್ದಿ ಬೆಳೆಸಿಕೊಂಡರೆ ಕಲಿತ ವಿದ್ಯೆಗೂ ಬೆಲೆ ಹಾಗೂ ಕಲಿತವನಿಗೂ ಸಮಾಜದಲ್ಲಿ ಬೆಲೆ ಇರುತ್ತದೆ.
ಶಿಸ್ತು- ಸಂಯಮ: ವಿದ್ಯೆ ಕಲಿಯಲು ಅವಶ್ಯಕವಾಗಿ ಬೇಕಾದದ್ದು ಶಿಸ್ತು ಮತ್ತು ಸಂಯಮ. ಮನುಷ್ಯನ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಮನುಷ್ಯ ಯಾವ ಕೆಲಸ ಮಾಡಿದರೂ ಶಿಸ್ತಿನಿಂದ ಮಾಡಿದರೆ ಆ ಕೆಲಸವು ಪರಿಪೂರ್ಣವಾಗುತ್ತದೆ ಹಾಗೂ ಅದನ್ನು ಸಾಧಿಸಿದ ತೃಪ್ತಿ ಮನುಷ್ಯನಿಗೂ ಬರುತ್ತದೆ. ಶಿಸ್ತಿನ ಜೊತೆಗೆ ಸಂಯಮ ಇರಲೇಬೇಕು. ಏಕೆಂದರೆ ಒಂದು ಸಲ ನಾವು ಜೀವನದಲ್ಲಿ ಒಮ್ಮೆ ವಿಫಲವಾದರೂ ಸಹ ಸಂಯಮದಿಂದ ಪುನಃ ಪ್ರಯತ್ನಿಸಿದರೆ ಗುರಿಯನ್ನು ಮುಟ್ಟಬಹುದು. ಇಲ್ಲದಿದ್ದಲ್ಲಿ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ಜೀವನದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಒಮ್ಮೆ ಸೋತರೇನಂತೆ ಪುನಃ ಪ್ರಯತ್ನಿಸಿ ಗೆಲುವನ್ನು ಸಾಧಿಸುವವನೇ ಸಂಯಮ ಜೀವಿ. ಯಾವ ವಿಷಯದಲ್ಲಾಗಲೀ ಬಹುಬೇಗ ದುಡುಕದೆ ಅತಿ ಸಂಯಮದಿಂದ ವರ್ತಿಸಿದರೆ ಜೀವನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಬಹುದು. ಏನಾದರೂ ಘಟನೆ ನಡೆದಾಗ ಸಂಯಮದಿಂದ ಪರಿಶೀಲಿಸಿ ಮುಂದುವರೆದರೆ ಆಗುವ ಅನಾಹುತವನ್ನು ಸಹ ತಪ್ಪಿಸಬಹುದು.
ಸದ್ಗುಣಗಳು: ಇವೆಲ್ಲವೂ ಇದ್ದಮೇಲೆ ಸದ್ಗುಣಗಳು ಇರಲೇ ಬೇಕು, ಸದ್ಗುಣಗಳಿಂದ ಎಲ್ಲರೂ ಸ್ನೇಹಿತರಾಗುವರು. ಸದ್ಗುಣಗಳು ಮನುಷ್ಯನು ಹುಟ್ಟಿನಿಂದ ಬರುವುದಲ್ಲ. ಇದು ಮನುಷ್ಯನು ಬೆಳೆಯುವ ವಾತಾವರಣಕ್ಕೆ ಪೂರಕವಾಗಿರುತ್ತದೆ. ಮಾನವೀಯತೆ, ಪರೋಪಕಾರ ಗುಣ, ಹೃದಯ ವೈಶಾಲ್ಯತೆ, ಹೀಗೆ ಅನೇಕ ಸದ್ಗುಣಗಳು ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಒಬ್ಬ ಅತ್ಯುತ್ತಮ ಪ್ರಜೆಯಾಗುವುದರಲ್ಲಿ ಸಂಶಯವಿಲ್ಲ.
ಸಂಸ್ಕಾರ: ಸಂಸ್ಕಾರ ಎನ್ನುವುದು ಹುಟ್ಟಿದ ಮನೆಯಿಂದ ಹಾಗೂ ಬೆಳೆಯುವ ವಾತಾವರಣದಿಂದ ಬರುವ ಒಂದು ಗುಣ. ಒಳ್ಳೆಯ ಸಂಸ್ಕಾರವಿದ್ದರೆ ಎಲ್ಲರೂ ಆದರಿಸುವರು. ಒಳ್ಳೆಯ ಸಂಸ್ಕಾರ ಎಂದರೆ, ಗುರು ಹಿರಿಯರನ್ನು ಗೌರವದಿಂದ ಕಾಣುವುದು, ತಂದೆ ತಾಯಿಯವರ ಸೇವೆಯನ್ನು ಮಾಡುವುದು, ತಂದೆ ತಾಯಿಗೆ ವಯಸ್ಸಾಯಿತು ಎಂದು ವೃದ್ದಾಶ್ರಮಕ್ಕೆ ಬಿಡದೆ, ಮನೆಯಲ್ಲಿ ಇದ್ದರೂ ಕಡೆಗಣಿಸದೆ ಕಡೇವರೆವಿಗೂ ಪ್ರೀತಿಯಿಂದ ನೋಡಿಕೊಂಡರೆ ದೇವರು ಕೂಡ ಮೆಚ್ಚುತ್ತಾನೆ. ಇದರ ಜೊತೆಗೆ ಪರೋಪಕಾರವನ್ನು ಮಾಡುವುದು, ಎಲ್ಲರನ್ನು ಸಮಾನವಾಗಿ ಕಾಣುವುದು ಮತ್ತು ಯಾವಾಗಲೂ ಸುಳ್ಳನ್ನು ಹೇಳದೆ ಸತ್ಯವನ್ನೇ ಹೇಳುವುದು ಒಂದು ಒಳ್ಳೆಯ ಸಂಸ್ಕಾರವಾಗಿರುತ್ತದೆ.
ಶ್ರದ್ದೆ : ಇವೆಲ್ಲವನ್ನೂ ಸಾಧಿಸಲು ಸರಿಯಾದ ಶ್ರದ್ದೆ ಇರಬೇಕು. ಶ್ರದ್ದೆ ಇರದೆ ಸೋಮಾರಿಯಾದಲ್ಲಿ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಶ್ರದ್ದೆ ಇದ್ದಲ್ಲಿ ಎಲ್ಲಾ ಕೆಲಸವನ್ನು ಸಾಧಿಸಬಹುದು. ವಿದ್ಯೆಯನ್ನು ಬಹಳ ಶ್ರದ್ದೆಯಿಂದ ಕಲಿಯಬೇಕು, ಪ್ರತಿಯೊಂದು ಕೆಲಸವನ್ನೂ ಬಹಳ ಶ್ರದ್ದೆಯಿಂದ ಮಾಡಬೇಕು. ಮಾಡುವ ಕೆಲಸ ಶ್ರದ್ದೆಯಿಂದ ಮಾಡಿದರೆ ಕೆಲಸ ಮಾಡುವ ಕಛೇರಿ ಕಂಪೆನಿ ಎಲ್ಲಾ ಕಡೆ ಮೆಚ್ಚುಗೆ ಪಡೆಯಬಹುದು. ಯಾರ ಮೆಚ್ಚುಗೆ ನಮಗೆ ಬೇಕಿಲ್ಲ ನಮ್ಮ ಕೆಲಸ ನಾವು ಮಾಡುತ್ತೇವೆ ಯಾರೊಬ್ಬರ ಪ್ರಶಂಸೆ ಬೇಡ ಎಂಬುದು ಕೆಲವರ ಆಶಯವಾಗಿರುತ್ತದೆ. ಶ್ರದ್ದೆಯಿಂದ ಕೆಲಸ ಮಾಡಿದರೆ ಪ್ರಶಂಸೆ ಬೇಡವೆಂದರೂ ತಾನಾಗಿಬರುತ್ತದೆ.
ಧೈರ್ಯ: ಯಾವುದೇ ಕೆಲಸ ಮಾಡಿದರೂ ಧೈರ್ಯದಿಂದ ಹಾಗೂ ದೃಡ ಮನಸ್ಸಿನಿಂದ ಮಾಡಬೇಕು. ಆಗಲೇ ಗೆಲುವು ಸಾಧ್ಯ. ಅಧೈರ್ಯದಿಂದ ಇದ್ದರೆ ಯಾವ ಕೆಲಸವನ್ನೂ ಸಹ ಗೆಲ್ಲಲು ಸಾಧ್ಯವಿಲ್ಲ. ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಧೈರ್ಯದಿಂದಲೇ ಎಲ್ಲವನ್ನೂ ಜಯಿಸಬಹುದು. ಎಷ್ಟು ಓದಿದ್ದರೂ ಸಹ ಪರೀಕ್ಷೆ ಎಂದ ತಕ್ಷಣ ಅಧೈರ್ಯದಿಂದ ವರ್ತಿಸಿದರೆ, ಓದಿರುವ ಪಾಠವೂ ಮರೆತು ಹೋಗಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬರಬಹುದು. ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಧೈರ್ಯದಿಂದ ಎದರಿಸುವಂತ ಗುಣ ಇದ್ದರೆ ಆ ಕಷ್ಟಗಳು ಬೆಣ್ಣೆಯಂತೆ ಕರಗಬಹುದು. ಇಲ್ಲದಿದ್ದರೆ ಸಣ್ಣ ಕಷ್ಟವೂ ಸಹ ಬೆಟ್ಟದಷ್ಟು ದೊಡ್ಡದಾಗಿ ಜೀವನದಲ್ಲಿ ದಾರಿ ತೋಚುವುದೇ ಇಲ್ಲದಂತೆ ಆಗಬಹುದು.
ಭಕ್ತಿ: ಕಡೆಯದಾಗಿ, ದೇವರಲ್ಲಿ ನಿಶ್ಚಲ ಭಕ್ತಿ ಇಟ್ಟು, ತಂದೆ, ತಾಯಿ ಮತ್ತು ಗುರುಗಳನ್ನು ದೇವರ ಸಮಾನವೆಂದು ಕಂಡರೆ ದೇವರೂ ಮೆಚ್ಚುತ್ತಾನೆ. ದೇವರ ಸಾನಿಧ್ಯ ಎಂಬುವುದು ಕಾಮನಬಿಲ್ಲಿನಂತೆ ಇರುತ್ತದೆ. ಇದನ್ನು ಸುಲಭವಾಗಿ ಪಡೆಯಲು ಸಾಧ್ಯವಿಲ್ಲ. ಮೇಲ್ಕಂಡ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡರೆ ಕಾಮನ ಬಿಲ್ಲಿನಂತಿರುವ ದೇವರ ಸಾನಿಧ್ಯವನ್ನು ಪಡೆಯಬಹುದು.
ಗುಡುಗು ಸಿಡಿಲು ಮಿಂಚು ಮಳೆ ಎಲ್ಲವೂ ನಿಂತ ಮೇಲೆ ಸೂರ್ಯನು ಇದ್ದಲ್ಲಿ ಮಾತ್ರ ಶುಭ್ರವಾದ ಆಕಾಶದಲ್ಲಿ ಸೂರ್ಯನ ಎದುರಿಗೆ ಕಾಮನಬಿಲ್ಲು ಗೋಚರಿಸುತ್ತದೆ. ಆದರೆ ಮೋಡಗಳು ಸೂರ್ಯನಿಗೆ ಅಡ್ಡಬಂದರೆ ಯಾವ ಕಾಮನಬಿಲ್ಲೂ ಗೋಚರಿಸುವುದೇ ಇಲ್ಲ. ಅದೇರೀತಿ, ನಾವುಗಳು ಮೇಲ್ಕಂಡ ಏಳುಗುಣಗಳನ್ನು ಅಳವಡಿಸಿಕೊಂಡರೂ ಸಹ ಹರಿಷಢ್ವರ್ಗ, ರಾಗ ಧ್ವೇಶ, ಎಂಬ ಮೋಡಗಳು ಮನುಷ್ಯನ ಜೀವನದಲ್ಲಿ ಅಡ್ಡ ಬಂದರೆ, ಯಾವ ಮನುಷ್ಯನೂ ಕಾಮನಬಿಲ್ಲಿನಂತೆ ಪ್ರಕಾಶಿಸುವುದಿಲ್ಲ. ಜನಗಳ ಮುಂದೆ ಒಳ್ಳೆಯವನಾಗಿರಬಹುದು ಆದರೆ ದೇವರ ದೃಷ್ಠಿಯಲ್ಲಿ ಒಳ್ಳೆಯವನಾಗಲಾರ. ಸೂರ್ಯನಿಗೆ ಕಪ್ಪು ಮೋಡಗಳು ಅಡ್ಡಲಾಗಿ ಬಂದು ಕತ್ತಲು ಆವರಿಸುವಂತೆ, ಮನುಷ್ಯನ ಜೀವನದಲ್ಲಿಯೂ ಕೆಟ್ಟಗುಣಗಳು ಬಂದಲ್ಲಿ ಪ್ರಕಾಶಮಾನವು ಹೋಗಿ ಕಪ್ಪುಬಣ್ಣದಂತೆ ಮಸಕಾಗುತ್ತದೆ. ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಕಾಮನಬಿಲ್ಲಿನಂತೆ ಪ್ರಕಾಶಿಸುವ ಮನುಷ್ಯತ್ವವನ್ನು ಪಡೆಯಲು ಸಾಧ್ಯ.

RELATED ARTICLES  ದಿವ್ಯತೇಜರು (ಶಿಕ್ಷಕರ ದಿನಾಚರಣೆಯ ವಿಶೇಷ ಕವನ)