ಮುಸುಕಿನ ಯುದ್ಧ ಎಂದ ತಕ್ಷಣ ನಮಗೆ ನೆನಪಾಗುವುದು ಪಾಕಿಸ್ತಾನ ಭಾರತ ಮತ್ತು ಚೀನಾದ ನಡುವೆ ಇರುವ ತಿಕ್ಕಾಟಗಳು ಯುದ್ಧದ ಮಾತುಗಳು ಮಾತ್ರ. ಆದರೆ ನಮ್ಮೊಳಗೂ ಅಂತಹದ್ದೆ ಯುದ್ಧ ನಡೆಯುತ್ತಿರುತ್ತದೆ. ಮನುಷ್ಯ ಸಂಘ ಜೀವಿ. ಅವನಿಗೆ ಒಂಟಿಯಾಗಿ ಬದುಕಲು ಬರುವುದಿಲ್ಲ. ಎಲ್ಲೋ ಲಕ್ಷಕ್ಕೋಬ್ಬರು ಸಾಧು ಸಂತರು ಬದುಕಬಹುದಷ್ಟೆ. ಮುಸುಕಿನ ಯುದ್ಧ ಎಂದರೆ ಕಂಡು ಕಾಣದಂತೆ ಇದ್ದು ಎದುರು ನಗುಮುಖ ಹೊಂದಿದ್ದು ಹಿಂದಿನಿಂದ ಮತ್ಯಾವುದೋ ರೀತಿಯಲ್ಲಿ ಅವಮಾನಿಸುವುದು, ಇನ್ನೊಬ್ಬರಲ್ಲಿ ಕೀಳಾಗಿ ಮಾತಾಡಿ ತಮಗೆ ಆ ವ್ಯಕ್ತಿ ಅಷ್ಟಾಗಿ ಹಿಡಿಸುವುದಿಲ್ಲ. ನೀವ್ಯಾಕೆ ಸಹವಾಸ ಮಾಡಿದ್ದೀರಿ ಎನ್ನುವುದು. ತೆಗಳುವುದು. ಹೀಗೆಲ್ಲ ನಡೆಯುತ್ತ ಹೋಗುತ್ತದೆ.
ಇಬ್ಬರು ಗೆಳೆಯರು ಒಂದೇ ಕಾಲೇಜಿನಲ್ಲಿ ಓದಿದವರು. ಮುಂದೆ ನೌಕರಿ ಎಂದು ಹೋಗದೆ ಇಬ್ಬರೂ ಸೇರಿ ಹೊಟೇಲ್ ಬಿಜಿನೆಸ್ ಮಾಡಲು ಯೋಚಿಸಿ ಪ್ರಾರಂಭಿಸಿದರು. ಆರಂಭದಲ್ಲಿ ಇಬ್ಬರೂ ಶ್ರಮವಹಿಸಿ ದುಡಿದು ಹೋಟೇಲ್ ಭವಿಷ್ಯ ರೂಪಿಸಿದರು. ನಾಲ್ಕಾರು ವರ್ಷ ಅನ್ನುವಷ್ಟರಲ್ಲಿ ಹೆಸರುವಾಸಿಯಾಯಿತು ಆ ಊರಿಗೆ ಇವರ ಹೋಟೆಲ್ ತಿಂಡಿ ತಿನಿಸಿಗಳು. ಆದರೆ ಕೆಲವು ಒತ್ತಡದಿಂದ ಒಬ್ಬನಿಗೆ ಹೋಟೆಲ್ ಕಡೆ ಗಮನ ಕೊಡುವುದು ಸ್ವಲ್ಪ ಕಡಿಮೆಯಾಯಿತು. ಯಾರೋ ನೀನೊಬ್ಬನೆ ದುಡಿಯುವುದು ಪಾಲು ಮಾತ್ರ ಇಬ್ಬರೂ ತೆಗೆದುಕೊಳ್ಳುವುದೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಅಲ್ಲಿಗೆ ಒಂದು ಬೆಂಕಿ ಕಿಡಿ ಹತ್ತಿತು. ತಾನೊಬ್ಬನ ದುಡಿಯಬೇಕೆ? ಹಾಗಾದರೆ ಮುಂದೆ ತಾನೇ ದುಡಿದು ಎಲ್ಲ ಲಾಭವನ್ನು ತಾನೇ ತೆಗೆದುಕೊಳ್ಳಬಹುದು ಎನ್ನುವ ಯೋಚನೆ ಹುಟ್ಟಿದ ಕೂಡಲೇ ಅದಕ್ಕಾಗಿ ಕಾರ್ಯಗತವಾಗತೊಡಗಿದ ಇನ್ನೊಬ್ಬ.
ಮಾತುಗಳು ಸಂಕೋಚದಿಂದ ವಕ್ರವಾಗತೊಡಗಿತು. ಕೆಲಸಕ್ಕೆ ನೀನು ಬರುತ್ತಿಲ್ಲ ಎಂದು ಸೂಚ್ಯವಾಗಿ ಹೇಳತೊಡಗಿದ. ಅವನ ಮಾತಿನ ಅರ್ಥ ಮೊದಲಾಗದಿದ್ದರೂ ಸಹ ಕೆಲವು ಸಮಯದ ನಂತರ ತನ್ನನ್ನೇ ಗುರಿಯಾಗಿಸಿ ಆತ ಮಾತನಾಡಿದ ಎಂದು ಈತ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ. ಅವನಂತೆ ಇವನು ಮಾತಿನ ಯುದ್ಧ ಪ್ರಾರಂಭಿಸಿದ. ಅವನಿಗೆ ತನ್ನ ಸ್ನೇಹಿತ ಹೋಟೆಲ್ ಪಾಟ್ರ್ನರ್ ಆಗಿ ಮುಂದುವರೆಯುವುದು ಬೇಕಿರಲಿಲ್ಲ. ಇವನು ತಾನಾಗೆ ಯಾಕೆ ಬಿಡುವುದು ಇಬ್ಬರೂ ಸೇರಿ ಪ್ರಾರಂಭಿಸಿರುವುದು. ಅವನೇ ಬೇಕಾದರೆ ನೀನು ಬರಬೇಡ ಎಂದು ಹೇಳಲಿ ಎಂದು ಕಾಯತೊಡಗಿದ.
ಹೋಟೇಲ್ ಯಜಮಾನ ಆಗಬೇಕು ಎಂದುಕೊಂಡವನು ಬಂದುಹೋಗುವವರ ಎದುರು ‘ತಾನೋಬ್ಬನೇ ದುಡಿಯುವುದು. ಎಲ್ಲವೂ ತನ್ನಿಂದಲೇ ಆಯಿತು. ಬೇರೆಯಾರೂ ಬೇಕಾಗಿರಲಿಲ್ಲ. ಎಂದೆಲ್ಲ ಗೆಳೆಯನಿಗೆ ಕೇಳುವಂತೆ ಹೇಳಿದರೆ, ಕೆಲವರು ಮಾತಾಡದೆ ಕೊಲ್ಲುತ್ತಾರೆ. ನೀನು ಹೊರಹೋಗು ಎಂದರೆ ಸಂತೋಷದಿಂದ ಹೊರಹೋಗುತ್ತೇನೆ ಎಂದು ಗೆಳೆಯ ಹೇಳುತ್ತಾನೆ. ಈ ಮಾತುಗಳು ಎದುರಾಬದುರು ಹೇಳಿಕೊಳ್ಳುವುದಿಲ್ಲ. ಮೌನ ಸಂಗ್ರಾಮ ಶುರುವಾಗಿ ಬಿಟ್ಟಿರುತ್ತದೆ.
ಇತ್ತ ಹಾವು ಸಾಯಬಾರದು ಅತ್ತ ಕೋಲು ಮುರಿಯಬಾರದು ಎನ್ನುವಂತ ಮಾತಿನ ಚಕಮಕಿ ನಡೆಸುತ್ತಿರುತ್ತಾರೆ. ಇಬ್ಬರೂ ಕುಳಿತು ಸಮಸ್ಯೆ ಬಗೆ ಹರಿಸಿಕೊಳ್ಳುವ ಪ್ರಯತ್ನ ಮಾಡದೆ ಮುಸುಕು ಹಾಕಿ ಗುದ್ದಿಕೊಳ್ಳುವುದು. ಹೀಗೆ ಯಾಕೆ ಮಾಡುತ್ತಾರೆ. ಕಾರಣ ಇಷ್ಟೆ. ತಾನು ಹೊರ ಹೋಗು ಎಂದರೆ ಗೆಳೆಯನ ಮನಸ್ಸಿಗೆ ಎಲ್ಲಿ ನೋವಾಗುವುದೋ ಎನ್ನುವುದು ಒಂದಾದರೆ ಅವನಾಗೆ ತನ್ನ ಮಾತಿನ ಅರ್ಥ ಮಾಡಿಕೊಂಡು ಹೊರ ಹೋಗಲಿ ಎನ್ನುವುದು. ಇತ್ತ ಈ ಸ್ನೇಹಿತ ತಾನಾಗೆ ಹೊರ ಹೋದರೆ ಎಲ್ಲಿ ತಪ್ಪಾಗುತ್ತದೆಯೋ ಒಂದು ಮಾತು ನೇರ ಹೇಳಿದರೆ ಒಳಿತು ಎಂದು ಕಾಯುತ್ತಾನೆ, ಅದೇ ರೀತಿಯಲ್ಲಿ ಗೆಳೆಯನಿಗೂ ಸುದ್ದಿ ಮುಟ್ಟುವಂತೆ ಮಾತನಾಡುತ್ತಾನೆ.
ಈ ರೀತಿಯ ಮುಸುಕಿನ ಗುದ್ದಾಟ ಕೇವಲ ಗೆಳೆಯರ ಸಂದರ್ಭದಲ್ಲಿ ಮಾತ್ರವಲ್ಲ. ಹಲವು ಸಲ ಗಂಡ ಹೆಂಡತಿ , ತಂದೆ ಮಕ್ಕಳು, ಅಕ್ಕ ತಂಗಿ, ಅಕ್ಕ ಪಕ್ಕದ ಮನೆಯವರಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ಈ ಮುಸುಕಿನ ಯುದ್ಧ ನಡೆಯುವುದು ಒಡನಾಟ ಇದ್ದು ನೇರವಾಗಿ ವಿಷಯ ಹೇಳಲಾಗದ ಸಂದರ್ಭಗಳಲ್ಲಿ ಹೆಚ್ಚು ಎನ್ನುವುದು ನಿಜ.
ಮನುಷ್ಯನ ಮನಸ್ಸು ಸೂಕ್ಷ್ಮ. ತನ್ನ ಜೊತೆಗಾರರ ಮಾತು ತುಸು ವ್ಯತ್ಯಯವಾದರು ಬೇಗ ಗ್ರಹಿಸಿಬಿಡುತ್ತದೆ. ಅದರಲ್ಲಿ ಈ ರೀತಿಯ ಮಾತು ತನಗಾಗಿಯೇ ಆಡಿದ್ದು ಎಂದು ತೀಳಿದರೂ ಸಹ ಅದನ್ನು ಒಪ್ಪಿಕೊಳ್ಳದೇ ಮುಂದುವರೆಯುದು ಕೂಡ ಅದೇ ಮನಸ್ಸು ನೋವಾಗುತ್ತದೆ ಎಂದೋ ಅಥವಾ ಯಾವುದೋ ಹಠಕ್ಕೋ, ಛಲಕ್ಕೋ ನಿಂತಿರುತ್ತದೆ. ಹಠ ಮತ್ತು ಛಲದಿಂದ ಸೇಡಿಗೆ ತಿರುಗುವ ಸಂದರ್ಭ ಕೂಡ ಇದೆ.
ಕೆಟ್ಟ ಸ್ಥಿತಿಗೆ ಹೋಗುವ ಮುನ್ನ ತಮ್ಮ ಮುಸುಕಿನ ಯುದ್ಧ ಬದಿಗಿಟ್ಟು ಸ್ಪಷ್ಟ ವಿಚಾರವನ್ನು ಹೊರಹಾಕಿ ಎದುರಾಗಿರುವ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವುದು ಒಳಿತು. ತಾನು ಹೇಳಿದಂತೆ ಆಗಬೇಕು. ತನ್ನದೇ ಎಲ್ಲ ವಹಿವಾಟು ಮೊಟಕಾಗಿಸಿಕೊಂಡು ಮುಖ ಉಬ್ಬಿಸಿಕೊಳ್ಳುವುದಕ್ಕಿಂತ ಮಾತಾಡಿ ಮುಕ್ತಾಯ ಹಾಡಿಕೊಳ್ಳಬೇಕು. ಯಾವುದೋ ಒಂದು ವಿಷಯಕ್ಕಾಗಿ ಚೆಂದದ ಸಂಬಂಧ ಹಾಳು ಮಾಡಿಕೊಳ್ಳುವುದು ಸೂಕ್ತವಲ್ಲ ಎನ್ನುವುದೇ ಈ ಲೇಖನದ ಉದ್ದೇಶವಾಗಿದೆ.