ಅಕ್ಷರರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ,ಪುಣೆ.

.ಕೇವಲ ಆನಂದರೂಪ ಪರಮಾತ್ಮನ ಒಂದು ಅಸ್ತಿತ್ವ ಮಾತ್ರ ಉಳಿದು, ‘ಶ್ವಾಸ ಒಳಗೆಳೆದುಕೊಳ್ಳುವಾಗ ‘ಸೋ’ ಹೊರಬಿಡುವಾಗ ‘ಹಂ’ ಹೀಗೆ ಆಗುತ್ತಿರುವ ಸ್ವರೂಪಾನುಭವ ಶ್ವಾಸದಿಂದಲೇ ಪ್ರಕಟವಾಗುತ್ತಿದೆ’
(ಇಸವಿ ಸನ ೧೯೬೨ರಲ್ಲಿ ಮುಂಬಾಯಿ ವಿಮಾನ ತಳದಲ್ಲಿ ಶ್ರೀ ಶ್ರೀರಾಮ ಪೆಂಢಾರಕರರವರ ಪ್ರಶ್ನೆಗಳಿಗೆ ಬರೆದು ತಿಳಿಸಿದ ಉತ್ತರದ ಮುಂದುವರಿದ ಭಾಗ)

ಸ್ಪಂದನ: ವೃತ್ತಿಯ ಸೂಕ್ಷ್ಮ ಮತ್ತು ಮೂಲರೂಪ ವಾಯುವಿನ ಹಾಗೆ ಇರುತ್ತದೆ ಮತ್ತು ಅದು ಸ್ಪಂದನರೂಪದಲ್ಲೇ ಇರುತ್ತದೆ. ವಾಯು ಸಂಚಲನವಾಗಹತ್ತಿದಾಗ ಗಾಳಿಯ ರೂಪ ಹೊಂದಿ ಅದರ ಅರಿವಾಗುತ್ತದೆ. ಅದೇ ರೀತಿ ಚಿತ್ತದ ಅತಿಸೂಕ್ಷ್ಮ ತರಂಗವನ್ನು ‘ಸ್ಪಂದನ’ವೆಂದೂ ಮತ್ತು ಅದು ಗಾಳಿಯಂತೆ ಚಲಿಸಹತ್ತಿದಾಗ ‘ವೃತ್ತಿ’ಯೆಂದೂ ಕರೆಯಲ್ಪಡುತ್ತದೆ.
ಸ್ಪಂದನದ ಸಂಸ್ಕಾರಮಿಶ್ರಿತ ಸೂಕ್ಷ್ಮ – ಸ್ಥೂಲರೂಪಗಳೇ ಮನ, ಬುದ್ಧಿ, ಚಿತ್ತ, ಅಹಂಕಾರವೆಂದು ಕರೆಯಲ್ಪಡುತ್ತದೆ. ಅಂತಃಕರಣ ಕೇವಲ ಸ್ಪಂದನರೂಪದಲ್ಲೇ ಇರುತ್ತದೆ. ಇವುಗಳ ಸಂಬಂಧದಲ್ಲಿ, ಅನೇಕ ವೇಳೆ ಈ ರೀತಿಯ ವಿಭಾಗ ಮಾಡಿ ಹೇಳದೇ ಯಾವುದಾದರೂ ಒಂದೇ ಹೆಸರಿನಿಂದಲೇ ಹೇಳುತ್ತಾರೆ. ಆಗ ಅದರಲ್ಲೇ ಈ ಎಲ್ಲ ಅಂತರ್ಭಾವ ಆಗಿರುತ್ತದೆ ಎಂದು ಅರಿತು ಅರ್ಥಮಾಡಿಕೊಳ್ಳಬೇಕು.
‘ಅಂತಃಕರಣ ಸಂಭಿನ್ನೇ| ತನ್ಮನೋ ವಿಲಯಂ ಯಾತಿ| ಬುದ್ಧ್ಯಾ ವಿಶುದ್ಧ್ಯಾ ಯುಕ್ತೋ| ಚಿತ್ತಮೇವ ಹಿ ಸಂಸಾರಃ’ |
‘ಮನೋಮಾತ್ರವಿದಂ ಸರ್ವಮ್| ಅಹಂಕಾರೇ ವಿನಷ್ಟೇ ಚ| ಇತ್ಯಾದಿ.
ಕಂಠದ ಸ್ಥಾನ ಮನಸ್ಸಿನ ಕ್ಲಪ್ತ ಸ್ಥಾನ. ಸ್ವಪ್ನ ಮನೋಮಯವಿರುತ್ತದೆ ಮತ್ತು ಆ ಸ್ವಪ್ನದ ಸ್ಥಾನ ಕಂಠವಾಗಿದೆ. ‘ಮನಸ್ಸು ವಾಸನಾರೂಪ ಮತ್ತು ದೇಹ ವಾಸನೆಯ ಭೋಗದ್ದೇ ಆಗಿರುವದರಿಂದ ಮನಸ್ಸೇ ದೇಹರೂಪದಿಂದ ಸುರಿದಿದೆ’ ಎಂದು ಹೇಳಲೂಬಹುದು.
‘ಸಂಕಲ್ಪಾತ್ಮಕ ಮನಃ’ ಈ ವ್ಯಾಖ್ಯೆಯಂತೆ ಪರಮಾತ್ಮನ ಸಂಕಲ್ಪದಿಂದ ಆದ ಸರ್ವಸೃಷ್ಟಿ ಕೇವಲ ಮನಃಕಲ್ಪಿತ – ಮನೋಮಾತ್ರ ಎಂದು ಹೇಳಬಹುದು.
‘ಯನ್ಮನಃ ಸ್ತ್ರಿಜಗತ್ಸುಷ್ಟಿಸ್ಥಿತಿವ್ಯಸನಕರ್ಮಕೃತ್| ತನ್ಮನೋ ವಿಲಯಂಯಾತಿ ತದ್ವಿಷ್ಣೋ ಪರಮಮ್ ಪದಮ್|’
‘ಯಾವ ಮನಸ್ಸು ಜಗದುತ್ಪತ್ತಿ – ಸ್ಥಿತಿ – ಲಯ ಮಾಡುವದೋ, ಆ ಮನಸ್ಸು ತತ್ವಜ್ಞಾನದಿಂದ ವಿಲೀನವಾದಾಗ, ವಿಷ್ಣು ಉಪಲಕ್ಷಿತ ಬ್ರಹ್ಮಪದ ಮಾತ್ರ ಉಳಿಯುವದು.’ ಎಂದು ಮಂಡಲ ಬ್ರಾಹ್ಮಣೋಪನಿಷದ್ದಿನಲ್ಲಿ ಹೇಳಿದೆ.
ಕೇವಲ ಆನಂದರೂಪ ಪರಮಾತ್ಮನ ಒಂದು ಅಸ್ತಿತ್ವ ಉಳಿದು, ‘ಶ್ವಾಸ ಒಳಗೆಳೆದುಕೊಳ್ಳುವಾಗ ‘ಸೋ’ ಹೊರಬಿಡುವಾಗ ‘ಹಂ’ ಹೀಗೆ ಆಗುತ್ತಿರುವ ಸ್ವರೂಪಾನುಭವ ಶ್ವಾಸದಿಂದಲೇ ಪ್ರಕಟವಾಗುತ್ತಿದೆ’ ಎಂದು ನಾಸಿಕಾಗ್ರದೃಷ್ಟಿಯಿಂದ ಶ್ವಾಸದೆಡೆ ಲಕ್ಷವಿಡಬೇಕು ಮತ್ತು ‘ಸೋಹಂ’ ಲಕ್ಷದಲ್ಲಿಟ್ಟರೆ ಚಿತ್ತೈಕಾಗ್ರವಾಗುವದು. ಶ್ವಾಸದ ಮೇಲೆ ಲಕ್ಷವಿಟ್ಟರೆ ತಾನೇ ತಾನಾಗಿ ನಾಸಿಕಾಗ್ರದೃಷ್ಟಿ ಕೇಂದ್ರಿತವಾಗುವದು.
ಶ್ರೀಧರ

RELATED ARTICLES  ತಂಪಿನಲ್ಲೂ ತಂಪು ಯಾವುದು…?