123 copy

ಇಂದಿನ ದಿನಮಾನಗಳಲ್ಲಿ ಮಕ್ಕಳು ಹಿಂದಿನ ಕಾಲದಂತೆ ಬೆಳೆಯುತ್ತಿಲ್ಲ ಎನ್ನುವ ಮಾತು ಕೇಳುತ್ತಲೇ ಇರುತ್ತೇವೆ. ಹೌದು ಒಂದೊಂದು ದಿನದಲ್ಲಿ ಹುಟ್ಟಿದ ಮಗುವಿಗೂ ಜನರೆಶನ್ ಗ್ಯಾಪ್ ಎನ್ನುವುದು ಸೃಷ್ಟಿಯಾಗುತ್ತಲೇ ಹೋಗುತ್ತದೆ. ಇವತ್ತಿದ್ದಂತೆ ನಾಳೆಯ ದಿನಗಳು ಇರುವುದಿಲ್ಲ. ಹೊಸ ಹೊಸ ಆವಿಷ್ಕಾರಗಳು ನಡೆದು ಪ್ರಪಂಚಕ್ಕೆ ಅಭಿವೃದ್ಧಿಯಾಗುವ ಹೆಸರಿನಲ್ಲಿ ಪರಿಚವಾಗುತ್ತಿದೆ. ಹಾಗಿರುವಾಗ ಹುಟ್ಟಿದ ಮಗು ಹೊಸತನ್ನು ಕಲಿಯುತ್ತದೆ ಹೊರತು ಹಳೆಯ ವಿಚಾರಗಳನ್ನಲ್ಲ ಎಂದು ಹೇಳಬಹುದು. ಆದರೆ ಭಾರತದಂತ ಸಾಂಸ್ಕøತಿಕವಾದ ನಾಡಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲ. ವಿಚಾರ ಧಾರೆಗಳು ಬದಲಾಗಿರಬಹುದು, ಅಥವಾ ವಿದೇಶದ ರೀತಿಗಳಿಗೆ ವ್ಯಾಮೋಹ ಕಾಲದ ಹೊಡೆತಕ್ಕೆ ಸಿಕ್ಕಿ ಅಲುಗಾಡಿದಂತೆ ಅನ್ನಿಸಿರಬಹುದು ಅಷ್ಟೆ ಆದರೆ ನಮ್ಮ ನೆಲದ ಬೇರು ಗಟ್ಟಿ ಆಗಿರುವುದರಿಂದ ಇಲ್ಲಿಯ ಆಚಾರ ವಿಚಾರ ಸಂಸ್ಕಾರ ಸಂಸ್ಕøತಿಗಳು ಅಳಿಸಿ ಹೋಗಲು ಎಂದೂ ಸಾಧ್ಯವಿಲ್ಲ.
ಹಿಂದಿನ ಮಕ್ಕಳು ಗುರುಕುಲದಲ್ಲಿ ಕಳಿತು ವಿದ್ವಾಂಸರಾಗಿ ಪದಂಡಿತರಾಗಿ ಹೊರಬರುತ್ತಿದ್ದರು. ಅಲ್ಲಿ ನಮ್ಮ ಭಾರತೀಯ ಜ್ಞಾನವನ್ನು ಧಾರೆ ಎರೆದು ಜೀವನದ ಮೌಲ್ಯವನ್ನು ತಿಳಿಸಿಕೊಡುತ್ತಿದ್ದರು. ನಂತರದ ದಿನಗಳಲ್ಲಿ ಗುರುಕುಲದ ಬದಲು ಶಾಲೆ ಎನ್ನುವ ಒಂದು ನಿಗದಿತ ಸಥಳ ಬಂದು ಅಲ್ಲಿ ಮಕ್ಕಳಿಗೆ ಈ ರೀತಿಯ ಶಿಕ್ಷಣ ಈ ವಯಸ್ಸಿನವರಿಗೆ ಎಂದು ಒಂದು ಗೆರೆ ಎಳೆಯಲಾಯಿತು. ಬರುಬರುತ್ತಾ ಸುಂದರ ಶಾಲೆಗಳು ರಾಜಕೀಯ ಬಣ್ಣ ತಗುಲಿ ಶಿಕ್ಷಣದ ಮೌಲ್ಯ ಕುಸಿದು, ಕೇವಲ ಓದು ಎಂದರೆ ಜ್ಞಾನಾರ್ಜನೆ ಅಲ್ಲ ಅದು ಜೀವನೋಪಾಯಕ್ಕೆ ಎನ್ನುವ ಹಂತ ತಲುಪಿತು. ಈಗೀಗ ಓದು ಕೇವಲ ತನ್ನ ಹೊಟ್ಟೆ ಚೀಲ ತುಂಬಲು, ಪ್ರತಿಷ್ಟೆಯ ನೌಕರಿ ಪಡೆಯಲು ಎನ್ನುವ ಹಂತ ಸಾರ್ವಜನಿಕವಾಗಿ ಹಬ್ಬಿದೆ.
ಹಾಗಿರುವಾಗ ಮಕ್ಕಳು ಹಿಂದಿನ ಶಿಕ್ಷಣ ಕಲಿಯುತ್ತಿಲ್ಲ, ಅವರಿಗೆ ಸಂಸ್ಕಾರ ಹಿಂದಿನಂತೆ ನೀಡುತ್ತಿಲ್ಲ, ಎಂದು ಹೇಳಲು ಸಾಧ್ಯವಾಗದು. ಕಾರಣ ಹಿಂದೆ ನಾಲ್ಕು ಮಂತ್ರ ಬಂದರೂ ಅರ್ಥ ಸಹಿತ ವಿವರಣೆ ನೀಡುವಷ್ಟು ಸ್ಪಷ್ಟತೆಯಿಂದ ಕಲಿತುಕೊಂಡಿರುತ್ತಿದ್ದರು. ಆದರೆ ಡಬಲ್ ತ್ರಿಬಲ್ ಡಿಗ್ರಿಯನ್ನು ಪಡೆದರೂ ತಮ್ಮ ಹೆಸರು ಬರೆಯುವಾಗ ತಡವುದು ಕಂಡಾಗ ನಾವು ಎತ್ತ ಸಾಗುತ್ತಿದ್ದೇವೆ ಎನ್ನುವುದು ಅರಿವಾಗುತ್ತದೆ.
ಶಾಲೆ ಮಾತ್ರವಲ್ಲ ಮನೆಯ ವಾತಾವರಣವೂ ತುಂಬಾ ಬದಲಾಗಿದೆ. ಊಟ ಇರಲಿ ನಿದ್ದೆಯ ಸಮಯವಿರಲಿ, ಆಟಗಳಿರಲಿ, ಕೆಲಸಗಳಿರಲಿ ಯಾವುದು ಈಗಿನ ಮಕ್ಕಳಲ್ಲಿ ಶ್ರಮದಿಂದ ಪಡೆಯಬೇಕು ಎಂದು ಪಾಲಕ ವರ್ಗ ತಿಳಿಸಿಕೊಡುತ್ತಿಲ್ಲ. ಅದೇ ಹದಿನೈದು ವರ್ಷದ ಹಿಂದೆ ಹಳ್ಳಿಯ ಮಗು ಬೆಳಗಾಗಿ ಎದ್ದು ದೇವರಿಗೆ ಹೂ ಕೊಯ್ದು ಶಾಲೆ ತಯಾರಿಗಾಗಿ ಸ್ನಾನ ಇತ್ಯಾದಿ ನಿತ್ಯ ಕರ್ಮ ಮುಗಿಸಿ ತಾಯಿಯ ಜೊತೆ ತಿಂಡಿ ಬಡಿಸಲೋ ಅಥವಾ ಮನೆಯ ಕಸ ಗುಡಿಸಲೋ ಹಾಜರಿರುತ್ತಿದ್ದರು. ಆದರೆ ಈಗ ಮಗುವಿಗೆ ಅಮ್ಮನೇ ಸ್ನಾನ ಮಾಡಿಸಬೇಕು, ತಿಂಡಿ ತುತ್ತು ಮಾಡಿ ತಿನ್ನಿಸಬೇಕು, ಬಟ್ಟೆಗಳನ್ನು ತೊಡಿಸಬೇಕು ಶಾಲೆಗೆ ಹೋಗುವ ಬ್ಯಾಗ್‍ನಲ್ಲಿ ಪಟ್ಟಿ ಪುಸ್ತಕ ಪೆನ್ನುಗಳು ಸರಿಯಾಗಿವೆಯೋ ಎಂದು ನೋಡಿ ಪಾಲಕರೆ ಸ್ಕೂಲ್ ಬಸ್ ಹತ್ತಿಸಿ ಬರುವ ಕಾಲ.
ಮೊದಲು ಎರಡು ಮನೆಯಲ್ಲಿ ಹಾಕುವ ಬಟ್ಟೆ, ಶಾಲೆಗೆ ಒಂದು ಜೊತೆ ಬಟ್ಟೆ ತಿರುಗಾಟ ನೆಂಟರ ಮನೆಗೆ ಒಂದು ಅಂಗಿ ಇದ್ದರೆ ಅದು ಜಾಸ್ತಿಯಾಯಿತು. ಆದರೆ ಈಗ ಆ ಒಂದು ಶೈಲಿಯಲ್ಲಿ ಬದುಕಲು ಸಾಧ್ಯವೇ! ಖಂಡಿತ ಸಾಧ್ಯವಿಲ್ಲ. ಹತ್ತು ಹದಿನೈದು ಜೊತೆ ಬಟ್ಟೆ ಎಂಥಹ ಬಡವನಾದರೂ ತನ್ನ ಮಗುವಿಗೆ ಜೋಡಿಸಿಕೊಡುತ್ತಾನೆ. ಮಾಡುವ ಊಟ, ಉಡುವ ಉಡುಗೆ, ಮಾತಿನ ಶೈಲಿ, ಕಲಿಯುವ ಪಾಠ, ಜೀವನ ಕ್ರಮವೇ ಬದಲಾಗಿದೆ. ಹಾಗಿರುವಾಗ ಮಕ್ಕಳು ಮೊದಲಿನಂತಿಲ್ಲ ಎಂದು ಹೇಳಿದರೆ ಆ ಮಾತಿಗೆ ಅರ್ಥವೇ ಇಲ್ಲ.
ಏನೇ ಬದಲಾಗಲಿ ನಮ್ಮಲ್ಲಿ ಅಗತ್ಯವಾದ ತಿಳುವಳಿಕೆಯನ್ನು ಅಂದು ಇಂದು ನೀಡುತ್ತಲೇ ಇದ್ದಾರೆ. ಸಂಸ್ಕಾರದ ಮೂಲವೆನಿಸಿದ ಓದು ಬರಹ ಪಾಲಕರು ಮತ್ತು ಶಿಕ್ಷಕರು ತಿಳಿಸುತ್ತಿದ್ದಾರೆ. ಕೆಲವು ಶಿಕ್ಷಕರಂತೂ ಮಕ್ಕಳಿಗೆÀ ಸರಕಾರದ ನಿಯಮದಂತೆ ಬಂದ ಪಠ್ಯವನ್ನು ಭೋದಿಸುತ್ತ ದೇಶಕ್ಕಾಗಿ ಹೋರಾಡಿದವರ ಬಗ್ಗೆ, ಇತಿಹಾಸ, ಕಲೆಗಳು, ಪುರಾಣ ಪುಣ್ಯ ಕಥೆಗಳು ಹೀಗೆ ವಿಷೇಶವಾದವುಗಳನ್ನು ಕಲಿಸುತ್ತಾರೆ.
ಕಾಲ ಬದಲಾದರೂ ಸಹ ನಮ್ಮ ಮಕ್ಕಳು ಈ ಕಲಿಕೆಗಳನ್ನು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಅದರಂತೆ ಕೆಲಸ, ಜವಬ್ದಾರಿಗಳು, ಜೀವನದ ಮೌಲ್ಯವನ್ನು ಹೇಳಿಕೊಡುವ ಜವಬ್ದಾರಿ ದಿನದ ಹೆಚ್ಚಿನ ಸಮಯ ಕಳೆಯುವ ಶಾಲೆಯ ಶಿಕ್ಷಕರಿಗೆ ಅವಷ್ಯ ಬೇಕು. ಹಾಗೆ ಪಾಲಕರಿಗೂ ತಮ್ಮ ಮಕ್ಕಳು ಹೇಗೆ ಬೇಳೆಯಬೇಕು ಎನ್ನುವ ಒಂದು ಆಸೆ ಹೇಗೆ ಇರುತ್ತದೆಯೋ ಹಾಗೆ ಗುರಿಯಿಟ್ಟು ಆ ನಿಟ್ಟಿನಲ್ಲಿ ಬೆಳೆಸುವ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ಮೊದಲು ಶಿಕ್ಷೆಯಲ್ಲಿ ಇದ್ದರೆ ಮಾತ್ರ ಕಲಿಗೆ ಪೂರ್ಣವಾಗುತ್ತದೆ ಎನ್ನುತ್ತಿದ್ದರು. ತಿನ್ನಲು ಮುದ್ದು ಮಾಡು ಕಲಿಯಲು ಕೋಲು ನೋಡು ಎನ್ನುವ ಗಾದೆ ಮಾತು ಇತ್ತು. ಈಗ ಬದಲಾಗಿದೆ. ಎಲ್ಲವನ್ನು ಪ್ರೀತಿಯಿಂದ ತಿಳಿಸಿಕೊಡಬೇಕು. ಮಕ್ಕಳಲ್ಲಿ ಯಾವುದರ ಬಗ್ಗೆ ಆಸಕ್ತಿ ಇದೆಯೋ ಅದನ್ನು ಗುರುತಿಸಿ ಕಲಿಸಬೇಕು. ನಿಜಕ್ಕೂ ಮಕ್ಕಳ ಬೆಳವಣಿಗೆ ಹಿಂದಿನಂತೆ ಇಲ್ಲ, ಸುಲಭವೂ ಇಲ್ಲ. ಮಕ್ಕಳು ಕಲಿತು ದೊಡ್ಡವರಾಗುವ ಹೊತ್ತಿಗೆ ಮತ್ತೊಮ್ಮೆ ಪಾಲಕರು ಡಿಗ್ರಿ ಪಡೆಯಲು ಓದಿದ ಅನುಭವ ಆಗುತ್ತದೆ.

RELATED ARTICLES  ಶೂನ್ಯ ಸಂಪಾದನೆ