ಅಕ್ಷರ ರೂಪ:ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ.
ಮಕ್ಕಳೇ! ನಿಮಗೆಲ್ಲರಿಗೂ ನನ್ನ ಹಾರ್ದಿಕ ಆಶೀರ್ವಾದವಿದೆ. ನೀವೆಲ್ಲರೂ ಸುಖವಾಗಿರಿ.
(ಇಸವಿ ಸನ ೧೯೬೮ರಲ್ಲಿ ಶ್ರೀ. ಬಾಪೂರಾವ ಕಾಣೆ ದಾದರ, ಮುಂಬಾಯಿಯವರು ಪರದೇಶಕ್ಕೆ ಹೋಗುವ ಸಂದರ್ಭದಲ್ಲಿ ಬರೆದ ಪತ್ರ)
||ಶ್ರೀರಾಮ ಸಮರ್ಥ||
ವರದಾಶ್ರಮ,
ಆಷಾಢ ಶು| ೧೧| ಶಕೆ ೧೮೯೦
೬-೭-೧೯೬೮, ಮಧ್ಯಾಹ್ನ, ೨ ಗಂಟೆ
ಚಿ. ಬಾಪುಗೆ ಆಶೀರ್ವಾದ,
ಮಗಾ! ನೀನು ಪರದೇಶಕ್ಕೆ ಹೋಗುವವನಿದ್ದೀಯೆ ಎಂದು ನಿನ್ನ ತಂದೆಯ ಮತ್ತು ನಿನ್ನ ಪತ್ರದಿಂದ ತಿಳಿಯಿತು. ಚಿಂತೆ ಮಾಡುವ ಯಾವುದೇ ಕಾರಣವಿಲ್ಲ. ಪೂರ್ಣ ಯಶಸ್ವಿಯಾಗಿ ಬರುವೆ. ನಮ್ಮ ಆಚಾರ-ವಿಚಾರ ಮತ್ತು ಉಚ್ಚಾರದಿಂದ ಆರ್ಯ ಸಂಸ್ಕೃತಿಯ ಮಹತ್ವ ಪಾಶ್ಚಿಮಾತ್ಯರಿಗೆ ತಾನಾಗಿಯೇ ತಿಳಿದುಬರುವಂತೆ ನಡೆಯುವದು ಪ್ರತ್ಯೇಕ ಹಿಂದುವಿನ ಆದ್ಯ ಕರ್ತವ್ಯ.
‘ಶೀಲಂ ಪರಂ ಭೂಷಣಮ್’ ಶೀಲವೇ ಜೀವನದ ಭೂಷಣ. ವೈದಿಕ ಧರ್ಮ ನೀತಿ ಕಲಿಸುತ್ತದೆ. ಉತ್ಕೃಷ್ಟ ಜೀವನ ನಡೆಸಿ ಪರೋಪಕಾರಿಯಾಗಿರಬೇಕು ಮತ್ತು ಜ್ಞಾನ-ವೈರಾಗ್ಯ ಸಂಪನ್ನನಾಗಿ ಮೋಕ್ಷ ಗಳಿಸಬೇಕು ಹೀಗೆ ವೈದಿಕ ಧರ್ಮದ ಹೇಳುವಿಕೆಯಿದೆ. ನಿರತಿಶಯ ಆನಂದರೂಪ ಪರಮಾತ್ಮಸ್ವರೂಪದಲ್ಲಿ, ಬಿಂದು ಹೇಗೆ ಸಿಂಧುವಿನಲ್ಲಿ ಏಕರೂಪವಾಗುತ್ತದೆಯೋ ಹಾಗೆ ಐಕ್ಯ ಗಳಿಸುವದು ಎಂದರೆ ಮೋಕ್ಷ.
ಮಗಾ! ಹಿರಿಯರ ಆಶೀರ್ವಾದದಿಂದ, ದೇವರ ಕೃಪೆಯಿಂದ ಮತ್ತು ಸದ್ಗುರುವಿನ ಅನುಗ್ರಹದಿಂದ ನೀನು ಆದರ್ಶ ಜೀವನದ ದೊಡ್ಡ ವ್ಯಕ್ತಿಯಾಗಿ, ಎಲ್ಲ ದೃಷ್ಟಿಯಿಂದಲೂ ನಿನ್ನ ಜೀವನ ಕೃತಾರ್ಥವಾಗಲಿ ಎಂದು ನಾನು ಭಗವಂತನ ಚರಣಗಳಲ್ಲಿ ಪ್ರಾರ್ಥನೆ ಮಾಡುತ್ತೇನೆ.
ಮಕ್ಕಳೇ! ನಿಮಗೆಲ್ಲರಿಗೂ ನನ್ನ ಹಾರ್ದಿಕ ಆಶೀರ್ವಾದವಿದೆ. ನೀವೆಲ್ಲರೂ ಸುಖವಾಗಿರಿ.
ಮತ್ತೆಲ್ಲಾ ಕ್ಷೇಮ.
ಶ್ರೀಧರ
(ಪತ್ರಸರಣಿ ಕೆಲದಿನ ಬಿಟ್ಟು ಮುಂದುವರಿಯುವದು)