ಹರಿಕೃಷ್ಣ ರಾಮ ನಾಯಕ ಇನ್ನಿಲ್ಲ
ಅಂಕೋಲಾ: ತಾಲೂಕಿನ ಲಕ್ಷೇಶ್ವರದ ನಿವಾಸಿ ಹರಿಕೃಷ್ಣ ರಾಮ ನಾಯಕ (57) ಆಕಸ್ಮಿಕವಾಗಿ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅಂದಿನ ರಾಜಕೀಯ ಮುಖಂಡರಾದ ದಿ. ಆರ್. ಜಿ. ನಾಯಕರವರ ಪುತ್ರರಾದ ಇವರು ಸರಳ ಜೀವಿಗಳಾಗಿ ಎಲ್ಲರೊಡನೆ ಸ್ನೇಹ ಬಾಂಧವ್ಯ ಹೊಂದಿದ್ದರು. ಆರ್.ಜಿ. ನಾಯಕರವರು ಕೆನರಾ ಲೋಕಸಭಾ ಕ್ಷೇತ್ರದ ಸದಸ್ಯರಾದ ದಿ.ಜೋಕಿಮ ಆಳ್ವರವರ ಆತ್ಮೀಯರಾಗಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಅನುಯಾಯಿಗಳಾಗಿದ್ದರು. ಹರಿಕೃಷ್ಣನಾಯಕರವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ದಿನಸಿ ಕಿಟ್ ವಿತರಣಾ ಸಂದರ್ಭದಲ್ಲಿ ಗೊಂದಲ
ಅಂಕೊಲಾ: ಕಾರ್ಮಿಕ ಇಲಾಖೆಯಿಂದ ಸರಕಾರ ನೀಡಿರುವ ದಿನಸಿ ಸಾಮಾಗ್ರಿಗಳಿರುವ ಕಿಟ್‌ಗಳನ್ನು ಕಾರ್ಮಿಕ ಇಲಾಖೆ ನೀಡಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಈ ನೋಂದಾಯಿತ ಕಟ್ಟಡ ಕಾರ್ಮಿಕರನ್ನು ನಿಯಂತ್ರಿಸಲಾಗದೇ ಇಲಾಖೆ ಕಿಟ್ ನೀಡುವುದನ್ನು ಬಂದ್ ಮಾಡಿದ ಘಟನೆ ಅಂಕೋಲಾದಲ್ಲಿ ನಡೆದಿದೆ. ಇಂದು ಕಿಟ್ ವಿತರಿಸುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದೇವೆ. ದಾಖಲೆ ಪತ್ರಗಳನ್ನು ನೀಡಿದ ಫಲಾನುಭವಿಗಳಿಗೆ ಕಿಟ್ ನೀಡುತ್ತೇವೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಇದರಿಂದ ಬೆಳಗ್ಗೆಯಿಂದ ಕಾದು ಕುಳಿತಿದ್ದ ಕಾರ್ಮಿಕರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ವ್ಯಕ್ತಿ ನಾಪತ್ತೆ ದೂರು ದಾಖಲು
ಕಾರವಾರ: ಯಾವುದೋ ವಿಷಯದಿಂದ ನೊಂದ 75 ವರ್ಷದ ವೃದ್ಧರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕಾರವಾರದ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿನೇಶ ರಾಮಚಂದ್ರ ಕಾಮತ್ ನಾಪತ್ತೆಯಾಗಿರುವ ವ್ಯಕ್ತಿ, ಮನೆಯಲ್ಲಿ ಯಾರಿಗೂ ಹೇಳದೆ ಗೋವಾ ದಿಕ್ಕಿನತ್ತ ಆ. 16ರಂದು ನಡೆದುಕೊಂಡು ಹೋಗಿದ್ದಾರೆ. ಈವರೆಗೆ ಮನೆಗೆ ವಾಪಸ್ ಬರದೆ ನಾಪತ್ತೆಯಾಗಿದ್ದಾರೆ. ತಮ್ಮಗಂಡನನ್ನು ಹುಡುಕಿಕೊಡುವಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಸ್ತೆ ಸಂಚಾರ ಬಂದ್ ಆದ ಸ್ಥಳದಲ್ಲಿ ವಿಶೇಷ ಕ್ಯಾಂಪ್
ಕಾರವಾರ: ಕಳೆದ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಅಣಶಿ ಘಟ್ಟದಲ್ಲಿ ಉಂಟಾದ ಭೂಕುಸಿತದಿಂದಾಗಿ ರಸ್ತೆ ಸಂಚಾರ ಸಂಪೂರ್ಣ ನಿಲುಗಡೆಯಾಗಿದೆ. ಇದರಿಂದ ಜೋಯಿಡಾ, ದಾಂಡೇಲಿ ಹಾಗೂ ಹಳಿಯಾಳ ತಾಲೂಕುಗಳ ಜನಸಾಮಾನ್ಯರಿಗೆ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಆ. 25 ರಂದು ವಿಶೇಷ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಈ ತಾಲೂಕುಗಳ ಜನಸಾಮಾನ್ಯರಿಗೆ ಜಿಲ್ಲಾ ಮಟ್ಟದ ಸರಕಾರಿ ಕಚೇರಿಗಳಲ್ಲಿನ ಕೆಲಸಗಳಿಗೆ ಹಾಗೂ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆ. 25 ರಂದು ವಿಶೇಷ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ. ಜೊಯಿಡಾ ತಾಲೂಕಿನ ಹಾಗೂ ಮಧ್ಯಾಹ್ನ ಹಳಿಯಾಳ ತಾಲೂಕಿನ ವಿವಿಧ ಇಲಾಖೆಗಳ ಸರಕಾರಿ ಕಚೇರಿಗಳಲ್ಲಿ ಆಯಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಮಟ್ಟಿಗೆ ಸ್ಥಳದಲ್ಲಿಯೇ ಅರ್ಜಿಗಳನ್ನು ಇತ್ಯರ್ಥ ಪಡಿಸಲಿದ್ದಾರೆ.