ಎನ್. ಮುರಳೀಧರ್
ವಕೀಲರು
ನೆಲಮಂಗಲ
9902772278

ಹಾಸಿಗೆಗೂ ಮನುಷ್ಯನ ಜೀವನಕ್ಕೂ ಯಾವರೀತಿ ಹೋಲಿಕೆ ಮಾಡಬಹುದು ಎಂದರೆ, ಇಲ್ಲಿ ಸುಪ್ಪತ್ತಿಗೆಯ ಮೇಲೆ ಮಲಗುತ್ತಾರೆ ಎಂದರೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ನೆಮ್ಮದಿಯ ಜೀವನ ಇಲ್ಲದ ಮನುಷ್ಯನು ಎಂತಹ ಸುಪ್ಪತ್ತಿಗೆಯ ಮೇಲೆ ಮಲಗಿದ್ದರೂ ಅದು ಅವನಿಗೆ ಮುಳ್ಳಿನ ಹಾಸಿಗೆ ಇದ್ದಂತೆ ಆಗುತ್ತದೆ. ಶಾಂತಿಯುತ ಜೀವನದಲ್ಲೂ ಸಹ ಯಾವುದಾದರೂ ಸಣ್ಣ ಚಿಂತೆ ಮೂಡಿದರೆ, ಸ್ವಲ್ಪ ನೆಮ್ಮದಿ ಹಾಳಾಗುತ್ತದೆ. ಹಲವಾರು ಚಿಂತೆ ಕಷ್ಟಗಳು ಬಂದಾಗ ಜೀವನವೇ ಒಂದು ಮುಳ್ಳಿನ ಹಾಸಿಗೆಯಂತೆ ಆಗುತ್ತದೆ. ಒಂದು ಸಣ್ಣ ಚಿಂತೆ ಮೂಡಿದರೂ ಸುಪ್ಪತ್ತಿಗೆಯಲ್ಲಿ ಮುಳ್ಳುಹೊಕ್ಕಂತೆ ಆಗುತ್ತದೆ.
ಮನುಷ್ಯನಿಗೆ ಜೀವನ ಎಂಬುದು ಮುಳ್ಳಿನ ಹಾಸಿಗೆ ಇದ್ದಂತೆ. ಅಡಿಗಡಿಗೆ ಬರುವ ಕಷ್ಟಗಳು, ಅನಿರೀಕ್ಷಿತ ಸಾವು ನೋವು ದುಃಖ ಇವುಗಳು ಮನುಷ್ಯನು ಭೂಮಿಯಲ್ಲಿ ಸುಖದಿಂದ ಜೀವನ ಸಾಗಿಸುವುದಕ್ಕೆ ಅಡ್ಡಿಯಾಗುತ್ತವೆ. ಮನೋವ್ಯಥೆ ಅಥವಾ ಯಾವುದಾದರೊಂದು ಚಿಂತೆ ಇರುವ ಶ್ರೀಮಂತ ಮನುಷ್ಯನು ಸುಪ್ಪತ್ತಿಗೆಯ ಮೇಲೆ ಮಲಗಿದ್ದರೂ ಸಹ ಮುಳ್ಳಿನ ಹಾಸಿಗೆ ಮೇಲೆ ಮಲಗಿದಂತೆ ಭಾಸವಾಗುತ್ತದೆ.
ಮಗುವಾದಾಗಿದ್ದಾಗ ಜೀವನದ ಅರ್ಥ ಯಾರಿಗೂ ತಿಳಿದಿರುವುದಿಲ್ಲ. ಬೆಳೆಯುತ್ತಾ ಹೋದಂತೆ, ಜೀವನದಲ್ಲಿ ಕಷ್ಟ ಸುಖಗಳು ಎದುರಾದಾಗ ಜೀವನದ ಅರ್ಥ ತಿಳಿಯುತ್ತಾ ಹೋಗುತ್ತದೆ. ತಂದೆ ತಾಯಂದಿರುಗಳು ಹಣವಂತರಾದರೆ ಮಕ್ಕಳಿಗೆ ಯಾವುದೇ ಚಿಂತೆ ಇಲ್ಲದೆ ಇರುತ್ತಾರೆ. ಮಕ್ಕಳು ದೊಡ್ಡವರಾಗಿ ಶಾಲೆಗೆ ಸೇರಿದ ನಂತರವೇ ಜೀವನದ ಕಷ್ಟ ಅರಿಯಲು ಪ್ರಾರಂಭವಾಗುತ್ತದೆ. ಶಾಲೆಯ ಭೋದನೆ, ಶಿಸ್ತು, ನಾನಾ ರೀತಿಯಿಂದ ಜೀವನವು ಪ್ರಾರಂಭವಾಗುತ್ತದೆ. ಅಪ್ಪ ಅಮ್ಮ ಶಿಸ್ತಿನಿಂದ ಇದ್ದು, ಬುದ್ದಿವಂತ ಮಕ್ಕಳಿಗೆ ಇದು ಕಷ್ಟವೇನೂ ಆಗುವುದಿಲ್ಲ. ಆದರೆ ಕೆಲವರಿಗೆ ಶಾಲೆಯೇ ಒಂದು ದೊಡ್ಡ ಸಮಸ್ಯೆಯಾಗಿ ಇದೇ ದೊಡ್ಡ ಶಿಕ್ಷೆಯಾಗಿರುತ್ತದೆ. ಇದರಿಂದ ಪಾರಾಗಲೂ ಏನೇನೋ ಆಲೋಚನೆ ಮಾಡುತ್ತಾರೆ. ಅಂಥವರಿಗೆ ಸುಖದ ಸುಪ್ಪತ್ತಿಗೆ ನೀಡಿದರೂ, ಅಲ್ಲಿಂದಲೇ ಸುಪ್ಪತ್ತಿಗೆಯು ಮುಳ್ಳಾಗಿ ಕಾಡಲು ಪ್ರಾರಂಭವಾಗುತ್ತದೆ. ಅವರಿಗೆ ಸದಾ ಶಾಲೆಯದೇ ಚಿಂತೆಯಾಗಿರುತ್ತದೆ. ಇವರು ಸರಿಯಾಗಿ ಓದುವುದಿಲ್ಲವೆಂದು ತಂದೆ ತಾಯಿಯರಿಗೆ ಚಿಂತೆ ಪ್ರಾರಂಭವಾಗುತ್ತದೆ. ಮಕ್ಕಳಿಗೆ ವಿದ್ಯೆ ಹತ್ತದಿದ್ದರೆ ಏನು ಮಾಡುವುದು? ಇವರ ಭವಿಷ್ಯವೇನು ಎಂಬ ಚಿಂತೆ ಕಾಡಲು ಆರಂಭಿಸುತ್ತದೆ. ಓದಿದ ನಂತರ ಕೆಲಸದ ಚಿಂತೆ ಪ್ರಾರಂಭವಾಗುತ್ತದೆ, ಸರಿಯಾದ ಕೆಲಸ ಸಿಗುವವರೆಗೂ ಚಿಂತೆ ಇದ್ದೇ ಇರುತ್ತದೆ. ಕೆಲವರ ತಂದೆಯು ಯಾವುದಾದರೂ ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ ಅವರ ಕಸಬನ್ನೇ ಮುಂದುವರೆಸಿಕೊಂಡು ಹೋಗುವವರಿಗೆ ಚಿಂತೆ ಇರುವುದಿಲ್ಲ. ಆದರೆ ವ್ಯಾಪಾರದಲ್ಲಿ ನಷ್ಟವಾಗದಂತೆ ನೋಡಿಕೊಳ್ಳುವುದೇ ಅವರಿಗೆ ದಿನ ನಿತ್ಯದ ಚಿಂತೆಯಾಗುತ್ತದೆ. ಸ್ವಲ್ಪ ನಷ್ಟವಾದರೂ ಅದನ್ನು ಹೇಗೆ ಸರಿದೂಗಿಸಬೇಕೆಂಬ ಚಿಂತೆ. ಆದಾಗ್ಯೂ ತಂದೆಯವರಿಗೆ ಮಗ ನನ್ನ ಕಸುಬೇ ಹಿಡಿದನಲ್ಲಾ ಬೇರೆ ಯಾವುದಾದರೂ ಕೆಲಸ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಂದುಕೊಳ್ಳುವರು ಇರುತ್ತಾರೆ.
ಈ ಅವಧಿಯಲ್ಲಿ ತಂದೆ ತಾಯಿ ಇದ್ದು, ನೋಡಿಕೊಳ್ಳುತ್ತಾ ಇದ್ದರೆ ಚಿಂತೆ ಇರುವುದಿಲ್ಲ. ಅಕಸ್ಮಾತ್ ಏನಾದರೂ ಅನಿರೀಕ್ಷಿತ ಘಟನೆ ನಡೆದು ತಂದೆ ತಾಯಿಯರಿಗೆ ಏನಾದರೂ ಸಾವಿಗೀಡಾದರೆ, ಇವರೇ ಮನೆಯಲ್ಲಿರುವ ಉಳಿದ ಸದಸ್ಯರ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ. ಕೆಲಸ ಸಿಕ್ಕಿದ ನಂತರ ಮದುವೆ, ನಂತರ ಮಕ್ಕಳು ಲಾಲನೆ ಪಾಲನೆ ಮನುಷ್ಯನ ಜೀವನದಲ್ಲಿ ಮುಂದುವರೆದಿರುತ್ತದೆ. ಈ ಮದ್ಯೆ ಎಷ್ಟೇ ಸಮಾಧಾನ ಸುಖ ನೆಮ್ಮದಿಯಿಂದ ಇದ್ದರೂ ಯಾವುದಾದರೂ ಚಿಂತೆ ಕಾಡುತ್ತಲೇ ಇರುತ್ತದೆ.
ಮನುಷ್ಯ ಎಷ್ಟೇ ಸುಖವಾಗಿದ್ದರೂ, ವೃದ್ದಾಪ್ಯದಲ್ಲಿ ಕಾಡುವ ಖಾಯಿಲೆ, ಎಂಥವರಿಗೂ ಈ ಜೀವನ ಸಾಕಪ್ಪಾ ಎಂದೆನಿಸದೆ ಇರದು. ಈ ಕಡೆ ಪ್ರಾಣವೂ ಹೋಗುವುದಿಲ್ಲ ಖಾಯಿಲೆಯಿಂದ ನರಳುವುದು ತಪ್ಪುವುದಿಲ್ಲ. ಮನಸ್ಸಿಗೆ ಬಂದಂತೆ ಇರಲೂ ಆಗುವುದಿಲ್ಲ. ತನಗೆ ಬೇಕಾದ ಇಷ್ಟವಾದ ತಿಂಡಿ ತಿನಸುಗಳನ್ನು ತಿನ್ನಲೂ ಆಗದ ಪರಿಸ್ಥಿತಿ. ಡಾಕ್ಟರರು ಹೇಳಿದಂತೆ ಪಥ್ಯದಲ್ಲಿರಬೇಕು. ಇಲ್ಲದಿದ್ದಲ್ಲಿ ಖಾಯಿಲೆಯು ಜಾಸ್ತಿಯಾಗಬಹುದು. ಆಯಸ್ಸು ಮುಗಿಯುವವರೆಗೂ ಬದುಕಿರಲೇ ಬೇಕು. ಆಯಸ್ಸು ಮುಗಿದ ಕೂಡಲೇ ಹೋಗಬಹುದು. ಆಯಸ್ಸು ಇರುವವರೆಗೂ ಬದುಕಿರಲೇ ಬೇಕಲ್ಲ ಎಂದರೆ, ಡಾಕ್ಟರರು ಹೇಳಿದಂತೆ ಕೇಳಲೇಬೇಕು. ಇಂತಹ ಪರಿಸ್ಥಿತಿಯಲ್ಲಿ ಮಲಗುವ ಎಂದರೆ ನಿದ್ದೆ ಹೇಗೆ ಬರಲು ಸಾಧ್ಯ. ಎಂತಹ ಸುಪ್ಪತ್ತಿಗೆ ಮೇಲೆ ಮಲಗಿದ್ದರೂ ನಿದ್ದೆ ಎಂಬುದು ಮರೀಚಿಕೆಯಾಗಿರುತ್ತದೆ. ಯಾವಾಗಲೂ ಮಲಗಿರುವ ರೋಗಿಗೆ ಹಾಸಿಗೆಯೇ ಒಂದು ಶತ್ರುವಾಗಿ ಬಿಡುತ್ತದೆ. ಎದ್ದು ಓಡಾಡಿದರಂತೂ ಪರವಾಗಿಲ್ಲ. ಒಂದೇ ಕಡೆ ಮಲಗಿದ್ದರೆ ಹಾಸಿಗೆಯೂ ಮುಳ್ಳಿನಂತೆ ಆಗಿಬಿಡುತ್ತದೆ. ಚೆನ್ನಾಗಿ ಇದ್ದಾಗಲೇ ಮೃತರಾಗು ವವರು ಅದೃಷ್ಟವಂತರು ಎನ್ನಬಹುದು. ಖಾಯಿಲೆಗಳ ಜೊತೆಗೆ ಮಕ್ಕಳ ಭವಿಷ್ಯದ ಚಿಂತೆ ಏನಾದರೂ ಕಾಡಿದರೆ ಮುಗಿದೇ ಹೋಯಿತು, ನೆಮ್ಮದಿ ಎಂಬುದು ಮರೀಚಿಕೆಯೇ. ಈ ಕಡೆ ಸಾಯೋಣವೆಂದರೆ ಮಕ್ಕಳ ಜವಾಬ್ದಾರಿ, ಬದುಕೋಣ ಎಂದರೆ ಖಾಯಿಲೆಗಳ ಕಾಟ. ಇದರಿಂದ ಖಾಯಿಲೆ ಹೆಚ್ಚಾಗಿ ನೆಮ್ಮದಿಯ ಜೀವನವೇ ಇಲ್ಲದಂತಾಗಿ ಎಂತಹ ಸುಪ್ಪತ್ತಿಗೆ ಇದ್ದರೇನು ಅದು ಮುಳ್ಳಿನ ಹಾಸಿಗೆಯಂತಾಗುತ್ತದೆ. ಹಣವಂತರಿಗೆ ಹಣವನ್ನು ಜೋಪಾನ ಮಾಡುವುದೇ ಒಂದು ದೊಡ್ಡ ಚಿಂತೆಯಾಗುತ್ತದೆ. ಯಾರನ್ನಾದರೂ ನಂಬಿ ಕೊಟ್ಟರೆ ಅವರು ಪುನಃ ವಾಪಸ್ ನೀಡುವರೆಂಬ ಗ್ಯಾರಂಟಿ ಇರುವುದಿಲ್ಲ. ಅದು ಕಪ್ಪುಹಣವಾಗಿದ್ದರೆ ಜೋರಾಗಿ ಕೇಳುವಂತಿಲ್ಲ. ಮನೆಯಲ್ಲಿ ಇಟ್ಟರೆ ಆದಾಯ ತೆರಿಗೆಯವರ ಭಯ.

RELATED ARTICLES  ನೋಟಿನ ಬದಲಾವಣೆ ಹೇಗೆ..? ಇಲ್ಲಿದೆ ನೋಡಿ ಉತ್ತರ.

images 2
ಹಣವಿದ್ದವರ ಕಥೆ ಒಂದಾದರೆ ಹಣ ಇಲ್ಲದವರ ಕಥೆ ಬೇರೆ ರೀತಿಯದ್ದು. ಇವರು ಕಷ್ಟಪಟ್ಟು ಬೆಳಗಿನಿಂದ ದುಡಿದು ರಾತ್ರಿಯಾಗುತ್ತಿದ್ದಂತೆ, ಊಟ ಮಾಡಿ ಮಲಗಿದರೆ ಬೆಳಿಗ್ಗೆಯೇ ಎಚ್ಚರವಾಗುವುದು. ಇವರು ಸುಪ್ಪತ್ತಿಗೆಯಂತೆ ಹಾಸಿಗೆ ಕೇಳದಿದ್ದರೂ ಅವರಿಗೆ ತಕ್ಕಂತೆ ಹಾಸಿಗೆಯನ್ನು ಹೊಂದಿರುತ್ತಾರೆ. ಇವರಿಗೆ ಯಾವ ಸುಪ್ಪತ್ತಿಗೆಯೂ ಬೇಡ. ಸುಮಾರಾಗಿ ಇದ್ದರೆ ಸಾಕು ಎಂಬ ಮನೋಭಾವ. ದುಡಿಯುವವರೆಗೆ ದುಡಿದು, ದುಡಿಮೆ ನಂತರ ವಿಶ್ರಾಂತಿ ಪಡೆಯುವ ಇವರಿಗೆ ಅಷ್ಟಾಗಿ ಖಾಯಿಲೆ ಬರುವುದಿಲ್ಲ ಎಂಬ ಮನೋಭಾವ ಇದೆ. ಏಕೆಂದರೆ ಮೊದಲಿನಿಂದಲೂ ದೇಹವನ್ನು ದಂಡಿಸಿ ದುಡಿದಿರುವುದರಿಂದ ಇವರಿಂದ ಖಾಯಿಲೆ ಬಹಳ ದೂರವಿರುತ್ತದೆ ಎಂಬುದು ಲೋಕೋಕ್ತಿ. ಆದರೆ ಇವರು ದೇಹವನ್ನು ದಂಡಿಸಿ ದುಡಿದು ಚಿಂತೆ ಇಲ್ಲ ಎನ್ನುವಂತಿಲ್ಲ ಏಕೆಂದರೆ ನೆರೆಹೊರೆಯವರು ಧನಿಕರಾಗಿದ್ದರೆ ನಾನೂ ಅವರಂತೆ ಆಗಿಲ್ಲವೇ ಎಂಬ ಚಿಂತೆಯೂ ಕಾಡಬಹುದು. ಇವರ ಅದೃಷ್ಟ ಹೇಗಿರುವುದೋ ಬಲ್ಲವರಾರು? ಇವರ ದೇಹದ ಸ್ಥಿತಿ ಹೇಗಿರುವುದೋ ಯಾರಿಗೆ ಗೊತ್ತು, ವಂಶಪಾರಂಪರಿಕವಾಗಿ ಬಂದ ಖಾಯಿಲೆ ಬೆಂಬಿಡದೆ ಇರದು. ಇವರಿಗೂ ಖಾಯಿಲೆ ಬಂತು ಎಂದರೆ ಮೇಲೆ ಹೇಳಿದಂತೆ ಇವರೂ ಕಷ್ಟವನ್ನು ಪಡಲೇ ಬೇಕು. ಇದನ್ನು ತಪ್ಪಿಸಲು ಸಾಧ್ಯವಿಲ್ಲ.
ಮನುಷ್ಯನು ಮೊದಲಿನಿಂದಲೂ ಒಳ್ಳೆಯ ರೀತಿಯಲ್ಲಿ ಬದುಕಿ ಕಡೆಗಾಲಕ್ಕೆ ಯಾರೂ ಇಲ್ಲದ ಪರಿಸ್ಥಿತಿ ಉಂಟಾದಲ್ಲಿ ಆಸ್ತಿಗೋಸ್ಕರ ಯಾರಾದರೂ ನೋಡಿಕೊಳ್ಳುತ್ತೇನೆಂದು ಹೇಳಿ ಮನೆಯಲ್ಲಿ ಇಟ್ಟುಕೊಂಡರೆ ಆಗ ಇವರ ಜೀವನ ಒಂದು ರೀತಿಯ ಹಂಗಿನ ಜೀವನ ಆಗಿಬಿಡುತ್ತದೆ. ಇನ್ನೊಬ್ಬರ ಆಶ್ರಯ ಅಂದರೆ ಹಂಗಿನಲ್ಲಿ ಬದುಕಬೇಕು. ಇದು ಯಾವ ಶತ್ರುಗಳಿಗೂ ಬೇಡ ಎನ್ನುವಷ್ಟು ಬೇಸರ ಪಟ್ಟುಕೊಳ್ಳುವವರು ಇರುತ್ತಾರೆ. ಬದುಕಿರುವವರೆಗೂ ಎಷ್ಟೇ ಆಸ್ತಿ ಇದ್ದರೂ ಇನ್ನೊಬ್ಬರ ಹಂಗಿನಲ್ಲಿ ಜೀವನ ಸಾಗಿಸುತ್ತಿದ್ದರೆ ನೆಮ್ಮದಿ ಎಲ್ಲಿಂದ ಬರಬೇಕು?
ವಯಸ್ಸಾದಂತೆ ಸರಿಯಾಗಿ ನೋಡಿಕೊಳ್ಳದೆ ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸಿದ್ದಲ್ಲಿ ಅಲ್ಲಿ ಇವರ ಪರಿಸ್ಥಿತಿ ಕೇಳುವವರೇ ಇಲ್ಲ. ಆಶ್ರಮದಲ್ಲಿ ಊಟ ವಸತಿ ನೀಡಬಹುದು ಆದರೆ ನೆಮ್ಮದಿಯನ್ನು ನೀಡುವವರು ಯಾರು? ಸ್ವಂತ ಮಕ್ಕಳಿಗೆ ಬೇಕಿಲ್ಲದ ಜೀವ ಬೇರೆಯವರ ಆಶ್ರಯದಲ್ಲಿ ಬದುಕಿರುವುದು ಎಂದರೆ ಯಾರಿಗೆ ತಾನೇ ನೆಮ್ಮದಿ ಇರಲು ಸಾಧ್ಯ?
ಮನುಷ್ಯ ಎಂದರೆ ಹಸಿವು, ಬಾಯಾರಿಕೆ, ನಿದ್ದೆ ಸ್ವಾಭಾವಿಕ, ಹಸಿವಾದಾಗ ತಿಂದು, ಬಾಯಾರಿಕೆಯಾದಾಗ ನೀರು ಕುಡಿದು, ನಿದ್ದೆ ಬಂದಾಗ ಮಲಗಿದರೆ ಅದು ನೆಮ್ಮದಿಯ ಜೀವನ ಎನಿಸಿಕೊಳ್ಳುವುದಿಲ್ಲ. ಇದು ನಿಸರ್ಗದ ನಿಯಮವಷ್ಟೇ. ನಿದ್ದೆ ಬಂದರೆ ಯಾವ ಸುಪ್ಪತ್ತಿಗೆಯನ್ನೂ ನೋಡುವುದಿಲ್ಲ,. ಸುಪ್ಪತ್ತಿಗೆಯ ಮೇಲೂ ಮಲಗಿದರೂ ನಿದ್ದೆ ಬರುತ್ತದೆ. ಚಾಪೆಯ ಮೇಲೆ ಮಲಗಿದರೂ ನಿದ್ದೆ ಬರುತ್ತದೆ. ಆದರೆ ನೆಮ್ಮದಿಯ ಜೀವನ ಮಾತ್ರ ಇರುವುದಿಲ್ಲ.
ಮನುಷ್ಯ ಚಿಂತೆಯನ್ನು ಮರೆಯಲು ಮನುಷ್ಯನಾದವನು ದುಶ್ಚಟವನ್ನು ಕಲಿತರೆ, ಅದು ಸಹ ತಾತ್ಕಾಲಿಕವಾಗಿ ಮರೆಸಬಹುದು ಪುನಃ ಜ್ಞಾನ ಬಂದರೆ ಅದೇ ಚಿಂತೆ ಕಾಡಲು ಪ್ರಾರಂಭಿಸುತ್ತದೆ.
ಮನುಷ್ಯ ತನ್ನ ಜೀವನದಲ್ಲಿ ಎಲ್ಲಾ ಕಷ್ಟ ಸುಖಗಳನ್ನು ಅನುಭವಿಸಿ, ಕಡೆಗೆ ಒಂದು ದಿವಸ ಈ ಜೀವವನ್ನು ಬಿಟ್ಟು ಹೋಗಲೇ ಬೇಕು. ಆಗಲೇ ಅವನ ಚಿಂತೆಯು ಕಡೆಯಾಗುತ್ತದೆ. ಆಗ ಅವನಿಗೆ ಭೂಮಿಯ ಒಳಗೆ 4 ಅಥವಾ 5 ಅಡಿ ಆಳದಲ್ಲಿ ಶಾಶ್ವತವಾಗಿ 3 ಅಡಿ 6 ಅಡಿ ಅಳತೆಯ ನೆಲದ ಹಾಸಿಗೆಯೇ ಸಾಕು. ಕೆಲವರಿಗೆ ಆ ಜಾಗವೂ ಬೇಕಾಗಿರುವುದಿಲ್ಲ. ಅವರನ್ನು ಸುಡಲು ಮಾತ್ರ ಜಾಗ ಬೇಕು. ಬದುಕಿದ್ದಾಗ ಸುಪ್ಪತ್ತಿಗೆಯ ಮೇಲೆ ಮಲಗಿದ್ದು, ಸಾಯುವಾಗ ಏನನ್ನೂ ಕೇಳುವುದಿಲ್ಲ. ಆ ಹಾಸಿಗೆಯಲ್ಲಿ ಅವರು ಶಾಶ್ವತವಾಗಿ ಮಲಗಿಬಿಡುತ್ತಾರೆ.
ಬಡವನಾಗಲೀ ಧನಿಕನಾಗಲೀ ಎಲ್ಲರಿಗೂ ನೆಮ್ಮದಿಯ ಜೀವನ ಮುಖ್ಯ. ನೆಮ್ಮದಿಯ ಜೀವನ ಇಲ್ಲದೇ ಇದ್ದರೆ ಎಂಥ ಸುಪ್ಪತ್ತಿಗೆ ಇದ್ದರೇನು? ನೆಮ್ಮದಿಯ ಜೀವನವೇ ಸುಪ್ಪತ್ತಿಗೆ ಹಾಸಿಗೆ ಇದ್ದಂತೆ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬರುತ್ತದೆ ಎಂಬ ಗಾದೆಯಂತೆ, ನೆಮ್ಮದಿ ಇಲ್ಲದಿದ್ದರೆ ಯಾವ ಸುಪ್ಪತ್ತಿಗೆಯ ಮೇಲೆ ಮಲಗಿದರೂ ಸರಿಯಾಗಿ ನಿದ್ದೆ ಬರುವುದೇ ಇಲ್ಲ. ಇದಕ್ಕೆ ಯಾವುದೇ ಪರ್ಯಾಯ ಇಲ್ಲ. ಜೀವನದಲ್ಲಿ ಬಂದ ಕಷ್ಟಗಳನ್ನು ಅನುಭವಿಸಬೇಕು ಆದರೆ ಬುದ್ದಿವಂತಿಕೆಯಿಂದ ವ್ಯವಹರಿಸಿ ಅತೀ ಕಡಿಮೆ ಚಿಂತೆಯನ್ನು ಹೊಂದುವವನೇ ಪರಮ ಸುಖಿ ಅಂದರೆ ಅವನೇ ಸುಪ್ಪತ್ತಿಗೆಯ ಮೇಲೆ ಮಲಗುವಂತಹ ಮನುಷ್ಯನಾಗುತ್ತಾನೆ.
ಎಷ್ಟೇ ಕಷ್ಟ ಬರಲಿ ಸುಖ ಇರಲಿ ದೇವರ ಧ್ಯಾನ ಮಾಡುವುದರಿಂದ ಅಥವಾ ದೇವಸ್ಥಾನಗಳಿಗೆ ಹೋಗುವುದರಿಂದ ಸ್ವಲ್ಪವಾದರೂ ನೆಮ್ಮದಿಯನ್ನು ಪಡೆಯಬಹುದು. ಪೂರ್ಣ ನೆಮ್ಮದಿ ಇದ್ದರೆ ಅವನು ಮನುಷ್ಯ ಎನಿಸಿಕೊಳ್ಳುವುದಿಲ್ಲ. ಬದುಕಿರುವವರೆಗೂ ನಾನಾ ಚಿಂತೆಯಿಂದ ಬಳಲಿ, ಸತ್ತಮೇಲೆ ಚಿತೆಯಲ್ಲಿ ಸುಟ್ಟು ಭಸ್ಮವಾಗುವುದೇ ಅಥವಾ ಮಣ್ಣಲ್ಲಿ ಮಣ್ಣಾಗುವುದೇ ಜೀವನ ಎಂದಾಗುತ್ತದೆ.

RELATED ARTICLES  ಸರಳತೆಯಲ್ಲಿ ಸೌಂದರ್ಯ