ಕರಾವಳಿ ಹಾಗೂ ಮಲೆನಾಡು ಪ್ರಾಂತ್ಯ ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಮೊದಲಿನಿಂದಲೂ ಹೆಸರುವಾಸಿಯಾಗಿದ್ದು ಇಲ್ಲಿನ ಜನರ ದೈನಂದಿನ ಬದುಕು ಪ್ರಾಕೃತಿಕ ಸಂಪತ್ತು, ಧಾರ್ಮಿಕ ಶೃದ್ಧೆ, ಜನಪದೀಯ ಮೌಲ್ಯಗಳಿಂದ ಕೂಡಿದೆ…ಇಂತಹ ಸೊಗಡಿನ ನಡುವೆ ಬೆಳೆದುಬಂದ ತೆಂಕು, ಬಡಗು ಎಂಬ ಎರಡು ಪ್ರತ್ಯೇಕ ಪ್ರಕಾರದ ಯಕ್ಷಗಾನಗಳು ಈ ಬೆಡಗನ್ನು ಇನ್ನೂ ಹೆಚ್ಚಿಸಿವೆ…ಕರ್ನಾಟಕದ ಶ್ರೇಷ್ಠ ಪ್ರಾಚೀನ ಕಲೆಗಳಲ್ಲಿ ಒಂದಾದ ಯಕ್ಷಗಾನವು ತನ್ನದೇ ಆದ ಶಾಸ್ತ್ರೀಯ ಚೌಕಟ್ಟು, ಜನಪದೀಯ ಮೈಕಟ್ಟು, ವಿಶೇಷ ವೇಷಭೂಷಣ, ಹಿಮ್ಮೇಳ, ಮುಮ್ಮೇಳಗಳ ಸಮ್ಮಿಲನ, ಆಂಗಿಕ ಮೌಖಿಕ ಹೊಂದಾಣಿಕೆ, ರಾಗ-ತಾಳ-ಲಯಗಳ ಮೇಳೈಸುವಿಕೆಯಿಂದ ಇಂದಿಗೂ ತನ್ನ ಮೂಲಸತ್ವವನ್ನು ಉಳಿಸಿಕೊಂಡು ಘನತೆಯಿಂದ ಮೆರೆಯುತ್ತಿರುವುದು ಈ ಪುಣ್ಯ ಭೂಮಿಯಲ್ಲಿ ಜನಿಸಿದ ನಮಗೆಲ್ಲಾ ಹೆಮ್ಮೆಯ ಸಂಗತಿ…

 

ಹೀಗೆ ಯಕ್ಷಗಾನದ ಮೇಲೆ ವಿಶೇಷ ಅಭಿಮಾನವನ್ನು ಇಟ್ಟು ಕಲೆ, ಕಲಾವಿದರುಗಳಿಗೆ ಪ್ರೋತ್ಸಾಹ, ಕಲಾಭಿಮಾನಿಗಳಿಗೆ ರಸದೌತಣ ನೀಡುವ ಸದುದ್ದೇಶದಿಂದ ವಿಜಯಾ ಬ್ಯಾಂಕಿನ ವರಿಷ್ಠ ಪ್ರಬಂಧಕರೂ, ಉತ್ಸಾಹಿ ಯುವಕರೂ ಆದ ಶ್ರೀ ಮಂಜುನಾಥ್ ಭಟ್, ಕತಗಾಲ ಇವರಿಂದ ಪ್ರಾರಂಭವಾದದ್ದು ಕತಗಾಲ ಯಕ್ಷೋತ್ಸವ…ಇವರೊಂದಿಗೆ ಸಹೋದರ ಶ್ರೀ ವಿನಾಯಕ ಭಟ್, ಭಂಡಿವಾಳ ಮತ್ತು ಯಕ್ಷೋತ್ಸವ ಸಮಿತಿಯ ಸದಸ್ಯರೆಲ್ಲರ ಪ್ರಯತ್ನದ ಫಲವಾಗಿ ಕಳೆದ ಮೂರು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಡೆಸಲ್ಪಡುವ ಕತಗಾಲ ಯಕ್ಷೋತ್ಸವವು ಸಹಸ್ರಾರು ಜನರನ್ನು ತನ್ನತ್ತ ಆಕರ್ಷಿಸಿ ಮುಂದುವರಿಯುತ್ತಿದೆ…

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

 

ಆಗಸ್ಟ ೧೫, ೨೦೧೫ರಂದು ಜರುಗಿದ ಮೊದಲ ಕತಗಾಲ ಯಕ್ಷೋತ್ಸವದಲ್ಲಿ ಮೇರು ನಟ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಕತಗಾಲ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ತದನಂದರ ೨೮-೧೦-೨೦೧೬ರಂದು ನೆರವೇರಿದ ದ್ವಿತೀಯ ಪ್ರಯತ್ನದಲ್ಲಿ ಯಕ್ಷಗಾನದ ಪೂರ್ಣಚಂದ್ರ ಎಂದೇ ಖ್ಯಾತರಾದ ಕೊಂಡದಕುಳಿ ರಾಮಚಂದ್ರ ಹೆಗಡೆಯವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು..ಸೇರಿದ ಸಹಸ್ರಾರು ಯಕ್ಷಪ್ರಿಯರನ್ನು ರಾಜಾ ಉಗ್ರಸೇನ ಮತ್ತು ಗದಾಯುದ್ಧ ಎಂಬ ಸುಂದರವಾದ ಎರಡು ಪೌರಾಣಿಕ ಪ್ರಸಂಗಗಳು ಮನತಣಿಸಿದವು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್, ಕರ್ನಾಟಕ ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮುಂತಾದ ಗಣ್ಯರು ಈ ಕಾರ್ಯಕ್ರಮವನ್ನು ಸಾಕ್ಷೀಕರಿಸಿ ಶುಭ ಹಾರೈಸಿದರು…

RELATED ARTICLES  ನಿಂದಕರು

ಪ್ರಸಕ್ತ ಸಾಲಿನ ಯಕ್ಷಗಾನವು ದಿನಾಂಕ ೨೯-೧೦-೨೦೧೭, ಭಾನುವಾರದಂದು ಅದ್ದೂರಿಯಾಗಿ ನೆರವೇರಲಿದ್ದು ಯಕ್ಷಗಾನ ರಂಗದ ಮೇರು ಕಲಾವಿದ, ೨೦೧೬ನೇ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಕೆ. ಗೋವಿಂದ ಭಟ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಕತಗಾಲ ಯಕ್ಷೋತ್ಸವ ೨೦೧೭ರ ಪ್ರಶಸ್ತಿ ಪ್ರದಾನ ಮಾಡಲಾಗುವುದು…ಜೊತೆಗೆ ಕರ್ಣ ಪರ್ವ, ದಕ್ಷ ಯಜ್ಞ ಮತ್ತು ಚಂದ್ರಾವಳಿ ಎಂಬ ಪೌರಾಣಿಕ ಆಖ್ಯಾನಗಳನ್ನು ತೆಂಕು ಬಡಗಿನ ಮೇರು ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶಿಸಲಾಗುವುದು…

 

ಯಕ್ಷಗಾನದ ಘನತೆಯನ್ನು ಇನ್ನಷ್ಟು ಎತ್ತರಕ್ಕೇರಿಸಲು ಕಲಾಸಕ್ತರು ಈ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಕತಗಾಲ ಯಕ್ಷೋತ್ಸವ ಸಮಿತಿಯ ಪರವಾಗಿ ಆತ್ಮೀಯ ಸ್ವಾಗತವನ್ನು ಕೋರಲಾಗಿದೆ….