Home Health ಕಬ್ಬಿನಹಾಲು ಆರೋಗ್ಯಕ್ಕೂ, ಸೌಂದರ್ಯಕ್ಕೂ ಉತ್ತಮ

ಕಬ್ಬಿನಹಾಲು ಆರೋಗ್ಯಕ್ಕೂ, ಸೌಂದರ್ಯಕ್ಕೂ ಉತ್ತಮ

ಒಮ್ಮೆ ಸವಿದರೆ ಮತ್ತೊಮ್ಮೆ ಮಗದೊಮ್ಮೆ ಸವಿಯಬೇಕು ಎಂಬ ರುಚಿಯ ಕಬ್ಬಿನಹಾಲನ್ನು ಇಷ್ಟಪಡದವರಾರು ಹೇಳಿ? ದಾಹ ನೀಗಿಸಿ ದೇಹಕ್ಕೆ ಹಿತವಾದ ಅನುಭವ ನೀಡುವ ಕಬ್ಬಿನಹಾಲು ಕೇವಲ ಸಕ್ಕರೆ ಮತ್ತು ಬೆಲ್ಲಕ್ಕೆ ಮಾತ್ರ ಸೀಮಿತವಲ್ಲ. ನಾಲಿಗೆಗೆ ರುಚಿ ನೀಡುವ ಇದರಲ್ಲಿ ದೇಹಕ್ಕೆ ಅಗತ್ಯವಿರುವಂತಹ ಕಬ್ಬಿಣ, ಗ್ಲುಕೋಸ್, ಪ್ರೋಟೀನ್, ವಿಟಮಿನ್ ಗಳು ಹೇರಳವಾಗಿದೆ.

ಬೇಸಿಗೆಕಾಲದಲ್ಲಿ ದೇಹದಲ್ಲಿರುವ ನೀರಿನಾಂಶವು ಬೆವರಿನ ರೂಪದಲ್ಲಿ ಹೊರಹೋಗುತ್ತದೆ. ಅಂತಹ ಸಮಯದಲ್ಲಿ ದೇಹದಲ್ಲಿನ ನೀರಿನಾಂಶವು ಕಡಿಮೆಯಾಗುವುದರಿಂದ ಸಾಕಷ್ಟು ದ್ರವ ಪದಾರ್ಥವನ್ನು ಸೇವಿಸಬೇಕಾದುದು ಅವಶ್ಯ. ಮಾತ್ರವಲ್ಲ ಬೇಸಿಗೆಯ ಝಳಕ್ಕೆ ಬಳಲಿ ಬೆಂಡಾಗಿರುವ ದೇಹಕ್ಕೆ ಚೈತನ್ಯ ಬರಲು ಪೋಷಕಾಂಶಗಳೂ ಕೂಡಾ ಅಗತ್ಯ. ಕಬ್ಬಿನಹಾಲು ಕುಡಿಯುವುದರಿಂದ ದೇಹವು ತಂಪಾಗುವುದು ಮಾತ್ರವಲ್ಲದೇ ನೀರಿನ ಕೊರತೆಯಿಂದ ಉಂಟಾಗುವ ಸುಸ್ತು ಕೂಡಾ ಇದರಿಂದ ಮಾಯವಾಗುತ್ತದೆ.

ಇನ್ನು ಬೇಸಿಗೆಯಲ್ಲಿ ಚರ್ಮ ಒಣಗುತ್ತದೆ. ಸೂಕ್ಷ್ಮರಂಧ್ರಗಳ ಮೂಲಕ ಚರ್ಮದ ತೈಲಗಳು ಆವಿಯಾಗುತ್ತದೆ. ಕಬ್ಬಿನ ಹಾಲಿನಲ್ಲಿ ಆಲ್ಫಾಹೈಡ್ರಾಕ್ಸಿ ಆಕ್ಸೈಡ್ ಇರುವ ಕಾರಣ ಚರ್ಮವನ್ನು ಕಾಂತಿಯುಕ್ತವಾಗಿ ಇಡುವ ಸಾಮರ್ಥ್ಯ ಇದಕ್ಕಿದೆ ಮತ್ತು ಇದರಿಂದಾಗಿ ಚರ್ಮವು ಆರೋಗ್ಯಕರವಾಗಿರುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಇದು ಹೊಟ್ಟೆಯ ಒಳಗೆ ಸೋಂಕು ಉಂಟಾಗದಂತೆ ರಕ್ಷಿಸುತ್ತದೆ. ಬೇಸಿಗೆಕಾಲದಲ್ಲಿ ತುಂಬಾ ಜನ ಮೂತ್ರನಾಳ ಮತ್ತು ಮೂತ್ರಕೋಶ ಸೋಂಕಿನಿಂದ ಬಳಲುತ್ತಾರೆ. ಇದಕ್ಕೆ ಕಬ್ಬಿನಹಾಲು ಹೇಳಿ ಮಾಡಿಸಿದ ಮದ್ದು. ಮೂತ್ರನಾಳದಲ್ಲಿ ಉರಿ, ಸೋಂಕು ಮೊದಲಾದ ತೊಂದರೆಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಸರಿ ಮಾಡುವ ಕಬ್ಬಿನಹಾಲು ಕಿಡ್ನಿ, ಹೃದಯ, ಮೆದುಳು ಮತ್ತು ಕಣ್ಣಿನ ಆರೋಗ್ಯಕ್ಕೂ ಸಹಕಾರಿ. ಉಳಿದಂತೆ ಜಾಂಡೀಸ್ ನಿಂದ ಬಳಲುತ್ತಿರುವವರಿಗೆ ಇದು ನೈಸರ್ಗಿಕವಾದ ಮದ್ದು ಎಂದು ಹೇಳಬಹುದು. ಜಾಂಡೀಸ್ ಬಂದವರು ದಿನಕ್ಕೆರಡು ಗ್ಲಾಸ್ ಕಬ್ಬಿನಹಾಲು ಕುಡಿದರೆ ಒಳ್ಳೆಯದು.

ಇಂತಿಪ್ಪ ಕಬ್ಬಿನಹಾಲು ಸೌಂದರ್ಯವರ್ಧಕವೂ ಹೌದು. ಕಾಂತಿಯುತ ತ್ವಚೆಗೆ ಕಬ್ಬಿನಹಾಲಿನ ಪೇಸ್ ಪ್ಯಾಕ್ ಕೂಡ ಮಾಡಲಾಗುತ್ತದೆ ಎಂದರೆ ನಂಬಲು ಸಾಧ್ಯವೇ? ದುಬಾರಿಯಲ್ಲದ ಇದು ಮಾಡಲು ತುಂಬಾ ಸುಲಭ, ಮಾತ್ರವಲ್ಲ ಇದರಲ್ಲಿ ಯಾವುದೇ ತರದ ಹಾನಿಕಾರಕ ಅಂಶಗಳಿಲ್ಲ.

ಕಬ್ಬಿನಹಾಲು ಮತ್ತು ಜೇನುತುಪ್ಪ : ತ್ವಚೆಗೆ ತೇವಾಂಶ ನೀಡುವ ಇದು ಒಣಚರ್ಮದವರಿಗೆ ಉತ್ತಮವಾದುದು. ಒಣಚರ್ಮದ ಸಮಸ್ಯೆಯಿರುವವರು ವಾರದಲ್ಲಿ ಒಂದು ಬಾರಿ ಈ ಪೇಸ್ ಪ್ಯಾಕ್ ಮಾಡಿಕೊಂಡರೆ ಒಳ್ಳೆಯದು.

ಕಬ್ಬಿನಹಾಲು ಮತ್ತು ಮುಲ್ತಾನಿಮಿಟ್ಟಿ : ತ್ವಚೆಯಲ್ಲಿರುವ ಎಣ್ಣೆಯ ಅಂಶವನ್ನು ಹೀರಿಕೊಳ್ಳುವ ಶಕ್ತಿ ಮುಲ್ತಾನಿ ಮಿಟ್ಟಿಗಿದೆ. ಅಂತೆಯೇ ಸದಾ ಕಾಲ ಚರ್ಮವು ತೇವಾಂಶದಿಂದ ಇರುವಂತೆ ಮಾಡಲು ಕಬ್ಬಿನಹಾಲು ಸಹಕಾರಿ.

ಇನ್ನೇಕೆ ತಡ? ಸರಳವಾದ ಪೇಸ್ ಪ್ಯಾಕ್ ಮಾಡಿ, ಸುಂದರವಾದ ತ್ವಚೆ ನಿಮ್ಮದಾಗಿಸಿ.