Home Uttara Kannada ಹೊಸಾಡ ಗೋ ಶಾಲೆಯಲ್ಲಿ ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ.

ಹೊಸಾಡ ಗೋ ಶಾಲೆಯಲ್ಲಿ ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ.

ಕುಮಟಾ : ನಶಿಸುತ್ತಿರುವ ಆಲೆಮನೆ ಸಂಪ್ರದಾಯವನ್ನು ಉಳಿಸುವ ಪ್ರಯತ್ನವಾಗಿ, ಹಲವು ವಿಶೇಷತೆಗಳೊಂದಿಗೆ ತಾಲೂಕಿನ ಹೊಸಾಡದಲ್ಲಿರುವ ಅಮೃತಧಾರಾ ಗೋ ಶಾಲೆಯಲ್ಲಿ ಮಾರ್ಚ 09 ರಿಂದ 13 ರ ವರೆಗೆ ಆಲೆಮನೆ ಹಬ್ಬ ನಡೆಯಲಿದ್ದು, ಕಬ್ಬಿನ ಹಾಲಿನಿಂದ ಸಿದ್ಧಪಡಿಸಿದ ಬೆಲ್ಲ, ತೊಡದೇವು ಮುಂತಾದ ಖಾದ್ಯಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸುಂದರ ರಮಣೀಯ ಪರಿಸರದಲ್ಲಿ ಗೋವುಗಳ ಜೊತೆಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ಮಾಡಿಕೊಡಲಾಗಿದೆ.

ಗೋಮಾತೆ ಜಗದ ಜನನಿಯಾಗಿ ಮನುಷ್ಯನ ಪ್ರತಿ ಹನಿ ರಕ್ತದ ಹಿಂದಿನ ಹಾಲು ಮೊಸರು ತುಪ್ಪಗಳ ಮಹಾಧಾರೆಯಾಗಿ, ವಸುಂಧರೆಯನ್ನು ಸಸ್ಯಶಾಮಲೆಯಾಗಿಸುವ, ಪರಿಸರ ಸಮತೋಲನದ ರೂವಾರಿಯಾಗಿದ್ದಾಳೆ. ಗೋಮಾತೆ ಭಗವಂತನ ಅನುಪಮ ಸೃಷ್ಟಿ. ಮಾನವನ ಬಾಳ ಬೆಳಗುವ ಅಸೀಮ ಶಕ್ತಿ. ಕೋಟಿ ಕೋಟಿ ದೇವತೆಗಳ ಆವಾಸಸ್ಥಾನವಾಗಿರುವ ಗೋಮಾತೆ ಯ ದರ್ಶನ ಮತ್ತು ಸಾಂಗತ್ಯ ಅತ್ಯಂತ ಪುಣ್ಯತಮವಾದುದು. ಅಂತಹ ಪುಣ್ಯ ಸಂಚಯಕ್ಕಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಅವಕಾಸವನ್ನು ತೆರೆದಿಡುವ ಒಂದು ಪ್ರಯತ್ನವಾಗಿ ಗೋ ಸಂಧ್ಯಾ ಕಾರ್ಯಕ್ರಮ ಮಾರ್ಚ 12 ರಂದು ಶನಿವಾರ ಸಂಜೆ 5 ಗಂಟೆಯಿಂದ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹಾಜರಿರುವರು, ಗೋ ಶಾಲೆಯ ಅಧ್ಯಕ್ಷರಾದ ಮುರಳೀಧರ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಸಹಾಯಕ‌ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಗುರುದತ್ತ ಶೇಟ್, ಇಂಜನಿಯರಿಂಗ್ ಇಂಟೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸೀನಿಯರ್ ಡೈರೆಕ್ಟರ್ ಆನಂದ ಭಟ್ಟ, ರಾಜಸ್ಥಾನಿ ವಿಷ್ಣು ಸಮಾಜ ಕುಮಟಾದ ಪ್ರಮುಖರಾದ ವೀರಂ ರಾಮ್ ಜಿ ಪಟೇಲ್ ಅತಿಥಿಗಳಾಗಿ ಹಾಜರಿರುವರು. ಈ ಸಂದರ್ಭದಲ್ಲಿ ಗೋ ಭಕ್ತರಿಗೆ ಗೋಗ್ರಾಸ ವಿತರಣೆಗೆ ಅವಕಾಶ- ಗೋ ಸಂಗ- ಗೋ ಪ್ರೇಮಿಗಳೊಂದಿಗೆ ಸಹ ಭೋಜನ ಕಾರ್ಯಕ್ರಮ ನಡೆಯಲಿದೆ.

ಮಾರ್ಚ 9 ರಿಂದ ಸಂಜೆ 4 ಗಂಟೆಯಿಂದ ಆಲೆಮನೆ ಹಬ್ಬ ನಡೆಯಲಿದೆ. ಮರಳಿ ಆರೋಗ್ಯದತ್ತ ಎಂಬ ಉಪ ಶಿರ್ಷಿಕೆಯೊಂದಿಗೆ ಈ ಆಲೆಮನೆ ಹಬ್ಬ ನಡೆಯಲಿದ್ದು, ಕಬ್ಬಿನ ಹಾಲು, ಬೆಲ್ಲ, ಬೆಲ್ಲದ ಬಾಳೆ ದಿಂಡು, ಬೆಲ್ಲದ ಪಪ್ಪಾಯಿ ಸವಿಯಲು ಇಲ್ಲಿ ಅವಕಾಶ ಕಾಲ್ಪಿಸಲಾಗಿದೆ. ಕುಮಟಾ ಮಂಡಲದ ಮತ್ತು ವಲಯಗಳ ಸಹಕಾರದಲ್ಲಿ ಶುದ್ಧ ಸಾವಯವ ಆಹಾರ/ತಿಂಡಿ ಮಳಿಗೆಗಳು, ಗೋಗ್ರಾಸ ಕೌಂಟರ್, ಚಿಣ್ಣರಿಗೆ ಕರುಗಳ ಸಾಂಗತ್ಯ ಅಂದರೆ ನಂದಗೋಕುಲ, ಗೋಉತ್ಪನ್ನಗಳ ಮಳಿಗೆ ವಿಶೇಷವಾಗಿರಲಿದೆ.

ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಹೆಬ್ಳೆಕೇರಿ ಕಡತೋಕ ಇವರಿಂದ ಭಜನೆ, ಶ್ರೀ ಸುಧೀರ ಕಾನ್ಮೂಲೆ ಬಾನ್ಸುರಿ ವಾದನ, ಮೂರೂರು ಕಲ್ಲಬ್ಬೆ ಮಿತ್ರ ಬಳಗದವರಿಂದ ವಲಯೋತ್ಸವ ಹಾಗೂ ಯಕ್ಷಗಾನ (ಶರಸೇತು ಬಂಧ), ಪ್ರಗತಿ ವಿದ್ಯಾಲಯ ಮೂರೂರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನ ಕಲ್ಲಗದ್ದೆ ಇವರಿಂದ ಪಾರಂಪರಿಕ ದೊಂದಿ ಬೆಳಕಿನಲ್ಲಿ ರಾವಣ ವಧೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಬಾರಿ ಜಿಲ್ಲೆಯ ವಿವಿಧೆಡೆಯಿಂದ 10 ಸಾವಿರಕ್ಕೂ ಹೆಚ್ಚು ಜನರು ಆಲೆಮನೆ ಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ಗೋ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.