Home Uttara Kannada ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಶಿಕ್ಷಣ ಸಚಿವರ ಭೇಟಿ : ಶಿಕ್ಷಣದಲ್ಲಿ ಭಾರತೀಯತೆ ಇಂದಿನ ಅಗತ್ಯ ಎಂದ ಬಿ.ಸಿ...

ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಶಿಕ್ಷಣ ಸಚಿವರ ಭೇಟಿ : ಶಿಕ್ಷಣದಲ್ಲಿ ಭಾರತೀಯತೆ ಇಂದಿನ ಅಗತ್ಯ ಎಂದ ಬಿ.ಸಿ ನಾಗೇಶ್


ಗೋಕರ್ಣ: ಶಿಕ್ಷಣದಲ್ಲಿ ಭಾರತೀಯತೆ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ. ನೂತನ ಶಿಕ್ಷಣ ನೀತಿಯಲ್ಲಿ ಈ ಅಂಶಕ್ಕೆ ಒತ್ತು ನೀಡಲಾಗಿದ್ದು, ನೀತಿ ಘೋಷಣೆಗೆ ಮುನ್ನವೇ ಆ ನಿಟ್ಟಿನಲ್ಲಿ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿಯವರು ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಕಲ್ಪನೆ ಸಾಕಾರಗೊಳಿಸಿರುವುದು ಶ್ರೀಮಠದ ದೂರದರ್ಶಿತ್ವಕ್ಕೆ ಸಾಕ್ಷಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನುಡಿದರು.


ನವಯುಗ ಮತ್ತು ಋಷಿಯುಗ ಶಿಕ್ಷಣ ನೀಡುವ ಏಕೈಕ ತಾಣವಾದ ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿದ ಅವರು, ವಿವಿವಿ ಪಾರಂಪರಿಕ ಮತ್ತು ನವಯುಗ ಶಿಕ್ಷಣ ನೀಡುವ ಮೂಲಕ ಭಾರತೀಯತೆಯನ್ನು ಶಿಕ್ಷಣದಲ್ಲಿ ಹೇಗೆ ಅಳವಡಿಸಬಹುದು ಎನ್ನುವುದಕ್ಕೆ ಮಾದರಿ ಎಂದು ಅಭಿಪ್ರಾಯಪಟ್ಟರು.
ಈ ಐತಿಹಾಸಿಕ ಹಾಗೂ ಪುರಾತನ ಕ್ಷೇತ್ರದ ಸುಂದರ ಪರಿಸರದಲ್ಲಿ ಇಂಥ ಕಲಿಕೆಯ ವಾತಾವರಣ ಸೃಷ್ಟಿಸಿರುವುದು ನಿಜಕ್ಕೂ ಶ್ಲಾಘನೀಯ. ನಾವು ಶಿಕ್ಷಣ ಪಡೆಯುವ ಕಾಲಘಟ್ಟದಲ್ಲಿ ಇಂಥ ವ್ಯವಸ್ಥೆ ಇರಲಿಲ್ಲ. ಇಂಥ ಸಮಗ್ರ ವ್ಯಕ್ತಿತ್ವ ರೂಪಿಸುವ ಶಿಕ್ಷಣ ಸಂಸ್ಥೆಗಳು ಹೆಚ್ಚುಹೆಚ್ಚಾಗಿ ಹುಟ್ಟಿಕೊಳ್ಳಬೇಕು ಎಂದು ಆಶಿಸಿದರು. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಭಾಗ್ಯಶಾಲಿಗಳು ಎಂದು ಸಚಿವರು ಬಣ್ಣಿಸಿದರು.


ವಿವಿವಿ ಕ್ಯಾಂಪಸ್‍ನ ಮಲ್ಲಿಕಾರ್ಜುನ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ಆ ಬಳಿಕ ಗೋಲೋಕಕ್ಕೆ ತೆರಳಿ ಗೋಪೂಜೆ ನೆರವೇರಿಸಿದರು. ನಂತರ ಶ್ರದ್ಧಾಮಂದಿರಕ್ಕೆ ತೆರಳಿ ವೇದಪಥ ಶಿಕ್ಷಣದ ಬಗ್ಗೆ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿದರು. ವಿಶ್ವವಿದ್ಯಾಪೀಠದ ಆಡಳಿತ ಕಚೇರಿಯಾಗಲಿರುವ ಭಾರತೀ ಭವನದ ಪಾರಂಪರಿಕ ಮತ್ತು ಕಲಾವೈಭವವನ್ನು ಹೊಗಳಿದ ಸಚಿವರು, ಇದು ಇಡೀ ಕ್ಯಾಂಪಸ್‍ಗೆ ಕಳಶಪ್ರಾಯ ಎಂದು ಹೇಳಿದರು.
ವಿವಿವಿ ಪಾರಂಪರಿಕ ಶಿಕ್ಷಣ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮ, ಪ್ರಾಚಾರ್ಯ ಮಹೇಶ್ ಹೆಗಡೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹರೀಶ್ ಗಾಂವ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್, ಡಯಟ್ ಪ್ರಾಚಾರ್ಯ ಈಶ್ವರ ನಾಯಕ್, ತಾಲೂಕು ಪಂಚಾಯ್ತಿ ಸದಸ್ಯ ಮಹೇಶ್ ಶೆಟ್ಟಿ, ಗ್ರಾಮಪಂಚಾಯ್ತಿ ಅಧ್ಯಕ್ಷ ಮಂಜುನಾಥ ಜನ್ನು, ವಿವಿವಿ ಪದಾಧಿಕಾರಿಗಳಾದ ಎಸ್.ಎಸ್.ಹೆಗಡೆ, ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ್ ಪಂಡಿತ, ಗಣೇಶ್ ಜೋಶಿ ಮತ್ತಿತರರು ಉಪಸ್ಥಿತರಿದ್ದರು.