ಅಕ್ಷರರೂಪ :ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ
ತಾತ್ವಿಕ ದೃಷ್ಟಿಗೆ ಒತ್ತು ಕೊಟ್ಟು ಬರೆದಿದ್ದೇನೆ. ಅದರಲ್ಲಿ ಯಾವುದೇ ವಿಪರೀತ ಭಾವನೆ ಮಾಡಿಕೊಂಡು ಬರೆದದ್ದರ ಸ್ವಾರಸ್ಯ ಕಳೆದುಕೊಳ್ಳಬೇಡಿರಿ!
(ಇಸವಿ ಸನ ೧೯೪೬ರಲ್ಲಿ ಶ್ರೀ ದಿನಕರ ಬುವಾ ರಾಮದಾಸಿ ಸಜ್ಜನಗಡರವರಿಗೆ ಬರೆದ ಪತ್ರ
||ಶ್ರೀರಾಮ ಪ್ರಸನ್ನ||
ಸ್ವರ್ಗಾಶ್ರಮ
ಫಾಲ್ಗುಣ ವ|| ೭
ಚಿ. ದಿನಕರನಿಗೆ ಆಶೀರ್ವಾದ,
ನಾಲ್ಕೈದುದಿನಗಳಲ್ಲಿ ನಾನು ಗಿರಿನಾರ ಕಡೆಗೆ ಹೋಗುವನಿದ್ದೇನೆ. ಹೋಗುವಾಗ ಶ್ರೀರಾಮ ನವಮಿಗೆ ನಾನು ಅಯೋಧ್ಯೆಯಲ್ಲಿ ಇಳಿಯಬೇಕೆಂದಿದ್ದೇನೆ. ನೋಡೋಣ.
‘ಈಶ್ವರೇಚ್ಛಾ ಬಲೀಯಸೀ|’
ಶ್ರೀಬದ್ರೀನಾರಾಯಣನ ಮಹಾದ್ವಾರ ಈ ವರ್ಷ ವೈಶಾಖ ಶುದ್ಧ ೭ಕ್ಕೆ ತೆರೆಯುತ್ತದೆ. ಆ ದಿವಸ ಮೇ ೧೨ನೇ ದಿನಾಂಕವಾಗುತ್ತದೆ. ಕಾಲೀ ಕಮಲೀವಾಲರ ಚೆಟ್ಟಿ ಇಲ್ಲಿಯೂ ಇದೆ.
ನನ್ನನ್ನು ನಿಮ್ಮ ಅಹಂಸ್ಫೂರ್ತಿಯಿಂದಲೇ, ನಿಮ್ಮ ಶುದ್ಧ ಸಚ್ಚಿದಾನಂದರೂಪದಿಂದ ನೋಡಿರಿ. ಅಲ್ಲೇ ನಾನಿದ್ದೇನೆ. ಆ ನಿಮ್ಮ ಶುದ್ಧ ಸ್ವರೂಪದಿಂದ ಅಖಂಡವಾಗಿ ನನ್ನನ್ನು ನೋಡುವದೇ ನನ್ನ ಧ್ಯಾನ; ಅದೇ ನನ್ನ ತಾತ್ವಿಕ ರೂಪ. ನೀವು ಇದರ ಕಡೆಗೇ ಲಕ್ಷವಿಟ್ಟರೆಂದರೆ ‘ನಾವು ನೀವು ಅಖಂಡವಾಗಿ ಒಂದೇ ಸ್ಥಳದಲ್ಲಿ|’
ಈ ಸಮರ್ಥರ ಉಪದೇಶಗಳ ರಹಸ್ಯ ಹೊಮ್ಮಿ ಬರುವದು ಮತ್ತು ನಂತರ ನೀವು ನನ್ನನ್ನು ಬೇರೆಯಾಗಿ ನೋಡುವದಿಲ್ಲ – ಈ ಸ್ಥಿತಿ ಪ್ರಾಣಿಮಾತ್ರರನ್ನು ಕೃತಕೃತ್ಯ ಮಾಡುತ್ತದೆ. ಈ ತಾತ್ವಿಕ ದೃಷ್ಟಿಯೇ ಒಂದು ರೀತಿಯ ಶಾಂತಿ ನೀಡುತ್ತದೆ. ಇದೇ ಸ್ಥಿತಿಯಲ್ಲಿ ಅಖಂಡ ಅಚಲ ಇರುವದೇ ಮನುಷ್ಯಮಾತ್ರರ ಒಂದೇ ಒಂದು ಕರ್ತ್ಯವ್ಯ!!
ತಾತ್ವಿಕ ದೃಷ್ಟಿಗೆ ಒತ್ತು ಕೊಟ್ಟು ಬರೆದಿದ್ದೇನೆ. ಅದರಲ್ಲಿ ಯಾವುದೇ ವಿಪರೀತ ಭಾವನೆ ಮಾಡಿಕೊಂಡು ಬರೆದದ್ದರ ಸ್ವಾರಸ್ಯ ಕಳೆದುಕೊಳ್ಳಬೇಡಿರಿ!!
‘ಸರ್ವೇ ಭದ್ರಾಣಿ ಪಶ್ಯಂತು|’
ಶ್ರೀಧರ
ತಾ.ಕ.:
ಕರ್ಣಪ್ರಯಾಗದ ವರೆಗೆ ಬಸ ಸಿಗುತ್ತದೆ. ಮುಂದೆ ೧೦೦-೧೧೦ ಕಿ.ಮಿ. ನಡೆದೇ ಹೋಗಬೇಕು. ಹೃಷೀಕೇಶದಿಂದ ಬದ್ರಿಕಾಶ್ರಮ ೨೭೦ ಕಿ.ಮಿ. ಇದೆ. ಕರ್ಣಪ್ರಯಾಗದಿಂದ ೨೫-೩೦ ಕಿ.ಮಿ. ಮೊದಲೇ ರುದ್ರಪ್ರಯಾಗ ಇದೆ. ಅಲ್ಲಿಂದ ಶ್ರೀಬದರೀನಾರಾಯಣಕ್ಕೆ ರಸ್ತೆ ಪ್ರಾರಂಭವಾಗುತ್ತದೆ. ಈ ರುದ್ರಪ್ರಯಾಗದಿಂದ ೭೭ ಕಿ.ಮಿ.ದಲ್ಲಿ ಶ್ರೀಕೇದಾರನಾಥವಿದೆ. ಶ್ರೀಕೇದಾರನಾಥದಿಂದ ಶ್ರೀಬದರೀನಾರಾಯಣಕ್ಕೆ ೧೬೦ ಕಿ.ಮಿ. ನಡೆದೇ ಹೋಗಬೇಕಾಗುತ್ತದೆ. ‘ಚಾರಧಾಮ’ ಅಂದರೆ ಗಂಗೋತ್ರಿ ಯಮುನೋತ್ರಿಯೂ ಅದರಲ್ಲಿ ಸಮಾವೇಶವಾಗಿದೆ. ಬದರೀನಾರಾಯಣ ಒಂದಕ್ಕೇ ಹೋಗುವದಾದರೆ ಹಾಗೆಯೇ ಹೇಳಬೇಕು. ಸ್ವರ್ಗಾಶ್ರಮದಲ್ಲಿ ನನ್ನ ಪರಿಚಯ ಚೆನ್ನಾಗಿದೆ. ಹೃಷೀಕೇಶದ ರಾಮಾಶ್ರಮದಲ್ಲಿ ನನ್ನ ಹೆಸರು ಹೇಳಿದರೆ ಅನುಕೂಲವಾಗುವದು. ದಾರಿಯಲ್ಲಿ ಕಾಲೀಕಮಲಿಯ ಚೆಟ್ಟಿಯಲ್ಲಿ ಸಿಗುವ ಧಾನ್ಯ, ಆರೋಗ್ಯ ತಪಾಸಣೆ ವ್ಯವಸ್ಥೆ ಈ ರೇಶನ್ನಿನ ವೇಳೆಯಲ್ಲಂತೂ ಇಲ್ಲ. ಛತ್ರದಲ್ಲಿ ಮಡಿ-ಮೈಲಿಗೆ, ವರ್ಣಾಶ್ರಮ ವ್ಯವಸ್ಥೆ ಇರುವದಿಲ್ಲ. ಭಿಕ್ಷೆ ಹಾಕುವವನು ವೈಶ್ಯನೂ ಇರಬಹುದು.