ಗಾಳಿಯು ಒಂದು ಕ್ಷಣ ಇಲ್ಲದಿದ್ದರೆ, ಭೂಮಿ ಮೇಲೆ ಇರುವ ಸಕಲ ಜೀವ ಚರಾಚರಗಳು ಉಸಿರುಗಟ್ಟಿ ಸಾಯುವಂತೆ ಆಗುತ್ತದೆ. ಗಾಳಿ ಎಂಬುದನ್ನು ಸಕಲ ಜೀವ ಚರಾಚರಗಳಿಗೆ ಪ್ರಕೃತಿ ನೀಡಿರುವ ಅಮೂಲ್ಯ ಕೊಡುಗೆ. ಗಾಳಿ ಇಲ್ಲದಿದ್ದರೆ ಭೂಮಿಯ ಮೇಲೆ ಯಾರೂ ವಾಸಿಸುತ್ತಲೇ ಇರಲಿಲ್ಲ. ಗಾಳಿ ನೀರು ಇದ್ದರೆ ಮಾತ್ರ ಮನುಷ್ಯನು ಬದುಕಿರಲು ಸಾದ್ಯ.
ಇದೇನೋ ಅಕ್ಷರಶಃ ನಿಜ ಇದರಲ್ಲಿ ವಿಶೇಷವೇನೂ ಇಲ್ಲವಲ್ಲ ಎಂದು ಹೇಳಬಹುದು. ಆದರೆ ಗಾಳಿಯು ನಮ್ಮ ಕೆಲವು ಗುಣಗಳನ್ನು ತಿಳಿಸುತ್ತದೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ ಗಾಳಿಯಿಂದ ಯಾವ ಗುಣ ಕಲಿಯಬಹುದು? ಗಾಳಿಯ ವೇಗದಂತೆ ನಡೆಯುವುದೇ ಖಂಡಿತಾ ಅಲ್ಲ.
ಗಾಳಿಯು ವಿಧ ವಿಧವಾಗಿ ಬೀಸುತ್ತದೆಯಲ್ಲವೇ? ಮೆಲ್ಲನೆ ಬೀಸುವ ತಂಗಾಳಿ ಒಂದು ರೀತಿಯಾದರೆ ಇದಕ್ಕೆ ವಿರುದ್ದವಾಗಿ ಜೋರಾಗಿ ಬೀಸುವ ಬಿರುಗಾಳಿ, ಇದರ ಮದ್ಯೆ ವೇಗವಿಲ್ಲದ ಸಾಧಾರಣ ಗಾಳಿ, ಹಾಗೆಯೇ ಭೂಮಿ ಮೇಲಿದ್ದರೂ ಉಸಿರಾಡಿದರೆ ಮಾತ್ರ ಗೊತ್ತಾಗುವ ಸೂಕ್ಷ್ಮ ಗಾಳಿ. ಕೆಟ್ಟ ಪ್ರದೇಶದ ಮೇಲಿಂದ ಬೀಸಿ ಬರುವ ಗಾಳಿ ಹಾಗೂ ಮಾನವನ ಆವಿಷ್ಕಾರದಿಂದ ಬಂದಿರುವ ಕೃತಕ ಗಾಳಿ.
ಮೇಲ್ಕಂಡ ವಿಧ ವಿಧವಾಗಿ ಬೀಸುವ ಗಾಳಿಯಂತೆ ಮನುಷ್ಯರು ನಗುವುದನ್ನು ವಿಂಗಡಿಸಬಹುದು.
ಮನುಷ್ಯ ಮಗುವಾಗಿ ತೊಟ್ಟಿಲಲ್ಲಿ ಮಲಗಿರುವಾಗಿನಿಂದ ತಾನು ಸಾಯುವವರೆಗೆ ಜೀವನದಲ್ಲಿ ನಾನಾ ರೀತಿಯಲ್ಲಿ ಸಂದರ್ಭಕ್ಕೆ ತಕ್ಕಂತೆ ನಗುತ್ತಾನೆ ಹಾಗೂ ಬೇರೆಯವರನ್ನೂ ನಗಿಸುತ್ತಾನೆ. ಕೆಲವು ನಗುವಿನ ಗುಣಗಳು ಸ್ವಭಾವತಃ ಬಂದಿರುತ್ತದೆ. ತೊಟ್ಟಿಲಲ್ಲಿ ಮಲಗಿರುವ ಮಗುವಿನ ತುಟಿಯ ಮೇಲಿನ ಹುಸಿನಗೆಯು ಎಷ್ಟು ಆನಂದವಾಗಿರುತ್ತದೆ. ಒಳ್ಳೆಯದು ಕೆಟ್ಟದ್ದು ಏನೂ ತಿಳಿಯದ ಕಂದನ ನಗು ತಣ್ಣನೆಯ ತಂಪಾದ ಹಿತವಾಗಿ ಬೀಸುವ ಗಾಳಿಯಂತೆ ಇರುತ್ತದೆ.
ಮನುಷ್ಯನು ದಾರಿಯಲ್ಲಿ ಹೋಗುವಾಗ ಎದುರಿಗೆ ಬಂದ ಬೇರೆಯವರ ಮುಖ ನೋಡಿ ಮುಗುಳ್ನಕ್ಕಾಗ ಅವರೂ ಮುಗುಳ್ನಕ್ಕು ಮುಂದೆ ಹೋಗುತ್ತಾರೆ. ಇದು ಜೋರಾಗಿ ಬೀಸದೆ ಉಸಿರಾಡುವಾಗ ಮಾತ್ರ ಇರುವಂತೆ ಭಾಸವಾಗುವ ಗಾಳಿಯಂತೆ ಇರುತ್ತದೆ.
ಮಾತನಾಡುತ್ತಾ ಸ್ವಾಭಾವಿಕವಾಗಿ ನಗುವುದು ಸಾಧಾರಣ ನಗು, ಇದು ಸಹ ಹೊಲದ ಮೇಲಿಂದ ಮೆಲ್ಲನೆ ಬೀಸುವ ತಂಗಾಳಿಯಂತೆ ಹಿತವಾಗಿರುತ್ತದೆ. ಇದರಲ್ಲಿ ಯಾವ ನಾಟಕೀಯತೆಯೂ ಇರುವುದಿಲ್ಲ. ಮನುಷ್ಯ ನಕ್ಕರೂ ಬೇರೆಯವರಿಗೆ ತೊಂದರೆಯಾಗದಂತೆ ನಕ್ಕರೆ ಅದು ಎಲ್ಲರಿಗೂ ಹಿತವಾಗಿರುತ್ತದೆ. ನಗುತ್ತಿರುವ ಸಂದರ್ಭ ಮತ್ತು ಇರುವ ಸ್ಥಳ ಯಾವುದನ್ನೂ ನೋಡದೆ ತಮ್ಮ ಪಾಡಿಗೆ ತಾವು ಜೋರಾಗಿ ನಕ್ಕರೆ ಅದನ್ನು ನೋಡಿದವರ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಕೆಲವು ಕಡೆ ನಾಲ್ಕೈದು ಜನ ಸೇರಿ ಹರಟೆ ಹೊಡೆಯುತ್ತಿದ್ದರೆ ಜೋರಾಗಿ ಜೋಕ್ ಮಾಡಿಕೊಂಡು ಯಾರಿರಲಿ ಇಲ್ಲದಿರಲಿ ತಮ್ಮ ಪಾಡಿಗೆ ತಾವು ಜೋರಾಗಿ ನಗುತ್ತಾ ಇದ್ದರೆ ಅದು ಬಿರುಗಾಳಿ ಬೀಸಿ ಮುಖಕ್ಕೆ ರಪ್ಪನೆ ಹೊಡೆದಂತೆ ಆಗುತ್ತದೆ. ನಗಲಿ ಯಾರು ಬೇಡ ಎಂದಿರುವವರು, ಆರೀತಿ ಹರಟೆ ಹೊಡೆಯುವುದಾದರೆ ಯಾರೂ ಇಲ್ಲದ ಏಕಾಂತ ಸ್ಥಳದಲ್ಲಿ ಹೋಗಿ ಎಷ್ಟು ನಕ್ಕರೂ ಯಾರಿಗೂ ತೊಂದರೆಯಾಗುವುದಿಲ್ಲ ಅಲ್ಲವೇ?
ಮನುಷ್ಯನು ಯಾವಾಗಲೂ ನಗುವ ಸ್ವಭಾವ ಹೊಂದಿರುವಂತಿದ್ದರೆ, ಇದು ಆಷಾಢಮಾಸದಲ್ಲಿ ಹಗಲಿರುಳೂ ಬೀಸುವ ಗಾಳಿಯಂತೆ ಇರುತ್ತದೆ. ಯಾವಾಗಲೂ ನಗುವ ಮನುಷ್ಯನ ಹೃದಯ ಒಳ್ಳೆಯದು ಇರಬಹುದು ಆದರೆ ಬೇರೆಯವರಿಗೆ ಕೆಲವೊಮ್ಮೆ ಮುಜುಗರ ಎನಿಸುತ್ತದೆ. ಯಾರದ್ದಾದರೂ ಸತ್ತ ವಿಚಾರ ಕೇಳಿದಾಗಲೂ ನಗುತ್ತಾ ಹೌದಾ ಯಾವಾಗ ಸತ್ತರು ಎಂದು ಕೇಳುತ್ತಾರೆ. ಇದು ಸಾವಿನ ಸುದ್ದಿ ಹೇಳಿದವರಿಗೆ ತುಂಬಾ ಮುಜುಗರದ ಪ್ರಸಂಗವಾಗುತ್ತದೆ. ಇದು ಸ್ವಭಾವತಃ ಬಂದಿರುವ ಅಭ್ಯಾಸ. ಏನೂ ಮಾಡಲು ಆಗುವುದಿಲ್ಲ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ.
ಕೆಟ್ಟ ಪ್ರದೇಶದ ಮೇಲಿಂದ ಬೀಸಿ ಬಂದ ಗಾಳಿಯನ್ನು ಯಾವರೀತಿ ಸಹಿಸಲು ಸಾಧ್ಯವಿಲ್ಲವೋ ಅದೇ ರೀತಿ ಕುಹುಕ ನಗೆಯನ್ನು ಸಹಿಸಲು ಸಾಧ್ಯವಿಲ್ಲ. ಕುಹುಕ ನಗು ಬಹಳ ಅಪಾಯಕಾರಿಯಾದ ನಗು. ಮನುಷ್ಯನಿಗೆ ತಮ್ಮ ಬೆನ್ನು ತನಗೆ ಕಾಣುವುದಿಲ್ಲ, ಅದರಂತೆ ತನ್ನ ತಪ್ಪು ತನಗೆ ಅರಿವಾಗುವುದಿಲ್ಲ, ಬೇರೆಯವರು ಮಾಡಿರುವ ತಪ್ಪನ್ನು ಹೀಗಳೆದು ನಗುವುದೇ ಕುಹುಕ ನಗೆ. ಬೇರೆಯವರ ಜೊತೆ ಮಾತನಾಡುವಾಗ ಇನ್ನೊಬ್ಬರನ್ನು ಆಡಿಕೊಂಡು ಅಪಹಾಸ್ಯ ಮಾಡಿಕೊಂಡು ನಗುವುದು ಬಹಳ ಮುಜುಗರ ವಾಗಿರುತ್ತದೆ. ಇಂತಹ ಕುಹುಕ ನಗೆಯನ್ನು ಬಿಟ್ಟು ಸಾಧಾರಣವಾಗಿ ತಂಗಾಳಿ ಬೀಸಿದಂತೆ ನಗುವನ್ನು ಕಲಿತರೆ ಎಲ್ಲರಿಗೂ ಪ್ರಿಯರಾಗುತ್ತಾರೆ.
ಬೇರೆಯವರಿಗೆ ಏನಾದರೂ ಕೆಟ್ಟದ್ದಾದರೆ ಮನಸ್ಸಿನೊಳಗೇ ನಗುವಂತೆ ಇರಬಾರದು. ವಿಧಿಯಾಟ ಒಂದೇ ರೀತಿ ಇರುವುದಿಲ್ಲ. ಇಂದು ಬೇರೆಯವರಿಗೆ ಕೆಡಕಾದಾಗ ನಕ್ಕರೆ ನಾಳೆ ನಕ್ಕವರಿಗೆ ಕೆಡಕಾಗ ಬಹುದು. ಒಬ್ಬರಿಗೆ ಕೆಡಕಾದಾಗ ಮಾನವೀಯತೆಯಿಂದ ಅವರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿ ಸುವುದೇ ಮಾನವನ ಲಕ್ಷಣ.
ಭೂಮಿ ಮೇಲಿನ ಸಕಲ ಚರಾಚರಗಳು ಜೀವಿಸಲು ಗಾಳಿಯು ಎಷ್ಟು ಮುಖ್ಯವೋ, ನಗುವೂ ಸಹ ಜೀವನ ಸಂತೋಷದಿಂದ ಇರಲು ಅಷ್ಟೇ ಮುಖ್ಯ. ನಗುವುದು ದೇಹಕ್ಕೆ ತುಂಬಾ ಒಳ್ಳೆಯದೆಂದು ಹೇಳುತ್ತಾರೆ. ನಾವು ನಕ್ಕಾಗ ನಮ್ಮ ದೇಹದಲ್ಲಿರುವ ನರಗಳು ಹಿಗ್ಗುತ್ತವೆ ಇದರಿಂದ ಮನುಷ್ಯನು ಆರೋಗ್ಯವಂತನಾಗಿರುತ್ತಾನೆ ಎಂದು ಇದರ ಬಗ್ಗೆ ಅವಿಷ್ಕಾರ ಮಾಡಿರುವವರು ಹೇಳುತ್ತಾರೆ. ಕೆಲವು ಕಡೆ ನಗುವುದಕ್ಕಾಗಿಯೇ ಲಾಫಿಂಗ್ ಕ್ಲಬ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸದಸ್ಯರನ್ನು ನಗಿಸಿ ವ್ಯಾಯಾಮ ಮಾಡಿಸುವುದುಂಟು.
ಬೇಸಿಗೆಯ ಸಮಯದಲ್ಲಿ ತುಂಬಾ ಸೆಕೆಯಾದಾಗ, ಬೀಸಣಿಗೆಯಿಂದಲೋ ಬೀಸಿಕೊಂಡು ಅಥವಾ ಫ್ಯಾನನ್ನು ಹಾಕಿ ಅದರ ಮೂಲಕ ಕೃತಕ ಗಾಳಿಯನ್ನು ಪಡೆದು ಸಮಾಧಾನ ಪಟ್ಟುಕೊಳ್ಳುವುದೇ ಕೃತಕ ಗಾಳಿ. ಅದೇರೀತಿ ಬೇಸರವಾದಾಗ ಹಾಸ್ಯ ರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿನ ಕಲಾವಿದರು ಮಾಡುವ ಜೋಕುಗಳಿಂದ ಬರುವ ನಗು ಕೃತಕ ನಗುವಿನಂತೆ ಇರುತ್ತದೆ.
ಈಗ ಶುದ್ದ ಗಾಳಿಯು ನಗರ ಪ್ರದೇಶಗಳಲ್ಲಿ ಸಿಕ್ಕುವುದೇ ಅಪರೂಪವಾಗಿದೆ. ಎಲ್ಲರಿಗೂ ವಾಹನ ಬೇಕೇಬೇಕು. ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಲು ವಾಹನದ ಅವಶ್ಯಕತೆ ಇದೆ. ಜನಗಳ ಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾಹನಗಳು ಉಗಳುವ ಹೊಗೆ, ಕಾರ್ಖಾನೆಗಳಿಂದ ಬರುವ ಹೊಗೆ ಇವೆಲ್ಲವೂ ಸೇರಿಕೊಂಡು ವಾಯು ಮಾಲಿನ್ಯವಾಗಿ ಒಳ್ಳೆಯ ಗಾಳಿ ದೊರಕುವುದೇ ದುರ್ಲಭವಾಗಿದೆ. ಇದು ಎಲ್ಲಿಗೆ ಹೋಗಿ ಮುಟ್ಟತ್ತೋ ದೇವರಿಗೆ ಗೊತ್ತು. ಪ್ರತಿ ದಿನ ಪ್ರತಿ ಕ್ಷಣ ವಾಯು ಮಾಲಿನ್ಯ ಉಂಟಾಗಿ ಜನಗಳಿಗೆ ಉಸಿರಾಡಲು ಬಹಳ ತೊಂದರೆ ಉಂಟಾಗುವಂತೆ ಆಗಿದೆ. ಇದಕ್ಕೆ ಕಾರಣ ಪ್ರತಿ ದಿನ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಎನ್ನಬಹುದು. ಇದರಿಂದ ರಸ್ತೆಗಳಲ್ಲಿ ಮನುಷ್ಯರಿಗಿಂತ ವಾಹನಗಳ ಸಂಖ್ಯೆಯೇ ಜಾಸ್ತಿಯಾದಂತಾಗಿದೆ. ರಸ್ತೆಗಳಲ್ಲಿ 5 ಜನ ಮನುಷ್ಯರು ಸಂಚರಿಸಿದರೆ, ಇದಕ್ಕಿಂತ ಎರಡರಷ್ಟು ವಾಹನಗಳು ಸಂಚರಿಸುತ್ತವೆ ಎನ್ನಬಹುದು.
ಈ ಆದುನಿಕ ಯುಗದ ಒತ್ತಡದ ಬದುಕು, ಯಾಂತ್ರಿಕ ಜೀವನದಲ್ಲಿ ಮನುಷ್ಯ ತಾನು ನಗುವುದನ್ನೆ ಮರೆತುಬಿಟ್ಟಿದ್ದಾನೆ ಎನಿಸುತ್ತದೆ. ಈಗ ಮನುಷ್ಯನ ಜೀವನ ಒಂದು ರೀತಿಯ ಯಾಂತ್ರಿಕ ಬದುಕಿನಂತೆ ಆಗಿದೆ. ಬೆಳಿಗ್ಗೆ ಎದ್ದು ತನ್ನ ಕಾರ್ಯವನ್ನು ಮಾಡಿಕೊಂಡು ಕಛೇರಿಯ ಕೆಲಸಕ್ಕೆ ಹೋದರೆ ಬರುವುದೇ ರಾತ್ರಿಯಾಗಿರುತ್ತದೆ. ಪ್ರಯಾಣವೇ ಒಂದು ದೊಡ್ಡ ಸವಾಲಾದಂತೆ ಆಗಿದೆ. ಮನುಷ್ಯನು ತನ್ನ ಸಮಯವನ್ನು ಪ್ರಯಾಣದಲ್ಲಿಯೇ ಕಳೆಯುತ್ತಾನೆ. ಸ್ವಂತ ವಾಹನ ಇದ್ದರೂ ವಾಹನಗಳ ಒತ್ತಡದಿಂದ ಸಂಚಾರಕ್ಕೆ ಅಡಚಣೆಯಾಗಿ ಹೋಗಿ ಬರುವುದೇ ಒಂದು ದುಸ್ತರವಾಗಿದೆ. ಕಛೇರಿಯಲ್ಲಿ ಒತ್ತಡದ ಕೆಲಸ ಇದರ ಜೊತೆಗೆ ಯಾರಾದರೂ ಮಾತನಾಡಿಸಿದರೆ ಇವರು ಏಕಪ್ಪಾ ಮಾತನಾಡಿಸುತ್ತಾರೆ ನನ್ನ ಕೆಲಸ ಮುಗಿದರೆ ಸಾಕು ಎಂಬ ಮನೋಭಾವ ಉಂಟಾಗುತ್ತದೆ. ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದರೆ ಊಟ ಮಾಡಿ ಮಲಗಿದರೆ ಸಾಕು ಎನ್ನುವ ಹಾಗೆ ಆಗಿರುತ್ತದೆ. ಒಳ್ಳೆಯ ಗಾಳಿಹೋಗಿ ಪ್ರಕೃತಿಯಲ್ಲಿ ಕಾರ್ಬನ್ ಡೈಯಾಕ್ಸೈಡ್ ತುಂಬಿರುವಂತೆ ಮನುಷ್ಯರಲ್ಲಿಯೂ ಸ್ವಾಭಾವಿಕ ನಗೆ ಹೋಗಿ, ಒತ್ತಡದ ಮನಸ್ಸು ಮಾತ್ರ ಉಳಿದಿದೆ.
ಮನುಷ್ಯನು ಹುಟ್ಟುವಾಗ ಅಳುತ್ತಾ ಹುಟ್ಟಿ, ನಂತರ ನಾನಾ ರೀತಿಯ ನಗುವುದನ್ನು ಕಲಿತು, ತಾನೂ ನಕ್ಕು ಎಲ್ಲರನ್ನೂ ನಗಿಸಿ, ಕಡೇಗಾಲದಲ್ಲಿ ಅಕಸ್ಮಾತ್ ಖಾಯಿಲೆ ಬಿದ್ದಾಗ ಎಲ್ಲರನ್ನೂ ಅಳಿಸುವುದಲ್ಲದೆ ಹೋದ ಮೇಲೂ ಅಳುವಂತೆ ಮಾಡುವುದೇ ಮನುಷ್ಯನ ಜೀವನ.
ಗಾಳಿಯು ಇದ್ದು, ಎಲ್ಲರನ್ನೂ ಬದುಕಿಸಿರುವಂತೆ, ಮನುಷ್ಯನೂ ಹುಟ್ಟಿ ತಾನೂ ನಕ್ಕು ಬೇರೆಯವರನ್ನು ನಗಿಸುವುದು ಮಾನವ ಧರ್ಮ. ತಾನೂ ನಕ್ಕು ಇನ್ನೊಬ್ಬರನ್ನೂ ನಗಿಸುವುದನ್ನು ಕಲಿತಿರುವವರು ಧನ್ಯರು. ಇಂಥಹ ಕಲೆ ಯಾರಿಗೂ ಬರುವುದಿಲ್ಲ, ಅದು ಅವರಿಗೆ ದೇವರಿಂದ ಬಂದಿರುವ ಕೊಡುಗೆ. ಇದರಿಂದ ಅವರುಗಳು ಯಾರ ವಿರುದ್ದವೂ ದ್ವೇಷವನ್ನು ಕಟ್ಟಿಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ಎಲ್ಲರನ್ನೂ ಸಂತೋಷವಾಗಿಡ ಬೇಕೆಂಬುದೇ ಆಗಿರುವುದರಿಂದ ಅವರಿಗೆ ಕೋಪ ಎಂಬುದೇ ಮರೆತಂತಾಗಿರುತ್ತದೆ. ಒಳ್ಳೆಯ ಗಾಳಿ ಮನುಷ್ಯನ ಆರೋಗ್ಯ ಹೆಚ್ಚಿಸಿದಂತೆ, ಒಳ್ಳೆಯ ನಗೂ ಸಹ ಆರೋಗ್ಯ ವೃದ್ದಿಸುತ್ತದೆ ಎಂದರೆ ತಪ್ಪಾಗಲಾರದು.