123 copy 1

ಮನೆ ಎಂದರೆ ಹೇಗಿರಬೇಕು? ಎಲ್ಲರೂ ಚೆಂದವಾಗಿ ಒಗ್ಗಟ್ಟಾಗಿ. ಮನೆಯ ಮಂದಿಗೆಲ್ಲರೀಗೂ ಎಲ್ಲ ಸಾಮಾನ್ಯ ವಿಚಾರಗಳು ಪಾರದರ್ಶಕವಾಗಿ ತಿಳಿದಿರಬೇಕು. ಇದು ಎಲ್ಲರೂ ಹೇಳುವ ವಿಚಾರ. ಆದರೆ ಕಾಲ ಬದಲಾಗಿದೆ. ಮನೆಯೊಂದು ಹಲವು ಬಾಗಿಲು ಎನ್ನುವಂತೆ ಅಪ್ಪ ಅಮ್ಮ ಒಂದು ಮಗು ಮೂರು ಜನರಿಗೆ ಒಂದು ಮನೆ ಅಥವಾ ಕುಟುಂಬ ಎನ್ನುವುದಕ್ಕೆ ಸೀಮಿತವಾಗಿದೆ. ಈ ಕಾಲಮಾನಕ್ಕೆ ಹೆಚ್ಚಿಗೆ ಜನ ಒಂದು ಮನೆಯಲ್ಲಿದ್ದರೆ ಆರ್ಥಿಕವಾದ ಕಲಹದಿಂದ ಮನೆಯೊಡೆಯುವುದು ಒಂದಾದರೆ ಆರ್ಥಿಕ ದುಡಿಮೆಯಿಂದ ಅಂತರಗಳು ಏರ್ಪಡುತ್ತಿವೆ.
ಬೆಂಗಳೂರಲ್ಲಿ ಒಂದು ಪುಟ್ಟ ಸಂಸಾರ. ಗಂಡ ಹೆಂಡತಿ ಮಗು ಅಂದರೆ ಒಬ್ಬ ಮಗನಿದ್ದಾನೆ ಎಂದುಕೊಳ್ಳೋಣ. ಗಂಡ ದುಡಿಯಲೇ ಬೇಕು. ಶಹರವಾಗಿದ್ದರಿಂದ ಗಂಡನ ದುಡಿಮೆ ಹಣ ದಿನದ ಖರ್ಚಿಗೆ ಬೇಕು. ಒಂದಿಷ್ಟು ಉಳಿತಾಯ ಆಗಬೇಕೆಂದಾಗ ಹೆಂಡತಿಯೂ ದುಡಿಮೆಗೆ ಹೋಗಲೆ ಬೇಕು. ಮಗು ಚಿಕ್ಕವನಿದ್ದಾಗ ಅವನ ಶಾಲೆ ಕಾಲೇಜು ಎಂದು ಖರ್ಚಾಯಿತು. ಸ್ವಂಕ್ಕೊಂದು ಮನೆ, ತಿರಗಲೊಂದು ಕಾರು. ಅದಕ್ಕಾಗಿ ಗಂಡ ಹೆಂಡತಿ ದುಡಿಯುತ್ತಿರಬೇಕು. ಕಲಿತ ಮಗ ದುಡಿಮೆಗೆ ಶುರುಮಾಡಿದರೆ ಮೂವರು ದಿನದ ಕೆಲಸದ ನಿಮಿತ್ತ ಅವರವರ ಸಮಯದಲ್ಲಿ ಹೊರಗಡೆ ಹೋಗುತ್ತಾರೆ.

 
ಒಬ್ಬರು ಬೆಳಗ್ಗೆ ಐದುಗಂಟೆಗೆ ಹೊರಗೋಗಿ ಎರಡು ಗಂಟೆಗೆ ಬದುವವರಾದರೆ, ಮತ್ತೊಬ್ಬರು ಹತ್ತು ಗಂಟೆಗೆ ಹೊರ ಹೋಗಿ ರಾತ್ರಿ ಬರುತ್ತಾರೆ, ಮತ್ತೊಬ್ಬರು ಮದ್ಯಾಹ್ನವೋ ಅಥವಾ ರಾತ್ರಿಯೋ ಹೊರ ಹೋಗುವುದಾದರೆ ಬರುವುದು ಮಧ್ಯರಾತ್ರಿಗೋ ಬೆಳಗಿನ ಜಾವಕ್ಕೋ. ಹಾಗಿರುವಾಗ ಆ ಮೂವರು ಎಷ್ಟು ಸಮಯಗಳು ಜೊತೆಯಾಗಿ ಇರುತ್ತಾರೆ? ದಿನದಲ್ಲಿ ಎರಡು ಮೂರುಗಂಟೆಗಳು ಜೊತೆಯಾಗಿರತ್ತಾರೆನೋ. ಅದು ಅವರ ನಿತ್ಯದ ಕೆಲಸವೂ ಆಗುವುದರ ಜೊತೆ ಕೆಲಸಕ್ಕೆ ಹೋಗಿ ಬಂದುದರ ದಣಿವಾರಲು ನಿದ್ದೆ ಇತರ ವಯಕ್ತಿಕ ಎನ್ನಿಸುವ ಕೆಲಸ, ಬ್ಯಾಂಕ್, ರೇಶನ್ ಇತ್ಯಾದಿ ಕೆಲಸ ಆಗಲೇ ಆಗಬೇಕು.
ವಾರದಲ್ಲಿ ಸಿಗುವ ವೀಕೆಂಡ್ ಮಾತ್ರ ವಾರದ ಬೇಸರ ಕಳೆಯಲು ಸಿಗುವ ದಿನ. ಆಗಲಾದರೂ ಮೂವರು ಕುಳಿತು ಒಟ್ಟಿಗೆ ಊಟ, ಮಾತು ನಗು ಇರುತ್ತದೆಯೇ? ಇಲ್ಲೂ ಒಂದು ಪ್ರಶ್ನಾರ್ಥಕವಿದ್ದೆ ಇದೆ. ಕೆಲವು ಬಾರಿ ವೀಕೆಂಡ್‍ನಲ್ಲಿ ಹೇಳಿಕೊಳ್ಳಲಾಗದ ಒತ್ತದ ಕೆಲಸ ಬಂದು ಬೀಳುತ್ತದೆ. ಇದೆಲ್ಲದರ ಮಧ್ಯ ಸಂಸಾರ ಎನ್ನುವುದು ಮೂವರಲ್ಲಿ ಸಿಗುವ ಒಂದೆರಡು ಗಂಟೆಯಲ್ಲಿ ಇರುವ ಭಾವನೆಗಳನ್ನು ಹಂಚಿಕೊಳ್ಳಬೇಕು.
ಈ ಭಾವನೆ ಹಂಚಿಕೆ ಹೇಗಾಗಿದೆ ಎಂದರೆ ಎಷ್ಟೋ ಸಲ ನಾವು ವಾಟ್ಸಾಪಲ್ಲಿ ಮೇಸೆಜ್ ಮೂಲಕ ಪ್ರೀತಿ ಪೂರಕವಾದ ಹೂ ಬೊಕ್ಕೆ, ಸ್ವೀಟ್, ಕಣ್ಣೋಟವನ್ನು ಟೆಕ್ನಾಲಜಿ ಮೂಲಕ ಕಳಿಸುತ್ತೆವೆಯಲ್ಲ, ಅದೇ ರೀತಿ ನಿತ್ಯ ಜೀವನದಲ್ಲೂ ಆಗಿಬಿಟ್ಟಿದೆ. ಇಲ್ಲಿ ಮನಸಿನಾಳದ ಸಂವೆಧನೆ ಹೆತ್ತವರಲ್ಲಿ ಮಕ್ಕಳಿಗಾಗಲಿ, ಗಂಡ ಹೆಂಡತಿಗಾಗಲಿ ಸಿಗುವುದು ಕಡಿಮೆಯಾಗುತ್ತಿದೆ ಎಂದು ಒಂದು ಸಂಶೋಧನೆ ಹೇಳುತ್ತಿದೆ ಎಂದು ಓದಿದಾಗ ನಿಜಕ್ಕೂ ಇದು ವಿಷಾದಕರ ಸಂಗತಿ ಎನ್ನಿಸಿತು.
ಇರುವ ಮೂವರಲ್ಲಿ ದಿಕ್ಕಿಗೊಬ್ಬೊಬ್ಬರು ಕೆಲಸದ ನಿಮಿತ್ತ ಹೋದಾಗ ಅವರಲ್ಲಿ ಪ್ರೀತಿ ಎಷ್ಟೇ ಇದ್ದರೂ ಸಹ ಅದನ್ನು ವ್ಯಕ್ತಪಡಿಸಲು ಸಮದ ಕೊರತೆ ಎನ್ನುವುದು ಜೀವನವೇ ಹೀಗೆ, ಹೀಗೆ ಬಿಜಿಯಾಗಿದ್ದರೆ ಮಾತ್ರ ಬದುಕು, ಒಂದು ಗಳಿಗೆ ಕುಳಿತರೆ ಅದು ಸಮಯ ಹಾಳು, ಹಾಗಾಗಿ ನಿತ್ಯವೂ ದುಡಿಯಬೇಕು. ಆರ್ಥಿಕ ಗಳಿಕೆ ಬೇಕೋ ಬೇಡವೋ ಅದಲ್ಲ, ಒಟ್ಟಿನಲ್ಲಿ ದುಡಿಯುತ್ತಲಿರಬೇಕು. ಆಗ ಮನೆಯೊಂದು ಬಾಗಿಲು ಹಲವು ಎನ್ನುವಂತಾಗಿಬಿಡುವುದು.
ಯಾವುದೇ ರೀತಿಯ ಕೆಲಸವಿರಲಿ ಬಂಧಗಳ ಜೊತೆ ಒಂದಿಷ್ಟು ಸಮಯ ಕಳಿದರೆ ಅಲ್ಲಿ ಒಂದು ಚೆಂದದ ನಗು, ಕೋಪ, ಹಾಸ್ಯ, ಹೊಂದಾಣಿಕೆ, ಜೀವನದ ಅಮೂಲ್ಯ ಕ್ಷಣಗಳು ನಮ್ಮದಾಗುತ್ತವೆ. ಒಂಟಿತನ ಎಂದು ಕಾಡುವುದಿಲ್ಲ. ಎಲ್ಲ ದಿನವೂ ಅಲ್ಲದಿದ್ದರೂ ಸಿಗುವ ರಜಾ ದಿನಗಳನ್ನಾದರೂ ಸದುಪಯೋಗ ಪಡಿಸಿಕೊಂಡರೆ ಆ ಸಂಸಾರದ ಎಲ್ಲ ಮಜಲುಗಳು ಸಿಗುತ್ತವೆ. ಕಳೆದು ಹೋದ ಕ್ಷಣ ಮತ್ತೆ ಬಾರದು. ದಡಿಮೆ ದುಡಿಮೆ ಎಂದು ದಡ್ಡತನ ಮಾಡಿಕೊಂಡು ಸುಂದರ ಮಾನವ ಬದುಕು ಕಳೆದುಕೊಳ್ಳದಿರುವವನು ಜಾಣ ಅಲ್ಲವೆ!

RELATED ARTICLES  .........ಅಪ್ಪನಿಲ್ಲದ ಹೊಳ್ಳಿ......