ಅಕ್ಷರರೂಪ : ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ.
ಇಲ್ಲಿ ಶ್ರೀದತ್ತನ ನಿತ್ಯನಿವಾಸವಿದ್ದು, ಇದೊಂದು ದೊಡ್ಡ ಸಿದ್ಧ ಕ್ಷೇತ್ರವಾಗಿದೆ. ಹೀಗೆ ಈ ಗಿರಿನಾರ ಪರ್ವತದ ಪುರಾಣ ಪ್ರಸಿದ್ಧಿಯಿದೆ.
(ಇಸವಿ ಸನ ೧೯೪೭ರಲ್ಲಿ ಶ್ರೀ ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಬರೆದ ಪತ್ರ)
ಓಂ
ಮೋದಿ ಪರಮಾನಂದ ದೇವಜಿ
ಗಿರಿನಾರ, ೩-೬-೧೯೪೭
ಚಿ. ದಿನಕರಾದಿ ಎಲ್ಲರಿಗೂ ಆಶೀರ್ವಾದ,
ಚಿ. ದಿನಕರನ ಪತ್ರ ಬಂದು ತಲುಪಿತು. ಶ್ರೀಸಮರ್ಥಕೃಪೆಯಿಂದ ನಾವು ಇಲ್ಲಿ ಸುಖರೂಪದಲ್ಲಿದ್ದೇವೆ. ನಿಮ್ಮನ್ನೂ ಕೂಡಿ ಅಲ್ಲಿ ಎಲ್ಲರೂ ಸುಖರೂಪವಾಗಿರಲಿ ಎಂದು ಶ್ರೀಚರಣದಲ್ಲಿ ಪ್ರಾರ್ಥನೆ ಮಾಡುತ್ತೇನೆ.
ಇಲ್ಲಿ ಶ್ರೀದತ್ತನ ನಿತ್ಯನಿವಾಸವಿದ್ದು, ಇದೊಂದು ದೊಡ್ಡ ಸಿದ್ಧ ಕ್ಷೇತ್ರವಾಗಿದೆ. ಹೀಗೆ ಈ ಗಿರಿನಾರ ಪರ್ವತದ ಪುರಾಣ ಪ್ರಸಿದ್ಧಿಯಿದೆ. ಶ್ರೀಚರಣಪಾದುಕೆಯ ಸ್ಥಳ ಸಮುದ್ರತಳದಿಂದ ಸುಮಾರು ೧೮೦೦ ಮೀಟರ ಎತ್ತರದಲ್ಲಿದೆ. ಹತ್ತಿ ಬರಲು ಒಟ್ಟೂ ಸುಮಾರು ೨೦೦೦೦ ಮೆಟ್ಟಲುಗಳಿವೆ. ಶ್ರೀಚರಣಾದುಕೆಯ ಸ್ಥಳ ಬಹಳ ಚಿಕ್ಕದಾಗಿದೆ ಮತ್ತು ಗಾಳಿಯೂ ಭಯಂಕರ. ಹೊಸಬರು ಬಂದರೆಂದರೆ ಮೊದಲಿನವರು ಎದ್ದು ಅವರಿಗೆ ಜಾಗ ಕೊಡಬೇಕಾಗುತ್ತದೆ. ನಾನು ಈ ಸ್ಥಳದಿಂದ ೧೦೦ ಮೀಟರ ಕೆಳಗಿರುತ್ತೇನೆ. ಈ ಸ್ಥಳಕ್ಕೆ ‘ಕಮಂಡಲು ಕುಂಡ’ ಅನ್ನುತ್ತಾರೆ. ಅಘೋರಿ ಯೋಗಿ ಮತ್ತು ನಾಗಪಂಥೀ ಜನರ ಎಲ್ಲ ಸಿದ್ಧರನ್ನು ದತ್ತನು ತನ್ನ ಕಮಂಡಲದಲ್ಲಿ ತುಂಬಿ, ಅವರನ್ನೆಲ್ಲಾ ನೀರಾಗಿ ಮಾಡಿ, ಈ ಸ್ಥಳದಲ್ಲಿ ಬಿಟ್ಟರು ಮತ್ತು ಈ ರೀತಿ ಶ್ರೀದತ್ತನು ಅವರಿಂದ ಜನರಿಗಾಗುವ ತೊಂದರೆ ನಿಲ್ಲಿಸಿದರು ಎಂದು ಆಖ್ಯಾಯಿಕೆ ಇದೆ. ಒಟ್ಟಿನ ಮೇಲೆ ತಪಸ್ಸಿಗೆ ಒಂದು ಅತ್ಯುತ್ತಮ ಸ್ಥಳವಾಗಿದೆ.
ನನ್ನ ಸಂಗಡ ಆರೇಳು ಸಾಧುಗಳು ಇದ್ದಾರೆ. ಅವರಲ್ಲಿ ಒಬ್ಬ ಸಣ್ಣ ವಯಸ್ಸಿನ ಮಹಾರಾಷ್ಟ್ರದ ಸಿದ್ಧನೂ ಇದ್ದಾನೆ. ನನ್ನ ವ್ಯವಸ್ಥೆಯನ್ನು ಇಲ್ಲಿಯ ಜನರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಗ್ರಂಥ ಸಂಗಡವೇ ಇದೆ. ಸಂಸ್ಕೃತ ಶ್ಲೋಕಗಳನ್ನು ನೋಡಿ, ಅನಿಸಿದ ಸ್ಥಳಗಳಲ್ಲಿ ಸುಧಾರಣೆ ಮಾಡಿದ್ದೇನೆ. ‘ವಿವೇಕೋದಯ’ ಇನ್ನೂ ಹಾಗೇ ಇದೆ. ಚಾತುರ್ಮಾಸದ ಕಾಲದಲ್ಲಿ ಸಮಯವಿರುವದಿಲ್ಲ. ಚಿ. ಅಯ್ಯನಿಗೆ ಇಲ್ಲಿ ಮೇಲೆ ತರಲಿಕ್ಕೆ ಅಥವಾ ನಿಮ್ಮ ಕಡೆ ಕಳಿಸಲಿಕ್ಕೆ ಹೇಳಿದ್ದೇನೆ. ಒಜ್ಜೆಯಾಗುತ್ತದೆಂದು ಪುಸ್ತಕವನ್ನು ಬ್ರಹ್ಮಚರ್ಯಾಶ್ರಮದಲ್ಲೇ ಇಟ್ಟಿದ್ದೇನೆ. ಅಲ್ಲಿಂದ ಬರುವದಾದರೆ ಚಾತುರ್ಮಾಸದ ನಂತರ ನೋಡೋಣ. ಮಳೆಗಾಲದಲ್ಲಿ ಬರುವದು ತುಂಬಾ ಕಠಿಣ.
ಇರಲಿ.
ಶ್ರೀಧರ