ಚೀನಾ ಕಂಪನಿಗಳ ಮೇಲಿನ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಕೇಂದ್ರ ಸರ್ಕಾರ ಕೂಡ ಚೀನಾ ಕಂಪನಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಹಲವು ಚೀನಾ ಮೂಲದ ಆಯಪ್‌ಗಳನ್ನು ಕೇಂದ್ರ ನಿಷೇಧ ಮಾಡಿದೆ. ಒಂದರ ಮೇಲೊಂದರಂತೆ ಹೊಡೆತ ಅನುಭವಿಸುತ್ತಿರುವ ಚೀನಾ ಮೊಬೈಲ್ ಕಂಪನಿಗಳು ಇದೀಗ ಭಾರತ ತೊರೆಯಲು ಮುಂದಾಗಿದೆ. ಭಾರತದಲ್ಲೇ ಉತ್ಪಾದನೆ ಮಾಡುತ್ತಿದ್ದ ಚೀನಾ ಮೊಬೈಲ್ ಕಂಪನಿಗಳು ಇಂಡೋನಿಷಿಯಾ, ಬಾಂಗ್ಲಾದೇಶ, ನೈಜಿರಿಯಾ ದೇಶಕ್ಕೆ ತೆರಳಲು ಮುಂದಾಗಿದೆ.
ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ, ಭಾರತದಿಂದ ಚೀನಾ ಮೊಬೈಲ್ ಕಂಪನಿಗಳು ಹೋರಹೋಗಲು ಮನಸ್ಸು ಮಾಡಿದೆ. ಪ್ರಮುಖವಾಗಿ ಒಪ್ಪೋ, ಶಿಯೋಮಿ ಹಾಗೂ ವಿವೋ, ಕಂಪನಿಗಳು ಭಾರತದಲ್ಲೇ ಮೊಬೈಲ್ ಉತ್ಪಾದನೆ ಮಾಡುತ್ತಿದೆ. ಆದರೆ ಈ ಮೂರು ಕಂಪನಿಗಳು ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಸಿಲುಕಿದೆ. ಈಗಾಗಲೇ ಕೇಂದ್ರ ತನಿಖಾ ಸಂಸ್ಥೆಗಳಿಂದ ನೋಟಿಸ್ ಪಡೆದಿದೆ. ಕೇವಲ ಇಂದೊಂದೆ ಕಾರಣವಲ್ಲ. ಭಾರತದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆತ್ಮನಿರ್ಭರ್ ಭಾರತ್ ಯೋಜನೆಯಡಿ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತಿದೆ. ಇದು ಚೀನಾ ಕಂಪನಿಗಳ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಇದೆಲ್ಲದರ ಪರಿಣಾಮ ಇತ್ತೀಚೆಗೆ ವಿವೋ ಕಂಪನಿ ಈಜಿಪ್ಟ್ ಜೊತೆ 20 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿದೆ. ಈಜಿಪ್ಟ್‌ನಲ್ಲಿ ಅತೀ ದೊಡ್ಡ ವಿವೋ ಉತ್ಪಾದನಾ ಘಟಕ ತೆರೆಯುತ್ತಿದೆ.
ಕೇಂದ್ರ ಸರ್ಕಾರ ಚೀನಾ ಕಂಪನಿಗಳು ಹಾಗೂ ಆಯಪ್ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ 300 ಚೀನಾ ಆಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಹೀಗೆ ನಿಷೇಧ ಮಾಡಿದ ಆಯಪ್‌ಗಳ ಪೈಕಿ ಟಿಕ್‌ಟಾಕ್, ವಿಚಾಟ್ ಸೇರಿದಂತೆ ಹಲವು ಜನಪ್ರಿಯ ಆಯಪ್ ಕೂಡ ಸೇರಿದೆ. ಇತ್ತ ಭಾರತದಲ್ಲೇ ಸೆಮಿಕಂಡ್ಟರ್ ಉತ್ಪಾದನೆಗೆ ಗುಜರಾತ್ ಸರ್ಕಾರ ವೇದಾಂತ ಹಾಗೂ ಫಾಕ್ಸ್‌ಕಾನ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. 1.54 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಇತ್ತ ಟಾಟಾ ಗ್ರೂಪ್ ಐಫೋನ್ ಉತ್ಪಾದನೆ ಕುರಿತು ತೈವಾನ್ ಕಂಪನಿ ಜೊತೆ ಮಾತುಕತೆ ನಡೆಸುತ್ತಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಚೀನಾ ಕಂಪನಿಗಳು ಇದೀಗ ಭಾರತ ತೊರೆಯಲು ಮುಂದಾಗಿದೆ. ಪ್ರಮುಖವಾಗಿ ಸಾವಿರಾರು ಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣ ಚೀನಾ ಮೊಬೈಲ್ ಕಂಪನಿಗಳಿಗೆ ಸಂಕಷ್ಟ ತಂದಿದೆ.