Home Business ಕುಮಟಾ ಪಟ್ಟಣದಲ್ಲಿ ಅಣಬೆ ವ್ಯಾಪಾರ ಬಲು ಜೋರು : ದರ ಹೆಚ್ಚಿದರೂ ಇಳಿಯದ ಗ್ರಾಹಕರ ಖರೀದಿ...

ಕುಮಟಾ ಪಟ್ಟಣದಲ್ಲಿ ಅಣಬೆ ವ್ಯಾಪಾರ ಬಲು ಜೋರು : ದರ ಹೆಚ್ಚಿದರೂ ಇಳಿಯದ ಗ್ರಾಹಕರ ಖರೀದಿ ಭರಾಟೆ: ಅಣಬೆ ರುಚಿಗೆ ಸಾಟಿ ಇಲ್ಲ ಎನ್ನುವ ಜನರು.

ಕುಮಟಾ : ಮಳೆ ಇಳೆಯನ್ನು ತಂಪಾಗಿಸಿದ ನಂತರದಲ್ಲಿ ಮಾರುಕಟ್ಟೆಗೆ ಅಣಬೆಗಳು ಲಗ್ಗೆ ಇಟ್ಟಿದೆ. ಕುಮಟಾ ಪಟ್ಟಣದ ಗಿಬ್ ಸರ್ಕಲ್ ಸಮೀಪ ಅಣಬೆ ಮಾರಾಟ ಮಾಡುವ ಮಹಿಳೆಯರು ಅಣಬೆಗಳನ್ನು ತಂದು ಮಾರಾಟ ಮಾಡುವ ದೃಶ್ಯ ಶನಿವಾರ ಕಂಡುಬಂತು.

ಹುತ್ತದಲ್ಲಾಗುವ ಹೆಗ್ಗಲಿಗೆ (ಅಣಬೆ) ವರ್ಷಂಪ್ರತಿಯಂತೆ ಈ ಬಾರಿಯೂ ಪಟ್ಟಣದಲ್ಲಿ ಭಾರೀ ಬೇಡಿಕೆ ಬಂದಿದೆ. ವರ್ಷದಿಂದ ವರ್ಷಕ್ಕೆ ದರ ಹೆಚ್ಚುತ್ತಿದ್ದರೂ ಅಣಬೆಪ್ರಿಯರು ಮಾತ್ರ ಅದನ್ನು ಖರೀದಿಸುತ್ತಿರುವುದು ವಿಶೇಷ.

೮- ೧೦ ಹಣಬೆಗಳಿರುವ ಪೊಟ್ಟಣಕ್ಕೆ ೨೫೦ ರೂ. ನಿಗದಿಪಡಿಸಲಾಗಿದೆ. ಅಣಬೆಗಳು ಈಗ ತಾನೆ ಪಟ್ಟಣಕ್ಕೆ ಮಾರಾಟಕ್ಕೆ ಪ್ರವೇಶಿಸುತ್ತಿದ್ದು ಕೆಲವೇ ಹೊತ್ತಿನಲ್ಲಿ ಅವುಗಳು ಮಾರಾಟವಾಗಿ ಹೋಗುತ್ತಿವೆ. ಅಣಬೆ ಜೊತೆಗೆ ಕಳಲೆ ಮಾರಾಟವೂ ಕುಮಟಾದಲ್ಲಿ ನಡೆಯುತ್ತಿದ್ದು, ಒಂದು ಕಳಲೆಗೆ 100 ರೂ. ನಂತೆ ಮಾರಾಟ ವಾಗುತ್ತಲಿದೆ.

ತಾಲ್ಲೂಕಿನ ಬಡಾಳ, ಸಂತೆಗುಳಿ, ಮಾಸ್ತಿಹಳ್ಳ ಮುಂತಾದ ದಟ್ಟ ಕಾಡು ಪ್ರದೇಶದಿಂದ ಅಣಬೆ ಕಿತ್ತುಕೊಂಡು ಬಂದು ಮಾರಾಟ ಮಾಡಲಾಗುತ್ತಿದೆ. ಡಬ್ಬದಲ್ಲಿರುವ, ಕೃತವಾಗಿ
ಬೆಳೆಸಿದ ಅಣಬೆ ಮಾತ್ರ ತಿಂದ ಪಟ್ಟಣದ ಜನರು ಸಹಜವಾಗಿ ಬೆಳೆದ ಪೌಷ್ಠಿಕಾಂಶ ಹೊಂದಿರುವ ಕಾಡು ಅಣಬೆಯ ದರದ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಕೊಂಡೊಯ್ಯುತ್ತಿದ್ದಾರೆ. ಅಣಬೆಯನ್ನು ಸಾಮಾನ್ಯವಾಗಿ ಬೆಳಗಿನ ಜಾವ ಸಂಗ್ರಹಿಸುವುದರಿಂದ ಬೆಳಿಗ್ಗೆ ಎಂಟು ಗಂಟೆಗೆಲ್ಲ ಮಾರಾಟಗಾರರು ಸಿದ್ದಾಪುರ-ಕುಮಟಾ ಬಸ್ಸಿಗೆ ಅಥವಾ ಟೆಂಪೋಕ್ಕೆ ಕುಮಟಾಕ್ಕೆ ಬಂದು ಗಿಬ್ ವೃತ್ತದಲ್ಲಿ ಮಾರಾಟಕ್ಕೆ ತೊಡಗುತ್ತಾರೆ.

ಯಾವಾಗಲೂ ಹುತ್ತದಲ್ಲಿ ಏಳುವ ಅಣಬೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಅಣಬೆಗಳು ಪ್ರತಿ ವರ್ಷ ಜುಲೈ, ಆಗಸ್ಟ್‌ ತಿಂಗಳಲ್ಲಿ ಬೆಳೆಯುತ್ತಿದ್ದು, ಇದರಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುತ್ತದೆ. ಜತೆಗೆ ರುಚಿಕರವೂ ಹೌದು. ಈ ಕಾರಣಕ್ಕೆ ಜನರು ಅದನ್ನು ಮುಗಿಬಿದ್ದು ಖರೀದಿಸುತ್ತಾರೆ.

ವರ್ಷದಲ್ಲಿ ಎರಡು ತಿಂಗಳು ಮಾತ್ರ ಹುತ್ತದ ಅಣಬೆಗಳು ಸಿಗುತ್ತವೆ. ಹಂಗಾಮಿನಲ್ಲಿ ಅವು ತಾನಾಗಿಯೇ ಬೆಳೆಯುತ್ತವೆ. ಯಾವುದೇ ಆರೈಕೆ ಅಗತ್ಯವಿರುವುದಿಲ್ಲ. ಗ್ರಾಮಾಂತರ ಭಾಗದ ಎಷ್ಟೋ ಜನರು ಮಳೆಗಾಲದ ಎರಡು ತಿಂಗಳು ಇದನ್ನೇ ಹುಡುಕಿ ತಂದು ಮಾರಾಟ ಮಾಡಿ ಸಾವಿರಾರು ರುಪಾಯಿ ಸಂಪಾದನೆ ಮಾಡುತ್ತಾರೆ.

ಅಣಬೆ ಹುಡುಕುವುದು ಭಾರೀ ಕಷ್ಟ .

ಅಣಬೆ ತೆಗೆಯುವುದು ಸುಲಭದ ಕೆಲಸವಲ್ಲ. ಹುತ್ತದಲ್ಲಿ ಬೆಳೆಯುವುದರಿಂದ ಕೀಳುವಾಗ ಭಯ ಇದ್ದೇ ಇರುತ್ತದೆ. ಅಣಬೆಗೆ ಬಟ್ಟೆ ತಗುಲಿದರೆ ಮುಂದಿನ ವರ್ಷ ಆ ಜಾಗದಲ್ಲಿ ಮತ್ತೆ ಬೆಳೆಯುವುದಿಲ್ಲ ಎಂಬ ನಂಬಿಕೆಯೂ ಇದೆ. ಹೀಗಾಗಿ ಅನುಭವ ಇರುವವರು ಮಾತ್ರ ಅದನ್ನು ಕೀಳಲು ಹೋಗುತ್ತಾರೆ. ದೊಡ್ಡದಾಗಿರುವ ಹಾಗೂ ತಾಜಾ ಅಣಬೆಗೆ ಮಾರುಕಟ್ಟೆಯಲ್ಲಿ ಗರಿಷ್ಠ ದರವಿದೆ.

ಆರೋಗ್ಯಕ್ಕೆ ಉತ್ತಮ ಮಶ್ರೂಮ್‌.

ಸಾಮಾನ್ಯವಾಗಿ ಅಣಬೆಗಳು ಹೆಚ್ಚು ಪೌಷ್ಠಿಕಾಂಶ, ಪ್ರೊಟೀನ್‌ಗಳನ್ನು ಹೊಂದಿವೆ. ನಮ್ಮ ದೇಹದಲ್ಲಿ ಸೇರಿರುವ ರೋಗಾಣುಗಳ ವಿರುದ್ಧವೂ ಇವುಗಳು ಕಾರ್ಯನಿರ್ವಹಿಸುತ್ತವೆ. ಲಿವರ್‌ ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಲ್ಲಣಬೆಗಳು ರಾಮಬಾಣ. ಅಲ್ಲದೆ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌ಗಳ ಸ್ಥಿರತೆಯನ್ನೂ ಕಾಯ್ದುಕೊಳ್ಳುವ ವಿಶೇಷ ಔಷಧೀಯ ಗುಣಗಳನ್ನೂ ಇವುಗಳು ಹೊಂದಿರುತ್ತವೆ ಎನ್ನಲಾಗುತ್ತದೆ.

ವೆಜ್‌ ಕಂ ನಾನ್‌ವೆಜ್‌

ಕಲ್ಲಣಬೆಗಳು ಸಸ್ಯಹಾರಿಯೂ ಅಲ್ಲ, ಮಾಂಸಹಾರಿಯೂ ಅಲ್ಲ. ಕೆಲವೊಂದು ಮಂದಿ ಇವುಗಳನ್ನು ಆಹಾರ ಪದಾರ್ಥವಾಗಿ ಬಳಸಿದರೆ ಮಾಂಸಾಹಾರ ಸೇವನೆ ಮಾಡದ ವರ್ಗದವರು ಇದನ್ನು ಮಾಂಸಾಹಾರ ಎಂದೇ ಪರಿಗಣಿಸಿ ತಮ್ಮ ಆಹಾರ ಪಟ್ಟಿಯಿಂದ ದೂರವಿಟ್ಟಿದ್ದಾರೆ.


ನಾನು ಅಣಬೆಗಳನ್ನು ಕಿತ್ತು ತಂದು ಮಾರಾಟ ಮಾಡುತ್ತಿಲ್ಲ. ಬೇರೆಯವರಿಂದ ಪಡೆದು ತಂದು ಎಲ್ಲಿ ಮಾರಾಟ ಮಾಡುತ್ತಿದ್ದೇನೆ. ದರ ಹೆಚ್ಚಿಗೆ ಎನಿಸಿದರೂ, ವ್ಯಾಪಾರ ಜೋರಾಗಿಯೇ ಸಾಗಿದೆ -, ಅಣಬೆ ಪ್ಯಾಪರಕ್ಕೆ ಬಂದ ಮಹಿಳೆ.