muralidhar

 

ಮನುಷ್ಯನು ಬೆಂಕಿಯಲ್ಲಿ ತಾನಾಗಿ ಬೀಳಬಾರದು, ಗಾಳಿಯಂತೆ ನಗು ಹಾಗೆಯೇ ಮನುಷ್ಯ ನೀರಿನ ಗುಣದಂತೆ ಯಾವ ರೀತಿ ಇದ್ದರೆ ಜೀವನ ಸಾರ್ಥಕವಾಗುತ್ತದೆ ಎಂಬುದನ್ನು ನೋಡಿದರೆ, ನೀರಿಲ್ಲದಿದ್ದರೆ ಮನುಷ್ಯ ಜೀವಿಸಲಾರ. ಸಕಲ ಚರಾಚರಗಳಿಗೆ ನೀರು ಅತ್ಯವಶ್ಯಕ. ನೀರಿಲ್ಲದೆ ಭೂಮಿಯ ಮೇಲೆ ಬದುಕಲು ಸಾಧ್ಯವೇ ಇಲ್ಲ. ನೀರು ಅಥವಾ ದ್ರವ ಪದಾರ್ಥಗಳು ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಹರಿಯುವುದು ಅವುಗಳ ಸ್ವಾಭಾವಿಕ ಗುಣ. ಯಾವತ್ತೂ ತಗ್ಗು ಪ್ರದೇಶದಿಂದ ಎತ್ತರದ ಪ್ರದೇಶಕ್ಕೆ ನೀರು ಸ್ವಾಭಾವಿಕವಾಗಿ ಹರಿಯುವುದೇ ಇಲ್ಲ ಎಂಬುದು ಸೂರ್ಯನಷ್ಟೇ ಸತ್ಯ ಆದರೂ ನೀರನ್ನು ತಗ್ಗು ಪ್ರದೇಶದಿಂದ ಎತ್ತರದ ಪ್ರದೇಶಕ್ಕೆ ನೀರನ್ನು ಹಾಯಿಸಲು ಅನೇಕ ರೀತಿಯ ಉಪಕರಣಗಳನ್ನು ಬಳಸಿದರೆ ಮಾತ್ರ ನೀರನ್ನು ಮೇಲಕ್ಕೆ ಏರಿಸಬಹುದು ಇಲ್ಲದಿದ್ದರೆ ನೀರನ್ನು ಮೇಲೆತ್ತಲು ಸಾಧ್ಯವೇ ಇಲ್ಲ ಎನ್ನುವುದು ಸಾಮಾನ್ಯ ಸಂಗತಿ. ಅದೇ ರೀತಿ ಮಳೆಯು ಬಂದಾಗ ಮಳೆಯ ನೀರು ತಗ್ಗು ಪ್ರದೇಶಕ್ಕೆ ಜಾರಿ ಹೋಗಿ ಕೆರೆ ಕುಂಟೆಗೆ ಮತ್ತು ನದಿಗೆ ಸೇರಿ ಅದರಿಂದ ರೈತರು ಬೆಳೆಯನ್ನು ಬೆಳೆದು ಸಮಾಜಕ್ಕೆ ನೀಡುವುದು ಅವರ ಕೊಡುಗೆಯಾಗಿರುತ್ತದೆ ಹಾಗೂ ನದಿ ನೀರು ಅನೇಕ ರೀತಿಯಲ್ಲಿಯೂ ಉಪಯೋಗಕ್ಕೆ ಬರುತ್ತದೆ.

ನೀರು ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಹರಿಯುವಂತೆ ಮನುಷ್ಯನ ಮನಸ್ಸು ಎತ್ತರದಲ್ಲಿದ್ದು ಅಂದರೆ ವಿಶಾಲವಾದ ದೊಡ್ಡ ಮನಸ್ಸು ಇದ್ದು ಇಲ್ಲಿ ತಗ್ಗು ಪ್ರದೇಶ ಎಂದರೆ ಬಡವ, ಅಸಹಾಯಕ ಬಡತನಕ್ಕಿಂತ ಕೆಳಮಟ್ಟದಲ್ಲಿರುವವರು ಎಂದು ಅರ್ಥೈಸಿದರೆ, ಮನುಷ್ಯ ತನ್ನ ಮನಸ್ಸನ್ನು ದೀನರ, ಬಡವರ ಮತ್ತು ಅಸಹಾಯಕರ ಕಡೆಗೆ ಹರಿಸಿ, ಸಹಾಯ ಹಸ್ತ ಚಾಚಿದರೆ ಕಷ್ಟದಲ್ಲಿರುವವರು ಎಲ್ಲರಂತೆ ಬದುಕುವಂತಾಗುತ್ತದೆ. ಮನುಷ್ಯ ತಾನೂ ಬದುಕಿ ಇನ್ನೊಬ್ಬರನ್ನೂ ಬದುಕಿಸುವುದೇ ನಿಜವಾದ ಮಾನವೀಯತೆ ಎಂದರೆ ತಪ್ಪಾಗಲಾರದು. ನೀರು ಹಾಗೂ ದ್ರವ ಪದಾರ್ಥಗಳು ಎತ್ತರದಿಂದ ತಗ್ಗು ಪ್ರದೇಶಗಳಿಗೆ ಹರಿಯುತ್ತದೆ ಆದರೆ ನೀರು ರಭಸವಾಗಿ ಹರಿಯುವಂತೆ ಮನಸ್ಸನ್ನು ಹರಿಸಿದರೆ ಮಾತ್ರ ಅನುಕೂಲವಾಗುತ್ತದೆ. ಬೇರೆ ದ್ರವ ಪದಾರ್ಥಗಳು ಮಂದಗತಿಯಲ್ಲಿ ಹರಿಯುವಂತೆ ತಡವಾಗಿ ಸಹಾಯ ಮಾಡಿದರೆ ರೈಲು ಹೋದ ನಂತರ ಟಿಕೆಟ್ ಪಡೆದಂತೆ ಆಗುತ್ತದೆ.

RELATED ARTICLES  ಬ್ರಹ್ಮಾಂಡದೊಳಗಿನ ಜೊಳ್ಳು

ಮನುಷ್ಯ ತಾನು ವಿದ್ಯೆ ಹಾಗೂ ಐಶ್ವರ್ಯ ಹೊಂದಿ, ಕೆಳಸ್ತರದಲ್ಲಿರುವವರನ್ನು ನೋಡದೆ ತಾನು ತನ್ನ ಕುಟುಂಬದ ಯೋಗಕ್ಷೇಮವನ್ನು ಮಾತ್ರ ನೋಡುತ್ತಾ ಇದ್ದರೆ, ನಿಂತ ನೀರು ಬಿಸಿಲಿಗೆ ಒಣಗಿಹೋಗುವಂತೆ, ಅವನ ಜೀವನವೂ ಒಣಗಿ ವ್ಯರ್ಥವಾಗುತ್ತದೆ. ತಾನು ಸಂಪಾದಿಸಿದ ಐಶ್ವರ್ಯದಲ್ಲಿ ಸ್ವಲ್ಪ ಭಾಗವನ್ನು ಬೇರೆಯವರಿಗೆ ನೀಡಿ, ತಾನು ಕಲಿತಿರುವ ವಿದ್ಯೆಯನ್ನು ಬೇರೆಯವರಿಗೆ ಹೇಳಿದರೆ, ಒಳ್ಳೆಯ ಮನುಷ್ಯನಾಗಬಲ್ಲ ಹಾಗೂ ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗುವುದರಲ್ಲಿ ಸಂಶಯವೇ ಇಲ್ಲ. ಹಣ ಉಳ್ಳವರಿಗೆ ಹಣ ನೀಡುವುದು, ಹೊಟ್ಟೆ ತುಂಬಿದವರಿಗೆ ತಿನ್ನಲು ನೀಡಿದರೆ ಅದಕ್ಕೆ ಬೆಲೆ ಇರುವುದಿಲ್ಲ. ಕೊಡುವವರಿಗೂ ಬೆಲೆ ಇರುವುದಿಲ್ಲ, ತೆಗೆದುಕೊಂಡವವರೂ ಸಹ ಸ್ಮರಿಸುವುದಿಲ್ಲ. ಅಂದರೆ ಉಳ್ಳವರಿಗೆ ಸಹಾಯ ಮಾಡಲು ಅಥವಾ ಅವರ ಸೇವೆ ಮಾಡಲು ಹೋದರೆ, ಇವರ ಸಹಾಯ ಉಳ್ಳವರಿಗೆ ಅವಶ್ಯಕತೆ ಇರುವುದಿಲ್ಲ. ಅವರು ಹಣ ನೀಡಿ ಏನನ್ನಾದರೂ ಪಡೆಯುತ್ತಾರೆ. ಎಷ್ಟೇ ನಿಷ್ಟೆಯಿಂದ ಉಳ್ಳವರ ಸಹಾಯ ಮಾಡಿದರೂ ಅದು ಸಹಾಯವಾದ ಕ್ಷಣ ಮಾತ್ರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಂತರ ನೀವು ಯಾರೂ ಎನ್ನುವುದನ್ನೇ ಮರೆತುಬಿಡಬಹುದು. ಉಳ್ಳವರಿಗೆ ಸಹಾಯ ಮಾಡಲೇ ಬಾರದೆಂದಲ್ಲ ತುರ್ತು ಸನ್ನಿವೇಶಗಳಲ್ಲಿ ಸಹಾಯ ಮಾಡಿದರೂ ಹಣದಿಂದ ಅಳೆಯುವಂತಾಗಬಾರದು. ಆದರೆ ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿ ಅದರಿಂದ ಅವರ ಕಷ್ಟ ಪರಿಹಾರವಾದರೆ, ಉಪಕಾರ ಮಾಡಿದವರಿಗೆ ಕೃತಜ್ಞರಾಗಿ ಅವರಿರುವ ತನಕವಲ್ಲದೆ ಅವರ ಮಕ್ಕಳಿಗೂ ಸಹ ತಮಗೆ ಸಹಾಯ ಮಾಡಿದ ಬಗ್ಗೆ ಹೇಳಬಹುದು. ಸಹಾಯ ಮಾಡಿದವರನ್ನು ಮರೆಯುವುದು ಬಹಳ ಅಪರೂಪ ಎನ್ನಬಹುದು. ಈ ಕಾರ್ಯವನ್ನು ದೇವರೂ ಸಹ ಮೆಚ್ಚುತ್ತಾನೆ.

ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಅತಿ ಜೋರಾಗಿ ನೀರು ಹರಿದು ದೊಡ್ಡ ದೊಡ್ಡ ಜಲಪಾತಗಳಂತಾದರೆ ನೋಡಲು ಅದೆಷ್ಟು ಆನಂದವಾಗಿರುತ್ತದೆ. ಅದೇ ರೀತಿ ಮನುಷ್ಯನು ವಿಶಾಲ ಮನಸ್ಸುಳ್ಳವನಾಗಿ ಅಸಹಾಯಕರಿಗೆ ಬಡವರಿಗೆ ಸಹಾಯ ಮಾಡಿದಾಗಲೂ ಅವನ ಮನಸ್ಸು ಅಷ್ಟೇ ಸಂತೋಷವಾಗಿರುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ ಒಂದು ಆತ್ಮ ತೃಪ್ತಿ ಇರುತ್ತದೆ. “Service to humanity is service to god” ಎಂದರೆ ಮನುಷ್ಯನು ಮಾನವೀಯತೆಯಿಂದ ದೀನರ ಬಡವರ ಸೇವೆ ಮಾಡಿದರೆ ಅದು ದೇವರ ಸೇವೆ ಮಾಡಿದಂತೆ ಆಗುತ್ತದೆ. ಆ ಸೇವೆಯು ದೇವರಿಗೆ ಸಲ್ಲುತ್ತದೆ.

RELATED ARTICLES  ಅನುಕಂಪಕ್ಕಾಗಿ ಸಾಲು ಹಚ್ಚಿದವರು..

ನೀರು ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶ ಇದ್ದ ಕಡೆ ಸರಾಗವಾಗಿ ಎಲ್ಲೆಂದರಲ್ಲಿ ಹರಿಯುತ್ತದೆ ಇದನ್ನು ಸುಮ್ಮನೆ ಹರಿಯಬಿಟ್ಟರೆ ವ್ಯರ್ಥವಾಗಿ ಹೋಗುತ್ತದೆ ಇದಕ್ಕೆ ಅಡ್ಡವಾಗಿ ಅಣೆಕಟ್ಟೆಯನ್ನು ನಿರ್ಮಿಸಿ ಅವಶ್ಯವಿದ್ದಾಗ ಅದನ್ನು ಕುಡಿಯಲು ಹಾಗೂ ಬೆಳೆಗಳನ್ನು ಬೆಳೆಯಲು ಉಪಯೋಗಿಸುವಂತೆ, ಮನುಷ್ಯನು ಸಹ ವಿದ್ಯೆ ಮತ್ತು ಐಶ್ವರ್ಯ ಸಂಪಾದಿಸಿ ತನ್ನಲ್ಲಿಯೇ ಇಟ್ಟುಕೊಂಡು ಅದು ಕೆಟ್ಟ ಕೆಲಸಗಳಿಗೆ ವ್ಯರ್ಥವಾಗದಂತೆ ಅವಶ್ಯಕತೆ ಇದ್ದವರಿಗೆ ಮಾತ್ರ ಉಪಕಾರ ಮಾಡಿದರೆ, ಮನಸ್ಸಿನಲ್ಲಿ ನೆಮ್ಮದಿ ಸಂತೋಷ ಉಂಟಾಗುತ್ತದೆ. ಹಣ ವಿದ್ಯೆ ಸಂಪಾದಿಸಿದ್ದು ಸಾರ್ಥಕವಾಯಿತು ಎಂದು ಸಮಾಧಾನಪಡಬಹುದು.

ಬಹಳ ಎತ್ತರದಿಂದ ನೀರು ಹರಿಯುವುದನ್ನು ನೋಡಿ ಯಾವ ರೀತಿ ಎಲ್ಲರೂ ಸಂತಸ ಪಡುತ್ತಾರೋ ಅದೇ ರೀತಿ ಮನುಷ್ಯನು ಅಸಹಾಯಕರಿಗೆ ನೆರವಾದರೆ ಅದನ್ನು ಒಳ್ಳೆಯ ಮನಸ್ಸಿರುವವರು ನೋಡಿ ಪ್ರಶಂಸಿಸಿ ಸಂತೋಷಪಡುವುದರಲ್ಲಿ ಸಂದೇಹವೇ ಇಲ್ಲ.

ನೀರನ್ನು ಯಾವರೀತಿ ಬೇಕಾದರೂ ಉಪಯೋಗಿಸಬಹುದು. ರೆಫ್ರಿಜಿರೇಟರ್‍ನಲ್ಲಿಟ್ಟರೆ ಮಂಜಿನಂತೆ ಗಟ್ಟಿಯಾಗುವುದು. ಪಾತ್ರೆಯಲ್ಲಿ ಹಾಕಿ ಬೆಂಕಿಯ ಮೇಲೆ ಇಟ್ಟರೆ ಕುದಿಯುವುದು. ಮನುಷ್ಯನು ಯಾರ ಮೇಲೂ ಕರುಣೆ ತೋರದೆ, ಸಹಾಯ ನೀಡದೆ ಮಾನವೀಯತೆಯನ್ನು ಮರೆತು ತನ್ನ ಮನಸ್ಸನ್ನು ಮಂಜಿಗಡ್ಡೆಯಂತೆ ಗಟ್ಟಿಯಾಗಿಸಬಹುದು ಅಥವಾ ಬೇರೆಯವರ ಮೇಲೆ ದ್ವೇಷ ಸಾಧಿಸಲು ಮನಸ್ಸನ್ನು ಬಿಸಿನೀರಿನ ಹಾಗೆ ಕುದಿಸಲುಬಹುದು. ಇದರಿಂದ ಮಾನವೀಯತೆ ಇರುವುದಿಲ್ಲ ಹಾಗೂ ದ್ವೇಷ ಬೆಳೆಯುತ್ತದೆ ವಿನಃ ಶಾಂತಿ ಸಮಾಧಾನ ಎಂಬುದೇ ಇರುವುದಿಲ್ಲ. ಇದರಿಂದ ಸಮಾಜಕ್ಕೆ ಒಳಿತಾಗುವುದಿಲ್ಲ.

ಸಮುದ್ರದ ನೀರು ಸೂರ್ಯನ ಶಾಖದಿಂದ ಕಾದು ಆವಿಯಾಗಿ ಮೇಲಕ್ಕೆ ಹೋಗಿ, ಅಲ್ಲಿ ಮೋಡವಾಗಿ ನಂತರ ಮಳೆಯಾಗಿ ಎಲ್ಲಾ ಕಡೆಗೂ ಹರಿದು ಕೆರೆ ಕುಂಟೆ ನದಿಗಳು ತುಂಬಿ ಅನೇಕ ರೀತಿ ಉಪಯೋಗಕ್ಕೆ ಬರುವಂತೆ, ಮನುಷ್ಯನಾದವನು ಐಶ್ವರ್ಯ ಮತ್ತು ಜ್ಞಾನವನ್ನು ಸಂಪಾದಿಸಿ ತನ್ನ ಮನಸ್ಸನ್ನು ತನಗಿಂತ ಕೆಳಸ್ತರದಲ್ಲಿರುವ ಕಡೆಗೆ ಅಂದರೆ ಬಡವರ ಮತ್ತು ಕಷ್ಟದಲ್ಲಿರುವವರ ಕಡೆಗೆ ಹರಿಸಿ ಅನೇಕ ರೀತಿಯ ಸಹಾಯ ಮಾಡುವಂತಾದರೆ ಜೀವನ ಸಾರ್ಥಕವಾಗುತ್ತದೆ.