ಸುಮಾರು ೩೦ ವರ್ಷಗಳ ಹಿಂದಿನ ಮಾತು ಆ ದಿನಗಳಲ್ಲಿ ನಮ್ಮೂರಲ್ಲಿ ಟಿವಿ ಇರಲಿಲ್ಲ .ಆದರೆ ಯಕ್ಷಗಾನ ನಾಟಕಗಳಿಗೆ ಬರಗಾಲ ಇರಲಿಲ್ಲ.ಯುವಕ ಸಂಘಗಳ ಸದಸ್ಯರು ಸುಂದರವಾದ ನಾಟಕಗಳನ್ನು ಪ್ರದರ್ಶಿಸಿ ಜನಮನ ಸೆಳೆಯುತ್ತಿದ್ದರು.ಅಲ್ಲದೇ ಯಕ್ಷಗಾನ ಮೇಳಗಳನ್ನು ಕರೆಯಿಸಿ ಯಕ್ಷಗಾನ ಮಾಡಿಸುತ್ತಿದ್ದರು.ಆದಿನಗಳಲ್ಲಿ ಯಕ್ಷಗಾನದ ಕರಪತ್ರಗಳನ್ನು ಹೆಕ್ಕಲು ನಾವು ವಾಹನದ ಹಿಂದೆ ಓಡೋಡಿ ಹೋಗುತ್ತಿದ್ದೆವು ಈ ಸ್ಪರ್ಧೆಯಲ್ಲಿ ಬಣ್ಣಬಣ್ಣದ ಕರಪತ್ರ ಕೈಗೆ ಸಿಕ್ಕರೆ ಅದು ಹಬ್ಬವಾಗುತ್ತಿತ್ತು .ಅದನ್ನು ಮನೆಯ ಗೋಡೆಗೆ ಅಂಟಿಸಿ ಆನಂದ ಪಡುತ್ತಿದ್ದೆವು.ಅದರಲ್ಲಿ ನಟಸಾರ್ವಭೌಮ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ವಿವಿಧ ಭಂಗಿಗಳ ಭಾವಚಿತ್ರ ಜಲವಳ್ಳಿಯವರ ಖಳನಾಯಕ ಚಿತ್ರ ಆರಾಟೆಮಂಜುನಾಥ ಅವರ ಸ್ತ್ರೀ ವೇಷ ಕುಂಜಾಲು ಅವರ ಹಾಸ್ಯ ಪಾತ್ರಗಳ ಭಾವಚಿತ್ರ ಮನಕ್ಕೆ ಮುದನೀಡುತ್ತಿದ್ದವು.ಯಕ್ಷಗಾನದ ದಿನ ರಾತ್ರಿ ಆಗುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು.ಟಿಕೇಟ್ ಕೌಂಟರ್ ಮುಂದೆ ನಿಂತು ಎರಡು ರುಪಾಯಿಯ ನೆಲದ ಟಿಕೆಟ್ ತೆಗೆದುಕೊಂಡು ಮುಂದೆ ಹೋಗಿ ಗೋಣಿ ಹಾಸಿ ಕುಳಿತು ಯಕ್ಷಗಾನ ನೋಡಲು ಕುಳಿತು ಒಡ್ಡೋಲಗದ ಸನ್ನಿವೇಶ ಮುಗಿಯುವು ವೇಳೆ ನೆಲಾಸನದ ಮೇಲೆ ಒರಗುತ್ತಿದ್ದೆನು.

RELATED ARTICLES  ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಉ.ಕ. ರಾಜ್ಯ ಮಟ್ಟದ ಅಂತರ್ಜಾಲ ಭಾವಗೀತ ಸ್ಪರ್ಧೆ ೨೦೨೦

ಆಮೇಲೆ ಚಿಟ್ಟಾಣಿ ಪ್ರವೇಶ ನಾವುಡರ ಭಾಗವತಿಕೆಯವೇಳೆ ಅಪ್ಪ ಎಬ್ಬಿಸಿ ಕುಳಿಸುತ್ತಿದ್ದರು.ಆ ದಿನಗಳ ಚಿಟ್ಟಾಣಿಯ ಕೌರವ,ರುದ್ರಕೋಪ ದುಷ್ಟಬುದ್ದಿ ಮೊದಲಾದ ಪಾತ್ರಗಳು ಮನದಾಳದೊಳಗೆ ಮನೆಮಾಡುತ್ತಿದ್ದವು.

ಮಾರನೇ ದಿನವೇ ಸಂಜೆ ತೋಟದ ಅಡಕೆ ಮರಗಳ ನಡುವೆ ಸೋಗೆಯ ರಂಗಸ್ಥಳ ಸಿದ್ಧಗೊಂಡು ರಟ್ಟಿನ ಕಿರೀಟ ಸೇಡಿಯ ಬಣ್ಣ ಮುಖವನ್ನು ಅಲಂಕರಿಸಿ ಹಾಳಾದ ಬೆಲ್ಲದ ಡಬ್ಬಿಯ ಚಂಡೆಯವಾದನದ ನಡುವೆ ಮನದೊಳಗೆ ಹುದುಗಿದ ಚಿಟ್ಟಾಣಿಯ ಪಾತ್ರ ಮೈಮೇಲೆ ಬಂದು ಕಣಿಯುತ್ತಿತ್ತು.ಅಪ್ಪನ ಹುಣಸೇ ಬರ್ಲಿನ ರುಚಿಗೆ ಬಿಟ್ಟು ಹೋಗುತ್ತಿತ್ತು.

ಕಾಲ ಸರಿದಂತೆ ನನ್ನಲ್ಲಿ ಯಕ್ಷಗಾನದ ತುಡಿತ ಹೆಚ್ಚಾಗಿ ನಾನೊಬ್ಬ ಹವ್ಯಾಸಿ ಕಲಾವಿದನಾಗಿ ಚಿಟ್ಟಾಣಿಯವರು ಉಗ್ರಸೇನರಾಗಿ ಅಭಿನಯಿಸಿದ ಸಮಗ್ರ ಕಂಸ ಪ್ರಸಂಗದಲ್ಲಿ ದೂರ್ವಾಸನಾಗಿ ಅಭಿನಯಿಸುವ ಸುಯೋಗ ಒದಗಿಬಂತು.
ಅಲ್ಲದೇ ಕೆಲವರುಷಗಳ ಹಿಂದೆ ಹವ್ಯಕ ಸಭಾಭವನ ಕಮಟಾ ದಲ್ಲಿನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ನನ್ನ ತಂಡ ಭಾಗವಹಿಸಿದಾಗ ಭಹುಮಾನ ವಿತರಕರಾಗಿ ಆಗಮಿಸಿದ ಚಿಟ್ಟಾಣಿಯವರ ಎದುರು ಧರ್ಮಾಂಗದ ದಿಗ್ವಿಜಯದ ಬಲಿಯ ಪಾತ್ರದಲ್ಲಿ ನಾನು ಅಭಿನಯಿಸುವಾಗ ಎದುರಿಗೆ ಚಿಟ್ಟಾಣಿ ಉಪಸ್ಥಿತರಿದ್ದು ಬಳಿಕ ನಮ್ಮ ತಂಡ ದ್ವಿತೀಯ ಸ್ಥಾನ ಗಳಿಸಿದಾಗ ಅಭಿನಂದಿಸಿ ಬಹುಮಾನ ಪ್ರಶಸ್ತಿ ಪತ್ರನೀಡಿದ ಕ್ಷಣ ಸದಾ ನೆನಪಿರುತ್ತದೆ.

RELATED ARTICLES  ಕಳೆದುಹೋದ ಎಳೆಯ ದಿನಗಳು ( ಭಾಗ೨)

ಇಂದು ಚಿಟ್ಟಾಣಿಯವರು ನಮ್ಮನ್ನು ಅಗಲಿದ್ದಾರೆ ಎಂಬ ಕಟುಸತ್ಯವನ್ನು ಮನಸ್ಸು ಒಪ್ಪಿಕೊಳ್ಳಲು ಸಿದ್ಧವಿಲ್ಲ ಆದರೆ ಚಿಟ್ಟಾಣಿ ಎಂದಿಗೂ ಅಮರರಾಗಿರುತ್ತಾರೆ.ಮುಂದಿನ ಪೀಳಿಗೆಯ ಯಕ್ಷಗಾನ ಕಲಾವಿದರನ್ನು ಅವರು ಅದ್ರಶ್ಯರಾಗಿದ್ದೇ ಮುನ್ನಡೆಸಲಿದ್ದಾರೆ.ಪ್ರತಿಯೊಬ್ಬ ಯಕ್ಷಗಾನ ಕಲಾವಿದನೊಳಗೆ ಅಭಿಮಾನಿಯೊಳಗೆ ಈ ರಂಗಸ್ಥಳದ ರಾಜ ನರ್ತಿಸುತ್ತಾಇರುತ್ತಾನೆ.

ಚಿದಾನಂದ ಹರಿ ಭಂಡಾರಿ ಕಾಗಾಲ
೮೯೭೦೬೧೨೨೫೭