ಸಿದ್ದಾಪುರ: ತಾಲೂಕಿನ ಕೋಲಶಿರ್ಸಿ ಗ್ರಾಮ ಪಂಚಾಯತ ಎದುರಿನ ಮಾರುತಿ ನಗರ ರಸ್ತೆ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳೆಪೆಯಾಗಿದೆ. ರಸ್ತೆ ಡಾಂಬರೀಕರಣ ಪೂರ್ಣಗೊಂಡು ಮೂರೆ ದಿನಕ್ಕೆ ಎಲ್ಲವೂ ಕಿತ್ತು ಬರುತ್ತಿದೆ. ಇದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರ್ವಋತು ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಲರ್ಶಿಯ ಮಾರುತಿ ನಗರದ ಮೂಲಕವಾಗಿ ಕಾನಳ್ಳಿ, ಕಡಕೇರಿ, ತ್ಯಾರ್ಸಿ, ಮೂಲಕ ಕುಮಟಾ ರಸ್ತೆಗೆ ಸಂಪರ್ಕ ಕಲ್ಪಿಸುವ ಅತ್ಯಂತ ಮಹತ್ವದ ರಸ್ತೆಯಾಗಿದೆ. ಈ ರಸ್ತೆಯ ಮಾರುತಿ ನಗರದ ಪ್ರದೇಶದಲ್ಲಿ ಸಂಪೂರ್ಣ ಹಾಳಾಗಿ ಮಳೆಗಾಲದಲ್ಲಿ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಿತ್ತು. ಇದನ್ನು ಸರಿಪಡಿಸಿ ಸರ್ವಋತು ರಸ್ತೆಯನ್ನಾಗಿಸಬೇಕು ಎನ್ನುವುದು ಬಹುವರ್ಷದ ಬೇಡಿಕೆಯಾಗಿತ್ತು. ಅದರಂತೆ ಈ ರಸ್ತೆಯ 600 ಮೀಟರ್ ರಸ್ತೆ ಡಾಂಬಿಕರಣ ಮಾಡಲಾಗಿದೆ. ಆದರೆ ರಸ್ತೆಯ ಡಾಂಬರೀಕರಣ ನಡೆಸಿದ ಮೂರೇ ದಿನಗಳಲ್ಲಿ ಅಲ್ಲಲ್ಲಿ ರಸ್ತೆ ಕಿತ್ತು ಬರುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ಆಗಿ ಮೂರ್ನಾಲ್ಕು ದಿನದಲ್ಲಿ ಕಿತ್ತು ಬರುತ್ತಿರುವ ರಸ್ತೆಯನ್ನು ಕಂಡು ಸ್ಥಳೀಯರು ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಡಾಂಬರ್ ಮಿಕ್ಸ್ ಮಾಡದೆ ಕಾಮಗಾರಿ ಮಾಡಲಾಗಿದೆ. ಪ್ರಮಾಣದಲ್ಲೂ ದಪ್ಪ ಮಾಡದೇ ಕೇವಲ ಅರ್ದ ಇಂಚು ಹಾಕಿರುವುದರಿಂದ ರಸ್ತೆ ಕಳಪೆಯಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ರಸ್ತೆ ಹಾಕಿರುವ ಡಾಂಬರಗಳೆಲ್ಲ ಈಗಲೇ ಹಪ್ಪಳದಂತೆ ಎದ್ದು ಬರುತ್ತಿರುವುದರಿಂದ ಗುಣಮಟ್ಟದ ಕೆಲಸ ನಡೆಯದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇದರಿಂದ ಬೆಸುತ್ತಿರುವ ಸ್ಥಳೀಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದು ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನಿರ್ಮಾಣವಾಗಿರುವ ರಸ್ತೆ ಎಂದು ತಿಳಿದು ಬಂದಿದೆ. ಸಂಬoಧಪಟ್ಟ ಇಲಾಖೆಯವರು ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರ್ವಋತು ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.