muralidhar 1
ಪಂಡಿತರ ಹಾಗೂ ಧನಿಕರ ಗುಣಗಳು ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪಿನಂತೆ ಇರುವಂತೆ ವಿಂಗಡಿಸಬಹುದು ಎಂದರೆ ಪಂಡಿತರಿಗೂ ಕೊತ್ತಂಬರಿಗೂ ಏನು ಸಂಬಂಧ ಎಂದರೆ, ಅದು ಮೇಲ್ನೋಟಕ್ಕೆ ಏನೂ ಕಾಣುವುದಿಲ್ಲ ಅದನ್ನು ಪರೀಶೀಲಿಸಿ ನೋಡಿದಾಗ, ಈ ಎರಡೂ ಸೊಪ್ಪುಗಳು ಯಾವ ರೀತಿಯಲ್ಲಿ ಹೋಲಿಕೆಯಾಗುತ್ತದೆ ಎಂಬುದನ್ನು ತಿಳಿಯಬಹುದು. ಕರಿಬೇವು ಹಾಗೂ ಕೊತ್ತಂಬಿರ ಸೊಪ್ಪುಗಳು ಈ ಎರಡೂ ಸೊಪ್ಪುಗಳು ಅದ್ಭುತ ರುಚಿಯನ್ನು ಹೊಂದಿದ್ದು, ತಿಂಡಿ ಪದಾರ್ಥಗಳಿಗೆ ಅವಶ್ಯಕವಾಗಿ ಬೇಕಾಗುವ ಸೊಪ್ಪುಗಳು. ಈ ಸೊಪ್ಪುಗಳನ್ನು ತಿಂಡಿ ಅಥವಾ ಅಡುಗೆಗೆ ಹಾಕಿದರೆ ಕೊತ್ತಂಬರಿ ಸೊಪ್ಪು ತಿಂಡಿ ಅಡುಗೆಯೊಂದಿಗೆ ಬೆರೆತು ರುಚಿಯನ್ನು ನೀಡಿ, ತಿನ್ನುವವರು ತಿಂಡಿ ಅಡುಗೆಗಳಿಂದ ಬೇರ್ಪಡಿಸಲು ಆಗದಿರುವಂತೆ ಹೊಂದಿ ಕೊಂಡಿರುತ್ತದೆ. ಆದರೆ ಕರಿಬೇವಿನ ಸೊಪ್ಪು ಸಹ ರುಚಿಯಾದ ಸೊಪ್ಪು. ಇದೂ ಸಹ ಅಡುಗೆಯ ರುಚಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದು ರುಚಿಯನ್ನು ಮಾತ್ರ ಕೊಡುತ್ತದೆ. ಅದರೆ ಕೊತ್ತಂಬರಿ ಸೊಪ್ಪಿನ ತರಹ ಹೊಂದಿಕೊಳ್ಳುವುದಿಲ್ಲ. ತಿಂಡಿ ಊಟ ಮಾಡುವವರು ಈ ಸೊಪ್ಪನ್ನು ತಿಂಡಿ ಮತ್ತು ಊಟದಿಂದ ಬೇರ್ಪಡಿಸಿ ಎಸೆಯುವವರೇ ಜಾಸ್ತಿ. ಅಕಸ್ಮಾತ್ ತಿಂಡಿ ಅಡುಗೆಗಳಿಗೆ ಕರಿಬೇವಿನ ಸೊಪ್ಪು ಜಾಸ್ತಿ ಹಾಕಿದರೆ ಏಕೆ ಇಷ್ಟೊಂದು ಕರಿಬೇವಿನ ಸೊಪ್ಪನ್ನು ಹಾಕಿದ್ದಾರೆ ಎನ್ನಬಹುದು. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹಚ್ಚಿ ಎಲ್ಲಾ ಪದಾರ್ಥಗಳಿಗೆ ಹಾಕುವಂತೆ, ಕರಿಬೇವಿನ ಸೊಪ್ಪನ್ನು ಸಹ ಸಣ್ಣಗೆ ಹೆಚ್ಚಿ ಹಲವು ಬಗೆಯ ತಿಂಡಿಗಳಲ್ಲಿ ಉಪಯೋಗಿಸಿದಾಗ ಕರಿಬೇವು ಸೊಪ್ಪನ್ನು ಎಸೆಯಲು ಸಾಧ್ಯವಿಲ್ಲದೆ ಬಲವಂತವಾಗಿ ತಿನ್ನುವಂತೆ, ಅಹಂಕಾರ ಪಡುವ ಮನುಷ್ಯನೂ ಸಹ ಕೆಲವೊಮ್ಮೆ ಅನಿವಾರ್ಯವಾಗಿ ಕೆಲವರ ಬಲವಂತಕ್ಕೆ ಎಲ್ಲರ ಜೊತೆ ಬೆರೆಯುವಂತಹ ಸಂದರ್ಭ ಬರಬಹುದು.

ಇದೇ ರೀತಿ ಮನುಷ್ಯ ವಿದ್ಯೆ ಕಲಿತು ಪಂಡಿತನಾಗಿ, ಕರಿಬೇವಿನ ಸೊಪ್ಪಿನಂತಿರದೆ ಕೊತ್ತಂಬರಿ ಸೊಪ್ಪಿನಂತೆ ಎಲ್ಲರಲ್ಲೂ ಹೊಂದಿಕೊಂಡು ಜೀವನ ಸಾಗಿಸಿದರೆ, ಆಗಲೇ ಜೀವನ ಸಾರ್ಥಕ ವಾಗುತ್ತದೆ. ವಿದ್ಯೆ ಕಲಿತವರು ವಿನಯದಿಂದ ತುಂಬಿದ ಕೊಡ ತುಳುಕದಂತೆ ಇದ್ದರೆ ಎಲ್ಲರೂ ಅಂಥವರನ್ನು ಗೌರವಿಸುತ್ತಾರೆ. ಅದು ಬಿಟ್ಟು ನಾನೇ ಪಂಡಿತ ಎಂದು ಅಹಂಕಾರ ಪಟ್ಟಲ್ಲಿ ಜನಗಳು ಅಂಥವರನ್ನು ಕರಿಬೇವಿನ ಸೊಪ್ಪು ತಿಂಡಿಯಲ್ಲಿ ಸಿಕ್ಕಾಗ ಅದರ ರಸವನ್ನು ಹೀರಿಕೊಂಡು ಅದನ್ನು ಬೇರ್ಪಡಿಸಿ ಎಸೆಯುವಂತೆ, ಇವರಿಂದ ವಿದ್ಯೆಯನ್ನು ಕಲಿತು ನಂತರ ದೂರವೇ ಉಳಿಯುತ್ತಾರೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಮನುಷ್ಯನಾದವನು ವಿದ್ಯೆ ಕಲಿತು ಪಂಡಿತನಾಗಿದ್ದರೂ ಸಹ ಸಂಯಮದಿಂದ, ವಿನಯದಿಂದ ಹಾಗೂ ವಿಶ್ವಾಸದಿಂದ ಎಲ್ಲರ ಜೊತೆಯಲ್ಲಿ ಬೆರೆತು ತಿಳಿದಿರುವುದನ್ನು ಬೇರೆಯವರಿಗೆ ಕಲಿಸುತ್ತಾ ಜೊತೆ ಯಾಗಿರುವುದು ದೊಡ್ಡಗುಣ ವಾಗಿರುತ್ತದೆ. ತಾನೇ ವಿಧ್ವಾಂಸನೆಂಬ ಜಂಬವಾಗಲೀ ಅಹಂಕಾರವಾಗಲೀ ಇಲ್ಲದಿದ್ದರೆ, ಅದು ಅವರ ಒಳ್ಳೆಯ ಗುಣ ಲಕ್ಷಣಗಳನ್ನು ತೋರಿಸುತ್ತದೆ.

ಆದರೆ, ಮನುಷ್ಯನಾದವನು ವಿದ್ಯೆಯನ್ನು ಕಲಿತು ಯಾರೊಂದಿಗೂ ಬೆರೆಯದೆ ತಮಗೆ ತಿಳಿದಿದ್ದನ್ನು ಬೇರೆಯವರಿಗೂ ಸಹ ಹೇಳಿಕೊಡದೆ ಉದಾಸೀನ ಮಾಡಿ, ತಿಳಿಯದವರಿಗೆ ಸೂಕ್ತ ಮಾರ್ಗ ದರ್ಶನ ನೀಡದಿದ್ದರೆ, ವಿದ್ಯೆ ಕಲಿತರೂ ವ್ಯರ್ಥವಾದಂತೆ ಆಗುತ್ತದೆ. ವಿದ್ಯೆ ಕಲಿತ ಮನುಷ್ಯನು ತಾನು ಕಲಿತಿರುವ ಸಂದೇಶಗಳನ್ನು ಜನಗಳಿಗೆ ತಲುಪಿಸಿ, ಜನರನ್ನು ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಮಾಡಿದರೆ ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಟ್ಟಂತೆ ಆಗುತ್ತದೆ. ಅದರ ಬದಲು ಜನಪ್ರಿಯತೆ ಪಡೆಯಲು, ಎಲ್ಲಿ ದೊಡ್ಡ ದೊಡ್ಡ ಸಮಾರಂಭ ನಡೆಯುತ್ತದೆಯೋ ಅಲ್ಲಿ ಮಾತ್ರ ಹಾಜರಿದ್ದು, ತನ್ನ ಪ್ರವೀಣತೆಯನ್ನು ಬಿಂಬಿಸಲು ನೋಡಿದರೆ ಅದು ಸ್ವಾರ್ಥ ಎನಿಸಿಕೊಳ್ಳುತ್ತದೆ.

ವಿದ್ಯಂ ದದಾತಿ ವಿನಯಂ ಎನ್ನುವಂತೆ, ವಿದ್ಯೆಯು ವಿನಯವನ್ನು ಸಹ ಕಲಿಸುತ್ತದೆ. ವಿದ್ಯೆ ಜೊತೆಗೆ ವಿನಯತೆ ಇದ್ದಲ್ಲಿ ಅದೇ ಇವರ ವ್ಯಕ್ತಿತ್ವವನ್ನು ದೊಡ್ಡದು ಮಾಡುತ್ತದೆ. ವ್ಯಕ್ತಿತ್ವ ದೊಡ್ಡದಾದಂತೆ ಎಲ್ಲರೂ ಪುರಸ್ಕರಿಸುತ್ತಾರೆ. ವಿದ್ಯೆ ಇದ್ದು ವಿನಯತೆ ಇಲ್ಲದಿದ್ದ ಪಕ್ಷದಲ್ಲಿ ಎಷ್ಟೇ ವಿದ್ಯೆ ಕಲಿತಿದ್ದರೂ ಸಹ ಅಹಂಕಾರವಿದ್ದಲ್ಲಿ, ಹೊಳೆಯ ನೀರಿನಲ್ಲಿ ಹುಣಸೇ ಹಣ್ಣು ಹಿಂಡಿದಂತೆ ಆಗುತ್ತದೆ.

ವಿದ್ಯೆಯನ್ನು ಕಲಿತ ಮನುಷ್ಯನು ಸಹಮತವೇ ಜೀವನ ಎಂಬ ರೀತಿ ಬಾಳ್ವೆ ನಡೆಸಿ, ಒಂದು ಮರ ಇನ್ನೊಂದು ಮರಕ್ಕಿಂತ ದೊಡ್ಡದು ಇದೆಯೆಂದು ಭಾವಿಸಿ, ವಿದ್ಯೆಯಲ್ಲಿ ನನಗಿಂತ ಬೇರೆಯವರು ದೊಡ್ಡವರು ಇರುತ್ತಾರೆ ನಾನೇ ಎಲ್ಲರಿಗಿಂತ ದೊಡ್ಡವನಲ್ಲ ಎಂದು ತಿಳಿದಿರುವವರ ಮನಸ್ಸು ಎಲ್ಲರಿಗಿಂತಲೂ ದೊಡ್ಡದಾಗಿರುತ್ತದೆ. ವಿದ್ಯೆಯು ಸಮುದ್ರ ವಿದ್ದಂತೆ, ಎಷ್ಟು ಈಜಿದರೂ ದಡ ಸೇರುವುದಿಲ್ಲ ಅದೇ ರೀತಿ ವಿದ್ಯೆಯೂ ಸಹ ಜಗತ್ತಿನಲ್ಲಿ ಅಪಾರವಾಗಿದೆ. ಯಾರೂ ಎಲ್ಲವನ್ನೂ ಕಲಿತು ಪಂಡಿತ ಎನ್ನಿಸಿಕೊಳ್ಳುವುದಿಲ್ಲ. ಕೆಲವು ವಿಷಯದಲ್ಲಿ ಮಾತ್ರ ಪ್ರವೀಣರು ಇರಬಹುದು ಆದರೆ ಎಲ್ಲವನ್ನು ತಿಳಿದಿರುವ ವ್ಯಕ್ತಿ ಯಾರು ಇರುವುದಿಲ್ಲ. ವಿದ್ಯೆಯು ಒಂದು ದೊಡ್ಡ ಆಲದ ಮರಕ್ಕೆ ಹೋಲಿಸಬಹುದು ಅದರೆ ಹಲವಾರು ರೆಂಬೆ ಕೊಂಬೆಗಳು ಯಾವರೀತಿ ಹರಡಿರುತ್ತದೆಯೋ ಅದೇರೀತಿ ಜಗತ್ತಿನಲ್ಲಿ ಹಲವಾರು ವಿದ್ಯೆಗಳು ಇವೆ. ಅದರಲ್ಲಿ ಒಬ್ಬರು ಒಂದು ವಿದ್ಯೆಯನ್ನು ಕಲಿತು ಪ್ರವೀಣರಾಗಿರಬಹುದು. ಅನೇಕಾನೇಕ ರೆಂಬೆಗಳು ಇದ್ದಂತೆ ಅನೇಕಾನೇಕ ವಿದ್ಯೆಯು ಇದ್ದು ಎಲ್ಲವನ್ನೂ ಪರಿಪೂರ್ಣವಾಗಿ ಕಲಿತಿರುವವರು ಜಗತ್ತಿನಲ್ಲಿ ಯಾರೂ ಇರುವುದಿಲ್ಲ. ಎಲ್ಲಾ ವೃತ್ತಿಪರ ಉದ್ಯೋಗದಲ್ಲಿ ಕೆಲವೊಂದು ವಿಷಯದಲ್ಲಿ ಮಾತ್ರ ಪ್ರವೀಣನಾಗಿರಬಹುದು. ವೈದ್ಯನಾದವನಿಗೆ ವೈದ್ಯಕೀಯ ವೃತ್ತಿಯಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪ್ರವೀಣನಾಗಿರಬಹುದು. ಅದೇರೀತಿ ಇಂಜಿನಿಯರಿಂಗ್ ವಿಭಾಗದಲ್ಲೂ ಸಹ ಒಂದು ವಿಷಯಕ್ಕೆ ಪ್ರವೀಣನಾಗಿರಬಹುದು. ಇದರ ಬಗ್ಗೆ ಹೇಳಬೇಕಾದರೆ ವಕೀಲಿ ವೃತ್ತಿ ಸ್ವಲ್ಪ ಭಿನ್ನವಾಗಿರಬಹುದು, ಏಕೆಂದರೆ ಕೆಲವರು ಹಲವಾರು ವಿಷಯಗಳ ಬಗ್ಗೆ ವಾದಿಸುವವರು ಇರುತ್ತಾರೆ.

RELATED ARTICLES  ನಿಜ ಗುರು

ಮನುಷ್ಯ ಹಣವಂತನಾಗಿದ್ದು, ಯಾವುದೇ ಅಹಂಕಾರವಿಲ್ಲದೆ ಎಲ್ಲರ ಜೊತೆ ಬೆರೆತು ಅವಶ್ಯವಿದ್ದವರಿಗೆ ಉಪಕಾರವನ್ನು ಮಾಡುತ್ತಾ ದಾನ ಧರ್ಮಗಳನ್ನು ನಡೆಸುತ್ತಾ ಇರುವವರನ್ನು ಜನಗಳು ಕಾಣುವ ರೀತಿಗೂ, ಹಣವಂತರಾಗಿದ್ದುಕೊಂಡು ಎಲ್ಲರ ಜೊತೆ ಬೆರೆಯದೆ ಅಹಂಕಾರದಿಂದ ಮೆರೆಯುತ್ತಾ, ಯಾರಿಗೂ ಉಪಕಾರವನ್ನು ಮಾಡದೆ ಇದ್ದವರನ್ನು ನೋಡುವ ರೀತಿಗೂ ವಿಭಿನ್ನ ವಾಗಿರುತ್ತದೆ.

ಆದ್ದರಿಂದ ಮನುಷ್ಯನಾದವನು ಎಷ್ಟೇ ವಿದ್ಯೆ ಕಲಿತು ಪಂಡಿತನಾಗಿರಲಿ, ಅಥವಾ ಎಷ್ಟೇ ಹಣವಿದ್ದು ಧನಿಕನಾಗಿರಲೀ, ಅಹಂಕಾರ ಪಡದೆ ಎಲ್ಲರೊಂದಿಗೆ ಬೆರೆತು ಸಹಬಾಳ್ವೆಯಿಂದ ಬಾಳುವೆ ಮಾಡಿದರೆ, ಸಮಾಜದಲ್ಲಿ ಅವರ ಗೌರವವೂ ಹೆಚ್ಚುತ್ತದೆ ದೇವರೂ ಕೂಡ ಮೆಚ್ಚುತ್ತಾನೆ.