ಕುಮಟಾ : ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅವುಗಳ ದುರುಪಯೋಗ ಪಡಿಸಿಕೊಳ್ಳುತ್ತಿರುವ ದುರುಳರು, ಸಾರ್ವಜನಿಕರನ್ನು ಸುಲಿಕೆ ಮಾಡುತ್ತಿದ್ದಾರೆ. ನಕಲಿ ಫೇಸ್ಬುಕ್, ನಕಲಿ ಬ್ಯಾಂಕ್ ಖಾತೆ ಮೆಸೇಜ್, ನಕಲಿ ಫೋನ್ ಕಾಲ್ಗಳ ಮೂಲಕ ಹಣ ಎದುರಿಸುತ್ತಿದ್ದ ಹ್ಯಾಕರ್ ಗಳು ಇದೀಗ 170 ವರ್ಷಗಳ ಇತಿಹಾಸ ಹೊಂದಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹೆಸರಿನಲ್ಲಿಯೂ ವಂಚನೆಗಿಳಿದಿರುವುದು ಬೆಳಕಿಗೆ ಬಂದಿದೆ.
ನಕಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ಹೆಸರಿನಲ್ಲಿ ಮೊಬೈಲ್‍ಗಳಿಗೆ ಬಂದ ಸಂದೇಶದಿಂದ ಇದೇ ಮೊದಲ ಬಾರಿಗೆ ಕುಮಟಾದ ಶಿಕ್ಷಕರೊಬ್ಬರಿಗೆ 2,600 ರೂ. ವಂಚನೆ ಮಾಡಲಾಗಿದೆ. ಅದಷ್ಟೇ ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಅನೇಕ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿರುವ ಆತಂಕಕಾರಿ ವಿಷಯವೂ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ರಾಷ್ಟ್ರ ವ್ಯಾಪಿ ಹೆಸರುವಾಸಿಯಾಗಿರುವ ಹಾಗೂ ಉತ್ತಮ ಸೇವೆಯಿಂದಲೇ ಜನಮನ್ನಣೆ ಪಡೆದಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಿಂದ ಅಂತಹ ಸಂದೇಶ ಬರಲು ಸಾಧ್ಯವಿಲ್ಲ ಎಂದು ಜನರು ನಂಬಿದ್ದರು, ಆದರೆ ಇದೀಗ ಕುಮಟಾ, ಕಾರವಾರ, ಸಿದ್ದಾಪುರ, ಸಿರ್ಸಿ ಭಾಗದಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಇತ್ತೀಚಿನ ದಿನಗಳಲ್ಲಿ ಇಂಡಿಯಾ ಪೋಸ್ಟ್ ಹೆಸರಿನಲ್ಲಿ ಮೊಬೈಲ್‍ಗಳಿಗೆ ವಿವಿಧ ವೆಬ್ಸೈಟ್ ಲಿಂಕ್ ಗಳು, ವಾಟ್ಸಪ್, ಟೆಲಿಗ್ರಾಮ್, ಇನ್ಸ್ಟ್ರಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಣ್ಣ ಯು.ಆರ್.ಎಲ್‍ಗಳನ್ನು ಒಳಗೊಂಡಿರುವ ಇಮೇಲ್‍ಗಳು, ಎಸ್.ಎಂ.ಎಸ್ ಮೂಲಕ ಹರಿದಾಡುತ್ತಿವೆ. ಈ ಎಸ್.ಎಂ.ಎಸ್‍ನಲ್ಲಿ ಬಂದ ಸಂದೆಶದಲ್ಲಿ ತಮ್ಮ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ಶೀಘ್ರದಲ್ಲಿಯೇ ರದ್ದಾಗಲಿದ್ದು, ಕೂಡಲೇ ಪಿ.ಇ.ಎನ್, ಕೆ.ವೈ.ಸಿ ಅಪ್ಡೇಟ್ ಮಾಡಬೇಕು ಎಂಬ ಮಾಹಿತಿ ಇರುತ್ತದೆ.
ಆ ಮೆಸೇಜ್ ನ ಕೆಳಗೆ ಲಿಂಕ್ ಅನ್ನು ಸಹ ಕೊಡಲಾಗುತ್ತದೆ. ಈ ಲಿಂಕ್‍ಗಳನ್ನು ಕ್ಲಿಕ್ ಮಾಡಿದ ಕೂಡಲೇ ನಕಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುತ್ತವೆ. ಗ್ರಾಹಕರು ಹಂತಹಂತವಾಗಿ ತಮಗೆ ಬಂದ ಓ.ಟಿ.ಪಿ ನಮೂದಿಸುತ್ತಿದ್ದಂತೆ ತಾನಾಗಿಯೇ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿರುವ ಹಣ ವರ್ಗಾವಣೆಯಾಗುತ್ತಿರುವುದು ಸಾಬೀತಾಗಿದೆ.
ನಕಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ಹೆಸರಿನಲ್ಲಿ ಜಿಲ್ಲೆಯ ನಾಲ್ವರು ವಂಚನೆಗೊಳಗಾಗಿದ್ದಾರೆ. ಈ ಪೈಕಿ ಕಾರವಾರದಲ್ಲಿ ಖಾಸಗಿ ಕಾಲೇಜು ಒಂದರ ಉಪನ್ಯಾಸಕರಿಗೆ 25 ಸಾವಿರ ರೂ., ಕುಮಟಾದ ಶಿಕ್ಷಕರೊಬ್ಬರಿಗೆ 2,600 ರೂ., ಸಿರ್ಸಿಯಲ್ಲಿ 20 ಸಾವಿರ ರೂ. ಹಾಗೂ ಸಿದ್ಧಾಪುರದಲ್ಲಿ 20 ಸಾವಿರ ರೂ. ಹಣವನ್ನು ಗ್ರಾಹಕರು ತಮ್ಮ ಖಾತೆಯಿಂದ ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.
ಈ ಬಗ್ಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕುಮಟಾ ಪ್ರಧಾನ ಅಂಚೆ ಕಛೇರಿಗೆ ಆಗಮಿಸಿದ ಕಾರವಾರ ಅಂಚೆ ವಿಭಾಗದ ಅಧೀಕ್ಷಕರು, ಗ್ರಾಹಕರಿಗೆ ಅಗತ್ಯವಾದ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಜೊತೆಗೆ ಇಂತಹ ಕೃತ್ಯವನ್ನು ತಡೆಯಲು ಇಂಡಿಯಾ ಪೋಸ್ಟ್ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಗ್ರಾಹಕರು ಯಾವುದೇ ಕಾರಣಕ್ಕೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.
ಒಂದು ಕ್ಲಿಕ್ ಮೂಲಕ ಗ್ರಾಹಕರು ತಮ್ಮ ಖಾತೆಯಲ್ಲಿನ ಹಣವನ್ನು ಹ್ಯಾಕರ್‍ಗಳ ಖಾತೆಗೆ ವರ್ಗಾಯಿಸುವಂತಾಗುತ್ತಿದ್ದು, ಮೊಬೈಲ್‍ಗಳಿಗೆ ಬಂದ ಲಿಂಕ್‍ಗಳನ್ನು ಒತ್ತುವ ಮುನ್ನ ಎಚ್ಚರಿಕೆ ವಹಿಸಬೇಕಾಗಿದೆ. ಮತ್ತು ಯಾವುದೇ ನಕಲಿ ಸಂದೇಶಗಳು, ಸಂವಹನಗಳು, ಲಿಂಕ್‍ಗಳನ್ನು ನಂಬಿ ಅದಕ್ಕೆ ಪ್ರತಿಕ್ರಿಯೆ ನೀಡಬಾರದು ಎಂಬುದನ್ನು ನೆನಪಿಡಿ.
ಗ್ರಾಹಕರಿಗೆ ಖಾತೆ ಅಪ್ಡೇಟ್ ಮಾಡುವ ಯಾವುದೇ ಸಂದೇಶವನ್ನು ಕಳಿಸುವಲ್ಲಿ ಭಾರತ ಪೋಸ್ಟ್ ಭಾಗಿಯಾಗಿಲ್ಲ. ಸಾರ್ವಜನಿಕರು ಅಂತಹ ಅಧಿಸೂಚನೆಗಳು, ಸಂದೇಶಗಳು, ಇಮೇಲ್‍ಗಳನ್ನು ಸ್ವೀಕರಿಸಬಾರದು. ಯಾವುದೇ ಕಾರಣಕ್ಕೆ ಅಂತಹ ನಕಲಿ ಸಂದೇಶಗಳನ್ನು ನಂಬಬೇಡಿ, ಪ್ರತಿಕ್ರಿಯಿಸಬೇಡಿ. ಮೊಬೈಲ್ ಸಂಖ್ಯೆಗಳು, ಬ್ಯಾಂಕ್ ಖಾತೆ ವಿವರ, ಜನ್ಮ ಸ್ಥಳ, ಒಟಿಪಿ ಇತ್ಯಾದಿ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಹಂಚಿಕೊಳ್ಳಬೇಡಿ – ಧನಂಜಯ ಆಚಾರ, ಅಂಚೆ ಅಧೀಕ್ಷಕರು, ಕಾರವಾರ.
ಇಂಡಿಯನ್ ಪೋಸ್ಟ್ ಹೆಸರಿನಲ್ಲಿಯೂ ಈ ರೀತಿಯಾಗಿ ಮೋಸ ಮಾಡುತ್ತಾರೆ ಎಂಬ ಬಗ್ಗೆ ನಮಗೆ ಕಲ್ಪನೆ ಇರಲಿಲ್ಲ, ವಿಷಯ ಕೇಳಿದ ಕ್ಷಣ ನಾವು ಒಮ್ಮೆ ದಂಗಾದೆವು. ಈ ಬಗ್ಗೆ ಪೋಸ್ಟ್ ಆಫೀಸ್ ನಲ್ಲಿ ಸೂಕ್ತ ಮಾಹಿತಿ ನೀಡುತ್ತಿರುವುದು ಸೂಕ್ತವಾಗಿದೆ. – ವಿವೇಕ ಹೆಗಡೆ, ಪೋಸ್ಟ್ ಬ್ಯಾಂಕಿಂಗ್ ಗ್ರಾಹಕ.