ಭಾರತದಲ್ಲಿ ಟಾಟಾ ಮೋಟಾರ್ಸ್ ಎಲೆಟ್ರಿಕ್ ವಾಹನಗಳ ವಿಭಾಗದಲ್ಲಿ ಅಸ್ತಿತ್ವವನ್ನು ವಿಸ್ತರಿಸಿದ್ದು, ಟಿಗೋರ್ ಇವಿಯನ್ನು ಬಿಡುಗಡೆ ಮಾಡಿದೆ. ಬ್ಯಾಟರಿ ಚಾಲಿತ ಕಾಂಪಾಕ್ಟ್ ಸೆಡಾನ್ ಕಾರಿನ ಬೆಲೆ 11.99 ಲಕ್ಷದಿಂದ 13.14 ಲಕ್ಷದ ವರೆಗೆ ನಿಗದಿಯಾಗಿದ್ದು, ವೈಯಕ್ತಿಕ ವಿಭಾಗಗಳಿಗೆ ಮಂಗಳವಾರದಿಂದಲೇ ಡೆಲಿವರಿ ನೀಡುವುದು ಪ್ರಾರಂಭವಾಗಲಿದೆ.
ಸಂಸ್ಥೆಯ ಪ್ರಯಾಣಿಕ ವಾಹನ ಉದ್ಯಮ ವಿಭಾಗದ ಅಧ್ಯಕ್ಷರಾದ ಶೈಲೇಶ್ ಚಂದ್ರ ಈ ಬಗ್ಗೆ ಮಾತನಾಡಿದ್ದು, ಬ್ಯಾಟರಿ ಅಳವಡಿಕೆ ವಿಧಾನಗಳಲ್ಲಿನ ಸವಾಲುಗಳು ಕಡಿಮೆಯಾಗಿದ್ದು, ಪ್ರಯಾಣಿಕ ಸ್ನೇಹಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ. ಪ್ರಯಾಣಿಕ ಸ್ನೇಹಿ ಸೌಲಭ್ಯಗಳು ನಮ್ಮದೇ ಸಂಸ್ಥೆಯ ನೆಕ್ಸಾನ್ ಇವಿಯಿಂದ ಮೊದಲುಗೊಂಡಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇಂದು ಅತ್ಯಂತ ಜನಪ್ರಿಯ ಇವಿ ವಾಹನ ಅದಾಗಿದೆ” ಎಂದು ತಿಳಿಸಿದ್ದಾರೆ.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿದ್ಯುತ್ ಚಾಲಿತ ವಾಹನಗಳಿಗೆ ಬೆಂಬಲ ಹೆಚ್ಚುತ್ತಿದ್ದು, ಸಬ್ಸಿಡಿಗಳನ್ನು ನೀಡುತ್ತಿರುವುದು ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನಕಾರಿಯಾಗಿದೆ. ಇದರಿಂದ ನಾವು ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚು ಜನರಿಗೆ ತಲುಪಿಸಬಹುದು ಎಂದು ಶೈಲೇಶ್ ಚಂದ್ರ ತಿಳಿಸಿದ್ದಾರೆ.
“ನಾವು ಇಂದು ಟಾಟ ಟಿಗೋರ್ ಇವಿ ಲೋಕಾರ್ಪಣೆಗೊಳಿಸಲು ಉತ್ಸುಕರಾಗಿದ್ದೇವೆ. ಈ ವಾಹನ ಜಿಪ್ಟ್ರೋನ್ ಚಾಲಿತ ತಂತ್ರಜ್ಞಾನವನ್ನು ಹೊಂದಿದ್ದು, ತಂತ್ರಜ್ಞಾನದಲ್ಲಿ ಅತ್ಯಾಧುನಿಕ ಸೆಡಾನ್ ನ್ನು ಖರೀದಿಸಲು ಯತ್ನಿಸುತ್ತಿರುವವರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ” ಎಂದು ಹೇಳಿದ್ದಾರೆ.
ಪ್ರಮಾಣಿತ ಪರೀಕ್ಷಾ ಪರಿಸ್ಥಿತಿಗಳಲ್ಲಿ ಟಾಟ ಟಿಗೋರ್ ಇವಿ ಎಆರ್ ಎಐ ಪ್ರಮಾಣಿತ 306 ಕಿ.ಮೀ ನ ವ್ಯಾಪ್ತಿಯನ್ನು ಹೊಂದಿದೆ. ಗರಿಷ್ಠ 55 ಕೆ ಡಬ್ಲ್ಯು ಔಟ್ ಪುಟ್ ಹಾಗೂ ಗರಿಷ್ಠ 170 ಎನ್ಎಂ ಟಾರ್ಕ್ ಇರುವ ಟಾಟಾ ಟಿಗೋರ್ 26-ಕೆಡಬ್ಲ್ಯುಹೆಚ್ ಲಿಕ್ವಿಡ್-ಕೂಲ್ಡ್ ಹೆಚ್ಚಿನ ಶಕ್ತಿ ಸಾಂದ್ರತೆಯ ಬ್ಯಾಟರಿ ಪ್ಯಾಕ್, ಐಪಿ 67 ರೇಟ್ ಮಾಡಲಾದ ಬ್ಯಾಟರಿ ಪ್ಯಾಕ್ ಗಳನ್ನು ಹೊಂದಿದೆ.
ಟಾಟಾ ಟಿಗೋರ್ ಮೂರು ಆವೃತ್ತಿಗಳಲ್ಲಿ-XE, XM, XZ+ (XZ+ ಡ್ಯುಯಲ್ ಟೋನ್ ಆಯ್ಕೆ ಲಭ್ಯ) ಬರಲಿದ್ದು 8 ವರ್ಷಗಳು ಹಾಗೂ 160,000 ಕಿ.ಮೀ ಬ್ಯಾಟರಿ ಹಾಗೂ ಮೋಟರ್ ವಾರೆಂಟಿ ನೀಡಲಾಗುತ್ತದೆ.
ಟಾಟಾ ಸಂಸ್ಥೆಯ ಪ್ರಕಾರ ಟಿಗೋರ್ ಇವಿಯ ಪರಿಣಾಮ ನಿರೋಧಕ ಬ್ಯಾಟರಿಯ ಕವಚ ಎಐಎಸ್-048 ಗುಣಮಟ್ಟದ ಅನುಸಾರವಾಗಿದೆ. 15ಎ ಪ್ಲಗ್ ಪಾಯಿಂಟ್ ನಿಂದ ವೇಗ ಅಥವಾ ನಿಧಾನಗತಿಯ ಚಾರ್ಜಿಂಗ್ ಆಯ್ಕೆ ಲಭ್ಯವಿದೆ. ವೇಗಗತಿಯ ಚಾರ್ಜಿಂಗ್ ನ್ನು ಆಯ್ಕೆ ಮಾಡಿಕೊಂಡಲ್ಲಿ ಒಂದು ಗಂಟೆಯಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಮನೆಯ ಸಾಕೆಟ್ ನಿಂದಲೇ ಚಾರ್ಜ್ ಮಾಡಿದಲ್ಲಿ 8 ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗುತ್ತದೆ.