123 copy 1
ನಾವು ದಿನವೂ ಬದುಕಿನ ಜೊತೆ ಹೋರಾಡುತ್ತೇವೆ. ಅಲ್ಲಿಯ ಹೋರಾಟ ಕಷ್ಟ ಅಂತ ಇರುವುದಿಲ್ಲ. ಅದು ನಿತ್ಯದ ಕೆಲಸ ಎಂದು ಸಾಗುತ್ತಿರುತ್ತದೆ. ನಿತ್ಯದ ಜೊತೆ ಒಂದಿಷ್ಟು ಹೊಸ ಕೆಲಸ ಸೇರಿದರೂ ಸಹ ಅದನ್ನು ತೂಗಿಸಿನಡೆಯುತ್ತೇವೆ. ಆದರೆ ಅನಿರೀಕ್ಷತವಾಗಿ ಬಂದ ಕೆಲವು ಹೆಚ್ಚಿನ ಕಾರ್ಯವು ಅದು ಶಾಶ್ವತವಾದರೆ ಮನಸ್ಸಿಗೆ ಕಿರಿಕಿರಿ ಪ್ರಾರಂಭವಾಗುತ್ತದೆ. ಆಗ ಮನಸ್ಸು ಜರ್ಜಿತವಾಗಿ ಮುಂದೆನು ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾದುದು ಕೂಡ ಮರೆತು ಹೋಗುತ್ತದೆ. ಆಗೆಲ್ಲ ಅನಾವಶ್ಯಕವಾದ ಗೊಂದಲ ಉಂಟು ಮಾಡುವುದು.
ಮನಸ್ಸು ನಮ್ಮ ಹಿಡಿತ ತಪ್ಪಿದಾಗ ಆಗುವ ತೊಂದರೆಗಳು ನಮಗೆ ಗೊತ್ತಾಗುತ್ತಿದ್ದರೂ ಅದನ್ನೆ ಮುಂದುವರೆಸುತ್ತ ಸಾಗುತ್ತೇವೆ. ಉದಾಹರಣೆಗೆ ಸಿಟ್ಟು ಬಂದಿದೆ. ಈ ಸಿಟ್ಟಿನ ಕೈಗೆ ಬುದ್ದಿ ಕೊಟ್ಟರೆ ಆಡದ ಮಾತು ಮತ್ತು ಕೃತ್ಯಗಳು ನಡೆದು ಹೋಗುತ್ತದೆ ಎನ್ನುವುದು ಗೊತ್ತಿದೆ. ಆದರೂ ನಾವು ಸಿಟ್ಟು ಮಾಡಿಕೊಳ್ಳುತ್ತೇವೆ. ಅಂದರೆ ನಮ್ಮ ಮನಸ್ಸು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದಲ್ಲವೆ. ಅದು ತನ್ನ ಇಷ್ಟದಂತೆ ನಡೆದುಕೊಳ್ಳುತ್ತಿದೆ ಅಂತಾದರೆ ನಾವು ಬಲಹೀನರಾಗಿದ್ದೇವೆ ಅಂತ ಅರ್ಥವಲ್ಲ. ನಾವು ಒಂದಿಷ್ಟು ಮನಸ್ಸಿನ ಸ್ಥಿರತೆ ತಂದುಕೊಳ್ಳುವಲ್ಲಿ ಸೋತಿದ್ದೇವೆ ಎನ್ನಬಹುದು.
ಈಗ ಒಬ್ಬ ವ್ಯಕ್ತಿ ಸಂಸಾರ ಜಮೀನು ಮನೆ ಎಂದುಕೊಂಡು ತನ್ನ ಪಾಡಿಗೆ ತಾನು ಇದ್ದ. ಆದರೆ ಪರಿಸ್ಥಿತಿ ಅವನ ಸಹೋದರಿಯ ಸಂಸಾರದ ನೊಗ ಹೊರಬೇಕಾಗಿ ಬಂದಾಗ ಆಗ ಅವನು ಅದನ್ನು ನಿಭಾಯಿಸುವ ರೀತಿ ಇದೆಯಲ್ಲ ಅದು ಸುಲಭವಲ್ಲ. ಸಹೋದರಿ ಹೆಂಡತಿ ಮಧ್ಯ ನಡೆಯುವ ಮಾತಿನ ಚಕಮಕಿ, ಆರ್ಥಿಕ ತೊಂದರೆ, ತಂಗಿಯ ಕಷ್ಟ ಎಲ್ಲವೂ ಆತನಿಗೆ ಮನಸ್ಸು ನೋವು ಎನ್ನಿಸಿ ಖಿನ್ನತೆಗೆ ತೊಡಗುತ್ತಾನೆ. ಅವನಿಗೂ ಕೋಪ ಪ್ರಾರಂಭವಾಗುತ್ತದೆ. ಆ ಕೋಪ ಬೇರೆಯವರ ಜೊತೆ ಆ ಕೋಪದ ಪ್ರತಾಪ ತೋರಿಸುವುದಕ್ಕಿರುವುದು ಹೆಂಡತಿಯೊಬ್ಬಳೆ.
ಹೆಂಡತಿಯೊಟ್ಟಿಗೆ ಜಗಳ ಪ್ರಾರಂಭವಾಗುತ್ತದೆ. ಆ ಜಗಳವೇ ಮುಂದೆ ಇಬ್ಬರ ಮನಸ್ಸು ದೂರವಾಗತೊಡಗುತ್ತದೆ. ಅಲ್ಲಿಗೆ ಸದ್ಯದ ಪರಿಸ್ಥಿತಿಗೆ ಗಂಡ ಹೆಂಡತಿ ಜಗಳ ನಿಲ್ಲುವುದು ಡೈವರ್ಸ್ ಎನ್ನುವ ಪದಕ್ಕೆ. ಇಬ್ಬರ ಜಗಳ ಹೇಗೆ ಸಾಗುತ್ತದೆ ಎಂದರೆ ಮಾತು ಡೈವರ್ಸ್ ಕೇಳಿತ್ತು ಮನಸು ಹುಂ ಎಂದು ಹೇಳಿಬಿಟ್ಟಿತ್ತು. ಮುಂದಿನ ಆಗು ಹೋಗಿ ಬಗ್ಗೆ ಯೋಚಿಸಲೇ ಇಲ್ಲ. ಯಾವುದೋ ಸಣ್ಣ ಮನಸ್ತಾಪಕ್ಕೆ ಮನಸ್ಸು ಕೆಡಿಸಿಕೊಂಡು ಅದು ತನ್ನ ಬದುಕನ್ನೆ ನುಂಗುವ ಸ್ಥಿತಿಗೆ ಬಂದು ಬಿಟ್ಟಿತ್ತು.
ಅಂದರೆ ಮನಸ್ಸು ಸ್ಥಿಮಿತವನ್ನು ಹೇಗೆ ಕಳೆದುಕೊಳ್ಳುತ್ತದೆ ಎನ್ನುವುದು ಯಾರಿಗೂ ತಿಳೀಯದು. ಅಂದರೆ ನಾವು ಮಾಡುತ್ತಿರುವುದು ತಪ್ಪು ಎಂದು ತಿಳಿದು ಮಾಡುವುದು. ಅದಕ್ಕಾಗೆ ಈಗೀಗ ನಾಯಿ ಕೊಡೆಯಂತೆ ಒಂದು ಕೌನ್ಸಲಿಂಗ್ ಸೆಂಟರ್ ಹುಟ್ಟಿರುವುದು. ನಮ್ಮ ಮನಸ್ಸು ನಾವಾಗಿಯೇ ಹಿಡಿತ ತೆಗೆದುಕೊಳ್ಳಲು ಜಂಜಾಟಗಳ ಸರಮಾಲೆ. ಆ ಸರಮಾಲೆಯನ್ನು ಒದ್ದೊಡಿಸಲಾಗದ ನಿಸ್ಸಾಹಾಯರಾಗಿ ಆಗಬಾರದ ಘಟನೆಗೆ ನಾವೇ ನಾಂದಿ ಹಾಡಿಬಿಟ್ಟು ಮತ್ತಷ್ಟು ಗೊಂದಲಗಳಿಗೆ ಸಾಗುತ್ತೇವೆ. ಏನೇ ಆದರೂ ನಾವು ನಮ್ಮ ಮನಸ್ಸನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವಷ್ಟು ಸಾಹಸದ ಕೆಲಸ ಮತ್ತೊಂದಿಲ್ಲ ಎನ್ನಿಸುತ್ತದೆ. ನೆಮ್ಮದಿ ಬದುಕಿಗೆ ನಮ್ಮ ಮನಸ್ಸಿನ ಹಿಡಿತವೂ ಮುಖ್ಯವಾಗಿದೆ

RELATED ARTICLES  ಅನ್ಯೋನ್ಯ- ಔದಾರ್ಯ