Home SIRSI ಉತ್ತರ ಕನ್ನಡ ಜಿಲ್ಲೆಯ 6 ಶಾಸಕರೂ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಸದನದಲ್ಲಿ...

ಉತ್ತರ ಕನ್ನಡ ಜಿಲ್ಲೆಯ 6 ಶಾಸಕರೂ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಸದನದಲ್ಲಿ ಧ್ವನಿ ಎತ್ತಲೇಬೇಕು: ಅನಂತಮೂರ್ತಿ ಹೆಗಡೆ

ಶಿರಸಿ:- ನಾವು ಸರಿಯಾದ ಫೌಂಡೇಶನ್ ಇಲ್ಲದೆ ಕಟ್ಟಡ ಕಟ್ಟಿದರೆ ಏನಾಗತ್ತೋ, ಮೆಡಿಕಲ್ ಕಾಲೇಜು ಇಲ್ಲದೆ ಅಸ್ಪತ್ರೆ ಮಾಡಿದರೂ ಹಾಗೆ ಆಗುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಂದರೆ ಬರಿ ಕಟ್ಟಡ ಕಟ್ಟಿ ಯಂತ್ರೋಪಕರಣಗಳನ್ನು ಇಡುವುದಷ್ಟೇ ಅಲ್ಲ, ಡಾಕ್ಟರಗಳು ಇಲ್ಲದಿರುವ ಆಸ್ಪತ್ರೆಯಲ್ಲಿ ಕೆಲವು ಮಶೀನಗಳನ್ನು ಖರೀದಿಸಿ ಇಟ್ಟರೆ ಅದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗುವುದಿಲ್ಲ. ದಿನದ 24 ಘಂಟೆ ತುರ್ತುಚಿಕಿತ್ಸೆ, ಟ್ರಾಮಾ ಸೆಂಟರ್, ನರ, ಮೂಳೆ,ಚರ್ಮ, ಹಾರ್ಟ್, ಕಿಡ್ನಿ, ಲಿವರ್, ಕ್ಯಾನ್ಸರ್ ಎಲ್ಲ ಸ್ಪೆಷಲಿಸ್ಟ್ ಗಳೂ ಇರಬೇಕು. ಅವರು ಶಸ್ತ್ರ ಚಿಕಿತ್ಸೆ ಮಾಡುವ ಹಾಗೆ ಇರಬೇಕು, ಆಗ ಅದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗುತ್ತದೆ ಅಲ್ಲವೇ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ನಗರದ ತಹಶೀಲ್ದಾರ್ ಕಛೇರಿ ಎದುರು ಹಮ್ಮಿಕೊಂಡ ಧರಣಿ ಸತ್ಯಾಗ್ರಹದ ಕೊನೆಯ ದಿನವಾದ ಇಂದು ಭಾಗವಹಿಸಿ ಮಾತನಾಡುತ್ತಾ, ವೈದ್ಯರು ನಮಗೆ ಸಿಗಬೇಕು ಎಂದರೆ ಮೆಡಿಕಲ್ ಕಾಲೇಜು ಬೇಕೇ ಬೇಕು, ಉದಾಹರಣೆಗೆ ಮಂಗಳೂರು ಕೆ.ಎಸ್‌. ಹೆಗ್ಡೆ, ಮಣಿಪಾಲ್, ಹುಬ್ಬಳ್ಳಿ ಕಿಮ್ಸ್, ಎಲ್ಲ ಕಡೆಗೂ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒಟ್ಟಿಗೆ ಇದೆ, ಆಗ ಮಾತ್ರ ನುರಿತ 100 ಜನ ವೈದ್ಯರು ಮೆಡಿಕಲ್ ಕಾಲೇಜು ಉಪನ್ಯಾಸಕರಾಗಿ, ಅವರೇ ಅಸ್ಪತ್ರೆ ವೈದ್ಯರಾಗುತ್ತಾರೆ. ಅವರಿಗೆ ವೈದ್ಯರ ಹಾಗೂ ಉಪನ್ಯಾಸಕರಾಗಿ ಕೂಡ ಡಬಲ್ ಸಂಬಳ ಸಿಗುತ್ತದೆ, ಡಬಲ್ ಸಂಬಳ ಮತ್ತು ಹೆಚ್ಚಿನ ಅವಕಾಶ ಸಿಕ್ಕಾಗ ಮಾತ್ರ ಶಿರಸಿ, ಕುಮಟಾದಂತಹ ಚಿಕ್ಕ ಊರಿಗೆ ಸ್ಪೆಷಲಿಸ್ಟ್ ವೈದ್ಯರು ಬರುತ್ತಾರೆ (Specialist Doctors) M B B S, MD ಓದುವ ವಿದ್ಯಾರ್ಥಿಗಳು ಸೇವೆಗೆ ಸಿಗುತ್ತಾರೆ ಎಂದರು.

ಮಂಗಳೂರು ಭಾಗದಲ್ಲಿ 8 ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಇವೆ, ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಕೂಡ ಇಲ್ಲ. ಈ ವಿಷಯ ನಮಗೆ ನಾಚಿಕೆ ಆಗಬೇಕಲ್ಲವೆ? ನಮಗೂ ನೆಮ್ಮದಿಯಿಂದ ಬದುಕುವ ಹಕ್ಕಿಲ್ಲವೇ? ನಾವೇನು ಪಾಪ ಮಾಡಿದ್ದೇವೆ? ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಏಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸುತ್ತಿದೆ ಇದಕ್ಕೆ ಯಾರು ಹೊಣೆ? ಎಂದರು.

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಆರು ಜನ ಶಾಸಕರಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ. ನಾವು ಜಿಲ್ಲೆಯ ಜನ ಇದೇ ಡಿಸೆಂಬರ್ 07-12-2023ರ ಗುರುವಾರ ಬೆಳಗಾವಿಯ ಸುವರ್ಣಸೌಧದ ಹೊರಗೆ ಬಿಸಿಲಲ್ಲಿ ನಿಂತು ಹೋರಾಟ ಮಾಡುತ್ತೇವೆ. ನೀವು ಒಂದು ಸಲ ಹೊರಟ ಸ್ಥಳಕ್ಕೆ ಬರಲೇಬೇಕು ಹಾಗೂ ನೀವು ಸದನದಲ್ಲಿ ಧ್ವನಿ ಎತ್ತಲೇಬೇಕು. ಈ ಹೋರಾಟವನ್ನು ರಾಜ್ಯದ ಎಲ್ಲ ಮಾಧ್ಯಮದವರೂ, ಜಿಲ್ಲೆಯ ಜನ ನೋಡುತ್ತಿರುತ್ತಾರೆ ನೆನಪಿಡಿ ಎಂದರು.

ನವೆಂಬರ್ 2 ರಂದು ಶಿರಸಿಯಿಂದ ಕಾರವಾರದವರೆಗೆ 8 ದಿನ‌ಗಳ ಕಾಲ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈಗ ಶಿರಸಿಯಲ್ಲಿ 7 ದಿನಗಳ ಧರಣಿ ಸತ್ಯಾಗ್ರಹ ಮಾಡಿದ್ದೇವೆ, ನಮ್ಮ‌ಬೇಡಿಕೆ ಇಡೇರದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಹೊರಟ ಉಗ್ರವಾಗುತ್ತದೆ ಎಂದರು. ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬೆಳಗಾವಿ ಸುವರ್ಣಸೌಧದ ಎದುರು ಹೋರಾಟ ಮಾಡಲು ಒಂದು ಅವಕಾಶ ಸಿಕ್ಕಿದೆ, ಇದು ನಮ್ಮ ಜಿಲ್ಲೆಯ ಬೇಡಿಕೆಯನ್ನು ತಿಳಿಸಲು ಒಂದು ಅವಕಾಶ, ದಯವಿಟ್ಟು ಜಿಲ್ಲೆಯ ಜನರು ಎಲ್ಲರೂ ಬನ್ನಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದರು.

ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ಅನ್ನದಾತ ರೈತ‌ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ ಹರಿಕಾಂತ, ಸಾಮಾಜಿಕ ಕಾರ್ಯಕರ್ತ ಕೇಮು ವಂದಿಗೆ, ಸಂತೋಷ್ ನಾಯ್ಕ್ ಬ್ಯಾಗದ್ದೆ ಇನ್ನೂ 15 ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.