Home BHATKAL ಡಿಸೆಂಬರ್ 12 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ...

ಡಿಸೆಂಬರ್ 12 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ.) ಭಟ್ಕಳ ತಾಲೂಕು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹೆಬಳೆ ವಲಯ ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಹೆಬಳೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ದಿನಾಂಕ: 10-12-2023 ಭಾನುವಾರ ಗಾಂಧಿನಗರದ ಗಣೇಶ ಸಮುದಾಯ ಭವನದಲ್ಲಿ “ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ” ಕಾರ್ಯಕ್ರಮ ನಡೆಯಲಿದೆ ಎಂದು ಹೆಬಳೆ ವಲಯದ ಮೇಲ್ವಿಚಾರಕಿ ಶ್ರೀಮತಿ ಸುಶೀಲಾ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

ಈ ದಿನ ಬೆಳಿಗ್ಗೆ 7.30 ರಿಂದ ಶ್ರೀ ಸತ್ಯನಾರಾಯಣ ಪೂಜೆ, 11 ಗಂಟೆಯಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, 11.30 ರಿಂದ ಸಭಾ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ತಿಳಿಸಲಾಗಿದೆ. ಪೂಜೆ ಮಾಡಿಸುವವರು ಕಡ್ಡಾಯವಾಗಿ ಒಂದು ಹರಿವಾಣ, ಲೋಟ,ಚಮಚ ಮತ್ತು ನಾಣ್ಯದೊಂದಿಗೆ ಬೆಳಿಗ್ಗೆ 7.30ಕ್ಕೆ ಸರಿಯಾಗಿ ಗಾಂಧಿನಗರದ ಶ್ರೀ ಗಣೇಶ ಸಮುದಾಯ ಭವನದಲ್ಲಿ ಹಾಜರಿರಬೇಕೆಂದು ಸೂಚಿಸಲಾಗಿದೆ.

ಬೆಳಿಗ್ಗೆ 11.30 ಕ್ಕೆ ಆರಂಭವಾಗುವ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಾನ್ಯ ಶ್ರೀ ಮಂಕಾಳ. ಎಸ್. ವೈದ್ಯರವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಮುಕುಂದ ಮೊಗೇರ, ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದುಗ್ಗೆ ಗೌಡ, ಮಾಜಿ ಶಾಸಕರಾದ ಸುನೀಲ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ, ಹೆಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ನಾಯ್ಕ, ಜಾಲಿ ಬ್ಯಾಂಕ್ ಅಧ್ಯಕ್ಷ ಮಂಜಪ್ಪ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ವಿಶೇಷವಾಗಿ ಓಂ ಸಾಯಿ ಸಮಿತಿಯ ಭಾಸ್ಕರ ನಾಯ್ಕ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ತಾವೆಲ್ಲರೂ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರುತ್ತೇವೆ. ಹಾಗೂ ಸರ್ವರಿಗೂ ಆದರದ ಸುಸ್ವಾಗತ ಬಯಸುತ್ತೇವೆ ಎಂದು ಯೋಜನಾಧಿಕಾರಿಗಳಾದ ಶ್ರೀ ಗಣೇಶ ನಾಯ್ಕ ವಿನಂತಿಸಿ ಕೊಂಡಿದ್ದಾರೆ.