ಕುಮಟಾ : ಪಟ್ಟಣದ ಹವ್ಯಕ ಸಭಾಭವನದಲ್ಲಿ ಇಂದು ಭಾರತೀಯ ಜನತಾ ಪಾರ್ಟಿಯ ನೂತನ ಜಿಲ್ಲಾಧ್ಯಕ್ಷರಾದ ಎನ್. ಎಸ್. ಹೆಗಡೆ ಅವರ ಪದಗ್ರಹಣ ಸಮಾರಂಭವು ನಡೆಯಿತು. ಈ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಮಂಡ್ಯದ ಸ್ಥಳಿಯ ಗ್ರಾ. ಪಂ ಪರವಾನಗಿ ಪಡೆದು, ಹಿಂದುಗಳೆಲ್ಲ ಸೇರಿ ದೇಣಿಗೆಯ ಮೂಲಕ ಧ್ವಜ ಕಟ್ಟೆ ನಿರ್ಮಿಸಿ, ಅಯೋಧ್ಯೆಯ ರಾಮ ಮಂದಿರದ ಲೋಕಾರ್ಪಣೆ ದಿನದಂದು ಭಗವತ್ ಧ್ವಜವನ್ನು ಹಾರಿಸಲಾಯಿತು. ಸರಕಾರ ಪೊಲೀಸ್ ಇಲಾಖೆಯ ಮೂಲಕ ಅದನ್ನು ಕೆಳಗಿಳಿಸಲು ಸೂಚಿಸಿತು. ಜಾತಿ ಮತ ಪಂಥ ಭೇದ ಮರೆತು ಧ್ವಜ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಕುಳಿತ ಜನರ ಮೇಲೆ ಲಾಠಿ ಚಾರ್ಜ್ ಗೆ ಆದೇಶ ಹೊರಡಿಸಲಾಯಿತು ಎಂದು ಗುಡುಗುತ್ತಾ, ಈ ಚುನಾವಣೆ ರಾಮ ಭಕ್ತರು ಹಾಗೂ ಟಿಪ್ಪೂ ಭಕ್ತರ ನಡುವಿನ ಸಮರ ಎಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಕಾರವಾರ ಅಂಕೋಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಸಂತೋಷ ನಾಯ್ಕ, ಶಾಸಕ ದಿನಕರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಾಜಿ ಶಾಸಕರಾದ ಸುನೀಲ ನಾಯ್ಕ, ಸುನೀಲ ಹೆಗಡೆ, ವಿವೇಕಾನಂದ ವೈದ್ಯ, ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೊಣೆಮನೆ, ಪ್ರಮುಖರಾದ ಎಮ್,ಜಿ,ನಾಯ್ಕ, ಶಶಿಭೂಷಣ ಹೆಗಡೆ ವೇದಿಕೆಯಲ್ಲಿ ಇದ್ದರು. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಮಂಡಲಗಳ ವಿವಿಧ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.