Home HONNAVAR ಪೋಲಿಸ್ ಬಿಗಿ ಬಂದೋಬಸ್ತ ಮೂಲಕ ಸರ್ವೆಕಾರ್ಯ

ಪೋಲಿಸ್ ಬಿಗಿ ಬಂದೋಬಸ್ತ ಮೂಲಕ ಸರ್ವೆಕಾರ್ಯ

ಹೊನ್ನಾವರ: ತಾಲೂಕಿನ ಕಾಸರಕೋಡ ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಬುಧವಾರ ಹೈ ಟೈಡ್ ಲೈನ್ ಸರ್ವೆಗೆ ಮುಂದಾದ ಹಿನ್ನೆಲೆಯಲ್ಲಿ ಮೀನುಗಾರರು ಮತ್ತು ಪೋಲೀಸರ ನಡುವೆ ತಳ್ಳಾಟ ನೂಕಾಟಗಳು ನಡೆದು, ಘಟನೆಯಲ್ಲಿ 20ಕ್ಕೂ ಹೆಚ್ಚು ಮೀನುಗಾರರಿಗೆ ಮತ್ತು 6ಕ್ಕೂ ಹೆಚ್ಚು ಪೋಲಿಸರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿತ್ತು. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು 20 ಮೀನುಗಾರರ ವಿರುದ್ದ ಪ್ರಕರಣ ದಾಖಲಾಗಿದ್ದು, 18 ಜನರನ್ನು ಬಂಧಿಸಲಾಗಿತ್ತು. ಗುರುವಾರವು ಕೂಡ ಪೋಲಿಸ್ ಬಿಗಿ ಬಂದೋಬಸ್ತ ಮೂಲಕ ಸರ್ವೆಕಾರ್ಯ ನಡೆದಿದೆ.

ಕಾಸರಕೋಡ ಟೊಂಕಾಗೆ ಪ್ರೈವೇಟ್ ಬಂದರಿಗಾಗಿ ಭೂ ಪ್ರದೇಶವನ್ನು ಗುರುತಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ 11 ಗಂಟೆಯಿಂದ ಸರ್ವೇ ಕಾರ್ಯ ಪ್ರಾರಂಭವಾಗಿತ್ತು. ತಾಲೂಕಿನ ಕಾಸರಕೋಡ್ ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಬುಧವಾರ ಹೈ ಟೈಡ್ ಲೈನ್ ಸರ್ವೆಗೆ ಮುಂದಾದ ಹಿನ್ನೆಲೆ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಸಹಾಯಕ ಆಯುಕ್ತೆ ಡಾ.ನಯನಾ ಅವರ ನೇತೃತ್ವದಲ್ಲಿ ಹೈಟೈಡ್ ಲೈನ್ ಸರ್ವೆಗೆ ಸಜ್ಜಾಗಿದ್ದರು. ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಮೀನುಗಾರರು ಜಮಾವಣೆಗೊಂಡಿದ್ದರು. ಪರಿಸ್ಥಿತಿ ಉದ್ವಿಗ್ನವಾಗಿದ್ದರಿಂದ, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸಿಪಿಐ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಪೊಲೀಸ್ ನಿಯೋಜನೆಯಾಗಿತ್ತು. ಇದೇ ವೇಳೆ ಸಹಾಯಕ ಆಯುಕ್ತೆ ಡಾ.ನಯನಾ ಸರ್ವೆ ಕಾರ್ಯ ನಡೆಸಲು ಅನುವು ಮಾಡಿಕೊಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮೀನುಗಾರರರು ಅಧಿಕಾರಿಗಳ ಮಾತಿಗೆ ಜಗ್ಗದೆ ಇದ್ದಾಗ ವಾದ ವಿವಾದ ನಡೆದಿತ್ತು.