Home ANKOLA ನಾಡಿನ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕ ಅಂಬಾರಕೊಡ್ಲ ಇನ್ನಿಲ್ಲ.

ನಾಡಿನ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕ ಅಂಬಾರಕೊಡ್ಲ ಇನ್ನಿಲ್ಲ.

ಅಂಕೋಲಾ : ನಾಡಿನ ಸಶಕ್ತ ಬರಹಗಾರ, ಚಿಂತಕ, ಕವಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಅಂಬಾರ ಕೊಡ್ಲದವರಾಗಿರುವ ವಿಷ್ಣು ನಾಯ್ಕ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.

ವಿಷ್ಣು ನಾಯ್ಕ ಅವರು ಎಂ.ಎ ಪದವೀಧರರಾಗಿದ್ದು, ದಿನಕರ ದೇಸಾಯಿ ಅವರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ನಿವೃತ್ತಿಯ ನಂತರದಲ್ಲಿ ಕೆನರಾ ವೆಲಫೆರ್‌ ಟ್ರಸ್ಟ್ ನ ಟ್ರಸ್ಟಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಅವರಿಗೆ 80 ವರ್ಷ ವಯಸ್ಸಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯ ಅಂಬಾರಕೊಡ್ಲದ ನಿರಕ್ಷರಿ ಬುದವಂತಿ ಮತ್ತು ನಾಗಪ್ಪ ನಾಯ್ಕ ದಂಪತಿಯ ಮಗನಾಗಿ ಹುಟ್ಟಿ ಅಕ್ಷರ ಪ್ರಪಂಚದಲ್ಲಿ ಮಿಂಚಿ ಮರೆಯಾದರು‌.

ಕಾವ್ಯ, ನಾಟಕ, ಕಥೆ, ಕಾದಂಬರಿ, ಜಾನಪದ, ವಿಮರ್ಶೆ , ಶಿಕ್ಷಣ, ಪತ್ರಿಕೋದ್ಯಮ, ರಂಗಭೂಮಿ, ಚಳುವಳಿ, ಪ್ರಕಾಶನ..ಹೀಗೆ ಅವರು ಮನುಷ್ಯತ್ವ ಸಾರಬಹುದಾದ, ಸಾಹಿತ್ಯಕ್ಕೆ ಪೂರಕವಾದ ಎಲ್ಲ ಅವಕಾಶವವನ್ನು ಬಳಸಿಕೊಂಡರು.

ವಿಷ್ಣು ಅವರ ಪತ್ನಿ ಕವಿತಾ ನಾಯ್ಕ ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ಅವರಿಗೆ ಈರ್ವರು ಪುತ್ರಿಯರು, ಅಳಿಯಂದಿರು, ಸಹೋದರರು ಇದ್ದಾರೆ.
ಅಂತ್ಯಕ್ರಿಯೆಯನ್ನು ಇಂದು (ರವಿವಾರ) ಮುಂಜಾನೆ 11.30 ಕ್ಕೆ ವಿಷ್ಣು ನಾಯ್ಕ ಅವರ ಹುಟ್ಟೂರು ಅಂಬಾರಕೊಡ್ಲದಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳಿಂದ‌ ತಿಳಿದು ಬಂದಿದೆ.