Home Special News ಮತ್ತೆ ರದ್ದಾಯ್ತು 5,8,9 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ

ಮತ್ತೆ ರದ್ದಾಯ್ತು 5,8,9 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ

ಬೆಂಗಳೂರು : ರಾಜ್ಯಾದ್ಯಂತ ಮಂಗಳವಾರ 5,8,9 ನೇ ತರಗತಿ ಮೌಲ್ಯಾಂಕನ ಪರೀಕ್ಷೆ ನಡೆದ ನಂತರ 5,8,9 ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ರದ್ದು ಪಡಿಸಬೇಕೆಂದು ಕೋರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ತಡೆ ನೀಡಿರುವುದಾಗಿ ವರದಿಯಾಗಿದೆ. ನ್ಯಾಯಮೂರ್ತಿಗಳಾದ ಬೆಲಾ ಎಂ ತ್ರಿವೇದಿ ಮತ್ತು ಪಂಕಜ್‌ ಮಿಥಾಲ್‌ ಅವರನ್ನು ಒಳಗೊಂಡ ಪೀಠ 5,8,9 ನೇ ತರಗತಿಗಳಿಗೆ ಕರ್ನಾಟಕ ಸರಕಾರ ಬೋರ್ಡ್‌ ಪರೀಕ್ಷೆಗಳನ್ನು ನಡೆಸದಂತೆ ತಡೆ ನೀಡಿರುವ ಕುರಿತು ವರದಿಯಾಗಿದೆ.

ಬೋರ್ಡ್‌ ಪರೀಕ್ಷೆ ಕುರಿತು ರಾಜ್ಯ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಮೌಲ್ಯಾಂಕನ ಪರೀಕ್ಷೆ ರದ್ದು ಪಡಿಸಿ ಆದೇಶವನ್ನು ಈ ಮೊದಲು ನೀಡಿತ್ತು. ನಂತರ ಹೈಕೋರ್ಟ್‌ ದ್ವಿಸದಸ್ಯ ಪೀಠ ಪರೀಕ್ಷೆಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಹೈಕೋರ್ಟ್‌ ದ್ವಿಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಇದೀಗ ಸುಪ್ರೀ ಕೋರ್ಟ್‌ ಆದೇಶ ನೀಡಿದ್ದು, 5.8,9 ನೇ ತರಗತಿಯ ಬೋರ್ಡ್‌ ಪರೀಕ್ಷೆಗಳನ್ನು ಶಿಕ್ಷಣ ಇಲಾಖೆ ಮುಂದೂಡಿದೆ.

5,8,9 ನೇ ತರಗತಿ ಪರೀಕ್ಷೆ ನಡೆಸಲು ತಡೆ ನೀಡಿದ ಕಾರಣ ಈಗಾಗಲೇ ನಡೆಯುತ್ತಿರುವ ಪರೀಕ್ಷೆಯನ್ನು ಶಾಲಾ ಶಿಕ್ಷಣ ಇಲಾಖೆ ಮುಂದೂಡಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಕಾವೇರಿ ಅವರು ಪರೀಕ್ಷೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಮಕ್ಕಳು ಪ್ರಥಮ ಭಾಷೆ ಮತ್ತು ದ್ವಿತೀಯ ಭಾಷೆ ಪರೀಕ್ಷೆಗಳನ್ನು ಬರೆದಿರುವ ಕಾರಣ, ಈ ಹಂತದಲ್ಲಿ ಪರೀಕ್ಷೆಗೆ ತಡೆ ಉಂಟಾಗಿದ್ದು, ಮುಂದೇನು ಎಂಬ ಗೊಂದಲ ಪೋಷಕರು, ವಿದ್ಯಾರ್ಥಿಗಳಲ್ಲಿ ಮೂಡಿದೆ.