ಶಿರಸಿ : ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಶಿವರಾಮ ಹೆಬ್ಬಾರ ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಸಿದ್ಧತೆ ನಡೆಸಿದ್ದು, ಯುಗಾದಿ ನಂತರ ಕಾಂಗ್ರೆಸ್ಸಿಗೆ ಸೇರುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಸ್ವತಃ ಶಿವರಾಮ ಹೆಬ್ಬಾರ ಮಂಗಳವಾರ ನಗರದಲ್ಲಿ ಬನವಾಸಿ ಹೋಬಳಿಯ ಎಲ್ಲ ಗ್ರಾಮ ಪಂಚಾಯತ ವ್ಯಾಪ್ತಿಗಳ ಬೆಂಬಲಿಗರ ಸಭೆ ನಡೆಸಿರುವುದು ಅವರು ಕಾಂಗ್ರೆಸ್ಸಿಗೆ ಸೇರುತ್ತಾರೆ ಎಂಬುದಕ್ಕೆ ಪುಷ್ಟಿ ನೀಡುವಂತಿದೆ. ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯ ತಮ್ಮ ಪ್ರಮುಖ ಬೆಂಬಲಿಗರ ಸಭೆ ಪ್ರತ್ಯೇಕವಾಗಿನಡೆಸಿದ್ದು, ಕಾಂಗ್ರೆಸ್ ಸೇರ್ಪಡೆ ನಿಟ್ಟಿನಲ್ಲಿ ಸಲಹೆ ಸೂಚನೆ ಪಡೆಯಲಾಗಿದೆ ಎನ್ನಲಾಗಿದೆ.
ಶಿರಸಿ ತಾಲೂಕಿನ ಬನವಾಸಿ ಹೋಬಳಿ ಸುಮಾರು ೧೦ ಗ್ರಾಮ ಪಂಚಾಯತಗಳು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ. ಪ್ರತಿ ಗ್ರಾಪಂ ವ್ಯಾಪ್ತಿಯಿಂದ ಸುಮಾರು ೩೦ಕ್ಕೂ ಹೆಚ್ಚು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದ್ದು, ಐದು ತಾಸುಗಳ ಕಾಲ ಸಭೆ ನಡೆದಿದೆ. ಬೆಂಬಲಿಗರ ಸಭೆಯಲ್ಲಿ ಪುತ್ರ ವಿವೇಕ ಹೆಬ್ಬಾರ ಸಹ ಹಾಜರಿದ್ದರು ಎಂದು ಗೊತ್ತಾಗಿದೆ.
ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಶಿವರಾಮ ಹೆಬ್ಬಾರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದರೂ ಈಗ ಸೇರ್ಪಡೆಯಾಗುವುದಿಲ್ಲ ಎಂದು ಗೊತ್ತಾಗಿದೆ. ಈ ಬಗ್ಗೆ ಬೆಂಬಲಿಗರಿಗೂ ಈ ಬಗ್ಗೆ ವಿಷಯ ಮನವರಿಕೆ ಮಾಡಲಾಗಿದೆ. ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರುವುದರಿಂದ ಅವರಿಗೆ ತಾಂತ್ರಿಕ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಸದ್ಯ ಸೇರ್ಪಡೆಯಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ತಾವು ನಿರ್ಧಾರ ತೆಗೆದುಕೊಳ್ಳುವ ಮೊದಲು ಲೋಕಸಭಾ ಚುನಾವಣೆ ವೇಳೆ ತಮ್ಮ ಬೆಂಬಲಿಗರನ್ನು ಮೊದಲ ಹಂತದಲ್ಲಿ ಕಾಂಗ್ರೆಸ್ಸಿಗೆ ಸೇರ್ಪಡೆ ಮಾಡಿಸಲು ತಯಾರಿ ನಡೆಸುತ್ತಿದ್ದು, ಅದರ ಪೂರ್ವಭಾವಿಯಾಗಿ ಈ ಸಭೆ ನಡೆದಿದೆ ಎನ್ನಲಾಗಿದೆ.