Home Information ಏಪ್ರಿಲ್ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ?

ಏಪ್ರಿಲ್ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ?

ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಬೇಗನೆ ಪ್ರಕಟವಾಗುವ ಸಾಧ್ಯತೆ ಇದೆ.
ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದ್ದು, ಇದೇ ಏಪ್ರಿಲ್‌ 10ಕ್ಕೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಯಾರಿ ನಡೆಸಿದೆ ಎಂದು ಹೇಳಲಾಗಿದೆ. ರಾಜ್ಯದ 1,124 ಕೇಂದ್ರಗಳಲ್ಲಿ ಮಾರ್ಚ್‌ 1ರಿಂದ 22ರ ವರೆಗೆ ಪರೀಕ್ಷೆಗಳು ನಡೆದಿದ್ದವು. ಹೆಸರು ನೋಂದಾಯಿಸಿಕೊಂಡಿದ್ದ 6.98 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ 98ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

2024–25ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲು ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಿ, ಫಲಿತಾಂಶ ನೀಡಬೇಕಿರುವುದರಿಂದ ಆಯಾ ವಿಷಯಗಳ ಪರೀಕ್ಷೆ ಮುಕ್ತಾಯವಾದ ತಕ್ಷಣವೇ ಮೌಲ್ಯಮಾಪನ ಕಾರ್ಯ ಆರಂಭಿಸಲಾಗಿತ್ತು. ಸರ್ಕಾರಿ, ಅನುದಾನಿತ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳ 40 ಸಾವಿರಕ್ಕೂ ಹೆಚ್ಚು ಉಪನ್ಯಾಸಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಕಲಾ, ವಾಣಿಜ್ಯ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾಗಿದೆ. ಬೆಂಗಳೂರು ಕೇಂದ್ರಗಳಲ್ಲಿ ನಡೆಯುತ್ತಿರುವ ವಿಜ್ಞಾನ ವಿಷಯಗಳ ಮೌಲ್ಯಮಾಪನ ಏಪ್ರಿಲ್‌ 5ರ ಒಳಗೆ ಪೂರ್ಣಗೊಳ್ಳಲಿದೆ. ಹೀಗಾಗಿ ಎಲ್ಲ ಅಂದುಕೊಂಡಂತೆ ನಡೆದರೆ ಏಪ್ರಿಲ್‌ 10ಕ್ಕೆ ಅಥವಾ ಏಪ್ರಿಲ್‌ ಎರಡನೇ ವಾರ ಫಲಿತಾಂಶ ಪ್ರಕಟಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.