Home KUMTA ಕುಮಟಾದಲ್ಲಿ ವೈಭವದ ಯುಗಾದಿ ಉತ್ಸವ ಆಚರಣೆಗೆ ಸಕಲ‌ ಸಿದ್ಧತೆ.

ಕುಮಟಾದಲ್ಲಿ ವೈಭವದ ಯುಗಾದಿ ಉತ್ಸವ ಆಚರಣೆಗೆ ಸಕಲ‌ ಸಿದ್ಧತೆ.

ಕುಮಟಾ : ಯುವ ಜನತೆಯೂ ಸೇರಿದಂತೆ ಸಾರ್ವಜನಿಕರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದೊಂದಿಂದ ಕಳೆದ ೧೫ ವರ್ಷದಿಂದ‌ ಅನೂಚಾನವಾಗಿ ಅತ್ಯಂತ ವಿಜೃಂಭಣೆಯಿಂದ ನಡೆಸಿಕೊಂಡು ಬಂದಿರುವ ಯುಗಾದಿ ಉತ್ಸವನ್ನು  ಈ ವರ್ಷವು ಅದೇ ರೀತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಏ.೯ ರಂದು ನಡೆಸಲು ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಕುಮಟಾ ಯುಗಾದಿ ಉತ್ಸವ ಸಮಿತಿ  ಅಧ್ಯಕ್ಷ ಡಾ. ಸುರೇಶ ಹೆಗಡೆ ಹೇಳಿದರು.

ಅವರು ಇಲ್ಲಿನ ಖಾಸಗಿ ಹೊಟೆಲ್ ಒಂದರಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಯುಗಾದಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಮಾಡಿ, ಈ ಕುರಿತು ವಿವರ ನೀಡಿದರು. 

ಕುಮಟಾ ತಾಲೂಕು ಹಾಗೂ ಸುತ್ತಲ ಅನೇಕ ಸಮೂದಾಯದವರ ಸಹಕಾರ ಹಾಗೂ ಪಾಲ್ಗೊಳ್ಳುವಿಕೆಯಲ್ಲಿ ಇಷ್ಟು ವರ್ಷ  ಯುಗಾದಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಪ್ರತಿವರ್ಷ ಬೇರೆ ಬೇರೆ ಸಮೂದಾಯದ ಗುರುಗಳ ಉಪಸ್ಥಿತಿಯಲ್ಲಿ ಯುಗಾದಿ ಉತ್ಸವ ಕಾರ್ಯಕ್ರಮ ನಡೆಸುತ್ತಿದ್ದೆವು. ಈ ಬಾರಿ ಈ ಉತ್ಸವವು ಆಯುರ್ವೇದ ತಜ್ಞರು ಹಾಗೂ ಚಿಕಿತ್ಸಕ ಧಾರವಾಡ ಮನಗುಂಡಿಯ ಶ್ರೀ ಗುರು ಬಸವ ಮಹಾಮನೆ ಚನ್ನಯ್ಯಗಿರಿಯ ಶ್ರೀ ಬಸವಾನಂದ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಏ.೯ ರಂದು ಸಂಜೆ ೭ ಗಂಟೆಗೆ ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ  ಎಂದರು.

ಉತ್ಸವದ ಅಂಗವಾಗಿ ಮಧ್ಯಾಹ್ನ ೪ ಗಂಟೆಗೆ ವೈವಿಧ್ಯಮಯ ಸ್ತಬ್ದಚಿತ್ರಗಳೊಂದಿಗಿನ ಬೃಹತ್ ಶೋಭಾಯಾತ್ರೆಯು ದೇವರಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಹೊರಟು ಸುಭಾಸ ರಸ್ತೆ, ಮೂರುಕಟ್ಟೆ, ಕುಂಭೇಶ್ವರ ರಸ್ತೆ, ನೆಲ್ಲಿಕೇರಿ ಬಸ್‌ಸ್ಟಾಂಡ್, ಮಹಾಸತಿ ದೇವಸ್ಥಾನದ ಮಾರ್ಗವಾಗಿ ಸಾಗಿದ್ದು, ನಂತರ ಮಹಾತ್ಮಾ ಗಾಂಧಿ ಕ್ರೀಡಾಂಗಣ ತಲುಪಿ ಸಭಾ ಕಾರ್ಯಕ್ರಮ ನಡೆಯಲಿದೆ. ಶೋಭಾಯಾತ್ರೆ ಸಾಗುವ ಮಾರ್ಗವನ್ನು ತಳಿರುತೋರಣ ಸಿಂಗರಿಸುವ ಜೊತೆಗೆ ತಮ್ಮ ಮನೆಯ ಎದುರು ರಂಗೋಲಿ ಹಾಕಿ ಸಾರ್ವಜನಿಕರು ಸ್ವಾಗತಿಸಿ ಈ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಡಾ. ಸುರೇಶ ಹೆಗಡೆ ಕರೆ ನೀಡಿದರು.

ಉತ್ಸವ ಸಮಿತಿ ಸಂಚಾಲಕ ಮುರಳೀಧರ ಪ್ರಭು ಮಾತನಾಡಿ, ಈ ಯುಗಾದಿಯ ಆಚರಣೆ ಯುವಕರಿಗೆ ದೇಶಕಟ್ಟುವ ಕಾರ್ಯಕ್ಕೆ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ಭಾರತೀಯ ಸಂಸ್ಕೃತಿಯ ಪುನರುತ್ಥಾನ ಕಾಲದಲ್ಲಿ ನಾವಿರುವ ಸಂದರ್ಭದಲ್ಲಿ ನಾವು ನಡೆಸುತ್ತಿರುವ ಯುಗಾದಿ ಉತ್ಸವ ಮಹತ್ವದ್ದು ಎನಿಸಿದೆ. ಉತ್ಸವದ ಅಂಗವಾಗಿ ಈಗಾಗಲೆ ನಾವು ನಾವು ಗುರಿತಿಸಿರುವ ೩೨ ಸಮಾಜದ ಹಿರಿಯರನ್ನು ಭೇಟಿ ಮಾಡಿ ಈ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡಿದ್ದೇವೆ. ನಮ್ಮ ಸಮಿತಿ ಕೇವಲ ಯುಗಾದಿ ಉತ್ಸವಕಷ್ಟೇ ಸೀಮಿತಿವಾಗಿರದೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಸಹ ನಡೆಸಿಕೊಂಡು ಬಂದಿದ್ದೇವೆ. ಸುಸಜ್ಜಿತವಾದ ಹಿಂದೂ ರುದ್ರಭೂಮಿ ನಿಮಿಸಬೇಕು ಎಂಬುದು ಸಮಿತಿಯ ಕನಸಾಗಿದ್ದು, ಈ ಕನಸು ಇಡೇರುವ ಕಾಲ ಸನ್ನಿತವಾಗಿದ್ದು, ಇದಕ್ಕಾಗಿ ಟ್ರಸ್ಟ್ ಒಂದನ್ನು ಸ್ಥಾಪಿಸಲು ಈಗ ಹೆಜ್ಜೆ ಇಟ್ಟಿದ್ದೇವೆ ಎಂದರು.

ಸಮಿತಿಯ ಖಜಾಂಜಿ ಜಿ.ಎಸ್.ಹೆಗಡೆ ಮಾತನಾಡಿ, ಈ ಸಲದ ಯುಗಾದಿ ಉತ್ಸವದ ಅಂಗವಾಗಿ ಏ.೬ ರಂದು ಮಧ್ಯಾಹ್ನ ೩ ಗಂಟೆಯಿಂದ ನೆಲ್ಲಿಕೇರಿ ಮಹಾಸತಿ ದೇವಸ್ಥಾನದ ಸಭಾಗೃಹದಲ್ಲಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಏರ್ಪಡಿಸಿದ್ದೆವೆ. ಏ.೮ ರಂದು ಹವ್ಯಕ ಕಲ್ಯಾಣಮಂಟಪದಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ವಾಗ್ಮಿ ಕು. ಹಾರಿಕಾ ಮಂಜುನಾಥ, ಬೆಂಗಳೂರು ಇವರು ಉಪನ್ಯಾಸ ನೀಡಲಿದ್ದಾರೆ. ಏ.೯ ರಂದು ಸಂಜೆ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಯುಗಾದಿ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಪಂಚಾಂಗ ಶ್ರವಣ, ಬೇವು-ಬೆಲ್ಲ ವಿತರಣೆ, ಮಾತಾ-ಪಿತೃ ಪೂಜೆ, ಸಾಧಕರಿಗೆ ಸನ್ಮಾನ, ಶ್ರೀಗಳಿಂದ ಆಶೀರ್ವಚನದ ನಂತರ ಒಂದುವರೆ ತಾಸುಗಳ ಕಾಲ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. 

ಹಲವು ಸದುದ್ದೇಶದೊಂದಿಗೆ ನಾವು ನಡೆಸುತ್ತಿರುವ ಯುಗಾದಿ ಉತ್ಸವಕ್ಕಾಗಿ ಅನೇಕ ದಾನಿಗಳು ದೇಣಿಗೆ ನೀಡುತ್ತಿದ್ದಾರೆ. ಈ ರೀತಿ ಸಂಗ್ರಹವಾದ ಹಣದಲ್ಲಿ ಉತ್ಸವದ ಜೊತೆಗೆ ನಮ್ಮ ಭಾಗದಲ್ಲಿರುವ ಕೆರೆ ಅಭಿವೃದ್ದಿಪಡಿಸುವ ಹಾಗು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ ಎಂದು ಜಿ.ಎಸ್.ಹೆಗಡೆ ವಿವರಿಸಿದರು. 

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಸುಬ್ರಾಯ ನಾಯ್ಕ, ಉಪಾಧ್ಯಕ್ಷೆ ಸುಮಾ ಪ್ರಭು, ಸಮಿತಿಯ ಪದಾಧಿಕಾರಿಗಳಾದ ಎಂ.ಟಿ.ಗೌಡ, ಎಸ್.ವಿ.ಹೆಗಡೆ, ಎಂ.ಆರ್.ಭಟ್ಟ, ರೋಹಿದಾಸ ಗಾವಡಿ, ಶೀತಲ ಭಂಡಾರಿ, ಪೂರ್ಣಿಮಾ ಕಾಮತ ಉಪಸ್ಥಿತರಿದ್ದರು.