ಭಾಗವತಿಕೆಯ ಘನತೆಯನ್ನು ಎತ್ತರಿಸಿದ ಗಾನಗಾರುಡಿಗ ಧಾರೇಶ್ವರ ಯಕ್ಷಗಾನ ರಂಗಭೂಮಿಯು ಹಿಂದೆ ಕಂಡಿರದ-ಮುಂದೆ ಕಂಡೀತೆಂಬ ಭರವಸೆಯನ್ನು ತಳೆಯಲಾಗದ ಪ್ರತಿಭೆ,ಪ್ರಯತ್ನ ಹಾಗೂ ಪ್ರಯೋಗಗಳ ಮುಪ್ಪರಿಕೆಯಿಂದಾಗಿ ಸ್ವಂತಿಕೆಯ ಅನನ್ಯತೆಯಿಂದಾಗಿ ಇತಿಹಾಸವಾದ ವಿರಳಾತಿ ವಿರಳರಲ್ಲಿ ಸುಬ್ರಹ್ಮಣ್ಯ ಧಾರೇಶ್ವರರನ್ನು ಹೆಸರಿಸದಿದ್ದಲ್ಲಿ ನಿಜಕ್ಕೂ ಅದು ಸಾಂಸ್ಕೃತಿಕವಾದ ಅಪಚಾರವೇ ಹೌದು. ಯಕ್ಷಗಾನದಲ್ಲಿ ಸರ್ವಕಾಲೀನವಾಗಿ ಭಾಗವತನೇ ಪ್ರಧಾನವೆಂಬುದು ಸತ್ಯವೇ ಆಗಿದ್ದರೂ,ಅದನ್ನು ಶತಸತ್ಯವನ್ನಾಗಿಸಿದವರು ರಸರಾಗ ಚಕ್ರವರ್ತಿ ಎನಿಸಿದ್ದ ಕೀರ್ತಿಶೇಷ ಜಿ. ಆರ್. ಕಾಳಿಂಗ ನಾವುಡರು. ಅವರ ಸಮಕಾಲೀನರಾದ ಧಾರೇಶ್ವರರು ಸಹ ತಮ್ಮ ವೈಖರಿಯಿಂದ ಭಾಗವತನ ಸ್ಥಾನಮಾನದ ಘನತೆಯನ್ನು ಎತ್ತರಿಸಿದವರು. ಭಾಗವತನೇ ಅಕ್ಷರಶ: ಮೊದಲನೇ ವೇಷದಾರಿ ಎಂಬ ಶಾಸ್ತ್ರೀಯವಾದ ಪರಿಕಲ್ಪನೆಯೊಂದಿಗೆ ರಂಗದಲ್ಲಿ ಹಾಸ್ಯಗಾರಿಕೆಗೆ ಜೀವವನ್ನು ತುಂಬುವಲ್ಲಿ ಸಹ ವಿದೂ ಷಕರಾಗಿಯೂ ಇದ್ದವರು. ಧಾರೇಶ್ವರರ ಯಕ್ಷಯಾನದಲ್ಲಿ ಅವರಿಗೆ ಕೌಟುಂಬಿಕವಾದ ಯಕ್ಷಗಾನದ ಪರಂಪರೆಯೇನೂ ಇದ್ದಂತಿಲ್ಲ.ಅವರು ಮೂಲತಃ ನಾಟಕ ರಂಗಭೂಮಿಯ ನಂಟಿನೊಂದಿಗೆ ಯಕ್ಷಗಾನಕ್ಕೆ ಆಕಸ್ಮಿಕವಾಗಿ ಬಂದವರು.

“ನನ್ನ ಬದುಕೇ ಉಪ್ಪೂರರು” ಎಂದು ಎದೆದುಂಬಿ ಉದ್ಘಿಸುವ ಅವರಿಗೆ ಮಹಾನ್ ಗುರುವಿನ ಪಾಠ, ಮದ್ದಳೆಯ ಮಾಂತ್ರಿಕ ದುರ್ಗಪ್ಪ ಗುಡಿಗಾರರ ಒಡನಾಟ ಹಾಗೂ ಸಹಪಾಠಿಯಾಗಿದ್ದ ನಾವುಡರ ಪ್ರಭಾವದೊಂದಿಗೆಯೇ ನಟ ಸಾಮ್ರಾಟ ಚಿಟ್ಟಾಣಿಯವರ ಸಕಾಶವೇ ಹೆಮ್ಮರವಾಗಿ ಬೆಳೆಸಿದ್ದು ಸುಳ್ಳಲ್ಲ. ಅಳಿದು ಮೂರು ದಶಕಗಳೇ ಕಳೆದರೂ ಯಕ್ಷರಾಧಕರ ಅಂತರಂಗದಲ್ಲಿ ಜೀವಂತವಾಗುಳಿದ ಕಾಳಿಂಗ ನಾವುಡರ ಅಬ್ಬರದ ಕಾಲಘಟ್ಟದಲ್ಲೂ ತನ್ನದಾದ ವಿಶೇಷತೆಯಿಂದ ಬೆಳಕುಗೊಂಡು- ಬೆರಗುಗೊಳಿಸುತ್ತಿದ್ದ ಧಾರೇಶ್ವರರ ಬಲುಮೆಯೇನು ಸಾಮಾನ್ಯವಲ್ಲ. ಧಾರೇಶ್ವರರು ಕರಾವಳಿಯ ಕೋಗಿಲೆ ಎಂಬ ಅಭಿದಾನಕ್ಕೆ ಪಾತ್ರರಾದವರು. ಅವರ ಧ್ವನಿಗೆ ಯಕ್ಷಲೋಕಕ್ಕೆ ಹೊರತಾದವರು ಮಣಿಯಲೇ ಬೇಕು.ಅವರ ಕಂಠದಲ್ಲಿಯ ಮಾಧುರ್ಯಕ್ಕೆ ಯಾರೂ ಸೋಲಲೇ ಬೇಕು. ಅವರ ಭಾವ ತುಂಬಿದ ವೈವಿಧ್ಯಮಯವಾದ ನವ-ನವ್ಯವಾದ ರಾಗಗಳ ಪ್ರಯೋಗಕ್ಕೆ ಶರಣೆನ್ನಲೇ ಬೇಕು. ಸಾಹಿತ್ಯದ ಸ್ಪಷ್ಟತೆಗೆ ಅವರಿಗವರೇ ಸಾಟಿ. ಅವರ ಪುರಾಣ ಪ್ರಜ್ಞೆ, ಪ್ರಸಂಗ ಪ್ರಜ್ಞೆ,ಪಾತ್ರಪ್ರಜ್ಞೆ,ರಂಗಪ್ರಜ್ಞೆ, ರಸಪ್ರಜ್ಞೆ,ಸ್ಥಳ ಪ್ರಜ್ಞೆ ಹಾಗೂ ಕಾಲಪ್ರಜ್ಞೆಗಳೆಲ್ಲ ಅಸಮಾನ್ಯವಾದವುಗಳು. ಚಂಡೆ- ಮದ್ದಳೆಯವರನ್ನು ತನ್ನೊಂದಿಗೆ ಸಶಕ್ತವಾಗಿ ಬಳಸಿಕೊಂಡು ವೇಷದಾರಿಯ ಸಾಮರ್ಥ್ಯವನ್ನು ಗರಿಷ್ಠ ಮಟ್ಟದಲ್ಲಿ ತೆರೆದಿಡುವ ಚಾಕಚಕ್ಯತೆಯನ್ನು ಅವರಿಂದಲೇ ಕಲಿಯಬೇಕು. ಕೇವಲ ಪೌರಾಣಿಕ ಪ್ರಸಂಗಗಳಲ್ಲಷ್ಟೇ ಅಲ್ಲ, ಸಾಮಾಜಿಕ ಪ್ರಸಂಗಗಳನ್ನೂ ಲಾಲಿತ್ಯಮಯವಾಗಿ ಕಟ್ಟಿಕೊಡುವಲ್ಲಿ ಅವರ ಭಾಗವತಿಕೆಯು ಅಪೂರ್ವವೂ ಹೌದು, ಹಾಗೆಯೇ ಅನುಪಮವೂ ಹೌದು.

RELATED ARTICLES  ಭಾಗ್ಯ ಪಡೆಯಲು ಸರ್ವರ್ ಸಮಸ್ಯೆ : ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಕಾದು ಕಾದು ಸುಸ್ತಾದ ಮಹಿಳೆಯರು : ಅವ್ಯವಸ್ಥೆ ಬಗ್ಗೆ ಗುಸುಗುಸು.

ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರರ ಪ್ರಬುದ್ಧತೆಯನ್ನು ಸ್ವತ: ಚಿಟ್ಟಾಣಿಯವರಂತಹ ಮೇರು ಕಲಾವಿದರೇ ಮೆಚ್ಚಿದ್ದಾರೆ. ನಗರ ಜಗನ್ನಾಥ ಶೆಟ್ಟಿಯವರಂತಹ ಅಪ್ರತಿಮ ಕಲಾವಿದರೂ “ಭೇಷ್”ಎಂದು ಬೆನ್ನು ತಟ್ಟಿದ್ದಾರೆ. ಕಲಿಯುಗದ ಆಂಜನೇಯನೆಂಬ ಉಪಾಧಿಗೆ ಪಾತ್ರರಾದ ದಿವಂಗತ ಗೋವಿಂದ ನಾಯ್ಕರವರು ತಮ್ಮ ಪಾತ್ರದ ಪ್ರವೇಶಕ್ಕೆ ಬಳಸುತ್ತಿದ್ದ ರಘೋತ್ತಮ ರಾಮ ಪದ್ಯದಿಂದ ತನ್ನನ್ನು ಗೆಲ್ಲಿಸಿದ ಧಾರವೇಶ್ವರರ ಕುರಿತಂತೆ ಕಳೆದ ಒಲವೇನು ಅಷ್ಟಿಷ್ಟಾಗಿರಲಿಲ್ಲ. ಕೀಚಕ ವಧೆಯ ಕೀಚಕ,ಕಾಳಿದಾಸ ಪ್ರಸಂಗದ ಕಲಾಧರ, ಸಂಗ್ಯಾ-ಬಾಳ್ಯಾದ ಸಂಗ್ಯಾ-ಇತ್ಯಾದಿ ಪಾತ್ರಗಳಲೆಲ್ಲ ತಮ್ಮ ಭಾಗವತಿಕೆಯಿಂದ ಚಿಟ್ಟಾಣಿಯವರಿಗೆ ಹೆಸರು ತಂದು ಕೊಟ್ಟವರೇ ಧಾರೇಶ್ವರರು ಎಂಬುದು ಸರ್ವವೇದ್ಯವೇ ಹೌದು. ಸುಬ್ರಹ್ಮಣ್ಯ ಧಾರೇಶ್ವರರಿಗೆ ರಂಗದಲ್ಲಿ ಹಿಡಿತವಿತ್ತು. ಪಾತ್ರಧಾರಿಗಳಿಗೆ ಹೇಳಿಕೊಡುವ ಕಲೆಯು ಅವರಿಗೆ ಕರಗತವಾಗಿತ್ತು. ಅವರು ಕಲಾವಿದರನ್ನು ರಂಗದಲ್ಲಿಯೂ ತಿದ್ದುತಿದ್ದರು.

ತಪ್ಪನ್ನು ಟಿಪ್ಪಣಿಸಿಕೊಂಡು,ಆಟದ ನಂತರದಲ್ಲಿ ಚೌಕಿಯಲ್ಲಿ ಕರೆದು- ಕೇಳಿ ಸರಿಯಾದ ದಾರಿಯನ್ನು ತೋರಿ, ಅದೇ ತಪ್ಪುಗಳು ಮುಂದಿನ ಆಟಗಳಲ್ಲಿ ಮರುಕಳಿಸದಂತೆ ನಿಗಾ ವಹಿಸುತ್ತಿದ್ದರು. ವೈಯಕ್ತಿಕವಾದ ಪ್ರತಿಷ್ಠೆಗಿಂತಲೂ ಆಟವನ್ನು ಚೆಂದವಾಗಿಸುವುದೇ ಅವರ ಆದ್ಯಂತಿಕವಾದ ಗುರಿಯಾಗಿತ್ತು. ಭಾಗವತನು ಕಲಾವಿದನ ಸಂಭಾಷಣೆಗೆ ಒದಗಬೇಕು, ಮಾತು ಬರದವನನ್ನೂ ಮಾತನಾಡಿಸಬೇಕು, ಹಾಗಾದಾಗ ಕಲಾವಿದನಾಗಿ ಆಕಾರಗೊಳಿಸಲು ಸಾಧ್ಯವೆಂಬುದು ಅವರ ನಿಲುವು. ಹಾಸ್ಯಗಾರರಿಂದ ಎಲ್ಲಾ ಕಲಾವಿದರೊಂದಿಗೆಯೂ ಅವರು ಗಮ್ಮತ್ತಿನ ಚರ್ಚೆಯಲ್ಲಿ ತೊಡಗುತ್ತಿದ್ದವರು.ಹೀಗಾಗಿ ಅವರ ಗರಡಿಯಲ್ಲಿ ಅನೇಕರು ಉತ್ತಮ ಕಲಾವಿದರಾಗಿ ಅನಾವರಣಗೊಂಡಿದ್ದಾರೆ. ಭೀಷ್ಮ ವಿಜಯ,ಭೀಷ್ಮಪರ್ವ, ರಾಮಾಂಜನೇಯ, ಮಾರುತಿ ಪ್ರತಾಪ,ಕಾಳಿದಾಸ,,ಬೇಡರ ಕಣ್ಣಪ್ಪ,ಚಿತ್ರಾಕ್ಷಿ ಕಲ್ಯಾಣ,ಸ್ವಪ್ನ ಸಾಮ್ರಾಜ್ಯ,ಚಾರು ಚಂದ್ರಿಕೆ,ಶೂದ್ರ ತಪಸ್ವಿ ಹಾಗೂ ನಾಗವಲ್ಲಿ ಇತ್ಯಾದಿ ಪ್ರಸಂಗಗಳೆಲ್ಲ ಧಾರೇಶ್ವರರ ಕಂಠಸಿರಿಯಲ್ಲಿ ದಾಖಲೆಯನ್ನು ನಿರ್ಮಿಸಿವೆ. ಅವರ ವನದೇವಿಯಾ -ವನದಾ ಸಿರಿಯ,ಎಲ್ಲೆಲ್ಲು ಸೊಬಗಿದೆ,ದೂರ ಯಾತಕೆ ನಿಂದೆ ಬಾ ಮೋಹನ,ಬಂದಳಾಗ ಮೋಹಿನಿಯು, ಬಲೆಯ ಸರಸಕು ಬಲೆಯ, ಮುಕ್ಕಣ್ಣ ಶಿವನೆಲ್ಲ ಕೊಂಡಾಡಿರೋ- ಮೊದಲಾದವುಗಳೆಲ್ಲ ಕೇಳಿದಷ್ಟು ಮತ್ತೆ ಕೇಳಬೇಕೆನಿಸುವ ಹಾಡುಗಳಾಗಿವೆ! ಆಟದ ಹೊರತಾಗಿ ತಾಳಮದ್ದಳೆಗೂ ಶೇಣಿ, ಸಾಮಗ, ಕುಂಬ್ಳೆಯವರಂತಹ ವಾಗ್ವಿಶಾರದರ ನಡುವೆ ಭಾಗವತಿಕೆಯಿಂದ “ಸೈ”ಎನಿಸಿಕೊಂಡ ದಾರೆಶ್ವರರು ಗಾನ ವೈಭವವಲ್ಲದೆ, ಪ್ರಾತ್ಯಕ್ಷಿಕೆ-ಸಂವಾದಗಳಲ್ಲಿಯೂ ಸೋತವರಲ್ಲ. ಯಕ್ಷಗಾನದ ಕುರಿತು ಅಧಿಕೃತವಾದ ವಾಣಿಯುಳ್ಳವರು. ತೆಂಕಿನ ಜಬ್ಬರ,ಉಜಿರೆ ಅಶೋಕ ಭಟ್ಟ ಹಾಗೂ ವಾಸುದೇವ ರಂಗಭಟ್ಟರವರೊಂದಿಗೆ ಕರ್ಣ ಪರ್ವದ ಕೃಷ್ಣನಾಗಿ ಹಾಗೂ ಭೀಷ್ಮವಿಜಯದ ಸಾಲ್ವನಾಗಿ ಪ್ರಸಂಗದ ನನ್ನ ಅರ್ಥಗಾರಿಕೆಗೆ ತಬ್ಬಿ- ಖುಷಿಪಟ್ಟು,ಹೆಗಲ ಮೇಲೆ ಕೈ ಇಟ್ಟು- ಕ್ಯಾಮೆರಾ ಕಣ್ಣಲ್ಲಿ ಸೆರೆ ಯಾಗಿ ಪುಳುಕಗೊಳಿಸಿದ್ದರು. ಮೂಲತ: ಉತ್ತರ ಕನ್ನಡದವರಾದರೂ ಸುಬ್ರಹ್ಮಣ್ಯ ಧಾರೇಶ್ವರರು ಉಡುಪಿ ಜಿಲ್ಲೆಯಲ್ಲಿ ನೆಲೆಯಾಗಿ,ತಮ್ಮ ಅಪ್ರತಿಮವಾದ ಕಲಾ ಶ್ರೀಮಂತಿಕೆಯಿಂದ ನಾಡಿನಾಚೆ-ಈಚೆ ಮನೆ ಮಾತಾಗಿ ಉಡುಪಿಗರು ತಮ್ಮವರೆಂದುಕೊಳ್ಳುವಷ್ಟು ಅಭಿಮಾನಕ್ಕೆ ಪಾತ್ರರಾಗಿದ್ದು ಅವರ ಹಿರಿಮೆಯಲ್ಲದೆ ಇನ್ನೇನು?

RELATED ARTICLES  ಧರ್ಮಕಾರ್ಯಕ್ಕಾಗಿ ಈಶ್ವರೀ ಆದೇಶ ಪಡೆಯುವ ಮಾರ್ಗದಲ್ಲಿ ಓಡುತ್ತಾ ಹೊರಟಿದ್ದೇನೆ. ಕಲಿಯ ಅಶ್ವಬಲವೇ ನನ್ನ ಬೆನ್ನಹಿಂದೆ ಬಿದ್ದಿದೆ.