Home Article ಹೆಜ್ಜೆ ಭಾವಗಳ ಮಿಳಿತದ ಕಾವ್ಯ

ಹೆಜ್ಜೆ ಭಾವಗಳ ಮಿಳಿತದ ಕಾವ್ಯ

ಲೀಲಾವತಾರಮ್
ಈ ಹುಡುಗಿಯನ್ನು ನಾನು ಮೊದಲು ನೋಡಿದ್ದು ಯಡಳ್ಳಿಯಲ್ಲಿ. ನಾಟಕ ಅಕಾಡಮಿಯ ಮಕ್ಕಳ ನಾಟಕೋತ್ಸವದಲ್ಲಿ. ಅಲ್ಲಿ ಆಕೆ ಶಿರಸಿಯ ಮಾರಿಕಾಂಬಾ ಹೈಸ್ಕೂಲಿನ ‘ಒಂದು ಲಸಿಕೆಯ ಕಥೆ’ ನಾಟಕದಲ್ಲಿದ್ದಳು. ಗರಿ ಗರಿ ಹೊತ್ತ ಮುಖವಾಡ ತೊಟ್ಟು ಕರಾರುವಾಕ್ಕಾದ ಲಯ, ಚಲನೆಗಳೊಂದಿಗೆ ಆಕೆ ಅಭಿನಯಿಸಿದ ಪಾತ್ರ ಇಷ್ಟವಾಗಿತ್ತು.
ಈಕೆ #ತುಳಸಿ_ಹೆಗಡೆ ಬೆಟ್ಟಕೊಪ್ಪ. ಯಕ್ಷರಂಗದಲ್ಲಿ ವಿಶೇಷ ಸ್ಥಾನ ಪಡೆದ ಹುಡುಗಿ. ಮೂರನೆಯ ವರ್ಷದಲ್ಲೇ ಯಕ್ಷಗಾನದ ಹೆಜ್ಜೆಗಳನ್ನು ಕಲಿಯುತ್ತ, ಯಕ್ಷರೂಪಕಗಳನ್ನು ಮಾಡುತ್ತ ಜನಪ್ರಿಯಳಾದವಳು. ಟೈಂಸ್ ಆಫ್ ಇಂಡಿಯಾದಿಂದ ಗುರುತಿಸಲ್ಪಟ್ಟವಳು.

ಮೊನ್ನೆ ಕುಮಟಾದಲ್ಲಿ ‘ ಸೌರಭ’ ದ ವೇದಿಕೆಯಲ್ಲಿ ಈ ಹುಡುಗಿಯನ್ನು ಸಂಪೂರ್ಣ ವಿಭಿನ್ನವಾದ ಕಲಾಮಾಧ್ಯಮದಲ್ಲಿ ನೋಡಿದೆ. ಆಕೆಯ ಏಕವ್ಯಕ್ತಿ ಯಕ್ಷಗಾನ ಪ್ರಯೋಗ ‘ಲೀಲಾವತಾರಂ’ ನಲ್ಲಿ. ಆಕೆಯ ‘ ವಿಶ್ವ ಶಾಂತಿ ರೂಪಕ’ ಗಳ ಸರಣಿಯ ಒಂಬತ್ತನೆಯ ರೂಪಕವಿದು. ಡಾ ಎಂ.ಎ. ಹೆಗಡೆ, ದಂಟ್ಕಲ್ ರಚಿಸಿದ ರೂಪಕವನ್ನ ತುಳಸಿ ಸುಮಾರು ನಲವತ್ತೈದು ನಿಮಿಷಗಳ ಕಾಲ ನಿರಂತರವಾಗಿ ನರ್ತಿಸುತ್ತ ಅಭಿನಯಿಸಿದಳು.

ತುಂಬ ಸುಂದರವಾದ ಅಷ್ಟೇ ಸರಳವಾದ ಸಾಹಿತ್ಯವನ್ನು ತನ್ನ ನಿಖರವಾದ ಹೆಜ್ಜೆಗಳು, ಗಟ್ಟಿ ಲಯದೊಂದಿಗೆ ತುಳಸಿ ಸರಾಗವಾಗಿ ಪ್ರೇಕ್ಷಕರಿಗೆ ಮುಟ್ಟಿಸುತ್ತಿದ್ದ, ಜೊತೆ ಜೊತೆಗೇ ಪ್ರತಿಕ್ರಿಯೆಗಳನ್ನೂ ಪಡೆಯತ್ತಿದ್ದ ರೀತಿ ಅಪರೂಪದ್ದು. ಎಲ್ಲಿಯೂ ಅತಿ ಎನಿಸದ ಆಂಗಿಕ, ಸಾಹಿತ್ಯಕ್ಕೆ ಪೂರಕವೆನಿಸುವ ಚಲನೆಗಳು. ಚಿತ್ರಿಕೆಯಂಥ ನಿಲುವುಗಳು. ನರಸಿಂಹನ ಘೋರ ರೂಪದಿಂದ ಥಟ್ಟನೆ ಬದಲಾಗುತ್ತ ಶಾಂತರೂಪ ತಾಳಿ ಪ್ರಹ್ಲಾದನನ್ನು ಸಂತೈಸುವ ಪರಿ ಇವೆಲ್ಲ ಮತ್ತೆ ಮತ್ತೆ ಪ್ರೇಕ್ಷಕರಿಗೆ ಇಷ್ಟವಾದವು.

ಕೇಶವ ಹೆಗಡೆ ಕೊಳಗಿ ಯವರ ಕಂಠಸಿರಿ ನಿಜಕ್ಕೂ ಅಪರೂಪದ್ದು. ಯಾವುದೇ ಗಿಮಿಕ್ ಗಳಿಲ್ಲದೇ ಪದ್ಯವನ್ನು ಕೇಳುಗರಿಗೆ ದಾಟಿಸುವ ಅವರ ಶೈಲಿ ಅದ್ಭುತ. ಮಾತುಗಳಿಲ್ಲದ ಇಂಥ ಯಕ್ಷನಾಟ್ಯಗಳಿಗೆ ಅದೇ ಜೀವಾಳ. ತುಂಬ ಸಲೀಸಾಗಿ ಪ್ರದರ್ಶನದುದ್ದಕ್ಕೂ ಅವರು ತುಳಸಿಯ ಬೆನ್ನಿಗೆ ನಿಂತು ನಡೆಸುತ್ತಾರೆ. ಶಂಕರ ಭಾಗ್ವತರ ಮೃದಂಗ, ವಿಶ್ವೇಶ್ವರ ಕೆಸರಕೊಪ್ಪ ರ ಚಂಡೆ ಹೆಜ್ಜೆ ಮೂಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ವೆಂಕಟೇಶ ಬೊಗ್ರಿಮಕ್ಕಿ ಚಂದನ್ನ ಪ್ರಸಾದನ ಮಾಡಿದ್ದಾರೆ.

ತುಳಸಿಯ ಒತ್ತಾಸೆಗೆ ನೀರೆರೆಯುತ್ತ ಬೆಳೆಸುತ್ತಿರುವ ರಾಘವೇಂದ್ರ ಬೆಟ್ಟಕೊಪ್ಪ ಮತ್ತು ಕವಿ ಗಾಯತ್ರಿ ರಾಘವೇಂದ್ರರಿಗೂ ಅಭಿನಂದನೆಗಳು ಸಲ್ಲುತ್ತವೆ.
ಕುಮಟೆಯ ಘೋರ ಸೆಕೆಯಲ್ಲೂ ಸುಡುವ ಫ್ಲಡ್ ಲೈಟುಗಳಡಿಯಲ್ಲೂ ಭಾರದ ವೇಷ ಹೊತ್ತು ನಿರಂತರ ನಲವತ್ತೈದು ನಿಮಿಷ ನರ್ತಿಸಿದ ತುಳಸಿಗೆ ಹ್ಯಾಟ್ಸಾಫ್.

ಲೀಲಾವತಾರಮ್
ರಚನೆ: ಎಂ.ಎ. ಹೆಗಡೆ
ನಿರ್ದೇಶನ:
ಉಮಾಕಾಂತ ಭಟ್ಟ ಕೆರೆಕೈ
ಮೂಲ ಕಲ್ಪನೆ : ರಮೇಶ ಹೆಗಡೆ ಹಳೆಕಾನಗೋಡ
ನರ್ತನ ಸಲಹೆ :ವಿನಾಯಕ ಹೆಗಡೆ ಕಲಗದ್ದೆ
ಹಿನ್ನಲೆ ಧ್ವನಿ‌ : ಡಾ. ಶ್ರೀಪಾದ. ಭಟ್ಟ