ಕುಮಟಾ : ಹೊನ್ನಾವರ ಸೇರಿದಂತೆ ಉತ್ತರಕನ್ನಡದ ಅನೇಕ ಕಡೆಗಳಲ್ಲಿ ಚಿಣ್ಣರಿಗೆ ಹೆಜ್ಜೆ ಕಲಿಸಿ, ಮುಂದಿನ ಕಲಾಸಕ್ತ ಸಮುದಾಯದ ಉಳಿವಿನಲ್ಲಿ ಮಹತ್ತರ ಪಾತ್ರ ವಹಿಸಿದ ಉಮೇಶ ಭಟ್ಟ ಬಾಡ ಅವರ ಸಾರಥ್ಯದ ಶ್ರೀ ಸಿದ್ದಿವಿನಾಯಕನ ಚಿಣ್ಣರ ಮೇಳ ನವಿಲಗೋಣಕ್ಕೆ ಇದೀಗ 25 ರ ಹರೆಯ. ಈ ವರ್ಷಗಳಲ್ಲಿ ಪುಟ್ಟ ಹೆಜ್ಜೆಗೆ ಗೆಜ್ಜೆ ಕಟ್ಟಿಸಿ, ರಂಗದಲ್ಲಿ ಯಕ್ಷಗಾನದ ಹೆಜ್ಜೆ ಹಾಕಿಸಿದ ಯಕ್ಷಗುರು ಉಮೇಶ ಭಟ್ಟ ಬಾಡ ಅವರದ್ದು ಸಾರ್ಥಕ ಯಕ್ಷಸೇವೆ.

ಯಕ್ಷಗಾನ ಕಲೆಯ ಎಲ್ಲ ಪ್ರಕಾರಗಳಲ್ಲಿ ಪರಿಣಿತಿ ಹೊಂದಿ ಸಾವಿರಾರು ಜನರಿಗೆ ಆ ಕಲೆಯ ತರಬೇತಿ ನೀಡುತ್ತಿರುವ ಯಕ್ಷಗಾನ ‘ಗುರು’ ಎನಿಸಿಕೊಂಡಿರುವ ಭಾಗವತ ಬಾಡದ ಉಮೇಶ ಭಟ್ಟ ಅವರನ್ನು ಯಕ್ಷಗಾನ ಅಕಾಡೆಮಿಯ ಗೌರವ ಪುರಸ್ಕಾರ ಅರಸಿ ಬಂದಿದೆ.

ಉಮೇಶ ಭಟ್ಟ ಬಾಡ ಅವರು ಯಕ್ಷಗಾನ ಭಾಗವತಿಕೆಯಲ್ಲಿ ಪರಿಣತರು. ಅದಷ್ಟೇ ಅಲ್ಲ, ಬಡಗುತಿಟ್ಟಿನ ಸರ್ವಶ್ರೇಷ್ಠ ಕಲಾವಿದ ಕೋಟ ವೈಕುಂಠರಿಂದ ಹೆಜ್ಜೆಗಾರಿಕೆಯನ್ನೂ ಕಲಿತವರು. ನೃತ್ಯ, ಅಭಿನಯ, ಮದ್ದಳೆ ಚೆಂಡೆ ವಾದನವೆಲ್ಲವನ್ನೂ ಬಲ್ಲ ನಿಜ ಅರ್ಥದ ದಶಾವತಾರಿ. ವೃತ್ತಿ ಮೇಳವನ್ನು ಸೇರಿ ಭಾಗವತಿಕೆಯಿಂದಲೇ ಜೀವನವನ್ನು ಕಂಡುಕೊಳ್ಳತೊಡಗಿದ ಇವರು, ಸಾಲಿಗ್ರಾಮ ಮೇಳದ ರಂಗಸ್ಥಳದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದವರು. ಸಾಲಿಗ್ರಾಮ ಮೇಳದ ನಂತರ ಶಿರಸಿ ಪಂಚಲಿಂಗ ಮೇಳ, ಬಚ್ಚಗಾರು ಮೇಳ, ಶಿರಸಿಯ ಮಾರಿಕಾಂಬಾ ಮೇಳ, ಮುಲ್ಕಿ ಮೇಳ, ಗೋಳಿ ಗರಡಿ ಮೇಳ, ಕುಮಟಾ ಮೇಳ, ಗುಂಡಬಾಳ ಮೇಳ ಹೀಗೆ ಹಲವು ಮೇಳಗಳಲ್ಲಿ ಎರಡು ದಶಕಗಳ ಪರ್ಯಂತ ಆವ್ಯಾಹತವಾಗಿ ಯಕ್ಷಗಾನ ಸೇವೆ ಸಲ್ಲಿಸಿದರು.

90ರ ದಶಕದಲ್ಲಿ ಬದಲಾದ ಮೇಳಗಳ ಸಂಘಟನಾ ವ್ಯವಸ್ಥೆ, ಮಿತಿಮೀರಿದ ವ್ಯಾಪಾರೀಕರಣದಿಂದ ನೊಂದ ಉಮೇಶ ಭಟ್ಟರು, ಆದಾಗಲೇ ವಿವಾಹಿತರಾಗಿ ದೊಡ್ಡ ಸಂಸಾರವನ್ನು ನಿರ್ವಹಿಸುವ ಅನಿವಾರ್ಯತೆಯಿದ್ದರೂ ವ್ಯವಹಾರೀ ಧೋರಣೆಗೆ ಶರಣಾಗದೇ ಯಕ್ಷಗಾನ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಅನನ್ಯ ಮಾರ್ಗವನ್ನು ಕಂಡುಕೊಂಡರು. ಆದಾಗಲೇ ಬಾಡದಿಂದ ಕಡತೋಕಾಕ್ಕೆ ತಮ್ಮ ವಸತಿಯನ್ನು ಸ್ಥಳಾಂತರಿಸಿದ್ದ ಅವರು ತಮ್ಮ ಸುತ್ತಮುತ್ತಲಿನ ಸ್ನೇಹಿತರ ಸಹಾಯದಿಂದ ಚಿಣ್ಣರ ಮೇಳವೆಂಬ ಮಕ್ಕಳ ಮೇಳ ಮತ್ತು ತರಬೇತಿ ಕೇಂದ್ರವನ್ನು 1995ರಲ್ಲಿ ಪ್ರಾರಂಭಿಸಿದರು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಇಂದಿನ ದಿನದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿವೆ. ಆದರೆ, ಉಮೇಶ ಭಾಗವತರು ಚಿಣ್ಣರ ಮೇಳವನ್ನು ಪ್ರಾರಂಭಿಸುವಾಗ ಉತ್ತರ ಕನ್ನಡದ ಪರಿಸರದಲ್ಲಿ ಒಂದೆರಡು ಕೇಂದ್ರ ಬಿಟ್ಟರೆ, ಹವ್ಯಾಸಿಗಳಿಗೆ ಮತ್ತು ಮಕ್ಕಳಿಗೆ ಯಕ್ಷಗಾನವನ್ನು ಶಾಸ್ರೋಕ್ತವಾಗಿ ಕಲಿಯುವ ಸರಿಯಾದ ವ್ಯವಸ್ಥೆಯಿರಲಿಲ್ಲ.

ಆ ಕಾಲಘಟ್ಟದಲ್ಲಿ ಹೊನ್ನಾವರ ಕುಮಟಾ ಪರಿಸರದಲ್ಲಿ ಸಂಗೀತ-ಭರತನಾಟ್ಯದ ಮಾದರಿಯಲ್ಲಿ ಆಸಕ್ತ ಪಾಲಕರಿಗೆ ತಮ್ಮ ಮಕ್ಕಳಿಗೆ ಯಕ್ಷಗಾನ ತರಬೇತಿ ಕೊಡಿಸಲು ಮತ್ತು ಹವ್ಯಾಸಿಗಳಿಗೆ ಭಾಗವತಿಕೆ, ಹೆಜ್ಜೆಗಾರಿಕೆಯನ್ನು ಕಲಿಯಲು ಶ್ರೀ ಸಿದ್ದಿವಿನಾಯಕ ಚಿಣ್ಣರ ಮೇಳ ಮತ್ತು ತರಬೇತಿ ಕೇಂದ್ರ ಸೂಕ್ತ ಅವಕಾಶವನ್ನು ನೀಡಿತು. ಒಂದೆರಡು ವರ್ಷಗಳಲ್ಲಿ ಅವರ ಚಿಣ್ಣ ಶಿಷ್ಯರು ರಾಜ್ಯದ ಅನೇಕ ಕಡೆಗಳಲ್ಲಿ ಪ್ರದರ್ಶನ ನೀಡಿ ಸೈಯೆನಿಸಿಕೊಂಡರು.

ಈ ಯಕ್ಷಗಾನ ಸೇವೆ ಹಾಗೂ ಮಕ್ಕಳಿಗೆ ಹೆಜ್ಜೆ ಕಲಿಸುವ ಕಾಯಕದಲ್ಲಿಯೇ, ಮೇಳದಲ್ಲಿ ಪದ್ಯವೊಂದನ್ನು ಮೆಚ್ಚಿ ಪ್ರೇಕ್ಷಕರಿಂದ ಬಂದ ಪ್ರಶಂಸೆಯಿಂದ ದೊರೆಯಬಹುದಾದ ಧನ್ಯತೆಯ ಇಮ್ಮಡಿ ಧನ್ಯತೆಯನ್ನು ಉಮೇಶ ಭಟ್ಟ ಬಾಡ ಅನುಭವಿಸಿದರು.

ಕೇವಲ ಚಿಣ್ಣರಿಗೆ ಅಷ್ಟೇ ಅಲ್ಲದೇ, ಸಮಾಜದ ಬೇರೆ ಬೇರೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ವೈದ್ಯರು. ವಕೀಲರು, ತಂತ್ರಜ್ಞರು, ಉಪನ್ಯಾಸಕರೆಲ್ಲರೂ ಯಕ್ಷಗುರುವನ್ನು ಅರಸಿ ಬಂದರು. ಅವರೆಲ್ಲರಿಗೂ ಹೆಜ್ಜೆ ಕಲಿಸಿ ಸಂಭ್ರಮಿಸಿದರು ಉಮೇಶ ಭಟ್ಟರು. ಅದಷ್ಟೇ ಅಲ್ಲ. ಇದಕ್ಕೆಲ್ಲ ಹೆಚ್ಚಿನ ಸಂಭಾವನೆಯನ್ನು ಪಡೆದವರಲ್ಲ. ಮಕ್ಕಳು ಕುಣಿಯುವುದನ್ನು ನೋಡಿ ಸಾರ್ಥಕತೆಯನ್ನು ಅನುಭವಿಸುವುದರಲ್ಲಿಯೇ ತೃಪ್ತರಾಗುತ್ತಾ ಬಂದರು.

ಉಮೇಶ ಭಟ್ಟರ ಪತ್ನಿ ಮಹಾಲಕ್ಷ್ಮಿಯವರು ಮನೆಯ ಮಹಾಲಕ್ಷ್ಮಿಯಂತೆಯೇ, ಕಲಿಯಲು ಬರುವವರಿಗೆಲ್ಲರಿಗೆ ಒಂದಿನಿತೂ ಬೇಸರಿಸಿದೆ ಆದರಾತಿಥ್ಯ ಮಾಡುವುದರಲ್ಲಿಯೇ ಅತೀವ ಸಂತೋಷವನ್ನು ಕಂಡರು. ಅದಷ್ಟೇ ಅಲ್ಲ ಚಿಣ್ಣರನ್ನು ಅವರ ಮಕ್ಕಳಂತೆ ಕಂಡು ತಿಂಡಿ, ಊಟ ನೀಡಿ ಭಾಗವತರ ಯಕ್ಷ ಸೇವೆಯ ಸಾರ್ಥಕ್ಯದ ಕ್ಷಣಕ್ಕೆ ತಾವೂ ಭಾಗೀದಾರರಾದರು.

ಪ್ರಶಸ್ತಿಗಳ, ಗೌರವದ ಹಿಂದೆ ಬೀಳದೇ ಅಕ್ಷರಶಃ ಯಕ್ಷಗಾನ ಸೇವೆಯನ್ನೇ ಮಾಡಿಕೊಂಡು ಬಂದ ಭಾಗವತರಿಗೆ ಗೌರವಗಳು ಅರಸಿ ಬರತೊಡಗಿತು. ಆದರೆ ಅದ್ಯಾವುದಕ್ಕೂ ಹಿಗ್ಗದೆ, ಸಮಸ್ಯೆಗಳು ಇದಿರಾದಾಗ ಕುಗ್ಗದೆ ಸಮಚಿತ್ತದಿಂದ ಚಿಣ್ಣರಿಗೆ ಹೆಜ್ಜೆ ಕಲಿಸಿ ಕಲಾ ಸೇವೆಯ ಜೀವನದಿ ಎನಿಸಿದರು.

RELATED ARTICLES  "ಜಗತ್ತೆಲ್ಲವೂ ಪರಮಾತ್ಮನೇ"(‘ಶ್ರೀಧರಾಮೃತ ವಚನಮಾಲೆ’).

ಬಾಡದ ಉಮೇಶ ಭಟ್ಟರು 25 ವರ್ಷಗಳ ಹಿಂದೆ ಆರಂಭಿಸಿದ ಚಿಣ್ಣರ ಮೇಳ ಎಂದಿಗೂ ಬಾಡದೇ, ಮಾಸದೇ ಮುನ್ನಡೆದಿದೆ. ಉತ್ತರ ಕನ್ನಡದ ಯಕ್ಷಗಾನ ಪರಂಪರೆ ಉಳಿಸುವುದರಲ್ಲಿ ಹೊಸ ತಲೆಮಾರನ್ನು ತರಬೇತಿಗೊಳಿಸುವಲ್ಲಿ ಉಮೇಶ ಭಾಗವತರ ಹಾಗೂ ಚಿಣ್ಣರ ಮೇಳದ ಪರಿಶ್ರಮ ಅನನ್ಯವಾದುದು.

ಚಿಣ್ಣರ ಮೇಳ ೨೫ ವಸಂತ ಪೂರೈಸಿದ ಹಿನ್ನೆಲೆಯಲ್ಲಿ ಮೇ. 26ರಂದು ಸಂಜೆ 4 ಗಂಟೆಗೆ ಹಳದೀಪುರ ಕುಂಬಾರಮಕ್ಕಿಯ ಶ್ರೀ ಶಾಂತಿಕಾಪರಮೇಶ್ವರಿ ದೇವಾಲಯದ ಸದ್ಗುರು ಸಭಾಭವನದಲ್ಲಿ ಚಿಣ್ಣರ ಮೇಳದ ರಜತೋತ್ಸವ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಚಿಣ್ಣರ ಮೇಳದ ಕಲಾವಿದರಿಂದ ‘ಅನಲಹಸ್ತ’ ಯಕ್ಷಗಾನ ಆಖ್ಯಾನ ಪ್ರದರ್ಶನ ನಡೆಯಲಿದೆ.

ಸಂಜೆ 6.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಸಭಾಧ್ಯಕ್ಷತೆ ವಹಿಸುವರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ, ಉದ್ಯಮಿ ಶಿವಾನಂದ ಹೆಗಡೆ ಕಡತೋಕಾ ಕಾರ್ಯಕ್ರಮ ಉದ್ಘಾಟಿಸುವರು. ವಿದ್ವಾಂಸ ಎಸ್. ಶಂಭು ಭಟ್ಟ, ಸೆಲ್ಕೋ ಸೋಲಾರ್ ನ ಸಿ.ಇ.ಓ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ, ಉದ್ಯಮಿ ಕೃಷ್ಣಮೂರ್ತಿ ಭಟ್ಟ ಶಿವಾನಿ, ಗ್ರಾ.ಪಂ ಉಪಾಧ್ಯಕ್ಷ ಅಜಿತ ನಾಯ್ಕ, ಸಂಶೋಧಕ ಡಾ. ಎಸ್.ಡಿ ಹೆಗಡೆ, ವೈದ್ಯ ಡಾ. ಪ್ರಕಾಶ ನಾಯ್ಕ, ಯಕ್ಷಗಾನ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ವಸಂತ ಭಟ್ಟ ಮೊದಲಾದ ಗಣ್ಯರು ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ಚಿಣ್ಣರ ಮೇಳಕ್ಕೆ ಸಹಕಾರ ನೀಡುತ್ತಾ ಬಂದಿರುವ ಹಲವರಿಗೆ ರಜತೋತ್ಸವ ಸನ್ಮಾನ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಚಿಣ್ಣರ ಮೇಳದಲ್ಲಿ ಕಲಿತು ವಿವಿಧ ವೃತ್ತಿಗಳಲ್ಲಿ ತೊಡಗಿದ್ದರೂ ಹವ್ಯಾಸಿ ಕಲಾವಿದರಾಗಿರುವ ಹಾಗೂ ವೃತ್ತಿ ಕಲಾವಿದರಿಂದ ‘ಸಮಗ್ರ ಕಂಸ’ ಯಕ್ಷಗಾನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಕಲಾಸಕ್ತರ ಸಂಪೂರ್ಣ ಸಹಕಾರದ ನಿರೀಕ್ಷೆಯಲ್ಲಿ ಸಂಘಟಕರಿದ್ದಾರೆ.