✍ಸಂದೀಪ ಎಸ್. ಭಟ್ಟ
ಮೊನ್ನೆ ಗುರುವಾರ ಶಾಲೆಯಿಂದ ಮನೆಗೆ ಬರುವಾಗ ಗಾಡಿಯಲ್ಲಿ ಹಿಂಬದಿಗೆ ಕುಳಿತಿದ್ದ ಮಗಳು ಬೆನ್ನುತಟ್ಟಿ ಅಪ್ಪಾ ಸಂತೇಗುಳಿ ಮೈದಾನದಲ್ಲಿ ಸರ್ಕಸ್ ಬಂದಿದ್ಯಂತೆ ರಾತ್ರಿ 7.30 ಯಿಂದ ಪ್ರಾರಂಭ ಅಂತ ಸುದ್ದಿ ಹೋಗಿ ಬರೋಣ ಎಂದಳು. ನಾವೂ ಮಕ್ಕಳಾದಾಗ ಅಪ್ಪನನ್ನು ಹೀಗೇ ಕೇಳಿದ್ದಲ್ಲವೇ?! ನಮ್ಮಪ್ಪನಿಗಿದ್ದ ಪುರುಸೊತ್ತು ನಮಗಿರದಿದ್ದರೆ ಹೇಗೆ?! ಮಕ್ಕಳ ಖುಷಿಯೇ ನಮ್ಮ ಖುಷಿ ಎಂದು ಬಿಡುವು ಮಾಡಿಕೊಂಡು ಸಂತೇಗುಳಿ ಮೈದಾನಕ್ಕೆ ಹೋದೆ. ಅಲ್ಲಿ ಇದ್ದದ್ದು ಮೂರು ಮತ್ತೊಂದು ಜನ. ಆದರೂ ಮಕ್ಕಳ ಜೊತೆಗೆ ಮುಂದೆ ಹೋಗಿ ನೆಲಕ್ಕೇ ಕುಳಿತೆ.
ಶ್ರೀ ಚಾಮುಂಡೇಶ್ವರಿ ಸೈಕಲ್ ಸರ್ಕಸ್ ಎಂದು ಒಂದು ದೊಡ್ಡ ಬ್ಯಾನರ್, ಮುಂದೆ ವೃತ್ತಾಕಾರದಲ್ಲಿ ದೀಪಾಲಂಕಾರ ಮಾಡಿದ ಒಂದಿಷ್ಟು ಜಾಗದ ಮಧ್ಯದಲ್ಲಿ ಒಂದು ಚಾಮುಂಡೇಶ್ವರಿ photo ಹಾಗೂ ಕಾಣಿಕೆ ಡಬ್ಬಿ ಇವಿಷ್ಟು ಇತ್ತು. ಪಕ್ಕದಲ್ಲಿ 3 ಗೂಡ್ ರಿಕ್ಷಾಗಳು. 7.30 ಕ್ಕೆ ಸರಿಯಾಗಿ ಡ್ಯಾನ್ಸ ಪ್ರೋಗ್ರಾಂ ಪ್ರಾರಂಭವಾದವು. ಎರಡು ಜೋಡಿಗಳು ಕನ್ನಡ, ತೆಲುಗು, ತಮಿಳು ಗೀತೆಗಳಿಗೆ ನೃತ್ಯ ಮಾಡಿದವು. ತದನಂತರ ಜೋಕರ್ ಬಾಬು ಹೆಸರಿನಲ್ಲಿ ಸಣ್ಣ ಪುಟ್ಟ ಹಾಸ್ಯ, ಅದಾದನಂತರ ಬ್ರೇಕಿಲ್ಲದ ಸೈಕಲ್ ಹತ್ತಿ ಮಾಸ್ಟರ್ ನಡೆಸಿಕೊಟ್ಟ ಸರ್ಕಸ್ ಮಾತ್ರ ಅತ್ಯದ್ಭುತವಾಗಿತ್ತು. ಇಂಥ ಸರ್ಕಸ್ ನ್ನು ಬಾಲ್ಯದಲ್ಲಿ ನೋಡಿದ್ದ ನನಗೆ ಇದನ್ನು ಮಕ್ಕಳಿಗೆ ತೋರಿಸಿದ ಸಂತೃಪ್ತ ಭಾವ ಒಂದು ಕಡೆಯಾದರೆ ಎಷ್ಟೋ ದೂರದಿಂದ ಬಂದ ಇವರ ಸರ್ಕಸ್ ನೋಡಲು ಬಹಳ ಜನ ಬರಲೇ ಇಲ್ಲವಲ್ಲ ಎಂದು ಬೇಸರವೂ ಆಯಿತು. ಆಮೇಲೆ ಅವರೇ ನಾಳೆಯೂ ಈ ಸರ್ಕಸ್ ಇರುತ್ತದೆ ಎಂದಾಗ ನಮ್ಮೂರಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರಲು ನಾನೂ ಪರೋಕ್ಷವಾಗಿ ಪ್ರಯತ್ನಿಸಿದ್ದು ಸತ್ಯ.
ಅವರು ಕಳ್ಳರಲ್ಲ, ಮೋಸಗಾರರಲ್ಲ, ಶ್ರೀಮಂತರಲ್ಲ, ಸ್ವಂತ ಶ್ರಮ ಹಾಗೂ ಬೆವರಿನಿಂದ ಬದುಕುವುದಕ್ಕಾಗಿ ಸರ್ಕಸ್ ಮಾಡುತ್ತಿರುವವರು. ದಿನದ ತುತ್ತಿಗಾಗಿ ಊರೂರು ತಿರುಗುತ್ತಿರುವವರು. ನಮಗಾದರೋ ವಾಸಯೋಗ್ಯ ಮನೆಯಿದೆ, ಅಷ್ಟಿಷ್ಟು ಸಂಬಳವಿದೆ, ದುಡಿಮೆಯಿದೆ, ಬಟ್ಟೆಯಿದೆ, ಸುಖೋಪಭೋಗಿ ವಸ್ತುಗಳಿವೆ. ನಮಗೊಂದಿಷ್ಟು ಉಳಿಸಿದ್ದೇವೆ. ಮಕ್ಕಳಿಗಾಗಿಯೋ ಮುಂದಿನ ತಲೆಮಾರಿಗಾಗಿಯೋ ಉಳಿಸಿ ಹೋಗಲು ಹೆಣಗಾಡುತ್ತಿದ್ದೇವೆ. ಹೀಗಾಗಿಯೇ ನಮಗೆ ಹಗಲು ರಾತ್ರಿ ತೀರಾ ಬಿಡುವಿಲ್ಲದಷ್ಟು ಕೆಲಸ. ಆದರೆ ಅವರ ಬದುಕನ್ನೊಮ್ಮೆ ಗಮನಿಸಿ. ಮೂರು ಗೂಡು ರಿಕ್ಷಾಗಳೇ ಅವರ ಮನೆ. ( ಪ್ರತ್ಯೇಕವಾಗಿ ಸಣ್ಣ ವಾಸಯೋಗ್ಯ ಮನೆ ಇರಬಹುದು ಗೊತ್ತಿಲ್ಲ. ) ಅದೇ ರಿಕ್ಷಾದಲ್ಲೇ ಅವರ ಬೆಡ್ ರೂಂ, ಕಿಚನ್ ರೂಂ, ಹಾಲ್, ಡೈನಿಂಗ್ ರೂಂ, ಮೇಕಪ್ ರೂಂ ಎಲ್ಲಾ. ಹೋದ ಊರಿನಲ್ಲಿ ಮೊದಲು ಯಾರನ್ನಾದರೂ ಕರೆಂಟ್ ಗಾಗಿ ಬೇಡಬೇಕು. ಕುಡಿಯಲು, ಅಡುಗೆ ಮಾಡಲು ನೀರನ್ನರಸಬೇಕು, ಸೌಂಡ್ ಸಿಸ್ಟಮ್, ಸ್ಟೇಜ್ ಇತ್ಯಾದಿ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಊರಿನಲ್ಲಿ ಅದೇ ರಿಕ್ಷಾ ತೆಗೆದುಕೊಂಡು ಪ್ರಚಾರ ಮಾಡಬೇಕು. ಹೆಂಗಸರು ಮಕ್ಕಳು ಸೂರ್ಯನ ಬೆಳಕು ಹರಿಯುವ ಮುಂಚೆಯೇ ಶೌಚಾದಿಗಳನ್ನು ಮುಗಿಸಿಕೊಳ್ಳಬೇಕು. ಸೊಳ್ಳೆ ಕಚ್ಚಿದರೆ ಫ್ಯಾನಿಲ್ಲ. ತೀರಾ ಚಳಿಯಾದರೆ ರಗ್ಗು ಕಂಬಳಿಗಳಿಲ್ಲ. ಮಳೆಯಾದರಂತೂ ಊಹಿಸಲೂ ಸಾಧ್ಯವಿಲ್ಲ. ಇಂಥದ್ದರ ನಡುವೆ ಸಣ್ಣ ಪುಟ್ಟ ಮಕ್ಕಳನ್ನಿಟ್ಟುಕೊಂಡು ರಾತ್ರಿಯಾದರೆ ಬಣ್ಣ ಹಚ್ಚಿ ಪ್ರೇಕ್ಷಕರನ್ನು ರಂಜಿಸ ಹೊರಡುವ ಅವರ ಬದುಕೇ ನಿಜಕ್ಕೂ ಒಂದು ಸರ್ಕಸ್.
ಈ ಕಂಪನಿಯಲ್ಲಿ ಎರಡು ಹೆಣ್ಣುಮಕ್ಕಳು ಇದ್ದಾರೆ. ಫ್ಯಾಷನೇಬಲ್ ಡ್ರೆಸ್ ಹಾಕಿಕೊಂಡು ಮೈ ನವಿರೇಳಿಸುವ ಡ್ಯಾನ್ಸ ಮಾಡುವ ಇದೇ ಹೆಣ್ಣುಮಕ್ಕಳು ಆಚೆ ನಿಂತರೆ ಎರಡು-ಮೂರು ಮಕ್ಕಳನ್ನು ಮಕ್ಕಳನ್ನು ನಿಭಾಯಿಸುವ ಮಾತೆಯರು ಎಂಬುದನ್ನು ನೋಡಿದಾಗ ನನ್ನ ಕಣ್ಣುಗಳೇ ಒಮ್ಮೆ ಅವಾಕ್ಕಾದದ್ದು. ಛೇ! ಆ ಸಣ್ಣಪುಟ್ಟ ಮಕ್ಕಳು ತಮ್ಮ ತಾಯಂದಿರು ನೃತ್ಯ ಮಾಡುವುದನ್ನು ನೋಡುತ್ತಾ ಬಿಟ್ಟ ಕಣ್ಣು ಬಿಟ್ಟ ಹಾಗೆ ಕುಳಿತಿದ್ದರೆ ನನ್ನ ಕಣ್ಣಂಚಿನಿಂದ ಹನಿ ನೀರು ಜಿನುಗಿದ್ದು ಸತ್ಯ. ಆ ಮಕ್ಕಳ ಅಪ್ಪ ಅಮ್ಮ ಜೋಡಿಯಾಗಿ ಅಲ್ಲಲ್ಲೇ ಮರೆಯಾಗಿ ಬಟ್ಟೆ ಬದಲಾಯಿಸಿಕೊಳ್ಳುತ್ತಾ ಎರಡು ಮೂರು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡುವುದು ಶೋಕಿಗಾಗಿ ಖಂಡಿತ ಅಲ್ಲ. ಅದು ಬದುಕಿಗಾಗಿ. ನಿತ್ಯದ ಊಟದ ಗಳಿಕೆಗಾಗಿ.
ಇಷ್ಟಕ್ಕೂ ಮೊದಲನೇ ದಿನ ಅವರು ಯಾರನ್ನೂ ಹಣಕ್ಕಾಗಿ ಬೇಡಲಿಲ್ಲ. ಚಾಮುಂಡೇಶ್ವರಿ ಪೂಜೆ ಮಾಡಿ ಸಾಧ್ಯವಿದ್ದವರು ಚಾಮುಂಡೇಶ್ವರಿ ಕಾಣಿಕೆ ಡಬ್ಬಕ್ಕೆ ಕಾಣಿಕೆ ಸಲ್ಲಿಸಬಹುದು ಎಂದರು. ಹಾಕಿದವರು ಹಾಕಿದರು. ಎದ್ದು ಹೋಗಬೇಕೆನಿಸಿದವರು ಹಾಗೆಯೇ ಎದ್ದು ಹೋದರು. ಎರಡನೆಯ ದಿನ ಮಾಡಿದ ಸೈಕಲ್ ಸರ್ಕಸ್, ಟ್ಯೂಬಲೈಟ್ ಒಡೆಯುವುದು, ಕಣ್ಣಿನಿಂದ ಸೂಜಿ ಹೆಕ್ಕುವುದು, ಬೆಂಕಿಯ ಚಕ್ರದೊಳಗೆ ಮಾಸ್ಟರ್ ಮಾಡುವ ಸರ್ಕಸ್ ಅಮೋಘ, ಅದ್ಭುತ. ಇದನ್ನು ವರ್ಣಿಸಲು ನನ್ನಲ್ಲಿ ಪದಗಳೇ ಇಲ್ಲ. ಇದು ರೀಲ್ ಅಲ್ಲ ರಿಯಲ್. ಇದು ಸಿನಿಮಾಗಳಲ್ಲಿ ತೆರೆಯ ಮೇಲೆ ತೋರಿಸುವ ಸಾಹಸವಾಗಿರಲಿಲ್ಲ. ಬದುಕನ್ನೇ ಪಣಕ್ಕಿಟ್ಟು, ಪ್ರಾಣವನ್ನೇ ಪಣಕ್ಕಿಟ್ಟು ಮಾಡಿದ ಸಾಹಸವಾಗಿತ್ತು. ಚಪ್ಪಾಳೆಗಳ ಸುರಿಮಳೆ ಸುರಿದವು. ಊರಿನ ಪ್ರೇಕ್ಷಕರೆಲ್ಲರೂ ಸಾಧ್ಯವಾದಷ್ಟೂ ಸಹಾಯ ಮಾಡಿ ಅಭಿನಂದಿಸಿದೆವು. ಇಂದು ಬೆಳಿಗ್ಗೆ ನೋಡಿದರೆ ಅವರ ರಿಕ್ಷಾಗಳೂ ಅಲ್ಲಿರಲಿಲ್ಲ, ಅವರೂ ಇರಲಿಲ್ಲ, ನಿನ್ನೆ ನೋಡಿದ ಗಾಡಿಗಳು ಇಂದೆಲ್ಲಿಗೋ ನಡೆದಿವೆ ಹೊಸ ದಾರಿ ಹುಡುಕಿಕೊಂಡು.
ಎಲ್ಲಿಯದೋ ಊರು, ಎಲ್ಲಿಯದೋ ನೀರು, ಎಲ್ಲಿಯದೋ ಸೂರು, ಎಲ್ಲಿಯದೋ ಸಾರು. ನಗಿಸುವ ಜೋಕರ್ ನ ಬಟ್ಟೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಹತ್ತಾರು ಕಡೆ ಹರಿದಿದೆ. ಪ್ಯಾಚ್ ಹಾಕಲಾಗಿದೆ. ಅವರೂ ಇನ್ನೂ ಹತ್ತು ವರ್ಷ ಸರ್ಕಸ್ ನಿರಂತರವಾಗಿ ಮಾಡಿದರೂ ಬದುಕು ತೀರಾ ಸುಧಾರಿಸದು. ಯಾಕೆಂದರೆ ಜನ ಕೊಟ್ಟ ಅಷ್ಟಿಷ್ಟು ಹೊಟ್ಟೆ ಬಟ್ಟೆಗೆ ಸಾಕಾಗುವುದು ಡೌಟ್ ನನಗೆ. ಆದರೂ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಅವರ ಮೇಲೆ ಸದಾ ಇರಲಿ. ಅಭಿಮಾನಿಗಳ ಶ್ರೀರಕ್ಷೆಯಿಂದ ಅವರ ಆರೋಗ್ಯ ಚೆನ್ನಾಗಿ ಇರಲಿ. ಜನರನ್ನು ರಂಜಿಸುವ ಇಂಥ ಪ್ರಾಮಾಣಿಕ ಶ್ರಮಜೀವಿಗಳಿಗೆ ಸರ್ಕಾರದ ಸಹಾಯಧನ ದೊರೆಯಲಿ. ಶಾಲು ಹೊದೆಸಿದವರಿಗೇ ಶಾಲು ಬೀಳುತ್ತದೆ. ಜಾತಿಗೆ ಜೋತುಬಿದ್ದು ಪ್ರಶಸ್ತಿ ವಿಜೇತ ಎಂದು ಘೋಷಿಸಲಾಗುತ್ತದೆ. ಆದರೆ ಇಂಥ ಬಡ ಸರ್ಕಸ್ ಕಂಪನಿಗಳು ನಮ್ಮ ನಿಮ್ಮಂಥವರ ಚಪ್ಪಾಳೆಗಳನ್ನಷ್ಟೇ ಗಳಿಸಿಕೊಂಡು ಮರೆಯಾಗಿ ಬಿಡುತ್ತವೆ. ಭಗವಂತನಲ್ಲಿ ನನ್ನದಂತೂ ಒಂದು ಪ್ರಾರ್ಥನೆ ಇಂಥವರ ಬಗೆಗೆ ಇದ್ದೇ ಇರುತ್ತದೆ. ನಿಮ್ಮದೂ ಇರಲಿ.
ಮತ್ತೆ ನೋಡಿದೆ….ಮತ್ತೆ ನೋಡಿದೆ….. ಮತ್ತೆ ಮತ್ತೆ ನೋಡಿದೆ…… ಇಂದು ಆ ರಿಕ್ಷಾಗಳಿಲ್ಲ….. ತಾಯಂದಿರಿಲ್ಲ…..ಬ್ರೇಕಿಲ್ಲದ ಸೈಕಲ್ ಇಲ್ಲ, ಮಾಸ್ಟರ್ ಇಲ್ಲ, ಜೋಕರ್ ಇಲ್ಲ,…..ಹಾಡುಗಳಿಲ್ಲ…. ಬಣ್ಞ ಬಣ್ಣದ ಲೈಟುಗಳಿಲ್ಲ…..ಅದೇ ಬಟಾ ಬಯಲು, ಒಡೆದ ನಾಲ್ಕಾರು ಗಾಜಿನ ಚೂರುಗಳು…. ಕಿತ್ತ ಕಂಬಗಳ ಮಣ್ಣು ಮುಚ್ಚದ ಚೂರು ಪಾರು ಹೊಂಡ…. ಬೇಯಿಸಿ ಉಂಡ ಒಲೆಗಳ ಬೂದಿ…… ಬಿಡುವಿಲ್ಲದ ಕೆಲಸಗಳ ಒತ್ತಡದಲ್ಲಿ ನಿನ್ನೆಗಳನ್ನು ಮರೆತು ನಾಳೆಗಳನ್ನೇ ದೃಷ್ಟಿಯಿತ್ತ ನಾನು ಮತ್ತು ನನ್ನಂಥವರು…
ಪಾಪಿಗಳನ್ನೂ ಉದ್ಧಾರ ಮಾಡುವ ಭಗವಂತನಿಗೆ ಇವರ ಮೇಲೆ ಕರುಣೆ ಬರುವುದು ಯಾವಾಗ?