ಅಕ್ಷರರೂಪ: ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ.
ಉನ್ನತಿಯನ್ನು ನಾವೇ ಇಚ್ಛಾಪೂರ್ವಕ ಮಾಡಿಕೊಳ್ಳುವದಿರುತ್ತದೆ
(ಇಸವಿ ಸನ ೧೯೫೦-೫೧ರ ಸುಮಾರಿಗೆ ನೀಲಕಂಠ ರಾಮದಾಸಿ ಅವರಿಗೆ ಬರೆದ ಪತ್ರ)
|| ಶ್ರೀರಾಮ ಸಮರ್ಥ||
ಕುರುಗಡ್ಡಿ
ಚಿ. ನೀಲಕಂಠನಿಗೆ ಆಶೀರ್ವಾದ,
ಮಗಾ,
ನನ್ನ ಪ್ರೇಮ ಎಲ್ಲರ ಮೇಲೆ ಒಂದೇ ರೀತಿ ಇದೆ. ನಾನು ಅಂದರೆ ಪ್ರಾಣಿಮಾತ್ರರ ಕೇವಲ ಹಿತದೃಷ್ಟಿಯದೇ ಕೊರೆದ ಮೂರ್ತಿ. ನೀವು ಗುರುಕೃಪೆಯ ಲಾಭ ಮಾಡಿಕೊಂಡು ನಿಮ್ಮ ಆಚಾರ-ವಿಚಾರ ಸ್ವಪರ ಉನ್ನತಿಕಾರಕ ಪರಿಣಾಮಕಾರಕವಾಗುವಂತೆ ಇರಬೇಕು. ಹೀಗೆಯೇ ನಿಮ್ಮ ಪ್ರತಿಕ್ಷಣದ ಜೀವನಕ್ರಮ ಇರಬೇಕು. ಉನ್ನತಿಯನ್ನು ನಾವೇ
ಇಚ್ಛಾಪೂರ್ವಕ ಮಾಡಿಕೊಳ್ಳುವದಿರುತ್ತದೆ. ನಮ್ಮ ಮನಸ್ಸೇ ನಮಗೆ ಸಾಕ್ಷಿ. ಅದನ್ನೇ ಪ್ರಶ್ನೆ ಮಾಡು. ಇಲ್ಲಿಯವರೆಗೆ ನಿನ್ನ ಆಚರಣೆ ಸಮಾಧಾನಕಾರಕ ಮತ್ತು ಪ್ರಗತಿಪರ ಅನಿಸುತ್ತಿಲ್ಲ. ಹಾಗಾಗಿ ಮುಂದಾದರೂ ಪಶ್ಚಾತ್ತಾಪದಿಂದ ಸುಧಾರಣೆ ಮಾಡಿಕೊಂಡು ಹೊಸ ಹುರುಪಿನಿಂದ ಸಾಧನೆಗೆ ಹತ್ತು. ನನ್ನ ಕೃಪೆ ಯಾವಾಗಲೂ ಇದೆ. ಉತ್ತರೋತ್ತರ ನಿನ್ನ ಉನ್ನತಿಯಾಗಲಿ.
ಚಿ. ಕುಲಕರ್ಣಿ ಬಂದು ಹೋಗುವವರ ಆತಿಥ್ಯ ಬಹಳ ಚೆನ್ನಾಗಿ ಮಾಡುತ್ತಾರೆಂದು ಕೇಳಿ ಆನಂದವಾಯಿತು.
ಎಲ್ಲರಿಗೂ ಆಶೀರ್ವಾದಗಳು.
ಶ್ರೀಧರ
ಎಲ್ಲರೂ ಕೂಡಿ ಮತ್ತೊಮ್ಮೆ ಹಿಂದಿನ ನೆನಪು ಬರದಂತೆ ಅಂದರೆ ಆಗ ಆದ ಲೋಪ ಆಗದಂತೆ ಪ್ರತಿಯೊಬ್ಬರೂ ತಮ್ಮ ಕಳಕಳಿಯ ಮತ್ತು ದಕ್ಷತೆಯ ಪರೀಕ್ಷೆ ಕೊಡಬೇಕು
(ಮಾಧವರಾವ ಹಿರಳೀಕರರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ನಿಷ್ಕಾಮಾಚೇ ಫಲ ಆಗಳೇ | ಸಾಮರ್ಥ್ಯ ಚಢೇ ಮಯ ದಿವೇಗಳೇ |
ಎಲ್ಲರಿಗೂ ಆಶೀರ್ವಾದ,
ಇಂದು ಚಿ.ಸುಧಾಕರ ಅಲ್ಲಿಗೆ ಹೋಗಲಿಕ್ಕೆ ಹೊರಟಿದ್ದಾನೆ. ನನ್ನ ಪ್ರಕೃತಿ ಚೆನ್ನಾಗಿದೆ. ಶ್ರೀಹನುಮಜ್ಜಯಂತಿಗಾಗಿ ಕೊಳಗೀಬೀಸ ಎಂಬ ಊರಿಗೆ ಬಂದಿದ್ದೇನೆ. ಉಳಿದೆಲ್ಲ ವಿಷಯ ಚಿ. ಸುಧಾಕರನ ಮುಖೇಣ ತಿಳಿದೇ ತಿಳಿಯುತ್ತದೆ.
ನೀವೆಲ್ಲರೂ ಶ್ರೀಗುರುಸೇವೆ ಎಂಬ ಮನೋಭಾವದಿಂದ ಮತ್ತು ಅವಿಶ್ರಾಂತವಾಗಿ ಮಾಡುತ್ತಲೇ ಇದ್ದೀರಿ. ಹೊಸದಾಗಿ ನಿಮಗೆ ಈಗ ಪ್ರೋತ್ಸಾಹನೆ ಕೊಡಬೇಕೆಂದೇನೂ ಇಲ್ಲ.
ಶ್ರೀ ಮಾರುತಿ ಮಂದಿರ, ಶ್ರೀ ಅಕ್ಕಾಬಾಯಿಯ ಮಠ ಮತ್ತು ಶ್ರೀಧರ ಕುಟಿ ಇಷ್ಟರ ವಿಚಾರ ನಿಮ್ಮ ಸಂಗಡ ಪ್ರಾಮುಖ್ಯವಾಗಿ ಇದೆ. ಮಂಗಳೂರು ಹಂಚಿನ ಕಾರಖಾನೆ ಒಂದು ಬೆಳಗಾವಿಯಲ್ಲಿ ಪ್ರಾರಂಭವಾಗಿದ್ದು, ಅಲ್ಲಿಯ ಹಂಚುಗಳೂ ಒಳ್ಳೆಯ ದರ್ಜೆಯದ್ದಾಗಿದೆ ಎಂದು ಕೇಳಬಂದಿದೆ. ಅಲ್ಲಿಂದಲೇ ತರಿಸುವದು ನಮಗೆ ಅನುಕೂಲವಾಗುವದು.
ಮಂಗಳೂರು ಹಂಚಿಗಿಂತಲೂ ಸಿಮೆಂಂಟಿನ ಪತ್ರೆ ಅನುಕೂಲವಿರುತ್ತದೆ ಎಂದೂ ನಾನು ಕೇಳಿದ್ದೇನೆ. ಆ ಕಡೆಯ ಗಾಳಿಗೆ ಹಂಚಿಗಿಂತ ಅದೇ ಹೆಚ್ಚು ಪ್ರಾಶಸ್ತ್ಯ ಎಂದು ಇಲ್ಲಿಯವರ ಹೇಳಿಕೆಯೂ ಇದೆ.
ಅನುಕೂಲವಾದ ಹಾಗೆ ಹಣವನ್ನು ಕಳಿಸುತ್ತೇನೆ. ಒಂದೆರಡು ತಿಂಗಳಲ್ಲಿ ಹೆಚ್ಚಿನ ಹಣ ಕಳಿಸಲು ಶಕ್ಯವಿದೆ. ಸಧ್ಯ ಹೆಚ್ಚಿಗಿಲ್ಲ. ಆರುನೂರು ರೂಪಾಯಿ ಕೆಲಸ ಪ್ರಾರಂಭಿಸಲಿಕ್ಕೆ ದೇವರು ಕಳಿಸಿದ್ದಾನೆ ಎಂದು ತಿಳಿಯಿತು.
ಶ್ರೀಧರ ಕುಟಿ ವಿಷಯದಲ್ಲಿ ಹೇಳುವದಾದರೆ ಎಲ್ಲರೂ ಕೂಡಿ ಮತ್ತೊಮ್ಮೆ ಹಿಂದಿನ ನೆನಪು ಬರದಂತೆ ಅಂದರೆ ಆಗ ಆದ ಲೋಪ ಆಗದಂತೆ ಪ್ರತಿಯೊಬ್ಬರೂ ತಮ್ಮ ಕಳಕಳಿಯ ಮತ್ತು ದಕ್ಷತೆಯ ಪರೀಕ್ಷೆ ಕೊಡಬೇಕು ಎಂದು ಹೇಳಬಹುದು.
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ
(ಪತ್ರಸರಣಿ ಮುಂದುವರಿಯುವದು)