ಅಕ್ಷರರೂಪ : ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ
ಯಾರಿಗೆ ಸಜ್ಜನಗಡದ ದರ್ಶನವಾಯಿತೋ ಅವರು ಧನ್ಯರು! ಯಾರಿಗೆ ಇಲ್ಲಿಯ ವಾಸ ಘಟಿಸುತ್ತದೆಯೋ ಅವರ ಭಾಗ್ಯ ಎಷ್ಟೆಂದು ಬಣ್ಣಿಸಲಿ!
(ಇಸವಿ ಸನ ೧೯೫೦ರ ಸುಮಾರಿಗೆ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ಮೂರನೆಯ ಭಾಗ)
ದುರ್ಜನರಿಗೂ ತನ್ನ ದರ್ಶನ ಕೊಟ್ಟು ಶೀಘ್ರಾತಿಶೀಘ್ರ ಸಜ್ಜನರನ್ನಾಗಿ ಮಾಡುವದರಿಂದ ಆ ಗಡಕ್ಕೆ ‘ಸಜ್ಜನಗಡ’ ಎಂದು ಹೇಳುತ್ತಾರೆ. ಪುರುಷಾರ್ಥದ ಮೂರ್ತಿವಂತ ವೈಭವ ಆ ಸ್ಥಳದಲ್ಲಿ ತನ್ನ ಪೂರ್ಣ ಪ್ರತಾಪದಿಂದ ಶೋಭಿಸುತ್ತ ವಿರಾಜಮಾನವಾಗಿದೆ. ಬಿಡಿಸಟ್ಟ ಚೈತನ್ಯದ ಮೂರ್ತಿ ಆ ಸ್ಥಳದಲ್ಲಿದೆ. ಅಘಟಿತ ಘಟನಾ ಸಾಮರ್ಥ್ಯದ ಆ ದಿವ್ಯ ತೇಜದಿಂದ ಪ್ರಕಾಶಮಾನವಾಗಿರುವ ಸಮರ್ಥರ ಆ ತಪಃಶಕ್ತಿ ಗಡದಲ್ಲಿ ಜಾಗೃತವಾಗಿದೆ. ಗಡವೆಂದರೆ ಸಾಮರ್ಥ್ಯದ ‘ನ ಭೂತೋ ನ ಭವಿಷ್ಯತಿ’ ಎಂಬಂಥ ಉತ್ಸಾಹದ ಜಾಗೃತ ಜ್ಯೋತಿಯಾಗಿದೆ. ನಿಜವಾಗಲೂ ಕೋಟೆಯ ಮೇಲಿನ ಆ ಕೇಸರಿ ಪತಾಕೆ ದಾರಿ ತಪ್ಪಿ ತಿರುಗುತ್ತಿರುವ ಮುಮುಕ್ಷುಗಳಿಗೆ, ರಾಜ್ಯಕರ್ತರಿಗೆ, ಸಮಾಜಸುಧಾಕರರಿಗೆ, ಧರ್ಮಾಭಿಮಾನಿಗಳಿಗೆ ಅವರ ಯಥಾರ್ಥ ಮಾರ್ಗದರ್ಶನದ ಯೋಗ್ಯ ಸ್ಥಾನವನ್ನೇ ತೋರಿಸುತ್ತಿದೆ ಎಂದು ಅನಿಸುತ್ತಿದೆ. ಇವತ್ತಿನ ವರೆಗಿನ ಕಾರ್ಯಕರ್ತರಿಗೆ ಶ್ರೀಸಮರ್ಥರಿಂದ ದಿವ್ಯಸ್ಫೂರ್ತಿ ಸಿಕ್ಕಿತು ಮತ್ತು ಮುಂದೆಯೂ ಸಿಕ್ಕುತ್ತಿರುತ್ತದೆ. ಸಮರ್ಥರ ಸಾಹಸೀ ಸಾಮರ್ಥ್ಯದ ಕಲ್ಪನೆ ಯಾರಿಗಿದೆಯೋ ಅವರು, ಕೆಲವೇ ಕೆಲ ಉಪಲಬ್ಧ ಇತಿಹಾಸದಿಂದಲೇ ಆದರೂ ಯಾಕಾಗಬಾರದು, ಸಮರ್ಥರ ಕಾರ್ಯವಿಸ್ತಾರದ ಕಲ್ಪನೆ ಬರುವಂತೆ ಮಾಡಿದ್ದಾರೆ. ಇದರಲ್ಲಿರುವ ಸತ್ಯತೆ ತಾನೇ ತಾನಾಗಿ ನಂಬುವಂತಿದೆ. ಒಂದು ವಿಲಕ್ಷಣ ಸ್ಫೂರ್ತಿ ಇಲ್ಲಿ ಸಿಗುತ್ತದೆ. ಈ ಸ್ಥಳದ ದರ್ಶನದಿಂದ ಉನ್ನತ ಕಲ್ಪನೆ ಮನಸ್ಸಿನಲ್ಲಿ ಉತ್ಪನ್ನವಾಗುತ್ತದೆ. ಹೃದಯದ ಮೇಲೆ ಉಚ್ಚ ಸಂಸ್ಕಾರ ಘಟಿಸುತ್ತದೆ. ಒಂದು ರೀತಿಯ ದಿವ್ಯ ತೇಜಸ್ಸು ನಿರ್ಮಾಣವಾಗುತ್ತದೆ. ಶ್ರೀಸಜ್ಜನಗಡವೆಂದರೆ ಪರಾಕ್ರಮೀ ದೈವೀಸಾಮರ್ಥ್ಯದ ಪರಮ ಪಾವನ ಸ್ಥಳವಾಗಿದೆ. ಇದು ಪರಮಾರ್ಥದ ಅಧಿಷ್ಠಾನವಾಗಿದೆ. ಇಲ್ಲಿ ‘ಗುಹ್ಯಾತ ಗುಹ್ಯತರಂ ನಿತ್ಯಂ’ ದ ಆತ್ಮಜ್ಞಾನ ಪ್ರಾಣಿಮಾತ್ರರಿಗೆ ಸಿಗುತ್ತದೆ. ಇಲ್ಲಿ ತಪ ಮಾಡಿ ಇಂದಿನವರೆಗೆ ಅನೇಕ ‘ಪ್ರಾಪ್ತ ಪುರುಷ’ರಾದರು ಮತ್ತು ಕೃತಕೃತ್ಯರಾದರು. ಇದು ವಿಶ್ರಾಂತಿಯ ಪೂರ್ಣ ವಿಶ್ರಾಂತಿಯ ಸ್ಥಳವಾಗಿದೆ. ಇದು ಸಾಧಕರ ನಿಜತೃಪ್ತಿಯ ಅನ್ನಛತ್ರವೇ ಆಗಿದೆ. ಈ ಸ್ಥಳದಲ್ಲಿ ಭಕ್ತಿಯ ಫಲಶ್ರುತಿ ಪೂರ್ಣರೀತಿಯಲ್ಲಿ ನೋಡಲು ಸಿಗುತ್ತದೆ. ಇದು ಧಾರ್ಮಿಕರ ಧರ್ಮಕ್ಷೇತ್ರ. ಇದು ಪುಣ್ಯವಂತರ ಪುಣ್ಯಭೂಮಿ. ಇದು ಸತ್ಪಾತ್ರ ಸಂತ – ಮಹಾತ್ಮರ ತಾಯ್ಮನೆ. ಬಹಳಿಷ್ಟು ಜನ ಇಲ್ಲಿದ್ದು ಸ್ವಾನಂದೋತ್ಸವ ನೋಡಿದರು. ಈ ಸ್ಥಳದ ಮಹಾತ್ಮೆಯಿಂದ ಅನೇಕ ದೋಷಗಳು ನಷ್ಟವಾಗುತ್ತವೆ. ಪತಿತರು ಪಾವನರಾಗುತ್ತಾರೆ. ಆರ್ತರ ದುಃಖದ ನಷ್ಟವಾಗುತ್ತದೆ. ಆಪದ್ಗ್ರಸ್ತರ ಸಂಕಟ ದೂರವಾಗುತ್ತದೆ. ಯಾವುದೇ ಬಾಧೆಯಿದ್ದರೂ ಅವೆಲ್ಲವೂ ಇಲ್ಲವಾಗುತ್ತವೆ. ರೋಗಿಗಳು ನಿರೋಗಿಯಾಗುತ್ತಾರೆ. ದರಿದ್ರಿಗಳು ಶ್ರೀಮಂತರಾಗುತ್ತಾರೆ. ‘ಇದರ ಮಹಿಮೆ ಮಾತಿನಲ್ಲದೆಂತು ಪೇಳುವೆ?’
ಯಾರಿಗೆ ಸಜ್ಜನಗಡದ ದರ್ಶನವಾಯಿತೋ ಅವರು ಧನ್ಯರು! ಯಾರಿಗೆ ಇಲ್ಲಿಯ ವಾಸ ಘಟಿಸುತ್ತದೆಯೋ ಅವರ ಭಾಗ್ಯ ಎಷ್ಟೆಂದು ಬಣ್ಣಿಸಲಿ!
(ಪತ್ರದ ನಾಲ್ಕನೆಯ ಭಾಗ ಮುಂದುವರಿಯುವದು)