muralidhar 2
ಫ್ಲಾಸ್ಕ್ ಎಂದಾಕ್ಷಣ ಬಿಸಿಯಾದ ನೀರು, ಕಾಫಿ, ಹಾಲು ಇವುಗಳನ್ನು ಬಹಳ ಹೊತ್ತು ಬಿಸಿಯಾಗಿಸಿ ಇಟ್ಟಿರುವ ಒಂದು ಜಡವಸ್ತು ಎಂದು ತಿಳಿದಿದ್ದೇವೆ. ಬೇಕಾದಾಗ ಮಾತ್ರ ಉಪಯೋಗಿಸಿ, ನಂತರ ಒಂದು ಕಡೆ ತಗಲು ಹಾಕುತ್ತೇವೆ. ಏನಾದರೂ ಚಳಿಗಾಲದ ಸಮಯದಲ್ಲಿ ಬಿಸಿಯಾದ ಕಾಫಿ, ನೀರು, ಅವಶ್ಯಕತೆ ಇದ್ದಾಗ ಹಾಗೂ ಯಾರಾದರೂ ಆಸ್ಪತ್ರೆಗೆ ಸೇರಿದಾಗ ಮಾತ್ರ ಇದರ ಅವಶ್ಯಕತೆ ಇರುತ್ತದೆ. ತದನಂತರ ಇದರ ಉಪಯೋಗ ಸ್ವಲ್ಪ ಅಪರೂಪವೇ ಎನ್ನಬಹುದು.

ಫ್ಲಾಸ್ಕ್ ಎಂದರೆ ಏನು? ಇದಕ್ಕೂ ಮನುಷ್ಯನಿಗೂ ಏನಾದರೂ ಸಂಬಂಧವಿದೆಯೇ? ಎಂದು ನೋಡಿದಾಗ ಮೇಲ್ನೋಟಕ್ಕೆ ಏನೂ ಇಲ್ಲ ಎಂದು ಗೋಚರಿಸುತ್ತದೆ. ಅದೊಂದು ಜಡವಸ್ತುವಾಗಿದೆ, ಇದಕ್ಕೂ ಮನುಷ್ಯನಿಗೂ ಸಂಬಂಧ ಹೇಗೆ ಕಲ್ಪಿಸಲು ಸಾಧ್ಯ ಎನ್ನಬಹುದು. ಆದರೆ ಇದರ ಹೊರ ಮತ್ತು ಒಳ ವಿನ್ಯಾಸದ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾತ್ರ ಇದಕ್ಕೂ ಮನುಷ್ಯನಿಗೂ ಇರುವ ಸಾಮ್ಯತೆ ಅರಿವಾಗುತ್ತದೆ.
ಫ್ಲಾಸ್ಕ್‍ನಲ್ಲಿ ಇರುವುದು ಹೊರಕವಚ ಹಾಗೂ ಒಳಗಡೆ ಬಿಸಿಯನ್ನು ಬಹಳ ಹೊತ್ತು ಆರದಂತೆ ಇಟ್ಟಿರುವ ಒಂದು ರೀಫೀಲ್ ಎಂಬ ವಸ್ತು ಮಾತ್ರ. ಇದನ್ನು ಮನುಷ್ಯನಿಗೆ ಹೋಲಿಸಿದಾಗ, ಇದರ ಹೊರ ಕವಚವೇ ಮನುಷ್ಯನ ದೇಹವಾಗಿದ್ದು, ಇದರೊಳಗಿನ ರೀಫೀಲ್ ಮನುಷ್ಯನ ಹೃದಯ ಎಂದು ಅರ್ಥೈಸಿದಾಗ, ರೀಫಿಲ್ ಇಲ್ಲದಿದ್ದರೆ ಫ್ಲಾಸ್ಕ್ ಹೊರಕವಚ ಕೆಲಸಕ್ಕೆ ಬರುವುದಿಲ್ಲ ಅದನ್ನು ಎಸೆಯುತ್ತೇವೆ. ಹಾಗೆಯೇ ಹೃದಯ ಇಲ್ಲದ ಮನುಷ್ಯನು ಜಡವಸ್ತುಗಳಿಗೆ ಸಮ ಅರ್ಥಾತ್ ಶವವಾಗಿರುತ್ತಾನೆ. ಇವನನ್ನು ಎಸೆಯಲು ಆಗುವುದಿಲ್ಲ ಸುಡುತ್ತೇವೆ ಅಥವಾ ಮಣ್ಣು ಮಾಡುತ್ತೇವೆ.

RELATED ARTICLES  ಸಮಸ್ಥ ಜನರ ಪ್ರಯೋಜನಕ್ಕಾಗಿಯೇ ಶ್ರೀಸಮರ್ಥರು ಎಂದ ಶ್ರೀಧರರು.

ಫ್ಲಾಸ್ಕ್ ಎಂಬ ವಸ್ತುವನ್ನು ಯಾವ ರೀತಿಯಾಗಿ ಕೆಳಕ್ಕೆ ಬೀಳಿಸಿದರೆ ರೀಫೀಲ್ ಒಡೆದು ಹೋಗುವುದೋ ಹಾಗೆ ಮನುಷ್ಯನು ಸಹ ಮೇಲಿಂದ ಬಿದ್ದಾಗ ಹೃದಯಕ್ಕೆ ಹಾನಿಯಾಗಬಹುದು. ಅತಿ ಹೆಚ್ಚು ಬಿಸಿಯಾದ ದ್ರವಪದಾರ್ಥಗಳನ್ನು ಹಾಕಿದರೆ ರೀಫೀಲ್ ಒಡೆಯುವ ಸಂಭವ ಇರುವುದರಿಂದ, ದ್ರವ ಪದಾರ್ಥಗಳನ್ನು ಸ್ವಲ್ಪ ಆರಿದ ನಂತರ ಹಾಕಿ ರೀಫೀಲಿಗೆ ಧಕ್ಕೆಯಾಗುವುದನ್ನು ತಪ್ಪಿಸುವಂತೆ, ಅತಿಯಾದ ದು:ಖದ, ಸಂತೋಷದ ಅಥವಾ ಹೆಚ್ಚು ಘಾಬರಿ ಉಳ್ಳ ಸಮಾಚಾರವನ್ನು ನೇರವಾಗಿ ಹೇಳದೆ ಅದನ್ನು ನಿಧಾನವಾಗಿ ಸೂಕ್ಷ್ಮ ರೀತಿಯಿಂದ ಹೇಳಿದರೆ ಮಾನವನ ಹೃದಯಕ್ಕೆ ಧಕ್ಕೆ ಆಗುವುದನ್ನು ತಪ್ಪಿಸಬಹುದು.
ಹೊರ ಕವಚ ಚೆನ್ನಾಗಿದ್ದು, ರೀಫೀಲ್ ಹಾಳಾಗಿದ್ದರೆ ಹೊಸ ರೀಫೀಲ್ ಹಾಕಿಸಬಹುದು, ಅದೇರೀತಿ ಮನುಷ್ಯನ ದೇಹ ಚೆನ್ನಾಗಿದ್ದು, ಒಳ ಹೃದಯ ಹಾನಿಯಾಗಿದ್ದರೆ, ಕಸಿ ಮೂಲಕ ಬೇರೆಯವರ ಹೃದಯ ಜೋಡಿಸಬಹುದು.

ರೀಫಿಲಿನಲ್ಲಿ ಕರೆಕಟ್ಟುವಂತೆ, ನಮ್ಮ ಹೃದಯದಲ್ಲಿ ಕೊಬ್ಬು ಶೇಖರಣೆಯಾಗಿರುತ್ತದೆ. ರೀಫೀಲನ್ನು ಒಂದು ಸಣ್ಣ ಕೋಲಿನಿಂದ ಶುಚಿಗೊಳಿಸಿ ಉಪಯೋಗಿಸುವಂತೆ, ನಮ್ಮ ಹೃದಯವನ್ನು ಅಂಜಿಯೋ ಪ್ಲಾಸ್ಟ್ ಮುಖಾಂತರ ಶುಚಿಗೊಳಿಸಿ, ರಕ್ತ ಪರಿಚಲನೆಯನ್ನು ಸುಗಮ ಗೊಳಿಸಬಹುದು.
ಫ್ಲಾಸ್ಕಿನ ಹೊರಭಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿಡುವಂತೆ, ಸ್ನಾನ ಮಾಡಿ ಮನುಷ್ಯನು ದೇಹವನ್ನು ಶುಚಿಯಾಗಿಡಬೇಕು. ರೀಫೀಲ್‍ಗಳನ್ನು ಸ್ವಚ್ಛವಾಗಿ ಇಡುವಂತೆ ಮನುಷ್ಯನ ಹೃದಯವನ್ನು ಶುಚಿಯಾಗಿಡಬೇಕು ಎಂದರೆ, ಹೃದಯದಲ್ಲಿ ಕೆಟ್ಟ ಗುಣಗಳು ಏನಾದರೂ ತುಂಬಿದ್ದರೆ, ಅದನ್ನು ಹೊರಹಾಕಿ ಒಳ್ಳೆಯ ಗುಣಗಳಿಂದ ಶುಚಿ ಮಾಡಬೇಕು. ಕೊಬ್ಬೆಂಬ ಕೆಟ್ಟ ವಸ್ತು ಸೇರಿದರೆ ರಕ್ತನಾಳ ಗಳಲ್ಲಿ ರಕ್ತ ಸಂಚಾರ ಆಗದೆ ಹೃದಯಕ್ಕೆ ಹಾನಿ ಯಾಗಬಹುದು. ಹಾಗೆಯೇ ಮನುಷ್ಯನಿಗೆ ಅಹಂಕಾರವೆಂಬ ಕೊಬ್ಬು ಸೇರಿದರೆ ಅರ್ಥಾತ್ ಒಳ್ಳೆಯ ಮನುಷ್ಯನು ಕೆಟ್ಟ ಮನುಷ್ಯನಾಗಬಹುದು.

RELATED ARTICLES  ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ.

ಒಂದು ಸ್ವಚ್ಛವಾದ ಫ್ಲಾಸ್ಕ್ ಯಾವ ರೀತಿ ಬಿಸಿಯಾದ ದ್ರವ ಪದಾರ್ಥಗಳನ್ನು ಸದಾಕಾಲ ಬಿಸಿಯಾಗಿರುವಂತೆ ಇಟ್ಟಿರುವುದೋ ಅದರಂತೆ, ಸ್ವಚ್ಛ ಹೃದಯವು ಮನುಷ್ಯನನ್ನು ಸದಾಕಾಲ ಆರೋಗ್ಯ ವಂತನಾಗಿಟ್ಟಿರುತ್ತದೆ..

ಒಳ್ಳೆಯ ಫ್ಲಾಸ್ಕ್ ಎಲ್ಲರಿಗೂ ಪ್ರಿಯವಾದಂತೆ ಒಳ್ಳೆಯ ಮನುಷ್ಯ ಎಲ್ಲರಿಗೂ ಪ್ರಿಯನಾಗಿರುತ್ತಾನೆ. ಫ್ಲಾಸ್ಕ್‍ನಲ್ಲಿ ಅಮೃತದಂತಹ ಹಾಲನ್ನು ತುಂಬಿಟ್ಟು ಹಸಿದು ಬಂದವರಿಗೆ ನೀಡುವಂತೆ, ಹೃದಯದಲ್ಲಿ ಒಳ್ಳೆಯ ಭಾವನೆಗಳನ್ನು ತುಂಬಿಕೊಂಡು ಸಹಾಯ ಅರಸಿ ಬಂದವರಿಗೆ ನೆರವುನೀಡಿದರೆ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ಒಳ್ಳೆಯ ಹೃದಯ ಉಳ್ಳವರು ಸದಾಕಾಲ ಒಳ್ಳೆಯವರಾಗಿರಬಹುದು.

ಫ್ಲಾಸ್ಕಿನಲ್ಲಿರುವ ಕಲ್ಮಶಗಳನ್ನು ತೆಗೆದು ಅಮೃತವೆಂಬ ಹಾಲು ತುಂಬಿಸಿ, ಅವಶ್ಯಕತೆ ಇದ್ದವರಿಗೆ ನೀಡುವಂತೆ, ಮನುಷ್ಯನ ಹೃದಯದಲ್ಲಿರುವ ರಾಗ ದ್ವೇಶ, ಅರಿಷಡ್ವರ್ಗಗಳಂತಹ ಕಲ್ಮಶಗಳನ್ನು ತೆಗೆದು ಶ್ರದ್ದಾಭಕ್ತಿ ಹಾಗೂ ಮಾನವೀಯತೆ ಎಂಬ ಒಳ್ಳೆಯ ಗುಣಗಳನ್ನು ತುಂಬಿ ಅವಶ್ಯಕತೆ ಇದ್ದವರಿಗೆ ನೆರವು ನೀಡಿದರೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾದರೆ, ಇಂತಹ ವ್ಯಕ್ತಿಗಳಿಂದ ಸಮಾಜವು ಬೆಳಗುವುದರಲ್ಲಿ ಸಂಶಯವೇ ಇಲ್ಲ.