ತಾಯಿಗೆ ತನ್ನ ಮಗು ಹೇಗೆ ಬೆಳೆಯಬೇಕು ಎನ್ನುವ ಕನಸಿದ್ದರೆ ಆ ಮಗು ಅಕ್ಷರಸಃ ಹಾಗೆಯೇ ಬೆಳೆಯುತ್ತಾನೆ. ಸುತ್ತಲ ವಾತಾವರಣ ಹೇಗೆ ಇರಲಿ, ತನ್ನ ಮಗುವಿಗೆ ಬೇಕಾದ ವಾತಾವರಣವನ್ನು ತಾಯಿ ಸೃಷ್ಟಿಸಿಕೊಡುವ ತಾಕತ್ತಿದೆ. ಹುಟ್ಟಿದ ಪುಟ್ಟ ಮಗುವಿಗೆ ನೀನು ಹೀಗೆ ಕುಳಿತುಕೊಳ್ಳಬೇಕು, ಪಂಕ್ತಿಯಲ್ಲಿ ಕುಳಿತು ಊಟ ಮಾಡಬೇಕು, ಹಿರಿಯರು ಬಂದಾಗ ಅವರಿಗೆ ಜಾಗ ಬಿಟ್ಟು ಸರಿಯಬೇಕು. ಇದೇ ರೀತಿ ಮಲಗಬೇಕು, ಬೆಳಗ್ಗೆ ಬೇಗ ಎದ್ದು ದೇವರಿಗೆ ಹೂ ಕೊಯ್ಯಬೇಕು. ಇದನ್ನೆಲ್ಲ ಹಂತಹಂತವಾಗಿ ಕಲಿಸುತ್ತಾಳೆ. ನಾನು ಬರೆದಿದ್ದು ನೋಡಿದರೆ ಮಗುವಿಗೆ ಇದು ಕಟ್ಟಳೆ, ಶಿಕ್ಷೆ ಎನ್ನಿಸುವುದೆನೋ. ಆದರೆ ಮುಂದೆ ಒಬ್ಬ ಸತ್ಪ್ರಜೆ ಆಗಬೇಕು, ಆತ ಸರಿಯಾದ ಅಭ್ಯಾಸ ಮಾಡಿ ದೊಡ್ಡ ಇಂಜಿನಿಯರ್, ಡಾಕ್ಟರ್, ಲೆಕ್ಚರ್ ಆಗಬೇಕೆಂದರೆ ಚಿಕ್ಕವರಿದ್ದಾಗಿನಿಂದ ಶಿಸ್ತುಭರಿದ ಸಂಸ್ಕಾರದ ಶಿಕ್ಷಣ ಆಗಲೇ ಬೇಕು.
ಸಂಸ್ಕಾರ ಇಲ್ಲದ ಮನುಷ್ಯ ನಾಯಿಗಿಂತ ಕಡೆ ಎಂದು ಹೇಳುತ್ತಾರೆ. ಅಂದರೆ ನಾಯಿಗೂ ತಾನುಂಡ ಮನೆಯ ಕಾಯಬೇಕು ಎನ್ನುವ ಜವಬ್ದಾರಿ ಇದೆ. ಆದರೆ ಸಂಸ್ಕಾರ, ವಿನಯ ಇಲ್ಲದವನಿಗೆ ಆನೆ ನಡೆದಿದ್ದೆ ಹಾದಿ ಎನ್ನುವಂತೆ ತನ್ನ ಮಾತು ಕಾರ್ಯಗಳನ್ನು ಒತ್ತಾಯಪೂರ್ವಕವಾಗಿ ಹೇರುತ್ತಾ ಸಾಗುತ್ತಾನೆ. ಅವನಿಗೆ ತನ್ನೆದುರಿಗೆ ಇದ್ದವರು ಏನಾಗುವರು ಎನ್ನುವ ಚಿಂತೆ ಇರುವುದಿಲ್ಲ. ಮತ್ತೊಬ್ಬರ ವ್ಯವಧಾನದ ಮಾತು ಕೇಳುವ ಗೌಜಿಗೂ ಹೋಗುವುದಿಲ್ಲ. ಕೇವಲ ಸ್ವಾರ್ಥ ಮಾತ್ರ ಕಾಣಿಸುತ್ತದೆ. ಮನುಷ್ಯ ಎಂದ ಮೇಲೆ ಸ್ವಾರ್ಥ ಇದ್ದೇ ಇರುತ್ತದೆ. ಆದರೆ ಆ ಸ್ವಾರ್ಥದ ಉದ್ದೇಶ ಮತ್ತೊಬ್ಬರ ಮೇಲೆ ಹೇರಿದಾಗ ತುಂಬಾ ಕೆಡುಕಾಗಿ ಕಾಣಿಸುತ್ತದೆ.
ತನಗೆ ಬೇಕಾದವರನ್ನು ಅಟ್ಟಕ್ಕೆ ಏರಿಸುವುದು ತನಗೆ ಬೇಡವಾದವರನ್ನು ಮೆಟ್ಟಿ ತುಳಿಯುವುದು ಮಾಡುತ್ತ, ತಾನೇ ಸರ್ವಾಧಿಕಾರಿ ಎನ್ನುತ್ತಾ ಸಂಸ್ಕಾರ, ಪದ್ದತಿಯನ್ನು ಮೂಢನಂಬಿಕೆ, ದೇವರು ನಮ್ಮೊಳಗಿದ್ದಾನೆ ಗುಡಿಗೋಪುರದಲ್ಲಿ ಇಲ್ಲ ಎಂದು ಹೇಳುತ್ತಾ ಸಾಗುವುದು ಕಂಡಾಗ ಅವನತಿಯ ಪರಮಾವಧಿ ಎನ್ನಸದೇ ಇರದು. ಇದರಿಂದ ಎಲ್ಲರಿಗೂ ಕಿರಿಕಿರಿ ಎನ್ನಿಸುವುದು ಸತ್ಯ. ಅಷ್ಟೆ ಅಲ್ಲ ತನ್ನವರು ಯಾರು ಅಂತ ತಿಳಿದಿದಾನೋ ಅವರುಗಳಿಗೂ ಮುಜುಗರವಾಗಿರುತ್ತದೆ. ಆದರೆ ಅಧಿಕಾರದ ಅಮಲಿನಲ್ಲಿ ಸಂಸ್ಕಾರ, ವಿನಯ, ಕಾಳಜಿ ಇವೆಲ್ಲವನ್ನು ಗಾಳಿಗೆ ತೂರಿ ನಡೆಯುವುದು ದೌರ್ಭಾಗ್ಯವೇ ಸರಿ.
ಒಂದು ವಾರದಿಂದ ನಮ್ಮ ರಾಜ್ಯದಲ್ಲಿಯ ಬೆಳವಣಿಗೆ ಕಂಡಾಗ ಸಾತ್ವಿಕ ಮನುಷ್ಯನಿಗೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿದುಹೋಗುತ್ತದೆ. ಕೇವಲ ಹಣ ಅಧಿಕಾರ ದುಡ್ಡು ಎಂದು ಹೋದರೆ ಆ ಅಧಿಕಾರ ಮುಗಿದ ನಂತರ ನಶ್ವರನಾಗಿ ಹೋಗುತ್ತಾನೆ ಮನುಷ್ಯ. ಅವನ ಕೊನೆಯಲ್ಲಿ ಹಿಂತಿರುಗಿ ನೋಡಿದಾಗ ಸಂಸ್ಕಾರವಂತನು ನೆಮ್ಮದಿಯ ಉಸಿರು ಬಟ್ಟರೆ ಸಂಸ್ಕಾರ ಹೀನನು ಕಹಿಯಾದ ನಿಟ್ಟುಸಿರು ಬಿಡುತ್ತಾನೆ. ಕರ್ಮ ಫಲ ಸಂಪಾದಿಸುವುದು ನಮ್ಮ ಕೈಯ್ಯಲ್ಲೆ ಇದೆ. ಅಂದಾಗ ಪಾಪ ಪುಣ್ಯವನ್ನು ಕಟ್ಟಿಕೊಳ್ಳುವುದು ನಾವು ಮಾಡುವ ಕಾರ್ಯದಿಂದಲೇ. ಅದಕ್ಕೆ ತಕ್ಕನಾಗಿ ಜನ್ಮ ಪ್ರಾಪ್ತಿಯಾಗುವುದು ಅನ್ನುವುದುಂಟು. ಆದರೆ ಶಾಸ್ತ್ರ, ಸಂಪ್ರದಾಯ, ಸಂಸ್ಕಾರ ಇವುಗಳೆಲ್ಲ ಮೂಢನಂಬಿಕೆ, ಪುರೋಹಿತಶಾಹಿ ಎನ್ನುವವರಿಗೆ ಅರ್ಥ ಮಾಡಿಸುವ ಬದಲು ಅವರ ಪಾಡಿಗೆ ಬಿಟ್ಟು ಪಾಪದ ಕೊಡ ತುಂಬಿಸಿಕೋ ಎನ್ನುವುದು ಲೇಸು ಎನ್ನಿಸುತ್ತದೆ ಒಮ್ಮೊಮ್ಮೆ.
ಆದರೆ ಇಂತವರ ಕೈಯ್ಯಲ್ಲಿ ಆಡಳಿತ ಸಿಕ್ಕರೆ ಪ್ರಜೆಗಳ ಪರಿಸ್ಥಿತಿ ಎನ್ನುವುದು ಪರದಾಟವಾಗುತ್ತದೆ. ಎಲ್ಲವೂ ಮೌಡ್ಯ, ದೇವರು ಏನನ್ನು ಹೇಳಿಲ್ಲ, ಎಲ್ಲವನ್ನು ನಾವೇ ನಮಗೆ ಹಾಕಿಕೊಂಡಿರುವುದು, ಮಾಂಸ ತಿಂದವರು ದೇವರನ್ನು ಪೂಜಿಸಬಾರದೇ ಎನ್ನುವ ಅಸಂಬದ್ಧ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಬೇಕಿದೆ. ಭೂಮಿಯಲ್ಲಿ ಪ್ರಕೃತಿಯೂ ಸಂಸ್ಕಾರ ಅಲ್ಲದಿದ್ದನ್ನು ಪ್ರವಾಹ, ಬಿರುಗಾಳಿ ಭೂಕಂಪದಂತಹವುಗಳನ್ನು ಸೃಷ್ಟಿಸಿ ಸಂಸ್ಕರಿಸುತ್ತದೆ. ಅಂತೆಯೇ ಅದೇ ಪ್ರಕೃತಿ ದೇವಿ ಮನುಷ್ಯನ ಮುಟ್ಠಾಳತನವನ್ನು ಸಹಿಸುವಷ್ಟು ಸಹಿಸಿ ಕೊನೆಗೊಮ್ಮೆ ತಾನೇ ಉತ್ತರಿಸಲು ಸಂಸ್ಕಾರಯುತವಾದ ತನ್ನ ಮಗುವನ್ನು ನೇಮಿಸುತ್ತದೆ. ಅಲ್ಲಿಯ ತನಕ ಪ್ರಜೆಗಳಿಗೆ ತಾಳ್ಮೆ ಬೇಕು ಅಷ್ಟೆ.