muralidhar 2
ಬಿಸಿಲು, ಗಾಳಿ, ಬೆಂಕಿ, ಬೆಳಕು, ನೀರಿನ ಗುಣಗಳಿಂದ ಮನುಷ್ಯನು ಯಾವ ರೀತಿಯ ನೀತಿಯನ್ನು ಕಲಿಯಬಹುದೆಂದು ತಿಳಿಯಲಾಗಿದ್ದು, ಈ ವಿಚಾರದಲ್ಲಿ ಮುಂದುವರೆಯುತ್ತಾ ನೆರಳು ಮನುಷ್ಯನ ಜೀವನಕ್ಕೆ ಇರುವ ಸಂಬಂಧವನ್ನು ಈ ಮೂಲಕ ಹೇಳಲು ಆಶಿಸುತ್ತೇನೆ.

ಮನುಷ್ಯನಿಗೆ ನೆರಳು ಅತಿಮುಖ್ಯವಾದ್ದು. ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಬಿಸಿಲು ಜಾಸ್ತಿಯಾದಾಗ ಮರದ ನೆರಳಲ್ಲೋ ಕಟ್ಟಡದ ನೆರಳಿನಲ್ಲಿ ಆಶ್ರಯ ಪಡೆಯುವುದು ಸಹಜ. ಅಥವಾ ಛತ್ರಿ ಹಿಡಿದು ನಡೆದುಹೋಗುವವರೂ ಉಂಟು. ಬಿಸಿಲಾದಾಗ ಹಳ್ಳಿಗಳ ಕಡೆ ಮರಗಳಿಂದ ನೆರಳು ಪಡೆಯಬಹುದು. ಆದರೆ ಪಟ್ಟಣ ಪ್ರದೇಶಗಳಲ್ಲಿ ಅಷ್ಟಾಗಿ ಮರಗಳೇ ಇಲ್ಲದಿರುವುದರಿಂದ ಕಟ್ಟಡದ ಕೆಳಗೆ ನೆರಳು ಪಡೆಯಲು ಆಗದೆ. ತುರ್ತು ಕೆಲಸಗಳು ಇರುವುದರಿಂದ ಬಿಸಿಲಿನಲ್ಲೇ ಹೋಗುವುದುಂಟು.

ಈ ವಿಚಾರವನ್ನು ಯಾರೂ ಪರಿಗಣಿಸುವುದಿಲ್ಲ. ಎಲ್ಲರೂ ಅವರವರ ಕಾರ್ಯದಲ್ಲಿ ಮಗ್ನರಾಗಿರು ವುದರಿಂದ ಇದರ ಬಗ್ಗೆ ಯಾರಿಗೂ ಅರಿವಾಗುವುದಿಲ್ಲ. ಬೆಳಗಿನಿಂದ ಸಂಜೆವರೆವಿಗೂ ಬಿಸಿಲಲ್ಲೇ ಕೆಲಸ ಮಾಡುವ ಮಂದಿಗೆ ಇದರ ಬಗ್ಗೆ ಗಮನವೇ ಇರುವುದಿಲ್ಲ. ಅವರಿಗೆ ಬಿಸಿಲಾದರೇನೂ ನೆರಳಾದರೇನೂ ತಮ್ಮ ಕರ್ತವ್ಯ ಮಾಡುತ್ತಾರೆ. ಬಿಸಿಲು ಎಂದು ಕುಳಿತರೆ ಅವರ ಹೊಟ್ಟೆ ತುಂಬಿಸುವವರು ಯಾರು? ಇವರಿಗೆ ನೆರಳು ಎಂಬುದು ಮರೀಚಿಕೆ ಯಾಗಿರುತ್ತದೆ. ಆದರೆ ಇನ್ನೂ ಕೆಲವರು ನೆರಳಿನಲ್ಲೇ ಕೆಲಸ ಮಾಡುತ್ತಾರೆ ಎ.ಸಿ. ರೂಮಿನಲ್ಲಿಯೋ ಅಥವಾ ಫ್ಯಾನ್ ಹಾಕಿಕೊಂಡು ಕೆಲಸ ಮಾಡುವವರು ಅಷ್ಟಾಗಿ ಗಮನಿಸಿರು ವುದಿಲ್ಲ.

ಇದನ್ನು ಮನುಷ್ಯನ ಜೀವನದಲ್ಲಿ ಅಳವಡಿಸಿದರೆ ನಾನಾ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ದೇವರು ಭಕ್ತರಿಗೆ, ತಂದೆ ತಾಯಿ ಮಕ್ಕಳಿಗೆ, ಗಂಡನು ಹೆಂಡತಿಗೆ, ಸ್ನೇಹಿತರಲ್ಲಿ ಒಬ್ಬರು ಇನ್ನೊಬ್ಬರಿಗೆ, ಸೈನಿಕರು ದೇಶಕ್ಕೆ ಹಾಗೂ ವೃದ್ದಾಪ್ಯದಲ್ಲಿ ಮಕ್ಕಳು ತಂದೆ ತಾಯಿಗೆ, ಅಣ್ಣನಾದವನು ತಂಗಿಗೆ, ತಮ್ಮನಾದರೆ ಅಕ್ಕನಿಗೆ, ಕೆಲಸ ಮಾಡುವ ಕಂಪೆನಿ ಅಥವಾ ಯಜಮಾನನು ತನ್ನ ಉದ್ಯೋಗಿಗಳಿಗೆ ಹೀಗೇ ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ ಒಬ್ಬರಿಗೊಬ್ಬರು ನೆರಳಾಗಿರುವುದು ಸಹಜ. ಇದು ವಿರುದ್ದವಾದಲ್ಲಿ ಯಾರಿಗೆ ಯಾರೂ ಇಲ್ಲದಂತಾಗಿ ಜೀವನದ ಅರ್ಥವೇ ಇಲ್ಲದಂತಾಗುತ್ತದೆ. ನೆರಳು ಎಂದರೆ ರಕ್ಷಣೆ ಅಥವಾ ಆಸರೆ ಎಂದು ಅಥ್ರೈಸಿದರೆ, ಒಬ್ಬರು ಇನ್ನೊಬ್ಬರಿಗೆ ನೆರಳಾಗಿ ಸಹ ಜೀವನ ನಡೆಸಿಕೊಂಡು ಹೋಗುವುದು ಮಾನವ ಧರ್ಮ ಹಾಗೂ ಮಾನವತೆಯೂ ಆಗಿದೆ.

RELATED ARTICLES  ಹುಡುಗ ಬರೆದ ಪ್ರಶ್ನೆಯ ಉತ್ತರಕ್ಕೂ ಕಾಂತಾರ ಎಫೆಕ್ಟ್..!

ದೇವರನ್ನು ನಿಶ್ಚಲ ಭಕ್ತಿಯಿಂದ ಸ್ತುತಿಸಿದರೆ ದೇವರು ಸಹ ಭಕ್ತರಿಗೆ ನೆರಳಾಗಿರುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ.
ತಂದೆ ತಾಯಿಗಳು ಅವರ ಮಕ್ಕಳು ಹುಟ್ಟಿದಾಗಿನಿಂದ ಅವರಿಗೆ ಬೇಕಾದ ಅವಶ್ಯಕವೆನಿಸುವ ಊಟ ತಿಂಡಿ, ಬಟ್ಟೆ ಬರೆ, ವಿಧ್ಯಾಭ್ಯಾಸ ಕೊಡಿಸಿ ದೊಡ್ಡವರಾದ ಮೇಲೆ ಅವರಿಗೆ ವಿವಾಹವನ್ನು ಮಾಡಿಸಿ ಅವರ ಕಾಲಮೇಲೆ ಅವರು ನಿಲ್ಲುವರೆವಿಗೂ ತಾವು ಬೆಂಬಲವಾಗಿ ಅಂದರೆ ನೆರಳಾಗಿ ನಿಂತು, ಅವರನ್ನು ಪರಿಪೂರ್ಣ ಮನುಷ್ಯನಾಗಿ ಮಾಡುವ ತನಕ ತಂದೆ ತಾಯಿಯರು ಮಕ್ಕಳಿಗೆ ನೆರಳಾಗಿರುತ್ತಾರೆ. ತಂದೆಯು ಮೃತನಾದಲ್ಲಿ ತಾಯಿಯೇ ಮಕ್ಕಳಿಗೆ ನೆರಳಾಗುವುದು ವಿಧಿ ನಿಯಮ. ಇಷ್ಟೆಲ್ಲಾ ಆದಮೇಲೆ ತಂದೆ ತಾಯಿಗೆ ವಯಸ್ಸಾಗುತ್ತಾ ಬಂದಲ್ಲಿ ಆಗ ಮಕ್ಕಳು ತಂದೆ ತಾಯಿಗೆ ಅವರ ಜೀವಿತದ ಕೊನೆಗಾಲದಲ್ಲಿ ಅವರ ಸೇವೆಯನ್ನು ಮಾಡುವ ಮೂಲಕ ಅವರಿಗೆ ನೆರಳಾಗಿರುತ್ತಾರೆ. ಆದರೆ ಕೆಲವು ಮಂದಿ ತಮ್ಮ ತಂದೆ ತಾಯಿಯನ್ನು ಕಡೆಗಾಲದಲ್ಲಿ ನೋಡಲು ಆಗದೆ ಅವರನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಾರೆ. ಆಗ ವೃದ್ದಾಶ್ರಮವೇ ಅವರಿಗೆ ಕಡೆಗಾಲದಲ್ಲಿ ನೆರಳಾಗಿರುತ್ತದೆ.

ಇದೇ ರೀತಿ ಗಂಡನು ಹೆಂಡತಿಗೆ ಅವಳ ಆಗು ಹೋಗುಗಳನ್ನು ನೋಡಿಕೊಂಡು ಅವಳಿಗೆ ಬೇಕಾದ ಎಲ್ಲಾ ರೀತಿಯ ಯೋಗಕ್ಷೇಮವನ್ನು ನೋಡಿಕೊಳ್ಳುವ ಮೂಲಕ ಹೆಂಡತಿಗೆ ಗಂಡನು ನೆರಳಾಗಿರುತ್ತಾನೆ. ಅಕಸ್ಮಾತ್ ಅನಿರೀಕ್ಷಿತವಾಗಿ ಗಂಡನು ಮೃತನಾದರೆ ಅವಳಿಗೆ ನೆರಳಾಗಿ ನಿಲ್ಲುವವರು ಅವಳ ತವರು ಮನೆಯವರು. ತವರು ಮನೆ ಇಲ್ಲದಿದ್ದರೆ ಕಷ್ಟದಿಂದ ಯಾವ ನೆರಳಿನ ಆಸರೆ ಇಲ್ಲದೆ ಬದುಕ ಬೇಕಾಗಿರುತ್ತದೆ. ಈ ರೀತಿಯ ಜೀವನ ಬಹಳ ಕಷ್ಟವಾಗಿರುತ್ತದೆ. ಗಂಡನು ಸ್ಥಿತಿವಂತನಾಗಿದ್ದರೆ ಪರವಾಗಿಲ್ಲ, ಇಲ್ಲದೇ ಹೋದರೆ, ತನ್ನ ಮತ್ತು ಮಕ್ಕಳ ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಲೇ ಬೇಕಾಗಿರುತ್ತದೆ. ಕೆಲಸದ ಕಛೇರಿಯ ವಾತಾವರಣ ಒಳ್ಳೆಯದಾಗಿದ್ದರೆ ಪರವಾಗಿಲ್ಲ. ಇಲ್ಲದಿದ್ದಲ್ಲಿ ಕೆಲವರು ಇಂಥವರನ್ನು ಕೆಟ್ಟ ದೃಷ್ಠಿಯಲ್ಲಿಯೇ ನೋಡುವವರಿದ್ದರೆ, ಇದನ್ನೆಲ್ಲಾ ಸಹಿಸಿಕೊಂಡು ತನಗೆ ತಾನೇ ನೆರಳಾಗಿ ಮಕ್ಕಳಿಗೂ ನೆರಳಾಗಿ ಜೀವನ ಸಾಗಿಸ ಬೇಕಾಗಿರುತ್ತದೆ. ಅನಾಥ ಮಕ್ಕಳಿಗೆ ಅನಾಥಾಶ್ರಮವೇ ನೆರಳಾಗಿರುತ್ತದೆ. ಅನಾಥ ಮಕ್ಕಳನ್ನು ದತ್ತು ಪಡೆಯುವ ಮೂಲಕ ಆ ಮಗುವಿಗೆ ದತ್ತು ಪಡೆಯುವವರು ನೆರಳಾಗಬಹುದು.

RELATED ARTICLES    ಅಮ್ಮ ನಿನ್ನ ಎದೆಯಾಳದಲ್ಲಿ...

ದೇಶಕ್ಕೆ ಸೈನಿಕರೇ ನೆರಳಾಗಿರುತ್ತಾರೆ, ಈ ನೆರಳಿಲ್ಲದಿದ್ದರೆ ದೇಶವೇ ಅಲ್ಲೋಲ ಕಲ್ಲೋಲವಾಗಿ ನಮ್ಮ ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿ ನಮಗೆ ಆಸರೆ ಇಲ್ಲದಂತೆ ಮಾಡುತ್ತಾರೆ. ನಮ್ಮ ದೇಶ ಕಾಯುವ ಸೈನಿಕರು ದೇಶಕ್ಕೆ ನೆರಳಾಗುವ ಮೂಲಕ ನಮಗೆ ರಕ್ಷಕರಾಗಿರುತ್ತಾರೆ. ಇವರುಗಳು ಮಳೆ, ಗಾಳಿ ಛಳಿ ಎನ್ನದೆ ಸುರಿಯುತ್ತಿರುವ ಹಿಮದಲ್ಲಿ, ಕೊರೆಯುವ ಛಳಿಯಲ್ಲಿ, ತಮ್ಮ ಪ್ರಾಣವನ್ನು ದೇಶಕ್ಕೆ ಮುಡುಪಾಗಿಟ್ಟು ಶತ್ರು ದೇಶದವರು ಒಳಗೆ ಸುಳಿಯದಂತೆ ಹಗಲೂ ಇರುಳೆನ್ನದೆ ದೇಶವನ್ನು ಕಾಯುತ್ತಿರುತ್ತಾರೆ. ಇವರಿಗೆ ದೇಶವೇ ಚಿರಋಣಿಯಾಗಿರುತ್ತದೆ. ಇವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂಬುದೇ ಎಲ್ಲರ ಹಾರೈಕೆ. ಆದರೂ ಕೆಲವೊಮ್ಮೆ ಅನಿರೀಕ್ಷಿತ ಪೃಕೃತಿ ವಿಕೋಪಕ್ಕೆ ಸಿಲುಕುತ್ತಾರೆ, ಅನಿರೀಕ್ಷಿತ ವೈರಿ ಪಡೆಗಳ ದಾಳಿಗಳಿಂದ ಅವರನ್ನು ಎದುರಿಸಿ ತಮ್ಮ ಪ್ರಾಣ ತ್ಯಾಗವನ್ನು ಮಾಡಿ ಹುತಾತ್ಮರಾಗುತ್ತಾರೆ. ತಮ್ಮ ಪ್ರಾಣಹೋದರೂ ಪರವಾಗಿಲ್ಲ ದೇಶಕ್ಕೆ ಮಾತ್ರ ತೊಂದರೆಯಾಗಬಾರದು ಎಂಬುದೇ ಅವರ ಧ್ಯೇಯವಾಗಿರುತ್ತದೆ. ದೇಶದ ಒಳಗೆ ಆರಕ್ಷಕರು ಜನಗಳಿಗೆ ರಕ್ಷಕರಾಗಿ ನಿಲ್ಲುವ ಮೂಲಕ ಎಲ್ಲರಿಗೂ ನೆರಳಾಗಿರುತ್ತಾರೆ.

ನೆರಳಾಗಿರುವುದು ಎಂದರೆ ಇನ್ನೊಂದು ಅರ್ಥದಲ್ಲಿ ಉಪಕಾರ ಮಾಡುವುದು ಎಂದರೂ ತಪ್ಪಾಗುವುದಿಲ್ಲ. ಒಬ್ಬರು ಇನ್ನೊಬ್ಬರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿ ಅವರಿಗೆ ನೆರಳಾಗಿ ನಿಲ್ಲಬಹುದು.

ಇದು ಮನುಷ್ಯ ಮನುಷ್ಯನಿಗೆ ನೆರಳಾಗಿರುವುದು, ಮಾತ್ರವಲ್ಲ ಮಾತು ಬರದ ಪ್ರಾಣಿಗಳು ಸಹ ಮನುಷ್ಯನಿಗೆ ನೆರಳಾಗಿರುತ್ತದೆ. ಮನುಷ್ಯ ತಾನು ಅವುಗಳಿಗೆ ಆಶ್ರಯ ನೀಡಿ ಅದಕ್ಕೆ ನೆರಳಾದರೆ ಮನುಷ್ಯನಿಗೆ ಅವು ಬೇರೆ ರೀತಿಯಲ್ಲಿ ಉಪಕರಿಸಿ ನೆರಳಾಗಿರುತ್ತವೆ. ಪ್ರತಿಯೊಂದು ಪ್ರಾಣಿಗಳು ಸಹ ಮನಷ್ಯನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉಪಕರಿಸಿ ಮನುಷ್ಯನಿಗೆ ನೆರಳಾಗಿರುತ್ತವೆ. ಹಸುಗಳು ಹಾಲನ್ನು ನೀಡಿ ಎಷ್ಟೋ ಕುಟುಂಬಗಳಿಗೆ ಜೀವನ ನಡೆಸಲು ಸಹಕಾರಿಯಾಗಿರುತ್ತವೆ. ಎತ್ತುಗಳು, ಎಮ್ಮೆಗಳು ಹೊಲದಲ್ಲಿ ದುಡಿದು ಮನುಷ್ಯನಿಗೆ ಉಪಕಾರಿ ಯಾಗಿರುತ್ತವೆ. ನಾಯಿಗಳು ತನ್ನ ಯಜಮಾನನ ಮನೆಯನ್ನು ಕಾಯುವ ಮೂಲಕ ಮನೆಗೆ ನೆರಳಾಗಿರುತ್ತವೆ. ಅನೇಕ ಪ್ರಾಣಿಗಳು ಮನುಷ್ಯನಿಗೆ ನೆರಳಾಗಿರುವುದನ್ನು ನೋಡಿದ್ದೇವೆ.

ನೆರಳೆಂದರೆ ಒಬ್ಬರು ಇನ್ನೊಬ್ಬರಿಗೆ ಉಪಕರಿಸಿ ಅವರಿಗೆ ಪುನಃ ಉಪಕಾರ ಮಾಡುವುದರಿಂದ ಒಬ್ಬರಿಗೆ ಇನ್ನೊಬ್ಬರು ನೆರಳಾಗಬಹುದು.