ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ಏರತೊಡಗಿದೆ. ಸರ್ಕಾರದದ ಅವಧಿ ಇನ್ನೂ ಎಂಟು ತಿಂಗಳು ಬಾಕಿ ಇದೆ. ಆದರೆ ಯಾವುದೇ ಸಮಯದಲ್ಲಿ ವಿಧಾನಸಭೆಗೆ ಚುನಾವಣೆ ಬರಬಹುದೆಂಬ ನಿರೀಕ್ಷೆಯ ಲೆಕ್ಕಾಚಾರ ಎಲ್ಲೆಡೆ ನಡೆದಿದೆ. ಅಧಿಕಾರ ಉಳಿಸಿಕೊಳ್ಳಲೇಬೇಂಬ ಒತ್ತಡದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹಲವು ತಂತ್ರಗಳ ಮೂಲಕ ಮತದಾರರ ಮನ ಗೆಲ್ಲುವ ಕಸರತ್ತು ನಡೆಸಿದೆ.
ಇನ್ನು, ಕರ್ನಾಟಕದಲ್ಲಿ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿದು ರಾಜ್ಯವನ್ನು ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಬಿಂಬಿಸುವ ಮೂಲಕ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಸಂಕಲ್ಪವನ್ನು ಸಾಕಾರಗೊಳಿಸಲು ಬಿಜೆಪಿ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ಇದರ ಪರಿಣಾಮವಾಗಿ ಭ್ರಷ್ಟಾಚಾರ ಆರೋಪ, ಆದಾಯ ತೆರಿಗೆ ಇಲಾಖೆ ದಾಳಿ, ಎಸಿಬಿ ಪ್ರಕರಣವೂ ಸೇರಿದಂತೆ ಹಲವಾರು ಅಂಶಗಳು ಈ ಚುನಾವಣೆಯನ್ನು ಕೇಂದ್ರೀಕರಿಸಿವೆ.
ಕಳೆದ 10 ವರ್ಷಗಳಿಂದ ಅಧಿಕಾರದಿಂದ ದೂರವಿರುವ ಜೆಡಿಎಸ್ ಪಕ್ಷ, ಪ್ರಾದೇಶಿಕ ತತ್ವ ಪ್ರತಿಪಾದನೆಯೊಂದಿಗೆ ಸ್ವಂತ ಕಾಲಿನ ಬಲದ ಮೇಲೆ ಅಧಿಕಾರ ಹಿಡಿಯುವ ತಂತ್ರದಲ್ಲಿ ನಿರತವಾಗಿದೆ. ಈ ಮೂರೂ ಪಕ್ಷಗಳ ರಾಜಕೀಯ ವರಸೆಗಳು ರಾಜ್ಯದ ಜನರ ನಡುವೆ ಚರ್ಚೆಗೆ ಗ್ರಾಸವಾಗಿರುವ ಸಮಯದಲ್ಲಿ ಗಾಂಧಿ ನಗರದಿಂದ ತೂರಿ ಬಂದ ಸುದ್ದಿಯೊಂದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅದು, ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಚಿತ್ರ ಮ್ಯಾನರಿಸಂ, ವಿಭಿನ್ನ ಆಲೋಚನೆ, ಕ್ರಿಯಾಶೀಲತೆ ಮತ್ತು ತರ್ಕದ ಮೂಲಕ ಒಂದು ವರ್ಗದ ದೊಡ್ಡ ಅಭಿಮಾನಿ ಸಮೂಹ ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯದ ಘೋಷಣೆ.
ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರ ರಣತಂತ್ರದ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವ ಪ್ರಯತ್ನದಲ್ಲಿರುವ ಸಮಯದಲ್ಲಿ ಪ್ರಜಾಕೀಯ, ಪ್ರಜಾಕಾರಣ ಎಂಬ ಹೊಸ ನುಡಿಗಟ್ಟಿನ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಭಾಷ್ಯವೊಂದನ್ನು ಬರೆಯಲು ಉಪೇಂದ್ರ ಮುಂದಾಗಿದ್ದಾರೆ. ನಿರೀಕ್ಷೆಯಂತೆ ಉಪೇಂದ್ರ ಅವರ ಈ ಘೋಷಣೆಗೆ ಅವರ ಅಭಿಮಾನಿ ಪಡೆ ಸಂಭ್ರಮದ ಸ್ವಾಗತ ನೀಡಿದೆ. ಚಿತ್ರರಂಗದ ಮಂದಿಯೂ ಕೂಡಾ ಇದೇನೊ ಹೊಸದಾಗಿ ಕಾಣುತ್ತಿದೆ ಎಂದು ಶುಭಾಶಯ ಕೋರಿದ್ದಾರೆ. ಸಾಂಪ್ರದಾಯುಕ ರಾಜಕೀಯ ಪಕ್ಷಗಳ ನಾಯಕರು ಕೂಡ ಸಿನಿಮಾದವರ ರಾಜಕೀಯ ಆಸಕ್ತಿಯನ್ನು ಬಲ್ಲವರಾಗಿದ್ದು, ತಮ್ಮದೇ ಶೈಲಿಯಲ್ಲಿ ಉಪೇಂದ್ರ ಅವರ ಪ್ರಯತ್ನ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
ನಟ ಉಪೇಂದ್ರ ಪ್ರಸ್ತಾಪಿಸಿರುವ ರಾಜಕೀಯದ ಬದಲಿಗೆ ಪ್ರಜಾಕೀಯ, ರಾಜಕಾರಣದ ಬದಲಿಗೆ ಪ್ರಜಾಕಾರಣ. ಸಿನಿಕತನದಿಂದ ನೋಡುವವರಿಗೆ ಇವೆಲ್ಲಾ ತಮಾಷೆಯ ಶಬ್ದಗಳು ಎಂದು ಅನ್ನಿಸಬಹುದು, ರಾಜಕಿಯದಲ್ಲಿ ಕೊಂಚ ಆಸಕ್ತಿ ಇರುವವರಿಗೆ ಇವು ಹೊಸ ವ್ಯವಸ್ಥೆಯೊಂದರ ಬೀಜಾಕ್ಷರದಂತೆ ಗೋಚರಿಸಬಹುದು.
ಎಲ್ಲಾ ದೊಡ್ಡ ಆಲೋಚನೆಗಳು ಆರಂಭದಲ್ಲಿ ತಮಾಷೆಯಾಗೇ ಕಾಣುತ್ತವೆ. ಹಾಗೆಯೇ ಆರಂಭದಲ್ಲಿ ಭರವಸೆ ಹುಟ್ಟಿಸುವ ಆಲೋಚನೆಗಳು, ನಂತರದಲ್ಲಿ ತಮಾಷೆಯಾಗಿ ಪರ್ಯಾವಸಾನ ಹೊಂದುತ್ತವೆ. ಹೀಗಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ಈ ಘೋಷಣೆ ತಮಾಷೆ ಅಂದುಕೊಂಡವರ ಪಾಲಿಗೆ ತಮಾಷೆ, ಗಂಭೀರ ಅಂದುಕೊಂಡವರ ಪಾಲಿಗೆ ಗಂಭೀರ ಯತ್ನವಾಗಿದೆ.
ಉಪೇಂದ್ರ ಹೊಸ ಪಕ್ಷ ಕಟ್ಟುವ ಸಲುವಾಗಿ ರಾಜಕೀಯ ಎನ್ನುವ ಪದಕ್ಕೆ ಪರ್ಯಾಯ ನುಡಿಗಟ್ಟುಗಳನ್ನು ಸೂಚಿಸುತ್ತಿದ್ದಾರೆ. ಈ ಕಲ್ಪನೆ ಅವರ ಯೋಚನೆಯ ಬಗ್ಗೆ ಕುತೂಹಲ ಮೂಡಿಸಿದೆ. ಕಾರಣ ಇಷ್ಟೇ, ರಾಜ್ಯದಲ್ಲಿ ಹಲವು ಸಿನಿಮಾ ನಟರು ರಾಜಕೀಯ ಪಕ್ಷ ಕಟ್ಟಿದ್ದಾರೆ, ಕೆಲವರು ಈಗಾಗಲೇ ಇರುವ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ, ಕೆಲವರು ತೆರೆಯ ಮೇಲೆ ಅದ್ಭುತವಾಗಿ ಅಭಿನಯಿಸುತ್ತಾರೆಂಬ ಕಾರಣಕ್ಕೆ ದೊಡ್ಡ ಅಭಿಮಾನಿ ಪಡೆ ಹೊಂದಿದ್ದು, ಚುನಾವಣಾ ರಾಜಕಾರಣದಲ್ಲಿ ಜನರಿಂದ ಶಾಸಕ, ಸಂಸದರಾಗಿ ಆಯ್ಕೆಯಾಗಿ, ಮಂತ್ರಿಯೂ ಆಗಿ ಕಾರ್ಯನಿರ್ವಹಿಸಿದ್ದಾರೆ.
ಹಾಗೆ ನೋಡಿದರೆ, ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಪ್ರಾದೇಶಿಕ ತಳಹದಿಯ ಮೇಲೆ ಕಟ್ಟಿದ ಯಾವ ಪಕ್ಷಗಳೂ ಯಶಸ್ವಿಯಾಗಿಲ್ಲ. ಸದ್ಯ ಪ್ರಬಲವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳಾಗಿವೆ. ಪ್ರಾದೇಶಿಕ ಪಕ್ಷ ಎಂದು ಗುರುತಿಸಲ್ಪಡುತ್ತಿರುವ ಜಾತ್ಯತೀತ ಜನತಾದಳಕ್ಕೆ ತನ್ನದೇ ಆದ ಚಾರಿತ್ರಿಕ ಕಾರಣಗಳಿವೆ. ಇದು ಪ್ರಾದೇಶಿಕ ಸ್ವರೂಪದ ಪಕ್ಷವಾದರೂ ಕೂಡಾ ರಾಷ್ಟ್ರೀಯ ಪಕ್ಷವೆ. ಇದಕ್ಕೂ ರಾಷ್ಟ್ರೀಯ ಅಧ್ಯಕ್ಷ, ಪದಾಧಿಕಾರಿಗಳಿದ್ದಾರೆ. ಈ ಪಕ್ಷಕ್ಕೆ ಹಿಂದೊಮ್ಮೆ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸಿದ, ಕೇಂದ್ರದಲ್ಲಿ ಅಧಿಕಾರ ಹಿಡಿದ ಜನತಾ ಪರಿವಾರದ ಬೇರುಗಳಿವೆ, ಹೀಗಾಗಿ ಕರ್ನಾಟಕಲ್ಲಿ ಜನ್ಮ ತಳೆದು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‍ಗೆ ಪರ್ಯಾಯವಾಗಿ ವಿಜೃಂಭಿಸಿದ ಜನತಾ ಪರಿವಾರದ ಹಿನ್ನೆಲೆಯಿದೆ. ಹೀಗಾಗಿ ಪ್ರಾದೇಶಿಕವಾದರೂ ರಾಷ್ಟ್ರೀಯ ಸ್ವರೂಪವಿರುವ ಕಾರಣಕ್ಕೆ ಜೆಡಿಎಸ್ ಉಳಿದಿದೆ.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ ಅರಸು, ನಿಜಲಿಂಗಪ್ಪ, ದೇವೇಗೌಡ, ಬಂಗಾರಪ್ಪ ಇತ್ತೀಚಿನ ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ನಾಯಕರು ಪ್ರಾದೇಶಿಕ ತಳಹದಿಯ ಆಧಾರದಲ್ಲಿ ಪಕ್ಷ ಕಟ್ಟಲು ಯತ್ನಿಸಿದ್ದಾರೆ. ಇದರಲ್ಲಿ ಬಂಗಾರಪ್ಪ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷ ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಅನಂತರ ಅವರೇ ಕಟ್ಟಿದ ಕರ್ನಾಟಕ ವಿಕಾಸ ಪಕ್ಷ ಹೇಳ ಹೆಸರಿಲ್ಲದಂತೆ ಹೋದರೆ, ಮಾಜಿ ಪ್ರಧಾನಿ ದೇವೇಗೌಡ ಈ ಹಿಂದೆ ಹುಟ್ಟು ಹಾಕಿದ್ದ ಸಮಾಜವಾದಿ ಜನತಾ ಪಕ್ಷ ಕೂಡಾ ಜನರ ಒಲವು ಗಳಿಸಲಿಲ್ಲ. ಇತ್ತೀಚಿನ ದಿನದಲ್ಲಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಕೂಡಾ ಇದೇ ಸಾಲಿಗೆ ಸೇರಿತು.
ಇನ್ನು ಉದ್ಯಮಿಗಳಾದ ಹರಿಖೋಡೆ ಸ್ಥಾಪಿಸಿದ್ದ ಅರಸು ಪಕ್ಷ , ವಿಜಯ ಮಲ್ಯ ಅವರ ಜನತಾ ಪಕ್ಷ, ವಿಜಯ ಸಂಕೇಶ್ವರ್ ಅವರ ಕನ್ನಡ ನಾಡು ಪಕ್ಷಗಳು ಸುದ್ದಿ ಮಾಡಿವೆಯೇ ಹೊರತು ಚುನಾವಣಾ ಕಣದಲ್ಲಿ ಸದ್ದು ಮಾಡಲಿಲ್ಲ.
ನೆರೆಯ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಬೆಳ್ಳಿ ಪರದೆಯ ಮೇಲೆ ಸಿಕ್ಕ ಯಶಸ್ಸನ್ನು ಆಧರಿಸಿ, ಪ್ರಾದೇಶಿಕ ತಳಹದಿಯ ಮೇಲೆ ಸಂಘಟಿಸಿದ ಪಕ್ಷಗಳು ಯಶಸ್ವಿಯಾಗಿದ್ದವು. ಎನ್.ಟಿ. ರಾಮರಾವ್ ಆಂದ್ರದಲ್ಲಿ, ಎಂ.ಜಿ.ಆರ್, ಜಯಲಲಿತ ತಮಿಳುನಾಡಿನಲ್ಲಿ ಯಶಸ್ಸುಗಳಿಸಿದನ್ನು ನೆಪವಾಗಿಟ್ಟುಕೊಂಡು, ಕರ್ನಾಟಕದಲ್ಲೂ ಹಲವು ಸಿನಿಮಾ ನಟರು ಹೊಸ ಪಕ್ಷ ಕಟ್ಟುವ ಯತ್ನ ನಡೆಸಿದರೂ ಅದು ಯಶಸ್ವಿಯಾಗಲಿಲ್ಲ.
ಜನಪ್ರಿಯತೆಯ ಉತ್ತುಂಗದಲ್ಲಿದ್ದ ವರ ನಟ ಡಾ.ರಾಜ್‍ಕುಮಾರ್ ಅವರು ಗೋಕಾಕ್ ಚಳುವಳಿಯ ಯಶಸ್ಸಿನ ಬೆನ್ನಲ್ಲೇ ರಾಜಕೀಯ ಸೇರ್ಪಡೆ ಆಗಬೇಕು ಎಂಬ ಬಗ್ಗೆ ಚರ್ಚೆ ಆರಂಭವಾಗಿತ್ತು. ಆದರೆ, ಗೋಕಾಕ್ ಚಳುವಳಿಯ ಯಶಸ್ಸಿನ ನಂತರದಲ್ಲಿ, ಡಾ.ರಾಜ್ ಅಭಿಮಾನಿ ಸಂಘದ ನಡೆ ಹಾಗು ಕೆಲವು ಕಹಿ ಅನುಭವಗಳು, ರಾಜ್ ಕುಮಾರ್ ಅವರನ್ನು ರಾಜಕೀಯದಿಂದ ದೂರ ಉಳಿಯುವಂತೆ ಮಾಡಿತು. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ದೊಡ್ಡ ಮನೆ ಎಂದು ಕರೆಸಿಕೊಳ್ಳುವ ಈ ಕುಟುಂಬದ ಕುಡಿಗಳು ರಾಜಕೀಯದತ್ತ ಸುಳಿಯಲಿಲ್ಲ. ರಾಜಕೀಯ ಹಿನ್ನಲೆಯಿಂದ ಬಂದ ಬಂಗಾರಪ್ಪನವರ ಪುತ್ರಿ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಚುನಾವಣಣೆಯಲ್ಲಿ ಸ್ಪರ್ಧಿಸಿದರೂ ಮೊದಲ ಯತ್ನದಲ್ಲೇ ವಿಫಲರಾದರು.
ಅಂದಿನ ಕಾಲದಲ್ಲಿ ತಮ್ಮದೇ ಅಭಿಮಾನಿ ಪಡೆ ಹೊಂದಿದ್ದ ನಟ ಅಶೋಕ್, ನೆರೆ ರಾಜ್ಯಗಳ ನಟರ ಯಶಸ್ಸು ಆಧರಿಸಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನ ಆರಂಭಿಸಿದರು. ರೈತ ನಾಯಕ ದಿವಂಗತ ಎಂ.ಡಿ. ನಂಜುಂಡಸ್ವಾಮಿ ಅವರ ಮಾರ್ಗದರ್ಶನದಲ್ಲಿ ಇವರು ಹುಟ್ಟುಹಾಕಿದ ಕನ್ನಡ ದೇಶ ಎಂಬ ಪ್ರಾದೇಶಿಕ ಪಕ್ಷ, ದಾಖಲೆಗಳಲ್ಲಿ ಈಗಲೂ ಅಸ್ತಿತ್ವದಲ್ಲಿದೆ. ಆದರೆ, ಈ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಶೋಕ್ ಸೇರಿದಂತೆ ಎಲ್ಲರೂ ಮುಗ್ಗರಿಸಿದರು. ಇವರ ನಂತರ ಯಾವುದೇ ಸಿನಿಮಾ ನಟರು, ಹೊಸ ಪಕ್ಷ ಹುಟ್ಟು ಹಾಕುವ ಸಾಹಸಕ್ಕೆ ಕೈ ಹಾಕಲಿಲ್ಲ. ಇರುವ ಪಕ್ಷಗಳಲ್ಲೇ ಕೆಲವರು ಗುರುತಿಸಿಕೊಳ್ಳುವ ಪ್ರಯತ್ನ ನಡೆಸಿದರು. ಇವರಲ್ಲಿ ಕೆಲವರು ಯಶಸ್ವಿಯಾದರೆ, ಮತ್ತೆ ಕೆಲವರು ಬಂದಷ್ಟೇ ವೇಗವಾಗಿ ನಿರ್ಗಮಿಸಿದರು.
ರಾಜ್ಯದಲ್ಲಿ ಮೊದಲಿಗೆ ಜನತಾ ಪರಿವಾರದಲ್ಲಿ ಗುರುತಿಸಿಕೊಂಡ ಅನಂತ್ ನಾಗ್, ಶಂಕರ್ ನಾಗ್ ಸೋದರರು ಮತ್ತು ‘ಮುಖ್ಯಮಂತ್ರಿ’ ಚಂದ್ರು ಅವರು ರಾಜಕೀಯದಲ್ಲಿ ಗಮನ ಸೆಳೆದ ರಾಜಕಾರಣಿಗಳು. ಇವರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಚಂದ್ರು ಅವರು ಶಾಸಕರಾಗಿ ಆಯ್ಕೆಯಾದರೆ, ಅನಂತ್ ನಾಗ್ ಮತ್ತು ಶಂಕರ್ ನಾಗ್ ಆವರು ಚುನಾವಣಾ ರಾಜಕಾರಣದಿಂದ ದೂರ ಉಳಿದಿದ್ದರು. ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ನಟ ಭಯಂಕರ ವಜ್ರಮುನಿ ಅವರು, ಬೆಂಗಳೂರಿನ ಬಸವನಗುಡಿ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡರು.
ನಟ ಚಾಣಕ್ಯ ಮುಸುರಿ ಕೃಷ್ಣಮೂರ್ತಿ, ಸುಧೀರ್ ಸೇರಿದಂತೆ ಹಲವು ಖ್ಯಾತನಾಮರು ಅಂದು ಜನತಾ ಪಕ್ಷದ ವಿರುದ್ಧ, ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಆ ಪಕ್ಷದ ಪರ ಪ್ರಚಾರ ನಡೆಸಿದರು. ಇವರ ರಾಜಕಾರಣ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಯಿತು. ನಂತರದ ದಿನಗಳಲ್ಲಿ ಅವರು ರಾಜಕಾರಣದಿಂದ ದೂರವೇ ಉಳಿದರು.
ಆದರೆ, ಇದು ರಾಜ್ಯ ರಾಜಕಾರಣದಲ್ಲಿ ಒಂದು ಪರಿಪಾಠವೆಂಬಂತೆ ಬೆಳೆಯಿತು. ವಿವಿಧ ರಾಜಕೀಯ ಪಕ್ಷಗಳು, ಚುನಾವಣೆ ಸಮಯದಲ್ಲಿ ಸಿನಿಮಾ ರಂಗದ ಹಲವರನ್ನು ಪ್ರಚಾರ ಕಾರ್ಯಕ್ಕಾಗಿ ಬಳಸತೊಡಗಿದವು. ಇದರಿಂದ ಸಿನಿಮಾ ತಾರೆಯರನ್ನು ನೋಡುವ ನೆಪದಲ್ಲಿ, ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯ ಜನ ಬರತೊಡಗಿದರು. ಒಂದು ರೀತಿಯಲ್ಲಿ ಈ ವಿಧಾನ, ರಾಜಕೀಯ ಪಕ್ಷಗಳ ಸಭೆಗೆ ಜನರನ್ನು ಸೇರಿಸುವ ಸಮಸ್ಯೆಗೆ ಪರಿಹಾರ ನೀಡಿತು. ಈ ರೀತಿ ಪ್ರಚಾರಕ್ಕಾಗಿ ಬಂದ ಕೆಲವು ಪೋಷಕ ನಟರು, ಮುಂದಿನ ದಿನಗಳಲ್ಲಿ ತಮಗೆ ಸರಿ ಅನ್ನಿಸುವ ರಾಜಕೀಯ ಪಕ್ಷದಲ್ಲಿ ಉಳಿದುಕೊಂಡರು. ಅಂಥವರಲ್ಲಿ ಉಮಾಶ್ರೀ, ಸುಂದರ್ ರಾಜ್, ಭವ್ಯ, ದ್ವಾರಕೀಶ್, ಶ್ರೀನಾಥ್, ಭಾವನಾ ಮತ್ತಿತರ ನಟ ನಟಿಯರು ಸೇರಿದ್ದಾರೆ.
ಹೀಗೆ ರಾಜಕಾರಣದಲ್ಲಿ ಉಳಿದುಕೊಂಡವರಲ್ಲಿ ನಟ ಅನಂತ್ ನಾಗ್ ಅವರು ಮೊದಲ ಬಾರಿಗೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸೋಲು ಕಂಡರೆ, ಇದಾದ ಹಲವು ವರ್ಷಗಳ ಬಳಿಕ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಿಂದ ಜನತಾ ದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಗಮನ ಸೆಳೆದರು. ಆದರೆ, ಈ ವೇಳೆಗಾಗಲೇ ನಟಿ ಆರತಿ ವಿಧಾನ ಪರಿಷತ್ ಸದಸ್ಯೆಯಾಗಿ ನಾಮಕರಣಗೊಂಡು ಗಮನ ಸೆಳೆದಿದ್ದರು.
ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ ಅನಂತ್ ನಾಗ್ ಶಾಸಕರಾಗಿ ನಂತರ ಮಂತ್ರಿಯಾಗಿಯೂ ಗಮನ ಸೆಳೆದರು. ಇವರು ಪಡೆದ ಯಶಸ್ಸು, ಮತ್ತಷ್ಟು ನಟರನ್ನು ರಾಜಕೀಯದತ್ತ ಸೆಳೆಯಿತು. ಇವರಲ್ಲಿ ಮತ್ತೊಬ್ಬ ಪ್ರಮುಖ ನಟ ಪ್ರಣಯರಾಜ ಶ್ರೀನಾಥ್. ಇವರೂ ಕೂಡ ಚುನಾವಣಾ ರಾಜಕಾರಣದಲ್ಲಿ ಯಶಸ್ಸು ಕಾಣದಿದ್ದರೂ ಬಿಜೆಪಿಯಿಂದ ವಿಧಾನಪರಿಷತ್ ಗೆ ಆಯ್ಕೆಯಾದರು. ಒಮ್ಮೆ ಶಾಸಕರಾಗಿ ಆಯ್ಕೆಯಾದ ಮುಖ್ಯಮಂತ್ರಿ ಚಂದ್ರು ಅವರು, ನಂತರದ ಚುನಾವಣೆಗಳಲ್ಲಿ ಮುಗ್ಗರಿಸಿದರು. ಬಳಿಕ ಪಕ್ಷಾಂತರ ಮಾಡಿ ಬಿಜೆಪಿಗೆ ಬಂದ ಚಂದ್ರು ಅವರು, ಆ ಪಕ್ಷದಿಂದ ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾದರು.
ಸಿನಿಮಾರಂಗ ಪ್ರವೇಶಿಸಿದ ಅತ್ಯಲ್ಪ ಸಮಯದಲ್ಲೇ ಯಶಸ್ಸಿನ ಉತ್ತುಂಗಕ್ಕೇರಿದ ಮತ್ತೊಬ್ಬ ನಟ ಶಶಿಕುಮಾರ್. ಒಮ್ಮೆ ಲೋಕಶಕ್ತಿಯಿಂದ ಚಿತ್ರದುರ್ಗ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ ಗಮನ ಸೆಳೆದರು. ಆನಂತರ ಶಶಿಕುಮಾರ್ ಅವರು, ಚಿಕ್ಕಬಳ್ಳಾಪುರ ಮತ್ತು ಹಿಂದೆ ತಾವು ಗೆಲುವು ಸಾಧಿಸಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದರೂ ಕೂಡ ಮತ್ತೆ ಗೆಲುವು ದೊರೆಯಲಿಲ್ಲ.
ಇವರ ರೀತಿಯಲ್ಲೇ ಲೋಕಶಕ್ತಿ ಮೂಲಕ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ದಿವಂಗತ ಟೈಗರ್ ಪ್ರಭಾಕರ್ ಕೂಡ ಯಶಸ್ವಿಯಾಗಲಿಲ್ಲ. ಬಂಗಾರಪ್ಪ ಅವರ ಕೆಸಿಪಿಯೊಂದಿಗೆ ಗುರುತಿಕೊಂಡ ನಂತರ ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟ ಉಮಾಶ್ರೀ ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ನಂತರ ವಿಧಾನಸಭೆಗೂ ಸ್ಪರ್ಧಿಸಿ ಆಯ್ಕೆಯಾಗಿ ಸದ್ಯ ಮಂತ್ರಿಯಾಗಿ ಕೆಲಸ ಮಾಡುತ್ತಿರುವ ಇವರು, ಸಿನಿಮಾದ ಜೊತೆಗೆ ರಾಜಕೀಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದವರು. ಪಕ್ಷ ಸಂಘಟನೆ ವಿಷಯದಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡವರು.
ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್, ಕಲಿಯುಗ ಕರ್ಣ ಎಂದೆಲ್ಲಾ ವಿಶೇಷಣಗಳಿಂದ ಈಗಲೂ ಜನಪ್ರಿಯತೆಯ ಉತ್ತುಂಗದಲ್ಲಿರುವ ಅಂಬರೀಷ್ ರಾಜಕಾರಣಿಯಾಗಿ ಮಿಶ್ರಫಲ ಅನುಭವಿಸಿದವರು. ವರನಟ ಡಾ.ರಾಜ್ ಕುಮಾರ್ ಅವರಂತೆಯೇ ದೊಡ್ಡಮಟ್ಟದ ಅಭಿಮಾನಿ ಪಡೆ ಹೊಂದಿರುವ ಅಂಬರೀಷ್, ತಾವು ಸಿನಿಮಾದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಅವಧಿಯಲ್ಲಿ, ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡರು. ಇದರಿಂದ ಬೇಸರಗೊಂಡು ಕೆಲ ದಿನಗಳ ಕಾಲ ರಾಜಕಾರಣದಿಂದ ದೂರ ಉಳಿದಿದ್ದ ಅವರು, ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿ ಮಂಡ್ಯ ಲೋಕಸಭೆಗೆ ಆಯ್ಕೆಯಾದರು. ಯುಪಿಎ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದರು. ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದ ಅಂಬರೀಶ್, ಸಿದ್ದರಾಮಯ್ಯ ಸರ್ಕಾರದಲ್ಲೂ ಸಚಿವರಾಗಿದ್ದರು. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ರಾಜಕಾರಣಿ ಆಗಿರುವ ಅಂಬರೀಶ್, ಮುಂದಿನ ವಿಧಾನಸಭೆಗೆ ಸ್ಪರ್ಧಿಸುವ ವಿಷಯದಲ್ಲಿ ಅನಿಶ್ಚಿತತೆ ಹೊಂದಿದ್ದಾರೆ.
ತಮ್ಮ ತಂದೆ ಬಂಗಾರಪ್ಪ ಅವರ ಜನಪ್ರಿಯತೆಯನ್ನೇ ಬಂಡವಾಳಗಿಟ್ಟುಕೊಂಡು ಸಿನಿಮಾದಲ್ಲಿ ಕೊಂಚ ಯಶಸ್ಸು ಗಳಿಸಿದ ಕುಮಾರ್ ಬಂಗಾರಪ್ಪ, ಆನಂತರ ರಾಜಕಾರಣದಲ್ಲೂ ಯಶಸ್ಸು ಗಳಿಸಿದರು. ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಆಯ್ಕೆಯಾಗಿದ್ದ ಇವರು, ಮಂತ್ರಿಯೂ ಆಗಿದ್ದರು. ಆದರೆ ತಮ್ಮ ಕೌಟುಂಬಿಕ ಕಲಹದ ಪರಿಣಾಮ ರಾಜಕೀಯದಲ್ಲಷ್ಟೇ ಅಲ್ಲ ಸಿನಿಮಾರಂಗದಲ್ಲೂ ಹಿನ್ನಡೆ ಅನುಭವಿಸಿದರು.
ನವರಸನಾಯಕ ಜಗ್ಗೇಶ್ ರಾಜಕಾರಣದಲ್ಲಿ ಕಾಣಸಿಗುವ ಮತ್ತೊಂದು ಸಿನಿಮಾ ಮುಖ. ಆರಂಭದಲ್ಲಿ ಕಾಂಗ್ರೆಸ್ ನಲ್ಲಿದ್ದ ಜಗ್ಗೇಶ್, ಒಮ್ಮೆ ವಿಧಾನಸಭೆಗೆ ಸ್ಪರ್ಧಿಸಿ ಸೋಲು ಕಂಡರು. ಮತ್ತೊಮ್ಮೆ ಗೆಲುವು ಕಂಡರೂ ಕೂಡ ಆಪರೇಷನ್ ಕಮಲ ಕಾರ್ಯಾಚರಣೆಗೆ ಸಿಲುಕಿ ಸುದ್ದಿಮಾಡಿ, ನಂತರ ಶಾಸಕ ಸ್ಥಾನ ಕಳೆದುಕೊಂಡರು. ನಂತರ ವಿಧಾನಪರಿಷತ್ ಪ್ರವೇಶಿಸಿದ್ದ ಜಗ್ಗೇಶ್ ಸದ್ಯ ಬಿಜೆಪಿಯಲ್ಲಿದ್ದರೂ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯುವ ಕುರಿತಂತೆ ಖಚಿತತೆ ಹೊಂದಿಲ್ಲ.
ಉದ್ಯಮಿ ವಿಜಯ ಸಂಕೇಶ್ವರ ಕನ್ನಡನಾಡು ಎಂಬ ಪ್ರಾದೇಶಿಕ ಪಕ್ಷ ಕಟ್ಟಿದಾಗ ನಟ ದ್ವಾರಕೀಶ್, ರಾಮಕೃಷ್ಣ ಸೇರಿ ಹಲವರು ಅದರಲ್ಲಿ ಗುರುತಿಸಿಕೊಂಡರು. ದ್ವಾರಕೀಶ್ ಚುನಾವಣಾ ಅಖಾಡಕ್ಕಿಳಿಯಲಿಲ್ಲ. ಆದರೆ ರಾಮಕೃಷ್ಣ ಸ್ಪರ್ಧಿಸಿ ಸೋತರು. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ನಿರ್ದೇಶಕ ಮಹೇಂದರ್, ನಟಿ ಶೃತಿ, ಪೂಜಾ ಗಾಂಧಿ ಕೆಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡರು. ಆನಂತರ ಮಳೆ ಹುಡುಗಿ ಪೂಜಾಗಾಂಧಿ ಶ್ರೀರಾಮುಲು ನೇತೃತ್ವದ ಬಿಎಸ್‍ಆರ್ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ರಾಯಚೂರಿನಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಹೀನಾಯ ಸೋಲು ಕಂಡರು.
ಇವರ ಹೊರತಾಗಿ ಸಿ.ಪಿ ಯೋಗೇಶ್ವರ್, ಬಿ.ಸಿ.ಪಾಟೀಲ್, ನರೇಂದ್ರ ಬಾಬು ಸೇರಿದಂತೆ ಹಲವರು, ಸಿನಿಮಾದೊಂದಿಗೆ ನಂಟು ಹೊಂದಿದ್ದರೂ ಕೂಡಾ ರಾಜಕಾರಣಿಗಳಾಗಿಯೇ ಗಮನಸೆಳೆದವರು.
ಇತ್ತೀಚೆಗೆ ಮೋಹಕತಾರೆ ರಮ್ಯಾ, ರಾಜಕಾರಣವನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ್ದಾರೆ. ಯುವ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಿ ಆನಂತರ ಬ್ಲಾಕ್ ಚುನಾವಣೆಗೆ ಸ್ಪರ್ಧಿಸಿ, ಯುವಕಾಂಗ್ರೆಸ್ ಪದಾಧಿಕಾರಿಯಾದ ರಮ್ಯಾ ಅವರು, ಬಳಿಕ ಮಂಡ್ಯ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಸಂಸತ್ ಪ್ರವೇಶಿಸಿದ ಅತ್ಯಂತ ಕಿರಿಯ ಸದಸ್ಯೆ ಎಂಬ ಹೆಗ್ಗಳಿಕೆ ಪಡೆದುಕೊಂಡರು.
ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತರೂ ಕೂಡ, ರಾಜಕೀಯದಿಂದ ವಿಮುಖರಾಗದೆ ಮಂಡ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಸದ್ಯ ಎಐಸಿಸಿಯ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ರೀತಿ ಮತ್ತೊಬ್ಬ ನಟಿ ಭಾವನಾ ಕೂಡಾ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡ ಮತ್ತೊಬ್ಬ ನಟಿ ಜಯಮಾಲಾ ವಿಧಾನಪರಿಷತ್ ಸದಸ್ಯೆಯಾಗಿದ್ದಾರೆ.
ಬಿಜೆಪಿಯಲ್ಲಿ ನಟಿ ತಾರಾ ಅತ್ಯಂತ ಸಕ್ರಿಯರಾಗಿದ್ದು ವಿಧಾನ ಪರಿಷತ್ ಸದಸ್ಯರಾಗಿದ್ದರೆ, ನಟಿಯರಾದ ಶೃತಿ, ಮಾಳವಿಕಾ, ದೊಡ್ಡಣ್ಣ, ನಟ ಗಣೇಶ್ ಪತ್ನಿ ನಿರ್ಮಾಪಕಿ ಶಿಲ್ಪ ಗಣೇಶ್ ಕೂಡಾ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಗಾಂಧಿನಗರದ ಹಲವು ಮಂದಿ, ರಾಜಕಾರಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರಲ್ಲಿ ಯಶಸ್ಸು ಕಂಡು, ಅಲ್ಲಿಯೇ ತಳವೂರಿದವರ ಸಂಖ್ಯೆ ಅತ್ಯಂತ ಕಡಿಮೆ. ಆದರೆ ಸಿನಿಮಾದಲ್ಲಿನ ಯಶಸ್ಸಿನ ನೆಪದಲ್ಲಿ, ರಾಜಕೀಯ ರಂಗದಲ್ಲೂ ಯಶಸ್ಸಿನ ನಿರೀಕ್ಷೆಯಲ್ಲಿ ಬಂದು, ಅದು ಸಾಕಾರವಾಗದೆ ತಮಗೆ ರಾಜಕೀಯದ ಉಸಾಬರಿಯೇ ಬೇಡ ಎಂದು ದೂರಸರಿದವರು ಅನೇಕರು.
ಇಂತಹ ಹಲವಾರು ಉದಾಹರಣೆಗಳ ನಡುವೆಯೇ, ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಉಪೇಂದ್ರ, ಯಾವುದೇ ಜಾತಿಯ ಬಲವಿಲ್ಲದೆ ಜನಪ್ರಿಯತೆಯ ಆಧಾರಲ್ಲಿಯೇ ಪಕ್ಷ ಕಟ್ಟಲು ಹೊರಟಿದ್ದಾರೆಂದು ಹಲವು ಮಾದ್ಯಮಗಳು ವ್ಯಾಪಕ ಪ್ರಚಾರ ನೀಡಿವೆ. ಈ ಹಿಂದೆ ಪಕ್ಷಗಳನ್ನು ಕಟ್ಟಿದ್ದ ಹಲವು ಪ್ರಭಾವಿ ನಾಯಕರು, ಸಿನಿಮಾ ತಾರೆಯರಿಗೆ ಸಿಗದ, ಈ ಜಾತಿಯೇ ಇಲ್ಲದ ವರ್ಗಕ್ಕೆ ಸೇರಿದವ ಎಂಬ ವಿಶೇಷಣ ಉಪೇಂದ್ರ ಅವರಿಗೆ ಸಿಕ್ಕಿರುವುದು ಮತ್ತಷ್ಟು ಅಚ್ಚರಿ.
ರಾಜ್ಯದಲ್ಲಿ ಹೊಸ ಪಕ್ಷ ಹುಟ್ಟು ಹಾಕಿದ ಬಂಗಾರಪ್ಪ ಸೇರಿದಂತೆ ಇತ್ತೀಚಿನ ಯಡಿಯೂರಪ್ಪ ಅವರ ವರೆಗಿನ ಎಲ್ಲಾ ನಾಯಕರನ್ನು ಇವರು ಇಂತಹ ಸಮುದಾಯಕ್ಕೇ ಸೇರಿದವರು ಎಂಬ ಹಣೆಪಟ್ಟಿ ಕಟ್ಟುತ್ತಿದ್ದವರು, ಉಪೇಂದ್ರ ಅವರ ವಿಷಯದಲ್ಲಿ ಭಿನ್ನ ನಿಲುವು ತಳೆದಿದ್ದಾರೆ. ಉಪೇಂದ್ರ ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸಿದರೂ ಅದನ್ನು ಅಷ್ಟಾಗಿ ಪ್ರಸ್ತಾಪಿಸದೆ, ಜಾತಿಯೇ ಇಲ್ಲದ ವ್ಯಕ್ತಿ ಪಕ್ಷ ಕಟ್ಟುತ್ತಿದ್ದಾರೆ ಎಂದು ಹೇಳುವ ಮೂಲಕ, ರಾಜ್ಯದಲ್ಲಿ ಯಾರೇ ಪಕ್ಷ ಕಟ್ಟಿದರೂ ಅವರಿಗೆ ಯಾವುದಾದರೂ ಪ್ರಬಲ ಸಮುದಾಯದ ಬಲ ಇರಬೇಕೆಂಬ ಅಂಶವನ್ನು ಕೆಲ ರಾಜಕೀಯ ವಿಶ್ಲೇಷಕರು ಪ್ರತಿಪಾದಿಸುತ್ತಿರುವುದು ಅಚ್ಚರಿ ಮೂಡಿಸುತ್ತದೆ.
ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ಯಶಸ್ವಿಯಾಗಬೇಕಾದರೆ ಹಣ ಮತ್ತು ಜಾತಿಯ ಬಲವಿರಬೇಕು, ಅದಿಲ್ಲದೆ ಯಶಸ್ಸೇ ಇಲ್ಲ. ಆದರೆ, ಉಪೇಂದ್ರ ಅವರ ಚಿಂತನೆಗಳು, ಹಣ ಮತ್ತು ಜಾತಿಯ ಬಲವಿಲ್ಲದೇ ಯಶಸ್ಸು ಗಳಿಸಬಹುದು ಅನ್ನುತ್ತಿರುವ ರಾಜಕೀಯ ಪಂಡಿತರು, ದೆಹಲಿಯಲ್ಲಿ ಇದೇ ರೀತಿಯಲ್ಲಿ ಆಮ್ ಆದ್ಮಿ ಗಳಿಸಿದ ಯಶಸ್ಸು ಉಪೇಂದ್ರರಿಗೂ ದಕ್ಕಲಿದೆ ಎಂಬ ವ್ಯಾಖ್ಯಾನ ಮಾಡುತ್ತಾರೆ.
ಹಣ ಪಡೆದು ಮತ ನೀಡುವ ಮತದಾರರನ್ನು, ಜಾತಿ ಆಧಾರದ ಮೇಲೆ ಮತ ನೀಡುವ ಜನರನ್ನು, ಪ್ರಜಾತಂತ್ರ ವ್ಯವಸ್ಥೆಯ ಖಳನಾಯಕರು ಎಂದು ಚಿತ್ರಿಸುವ ಮುನ್ನ, ಮತದಾರರು ತಮ್ಮ ಹಕ್ಕು ಚಲಾಯಿಸುವ ಮುನ್ನ ಯಾಕೆ ಹಣ ಮತ್ತು ಜಾತಿಯನ್ನು ನೋಡುತ್ತಾರೆ, ಇದಕ್ಕೆ ಕಾರಣಗಳೇನು ಎಂದು ವಿಶ್ಲೇಷಿಸಿ ಅದಕ್ಕೆ ಪರಿಹಾರ ಸೂಚಿಸಬೇಕು. ಅದನ್ನು ಬಿಟ್ಟು, ಯಾವುದೋ ರಾಜಕಾರಣಿ ಜಾತಿ ಆಧಾರದಲ್ಲಿ ಪಕ್ಷ ಕಟ್ಟಿದರೂ, ಪಕ್ಷ ಕಟ್ಟುತ್ತಿರುವ ಮತ್ಯಾರಿಗೊ ಜಾತಿಯೇ ಇಲ್ಲ ಎಂಬ ಹಣೆ ಪಟ್ಟಿ ಕಟ್ಟುವುದು ಸರಿಯಲ್ಲ. ಅದು ಹಾಗಿರಲಿ, ಜಾತಿ ಕುರಿತಾದ ಈ ಚರ್ಚೆ ಇಲ್ಲಿಗೆ ಮುಗಿಯುವುದಲ್ಲ. ಉಪೇಂದ್ರ ಅವರ ಪ್ರಜಾಕಾರಣದತ್ತ ನೋಡುವುದಾದರೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಈ ಸಮಯದಲ್ಲಿ, ಈ ಪಕ್ಷ ಅಸ್ತಿತ್ವಕ್ಕೆ ಬಂದು, ಭಾರಿ ಬದಲಾವಣೆ ತರಲಿದೆ ಎಂಬ ನಿರೀಕ್ಷೆ ತಪ್ಪು. ಆದರೆ, ಯಾವುದೊ ಒಂದು ಹೊಸತನದ ಚರ್ಚೆಯನ್ನಂತೂ ಇದು ಹುಟ್ಟುಹಾಕಿದೆ.
ದೇಶದ ರಾಜಕಾರಣದಲ್ಲಿ, ಹೊಸ ಪಕ್ಷ ಹುಟ್ಟಿದ ಕೆಲವೇ ತಿಂಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದು ಅಸ್ಸಾಂನ ”ಅಸ್ಸಾಂ ಗಣ ಪರಿಷತ್” ಮತ್ತು ದೆಹಲಿಯ ‘ಆಮ್ ಆದ್ಮಿ’ ಮಾತ್ರ. ಆನಂತರದಲ್ಲಿ ಈ ಪಕ್ಷಗಳು ತಮ್ಮದೇ ಆದ ಕಾರಣಕ್ಕೆ ವಿವಾದದ ಕೇಂದ್ರಗಳಾದವು.
ರಾಜ್ಯದ ಜನತೆ ರಾಜಕಾರಣದಲ್ಲಿ ಹೊಸತನ ಬಯಸುತ್ತಿದ್ದಾರೆ. ಏಕತಾನತೆಯ ಪಕ್ಷಗಳಿಂದ ಬೇಸರ ಹೊಂದಿದ್ದಾರೆ ಎನ್ನುವುದು ಅಕ್ಷರಶ: ನಿಜ. ಆದರೆ, ಪ್ರಜಾಕಾರಣ ಪ್ರತಿಪಾದಿಸಿದ ರಿಯಲ್ ಸ್ಟಾರ್ ಉಪೇಂದ್ರ ಹೇಳಿರುವುದನ್ನು ನೋಡಿದಾಗ ಹಲವು ಪ್ರಶ್ನೆಗಳು ಏಳುತ್ತವೆ. ಅದರಲ್ಲಿ, ಇವರಿಗೆ ತಮ್ಮ ವಾದದ ಬಗ್ಗೆ ನಿಖರತೆ ಇಲ್ಲ ಎನಿಸುತ್ತದೆ. ರಾಜ್ಯದ ಆಡಳಿತ ವ್ಯವಸ್ಥೆ, ಬಜೆಟ್, ಶಾಸಕರ ಸಂಖ್ಯೆ, ಇತ್ಯಾದಿ ಯಾವುದರ ಬಗ್ಗೆಯೂ ಇವರು ಸ್ಪಷ್ಟತೆ ಹೊಂದಿಲ್ಲ. ಈ ಸ್ಪಷ್ಟತೆ ಬರಬೇಕಾದರೆ ಇನ್ನಷ್ಟು ಅಧ್ಯಯನ, ಅನುಭವ ಬೇಕೆನಿಸುತ್ತದೆ. ಅದಾದನಂತರ ಅವರ ಚರ್ಚಾ ಶೈಲಿ ಗಮನಿಸಿ, ಪಕ್ಷದ ಕುರಿತು ಮಾತನಾಡಬಹುದು.