Home Health ಜೀವಕ್ಕೆ ಸಂಜೀವಿನಿ ಈರುಳ್ಳಿ ಬಳಸಲು ಹಿಂಜರಿಕೆ ಬೇಡ.

ಜೀವಕ್ಕೆ ಸಂಜೀವಿನಿ ಈರುಳ್ಳಿ ಬಳಸಲು ಹಿಂಜರಿಕೆ ಬೇಡ.

ಈರುಳ್ಳಿಯ ವಾಸನೆಯಿಂದಾಗಿ ಹಲವರು ಅದನ್ನು ಬಳಸುವುದಕ್ಕೇ ಇಷ್ಟಪಡದವರಿದ್ದಾರೆ. ಆದರೆ ಮುಖ್ಯವಾಗಿ ತನ್ನ ವಾಸನೆಯಿಂದಾಗಿಯೇ ಈರುಳ್ಳಿ ಪ್ರಸಿದ್ಧಿ ಪಡೆದಿದೆ. ಬಹುಪಾಲು ಎಲ್ಲ ಮಸಾಲೆ ತಿನಿಸಿನಲ್ಲಿಯೂ ಈರುಳ್ಳಿಯ ಪಾತ್ರ ಮಹತ್ವದ್ದು.ಇತ್ತೀಚಿನ ಸಂಶೋಧನೆಯೊಂದು ಮಧುಮೇಹ ಮತ್ತು ಕೊಬ್ಬನ್ನು ಇಳಿಸುವಲ್ಲಿ ಈರುಳ್ಳಿ ಸಹಕಾರಿ ಎಂಬ ಅಂಶವನ್ನು ಹೊರಹಾಕುತ್ತಿದ್ದಂತೆಯೇ ಈರುಳ್ಳಿ ಪ್ರಿಯರಿಗೆ ಮತ್ತಷ್ಟು ಸಂತೋಷವಾಗಿದ್ದಂತೂ ನಿಜ.

ನಿಯಮಿತವಾಗಿ ಈರುಳ್ಳಿ ಸೇವಿಸುವುದರಿಂದ ರಕ್ತದಲ್ಲಿನ ಮಧುಮೇಹದ ಪ್ರಮಾಣ ಸಹಜ ಹಂತಕ್ಕೆ ತಲುಪುತ್ತದೆ. ಇದರಲ್ಲಿರುವ ಪ್ರತಿಜೈವಿಕ, ನಂಜುವಿರೋಧಿ ಗುಣವು ದೇಹವನ್ನು ಯಾವುದೇ ರೀತಿಯ ಅಲರ್ಜಿ ಸಮಸ್ಯೆಯಿಂದ ಬಳಲದಂತೆ ಕಾಪಾಡುತ್ತದೆ.

ಈರುಳ್ಳಿಯಲ್ಲಿರುವ ಸಲ್ಫರ್, ಫೈಬರ್, ಪೊಟ್ಯಾಶಿಯಂ, ವಿಟಾಮಿನ್-ಬಿ, ಸಿ ಮುಂತಾದ ಅಂಶಗಳು ದೇಹಕ್ಕೆ ಹೆಚ್ಚು ಬಲ ನೀಡುವಲ್ಲಿ ಸಮರ್ಥವಾಗಿವೆ. ಜ್ವರ ಹೆಚ್ಚಾದಾಗ ಈರುಳ್ಳಿಯ ಸಣ್ಣ ಚೂರನ್ನು ಹಣೆಯ ಮೇಲಿಟ್ಟುಕೊಂಡರೆ  ಸಾಕು  ಸ್ವಲ್ಪ ಮಟ್ಟಿಗಾದರೂ ಜ್ವರ ಕಡಿಮೆಯಾಗುತ್ತದೆ.

ನೆಗಡಿ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳಿಗೆ ಈರುಳ್ಳಿ ರಸ ಮತ್ತು ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿ. ದಿನವೂ ಒಂದು ಈರುಳ್ಳಿ ಸೇವಿಸುವುದರಿಂದ ನಿದ್ರಾಹೀನತೆಯೂ ಮಾಯವಾಗುತ್ತದೆ. ಇದು ಜೀರ್ಣಕ್ರಿಯೆ ಹೆಚ್ಚುವಂತೆ ಮಾಡುತ್ತದೆ. ಸುಟ್ಟ ಗಾಯಗಳಿಗೆ ಈರುಳ್ಳಿ ರಸವನ್ನು ಹಚ್ಚುವುದರಿಂದ ಗಾಯ ಮತ್ತು ಕಲೆ ಮಾಯವಾಗುತ್ತದೆ.ಈರುಳ್ಳಿಯು ಕ್ಯಾನ್ಸರ್ ನಿವಾರಣೆಯಲ್ಲೂ ಪ್ರಮುಖ ಪಾತ್ರ ವಹಿಸಿದೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.

ಸಂಧಿನೋವುಗಳಿಂದ ಉಂಟಾಗುವ ಉರಿಯೂತಗಳನ್ನು ಈರುಳ್ಳಿ ಸೇವನೆಯಿಂದ ಹತೋಟಿಗೆ ತರಬಹುದಾಗಿದೆ. ಸ್ಮರಣಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ನರದೌರ್ಬಲ್ಯವನ್ನು ಹೋಗಲಾಡಿಸಲು ಇದು ಸಹಕಾರಿಯಾಗಿದೆ. ಕ್ಯಾಲ್ಷಿಯಂ, ಖನಿಜಾಂಶ, ಮತ್ತು ಕಬ್ಬಿಣಾಂಶ ಇದರಲ್ಲಿ ಹೇರಳವಾಗಿರುವುದರಿಂದ ಮೂಳೆಗಳನ್ನು ಬಲಗೊಳಿಸುವಲ್ಲಿಯೂ ಸಹಕಾರಿ.ಈರುಳ್ಳಿ ಹೆಚ್ಚುವಾಗ ಕಣ್ಣೀರು ಸುರಿಸದವರು ಯಾರೂ ಇಲ್ಲ.

ಹೀಗೆ ಬರುವ ಕಣ್ಣೀರು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಂತೆ. ಕಣ್ಣಿನಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಇದು ನೆರವಾಗುವುದಂತೆ. ಚರ್ಮದ ಆರೋಗ್ಯ ರಕ್ಷಣೆಯಲ್ಲೂ ಇದು ಮುಖ್ಯ ಪಾತ್ರ ವಹಿಸಿದೆ. ಕೂದಲಿನ ಆರೋಗ್ಯ ಕಾಪಾಡುವಲ್ಲೂ ಇದು ಮುಂದಿದೆ. ಪ್ರತಿದಿನವೂ ಊಟಮಾಡುವಾಗ ಸಣ್ಣ ಚೂರು ಈರುಳ್ಳಿಯನ್ನು ತಿನ್ನುವುದಕ್ಕೆ ಮರೆಯಬೇಡಿ. ಹೆಚ್ಚುವಾಗ ಕಣ್ಣೀರು ಬಂದರೆ ಇನ್ನೂ ಒಳ್ಳೆಯದು ಎಂಬುದನ್ನು ಮರೆಯದಿರಿ.