ಸಮಸ್ಯೆ ಹೇಗೆ ಬೇಕಾದರೂ ಎದುರಾಗುತ್ತದೆ. ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮಾಡಬೇಕಾಗಿರುವುದು ಚಿಂತೆಯಲ್ಲ ಆಳವಾದ ಚಿಂತನೆ. ಆ ಚಿಂತನೆ ಹೇಗಿರಬೇಕೆಂದರೆ ನಾವು ಯಾವ ಕೆಲಸವೇ ಮಾಡುತ್ತಿರಲಿ ನಾವು ಮಾಡುತ್ತಿರುವ ಚಿಂತನೆಗೆ ಬ್ರೇಕ್ ಇರಬಾರದು, ಊಟ, ತಿಂಡಿ, ನಿದ್ದೆ, ತಿರುಗಾಟ ಏನೇ ಆಗಿದ್ದರು ನಮ್ಮ ಕೆಲಸ ಏನು ಎನ್ನುವುದು ತಿಳಿದು ನಮಗೆ ಬಂದ ಸಮಸ್ಯೆ ಬಗೆಹರಿಸುವಲ್ಲಿ ಚಿಂತನೆಗೆ ಒಡ್ಡಿಕೊಂಡಿರಬೇಕು. ಹಾಗೆ ಚಿಂತನೆ ನಡೆಸುತ್ತಿದ್ದರೆ ಹುಚ್ಚ ಎನ್ನುತ್ತಾರೆ ಎನ್ನಬಹುದು. ಹೌದು ಅತೀಯಾದ ಚಿಂತನೆಗೆ ನಮ್ಮನ್ನು ಹಚ್ಚಿದರೆ ಸಮಾಜ ಇವನಿಗೊಂದು ಹುಚ್ಚು ಎನ್ನುವುದು ಖಂಡಿತ. ಆದರೆ ಉತ್ತಮವಾದ ಸಾಧನೆಗೋ ಅಥವಾ ಬಂದ ಸಮಸ್ಯೆಗೆ ನಿವಾರಣೆಗೋ ಒಂದು ಮಹತ್ ಕಾರ್ಯಕ್ಕೋ ನಾವು ನಿಲ್ಲಬೇಕು ಎಂದರೆ ಚಿಂತನೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲೇ ಬೇಕು.
ಸಿರಾಕ್ಯೂಸ್‍ನ ದೊರೆ ಹೀರೋ ಚಿನ್ನದ ಕಿರೀಟವನ್ನು ತಯಾರಿಸಲು ಅಕ್ಕಸಾಲಿಗನಿಗೆ ಆದೇಶ ನೀಡಿದ. ಕಿರೀಟದ ಕೆಲಸ ಮುಗಿಸಿ ಆ ಅಕ್ಕಸಾಲಿಗ ದೊರೆಗೆ ಅರ್ಪಿಸಿದ. ಕಿರೀಟದಲ್ಲಿ ಚಿನ್ನ ಹೊರತಾಗಿ ಅನ್ಯ ಹೀನ ಲೋಹದ ಬಳಕೆಯಾಗಿರಬಹುದೇ ಎನ್ನುವ ಸಂದೇಹ ದೊರೆಯಲ್ಲಿ ಮೂಡಿತು. ಪ್ರತ್ಯಕ್ಷ ಸಾಕ್ಷಿಗೆ ಅವಕಾಶವಿಲ್ಲ. ಆಗ ತನ್ನ ಆಸ್ಥಾನದ ವಿಖ್ಯಾತ ಪಂಡಿತರಿಗೆ ಪರೀಕ್ಷಿಸಿ ತಿಳಿಸುವ ಪಂಥ ಆಹ್ವಾನ ಮಾಡಿದ.
ಆರ್ಕಿಮಿಡಿಸ್ ಎನ್ನುವವನು ಅರಸನಿಂದ ಅಪ್ಪಣೆ ಪಡೆದು ಈ ಕಿರೀಟದಲ್ಲಿ ಇತರ ಲೋಹದ ಮಿಶ್ರಣವಿದೆಯೇ ಎಂಬುದನ್ನು ತಿಳಿಯಲು ಯೋಚಿಸತೊಡಗಿದ. ಲೆಕ್ಕ ಹಾಕಿದ, ಗುಣಿಸಿದ, ಭಾಗಿಸಿದ, ಹಲವು ದೃಷ್ಟಿಕೋನಗಳಿಂದ ವಿಶ್ಲೇಷಿಸಿದ. ಹಗಲಿರುಳು ಯೋಚಿಸಿದ. ಏಕಾಗ್ರ ಚಿತ್ತನಾಗಿ ಚಿಂತಿಸಿದ. ನಂತರದ ದಿನದಲ್ಲಿ ಧ್ಯಾನ ಪರನಾದ. ಹೀಗಿರುವಾಗ ಒಂದು ದಿನ ಸ್ನಾನವನ್ನು ಮಾಡುವಾಗಲೂ ಅದನ್ನೇ ಯೋಚಿಸುತ್ತಿದ್ದ.
ಸ್ನಾನವನ್ನು ನೀರು ತುಂಬಿದ ತೊಟ್ಟಿಯಲ್ಲಿ ಇಳಿದು ಮಾಡುತ್ತಿದ್ದ. ದಿನದಂತೆ ತೊಟ್ಟಿಯಲ್ಲಿ ಇಳಿಯುತ್ತಿದ್ದಂತೆ ಕಾಲು ಜಾರಿ ತೊಟ್ಟಿಯಲ್ಲಿ ಬಿದ್ದ. ಆಗ ಒಂದಿಷ್ಟು ನೀರು ತುಳುಕಿ ಹೊರಬಿದ್ದಿತು. ಅದೋ ತೇಲುವಿಕೆಯ ನಿಯಮ. ಸಾಕ್ಷೇಪ ಸಾಂದ್ರತೆಯ ಸಿದ್ಧಾಂತ ಸಾಂದ್ರತೆಯ ಸಾಕ್ಷಾತ್ಕಾರ ಅವನಿಗಾಯಿತು. ರಾಜನ ಕಿರೀಟದ ಖೋಟಾತನ ಬಯಲಿಗೆಳೆಯಲು ಬೇಕಾದ ಪರಿಹಾರ ಸಿಕ್ಕೇ ಬಿಟ್ಟಿತು.
ಆರ್ಕಿಮಿಡಿಸನಿಗೆ ತಡೆಯಲಾರದ ಆನಂದಿಂದ ಮೈಮರೆತು ಸ್ನಾನದ ಮನೆಯಿಂದ ಹೊರಗೋಡಿದ. ಮದ್ಯಾಹ್ನದ ಸುಡು ಬಿಸಿಲಿನಲ್ಲಿ ಬೀದಿಯಲ್ಲಿ ಜನಗಳು ತುಂಬಿದ್ದರು. ಈತ ತಾನು ಯಾವ ಸ್ಥಿತಿಯಲ್ಲಿ ಇದ್ದೇನೆ ಎಂದು ನೋಡದೆ “ಯುರೇಕಾ ಯುರೇಕಾ ಯುರೇಕಾ” ( ಕಂಡೆ ನಾ, ಕಂಡೆ ನಾ, ಕಂಡೆ ನಾ) ಎನ್ನುತ್ತಾ ಬೆತ್ತಲೆಯಾಗಿ ಓಡಿದ್ದನು. ಬೀದಿಯ ಜನರೆಲ್ಲ ಈತ ಹುಚ್ಚನೆಂದು ನಗುತಿತ್ತು. ಆದರೆ ಆತ ಮಹಾನ್ ಗಣಿತ ತಜ್ಞ. ಮಹಾನ್ ಸಾಧಕನಾಗಿ ಹೊರಹೊಮ್ಮಿದ.
ಹೌದು ಎಲ್ಲರೂ ಆರ್ಕಿಮಿಡಿಸ್ ಆಗಲು ಸಾಧ್ಯವಿಲ್ಲ. ಆದರೆ ನಾವು ನಮ್ಮ ಸ್ಥಳದಲ್ಲಿ ನಮ್ಮ ವ್ಯಾಪ್ತಿ ಪ್ರದೇಶದಲ್ಲಿ ಏನು ಸಾಧಿಸಿ ತೋರಿಸಬೇಕಿದೆಯೋ, ಯಾವುದು ನಮ್ಮದಾಗಿಸಿಕೊಳ್ಳಬೇಕಿದೆಯೋ ಅದಕ್ಕಾಗಿ ನಿತ್ಯ ಚಿಂತನೆ ಮಾಡಲೇ ಬೇಕು. ಇಲ್ಲವಾದಲ್ಲಿ ಹತ್ತರಲ್ಲಿ ಹನ್ನೊಂದು ಎನ್ನುವಂತೆ ಬದುಕು ಕಳೆದುಕೊಂಡು ಸಾಗಿ ಹೋಗುತ್ತೇವೆ. ನಾವು ಮಾಡುವ ಕಾರ್ಯಕ್ಕೆ ಹತ್ತರಲ್ಲಿ ನಾಲ್ಕು ಜನ ಒಳ್ಳೆದಾಗಲಿ ಎಂದು ಹರಸಿದರೆ ಮತ್ತೆರಡು ಜನ ಏನು ಮಾಡುತ್ತಾನೆ ನೋಡುವಾ ಎಂದು ಕಾದಿರುತ್ತಾರೆ. ಮತ್ತೆ ನಾಲ್ಕು ಜನ ಟೀಕೆ, ಅಪಹಾಸ್ಯ, ತುಳಿಯಲು ಯತ್ನಿಸುತ್ತಾರೆ. ಈ ಎಲ್ಲರಿಂದ ಹೊರತಾಗಿ ನಮ್ಮ ಗುರಿ, ಉದ್ದೇಶ ಮುಂದಿಟ್ಟುಕೊಂಡು ಚಿಂತನೆ ನಡೆಸಿ ಕಾರ್ಯಪ್ರವೃತ್ತರಾದರೆ ಯಾವುದು ಕಷ್ಟವೆನಿಸುವುದೇ ಇಲ್ಲ.