ಎಲ್ಲವನ್ನೂ ಪ್ರೀತಿಸು, ಯಾವುದರಲ್ಲಿಯೂ ಮೋಹವಿಡಬೇಡ. ಮೋಹ ಸರ್ವನಾಶಕ್ಕೆ ಕಾರಣ. ‘ರಾಮನಿಗೆ ಸೀತೆಯ ಮೇಲೆ ಪ್ರೀತಿ ಇತ್ತು, ರಾವಣನಿಗೆ ಮೋಹವಿತ್ತು’ ಆ ಮೋಹವೇ ಅವನ ಸರ್ವನಾಶಕ್ಕೆ ಕಾರಣವಾಯಿತು. ಜೀವನವೃಕ್ಷ ಸೊಂಪಾಗಿ ಬೆಳೆಯಲು, ಬೆಳೆದು ತಂಪಾಗಿರಲು ಪ್ರೀತಿಯ ಸೆಲೆ ಬೇಕು. ಆದರೆ ಪ್ರೀತಿಯ ಸೆಲೆ ಮೋಹದ ಬಲೆಯಾಗಬಾರದು, ಮೋಹವೆಂಬ ಶಬ್ಧಕ್ಕೆ ವಿವೇಕವಿಲ್ಲದಿರುವಿಕೆ ಎಂದರ್ಥ. ಯಾವುದರಲ್ಲಿಯೇ ಆದರೂ ಮಿತಿ ಮೀರಿ ಅಂಟು ಬೆಳೆದಾಗ ವ್ಯಕ್ತಿ ಅದಕ್ಕಾಗಿ ಹಂಬಲಿಸುತ್ತಾ ವಿವೇಚನೆಯನ್ನು ಕಳೆದುಕೊಳ್ಳುತ್ತಾನೆ. ಯಾವುದು ಒಳಿತು ಯಾವುದು ಕೆಡುಕು ಎಂಬುದನ್ನು ತಿಳಿಸಿಕೊಡುವ ವಿವೇಚನಾ ಬುದ್ಧಿ ನಷ್ಟ ಗುತ್ತಿದ್ದಂತೆ ನಾಶದ ಪರಂಪರೆಯೇ ಅರಂಭವಾಗುತ್ತದೆ.
ಹಾಗಾಗಿ ಯಾವುದರ ಕುರಿತೂ ಅತಿಯಾದ ವ್ಯಾಮೋಹ ಬೇಡ. ನಿರೀಕ್ಷೆ ಹೆಚ್ಚಾದಲ್ಲಿ ನಿರಾಸೆ ಖಂಡಿತಾ. ಯಾವುದನ್ನು ಪ್ರೀತಿಸಬೇಕೋ ಅದನ್ನು ಪ್ರೀತಿಸಿ ಅಲ್ಲೂ ಕೂಡಾ ಮಿತಿ ಇರಲಿ. ಮಿತವಿರುವಲ್ಲಿ ಹಿತವಿದೆ ಎಂಬ ಪ್ರಜ್ಞರ ಮಾತು ನೆನಪಿನಲ್ಲಿರಲಿ, ಆಸೆಯೆಂಬ ಬಿಸಿಲು ಕುದುರೆ ಏರಿದಾಗ ಮೋಹ ನಮ್ಮನ್ನು ಆವರಿಸಿಕೊಳ್ಳುತ್ತದೆ. “ಮೋಹದ ಕ್ಷಯವೇ ಮೋಕ್ಷ” ಎಂಬ ಅರಿವಿರಲಿ.