muralidhar 2

ದಾಸ ಶ್ರೇಷ್ಠರಾದ ಶ್ರೀ ಪುರಂಧರದಾಸರ ಕೀರ್ತನೆಯಲ್ಲಿ ಮಣ್ಣಿಂದ ಕಾಯ ಮಣ್ಣಿಂದ ಎಂದು ಹೇಳಿ, ಮೂರು ಲೋಕವೂ ಮಣ್ಣಿನಿಂದ ಕೂಡಿದೆ, ಮಣ್ಣಿಲ್ಲದೆ ಪ್ರಪಂಚವೇ ಇಲ್ಲ ಎಂದು ಸಾರಿದ್ದಾರೆ.

ಪ್ರಕೃತಿಯ ಅಮೂಲ್ಯ ಕೊಡುಗೆ ಮಣ್ಣು. ಮಣ್ಣಿಲ್ಲದೆ ಜೀವನವಿಲ್ಲ. ಮಣ್ಣು ಎಂಬ ವಸ್ತು ಇಲ್ಲದಿದ್ದರೆ ಭೂಮಿಯೇ ಇರುವುದಿಲ್ಲ. ಬೆಳೆ ಬೆಳೆಯಲು ಮಣ್ಣು ಬೇಕು. ಮನೆ ಕಟ್ಟಲು ಮಣ್ಣು ಬೇಕು. ಪ್ರಪಂಚವೇ ಮಣ್ಣಿನಿಂದಲೇ ಆವೃತವಾಗಿದೆ.

ಈ ಮಣ್ಣನ್ನು ಜೀವನಕ್ಕೆ ಹೋಲಿಸಿದಾಗ, ಸಕಲ ಜೀವ ಚರಾಚರವಸ್ತುಗಳು, ನಿರ್ಜೀವ ವಸ್ತುಗಳು ನೆಲಸಿರುವ ನೆಲವೇ ಮಣ್ಣು ಆಗಿದೆ ಇದನ್ನು ಹೇಗೆ ಜೀವನಕ್ಕೆ ಹೋಲಿಸಲು ಸಾಧ್ಯ. ಎಂದರೆ ಅದರಲ್ಲೂ ಒಂದು ಸೂಕ್ಷ್ಮತೆ ಇದೆ. ಮಣ್ಣು ಮನುಷ್ಯನ ಮನಃಸ್ಥಿತಿಯನ್ನು ಹೇಳುತ್ತದೆ. ಅದು ಹೇಗಪ್ಪಾ ಅದು ಜಡವಸ್ತು ಅದು ಹೇಗೆ ನಮ್ಮ ಮನಃಸ್ಥಿತಿಯನ್ನು ಹೇಳುತ್ತದೆ ಅದರಿಂದ ಕಲಿಯುವುದು ಏನಿದೆ ಎಂದು ಹುಬ್ಬು ಏರಿಸಬೇಡಿ. ಮಣ್ಣಿನಲ್ಲಿರುವ ಸ್ವಭಾವವು ಮನುಷ್ಯನಲ್ಲೂ ಇರುತ್ತದೆ ಎಂದು ಅದನ್ನು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ತಿಳಿಯುತ್ತದೆ. ಇಲ್ಲದಿದ್ದರೆ ಮಣ್ಣು ಮಣ್ಣಾಗಿ ಉಳಿಯುತ್ತದೆ ನಾವು ನಾವಾಗಿಯೇ ಉಳಿಯುತ್ತೇವೆ.

ಮಣ್ಣಿನಲ್ಲಿ ಹಲವಾರು ವಿಧದ ಮಣ್ಣು ಇರುತ್ತದೆ. ಜೇಡಿಮಣ್ಣು, ಕೆಬ್ಬೆ ಮಣ್ಣು, ಹೊಲದ ಮಣ್ಣು, ಕಪ್ಪುಮಣ್ಣು ಮತ್ತು ಮರಳು ಹೀಗೆ ಹಲವಾರು ವಿಧವಾದ ಮಣ್ಣುಗಳು ನಮ್ಮ ಮನದ ಸ್ಥಿತಿಯನ್ನು ಹೇಳುತ್ತವೆ ಎಂದರೆ ಇದನ್ನು ಗಮನಿಸಿದಾಗ ಮಾತ್ರ ತಿಳಿಯುತ್ತದೆ.

ಮನುಷ್ಯನ ಮನಸ್ಸು ಜೇಡಿಮಣ್ಣಿನಂತಾದರೆ ಇದರಿಂದ ಮನಸ್ಸು ಬಹಳ ಜಿಗುಟು ಸ್ವಭಾವ ಹಾಗೂ ಕಠಿಣವಾಗಿರುತ್ತದೆ. ಚಿಕ್ಕಂದಿನಿಂದಲೂ ಯಾರೂ ಏನೂ ಹೇಳಿದರೂ ಕೇಳದೆ ತನ್ನದೇ ಆದ ರೀತಿಯಲ್ಲಿ ಹಠದಿಂದ ನಡೆದುಕೊಂಡು ಬಂದಿದ್ದರೆ ಇಂತಹ ಮನುಷ್ಯನ ಸ್ವಭಾವದಿಂದ ಕರುಣೆ ಮಾನವೀಯತೆ ಕನಸಿನ ಮಾತು. ತಾನು ಹೇಳಿದ್ದೇ ನಡೆಯಬೇಕು. ಕರುಣೆ ಇಲ್ಲದೆ ಕಠಿಣ ಮನಸ್ಸಿದ್ದರೆ, ಸ್ನೇಹಿತರಾಗಲೀ ಅಥವಾ ಬೇರೆಯವರು ಯಾರೇ ಆಗಲೀ, ಎಷ್ಟೇ ಕಷ್ಟ ಪಡುತ್ತಿದ್ದರೂ ಸಹಾಯ ಮಾಡಬೇಕೆನಿಸುವುದಿಲ್ಲ. ಅಕಸ್ಮಾತ್ ಯಾರಾದರೂ ಇವರ ಕೈಯಲ್ಲಿ ಸಿಕ್ಕಿಕೊಂಡರೆ ಕೆರೆಯಲ್ಲಿನ ಹೂಳಿರುವ ಜೇಡಿಮಣ್ಣಿನ ಕೆಸರಲ್ಲಿ ಸಿಲುಕಿಕೊಂಡಂತೆ ಆಗುತ್ತದೆ. ಸುಲಭವಾಗಿ ಬಿಡಿಸಿಕೊಂಡು ಬರಲು ಸಾಧ್ಯವಿಲ್ಲ. ಜೇಡಿಮಣ್ಣಿನ ಮೇಲೆ ನೀರು ಬಿದ್ದರೆ ಯಾವರೀತಿ ಜಾರುವುದೋ ಅದೇ ರೀತಿ ನಂಬಿದವರು ಕೆಳಕ್ಕೆ ಜಾರಿಹೋಗುತ್ತಾರೆ. ಕೆರೆಯಲ್ಲಿ ಜೇಡಿಮಣ್ಣು ಹೆಚ್ಚಾಗಿ ಹೂಳು ತುಂಬಿ ಕೆರೆ ಹಾಳಾಗುವಂತೆ ಕಠಿಣ ಗುಣಗಳಿಂದ ಮನಸ್ಸೂ ಹಾಳಾಗುತ್ತದೆ.

RELATED ARTICLES  ಪಂಡಿತನು ಯಾರು.....?

ಕೆರೆಯಲ್ಲಿನ ಹೂಳು ತೆಗೆದು ಸ್ವಚ್ಛ ಮಾಡುವಂತೆ ಮನಸ್ಸಿನಲ್ಲಿರುವ ಕಠಿಣ ಗುಣಗಳನ್ನು ತೆಗೆದು ಸ್ವಚ್ಛ ಮಾಡಿದರೆ ಒಳ್ಳೆಯ ಮನುಷ್ಯರಾಗಬಹುದು.
ಜೇಡಿ ಮಣ್ಣನ್ನು ಮೃದುವಾಗಿ ಪರಿವರ್ತಿಸಿ ಅನೇಕ ರೀತಿಯಲ್ಲಿ ಕಠಿಣವಾದ ಮನಸ್ಸನ್ನು ಪರಿವರ್ತಿಸಿದ್ದಲ್ಲಿ ಮನಸ್ಸೂ ಸಹ ಮೃದುವಾಗುತ್ತದೆ. ಇದಕ್ಕೆ ಸ್ವಲ್ಪ ತಾಳ್ಮೆಬೇಕು.
ಎರಡನೆಯದಾಗಿ ಕೆಂಪುಮಣ್ಣು ಇದು ಸ್ವಲ್ಪ ಮೃದು ಎಂದು ಹೇಳಬಹುದು. ಈ ಮಣ್ಣಿನ ಮೇಲೆ ಸ್ವಲ್ಪ ನೀರು ಹಾಕಿದರೂ ಕರಗುತ್ತದೆ. ಮನುಷ್ಯನ ಮನಸ್ಸು ಕೆಂಪುಮಣ್ಣಿನಂತಿದ್ದರೆ, ಯಾರಾದರೂ ಸ್ವಲ್ಪ ಕಷ್ಟದಲ್ಲಿರುವವರನ್ನು ಕಂಡರೆ ಮನಸ್ಸು ಸಹ ಕರಗುತ್ತದೆ. ಕಷ್ಟ ಸುಖ ಅರಿಯುವ ಪರೋಪಕಾರದ ಗುಣ ಇದ್ದರೆ ಮೆದು ಮನಸ್ಸಿನವರಾಗಿದ್ದಲ್ಲಿ, ಆಕರ್ಷಕ ವ್ಯಕ್ತಿಯಾಗಿರಬಹುದು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಮೂರನೆಯದಾಗಿ ಹೊಲದ ಮಣ್ಣು ಈ ಮಣ್ಣು ಬಹಳ ಫಲವತ್ತಾದ ಮಣ್ಣಾಗಿದ್ದು, ಬೆಳೆಗಳು ಬೆಳೆಯಲು ಬಹಳ ಅನುಕೂಲವಾಗಿರುತ್ತದೆ. ವರ್ಷ ವರ್ಷವೂ ಬೆಳೆ ಬೆಳೆಯಲು ಅನುಕೂಲವಾಗಿರುತ್ತದೆ. ಇದನ್ನು ಹೊಲವನ್ನು ಉಳುವಾಗ ಎತ್ತುಗಳು ಹಾಗೂ ರೈತರು ತುಳಿದು ಮಳೆ ಗೊಬ್ಬರಗಳಿಂದ ಬೆರೆತು ಇನ್ನೂ ಫಲವತ್ತಾಗಿರುತ್ತದೆ. ಅದೇ ರೀತಿ ಮನುಷ್ಯನು ಕಷ್ಟ ಸುಖಗಳಲ್ಲಿ ನೊಂದು ಬೆಂದು, ತಂದೆ ತಾಯಿ ಗುರುಹಿರಿಯರಿಂದ ಒಳ್ಳೆಯ ಗುಣಗಳನ್ನು ಹೊಂದಿದರೆ ಮನಸ್ಸು ಪರಿ ಪಕ್ವವಾಗಿರುತ್ತದೆ ಹಾಗೂ ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗಿರುತ್ತಾರೆ.

ಮನುಷ್ಯನ ಮನಸ್ಸು ಮರಳಿನಂತೆ ಪರಾವಲಂಬಿಗಳಾಗಬಾರದು. ಮರಳೊಂದೇ ಯಾವುದೇ ಕೆಲಸಕ್ಕೆ ಬರುವುದಿಲ್ಲ. ಇದಕ್ಕೆ ಬೇರೆ ವಸ್ತುಗಳನ್ನು ಸೇರಿಸಿದರೆ ಮಾತ್ರ ಇದು ಬಲಯುತವಾಗಿರುತ್ತದೆ. ಮರಳು ಸಿಮೆಂಟ್ ಜಲ್ಲಿ ಕಬ್ಬಿಣಗಳೊಂದಿಗೆ ಬೆರೆತರೇ ಮಾತ್ರ ಶಕ್ತಿಯುತವಾಗಿರುತ್ತದೆ. ಮನುಷ್ಯನು ತನ್ನ ಸ್ವಂತ ಸಾಮಥ್ರ್ಯದಿಂದ ಏನನ್ನಾದರೂ ಸಾಧಿಸಲು ಪ್ರಯತ್ನಿಸಬೇಕು. ಮರಳಿನಂತ ಮನಸ್ಸುಳ್ಳ ಮನುಷ್ಯನಾದರೆ ಬೇರೆಯವರ ಜೊತೆಯಾದಾಗಲೇ ಏನನ್ನಾದರೂ ಸಾಧಿಸಲು ಸಾಧ್ಯ. ಇದರಿಂದ ಒಬ್ಬಂಟಿಗರಾಗಿ ಕೆಲಸ ಮಾಡುವ ಧೈರ್ಯ ಬರುವುದಿಲ್ಲ.

ಜೇಡಿಮಣ್ಣನ್ನು ಹೊಲಗಳಿಗೆ ಹಾಕಿ, ಹದ ಬರುವಂತೆ ತುಳಿದು ಪರಿಪಕ್ವ ಮಾಡುವಂತೆ ಮನುಷ್ಯನು ಕಠಿಣ ಮನಸ್ಸಿನವನಾಗಿದ್ದರೂ ಸಹ ಬೇರೆ ಜನರೊಂದಿಗೆ ಬೆರೆತು ಕಷ್ಟ ಸುಖಗಳನ್ನು ಅರಿತು ಮಾನವ ಸ್ವಭಾವದ ಗುಣಗಳನ್ನು ಹೊಂದಿ ಪರಿಪೂರ್ಣವಾದ ಜೀವನ ಸಾಗಿಸಿದರೆ ಜೀವನ ಸಾರ್ಥಕವಾಗಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದಂತೆ ಆಗುತ್ತದೆ.