ಅನುಕಂಪ ಮತ್ತು ಸಹಾಯ ಎನ್ನುವುದು ಬೇರೆ ಬೇರೆಯೇ ಅರ್ಥವನ್ನು ಕೊಡುತ್ತದೆ. ಅನುಕಂಪಕ್ಕೆ ಪುಕ್ಕಟೆಯಾದ ಸಹಾಯ ದೊರೆಯುತ್ತದೆ. ಅಲ್ಲಿ ಪ್ರತ್ಯುಪಕಾರದ ಮಾತು ಇರುವುದಿಲ್ಲ. ಸಹಾಯದಲ್ಲಿ ಆತನು ನನಗೆ ಸಹಾಯ ಮಾಡಿದ್ದಾನೆ ತಿರುಗಿ ನಾನು ಸಹಾಯ ಕಷ್ಟದಲ್ಲಿ ಇದ್ದಾಗ ಮಾಡಬೇಕು ಎನ್ನುವವುದು ಇರುತ್ತದೆ. ಅನುಕಂಪ ಗಿಟ್ಟಿಸುವುದು ಬೇರೆ, ಅನುಕಂಪ ಹುಟ್ಟುವುದು ಬೇರೆ.
ಕೆಲವರು ಅನುಕಂಪಕ್ಕಾಗಿ ಏನೆಲ್ಲ ಸರ್ಕಸ್ ಮಾಡುತ್ತಾರೆ ಎಂದರೆ ತಮ್ಮ ಜೀವನ ತುಂಬಾ ಕಷ್ಟದಲ್ಲಿದೆ ಎಂದು ಬಿಂಬಿಸುತ್ತಾರೆ. ಮನೆಯಲ್ಲಿ ತುಂಬಾ ಕೆಲಸ, ಹೊರಕೆಲಸಕ್ಕೂ ಹೋಗಬೇಕು, ಮಕ್ಕಳು ತೊಂದರೆ ಕೊಡುತ್ತಾರೆ ಇಂತಹವು ಕ್ಷಣೀಕ ಅನುಕಂಪ ಪಡೆಯಲು ಹೇಳುವ ಮಾತಾದರೆ; ನನ್ನ ಬಳಿ ಹಣವಿಲ್ಲ, ನಾನು ಬಡವ, ಮಕ್ಕಳಿಗೆ ಚೆನ್ನಾಗಿ ಓದಿಸಬೇಕು ಅಂದುಕೊಂಡಿದ್ದೆ ಈ ರೀತಿಯ ಮಾತುಗಳು ಸಹ ಎದುರಿನವರಿಗೆ ಅಯ್ಯೋ ಪಾಪ ಎನ್ನಿಸಿಬಿಡುತ್ತದೆ.
ಒಂದು ಕುಟುಂಬದಲ್ಲಿ ವಯಸ್ಸಾದ ತಂದೆ ತಾಯಿ ಗಂಡ ಹೆಂಡತಿ ಎರಡು ಮಕ್ಕಳು ಇದ್ದರು. ದುಡಿಯುವ ಆ ಮನೆಯ ಯಜಮಾನನಾದ ಮಗನಿಗೆ ಅಪಘಾತವಾಗಿ ಕಾಲು ಮುರಿದುಕೊಂಡು ತಿಂಗಳುಗಟ್ಟಲೇ ಮಲಗಿಬಿಟ್ಟ. ಆದರೆ ತಾಯಿಯು ಅಕ್ಕ ಪಕ್ಕದವರಲ್ಲಿ ನೆಂಟರಲ್ಲಿ ‘ತನ್ನ ಮನೆ ನಡೆಸುವುದೇ ಕಷ್ಟವಾಗಿದೆ. ದುಡಿದು ಬರುವ ಮಗನೇ ಮಲಗಿಬಿಟ್ಟಿದ್ದಾನೆ. ನಾವು ವಯಸ್ಸಾದವರು ಎಲ್ಲಿ ದುಡಿಯಲಿಕ್ಕೆ ಆಗುತ್ತದೆ. ಮಕ್ಕಳು ಶಾಲೆಗೆ ಹೋಗಬೇಕು, ಸೊಸೆಯೋ ಮನೆಯಿಂದ ಹೊರಗೆ ಬೀಳುವವಳಲ್ಲ. ಏನು ಊಟಮಾಡುವುದೋ ಏನೋ’ ಎಂದು ಅಲವತ್ತುಕೊಂಡಳು. ಆಗ ಕೇಳಿಸಿಕೊಂಡವರಿಗೆ ಮರುಕ ಹುಟ್ಟಿ ಬಡವರು ಎಂದು ತಮ್ಮಲ್ಲಿ ಹೆಚ್ಚಾದ ತಿಂಡಿ ತಿನಿಸು ಮಕ್ಕಳಿಗೆ ಕೊಡುವುದು, ಅಕ್ಕಿ ತೆಂಗಿನ ಕಾಯಿ ಕೊಡುವುದು, ಮಕ್ಕಳಿಗಾಗೋ ರೇಶನ್‍ಗೆ ಎಂದೋ ಹಣ ಪಡೆಯುವುದು ಪ್ರಾರಂಭವಾಗುತ್ತದೆ. ನಿಜವಾಗಿ ಮನೆಯಲ್ಲಿ ಹೇಳಿಕೊಳ್ಳುವಂತ ಪರಿಸ್ಥಿತಿ ಬಿಗಡಾಯಿಸಿಲ್ಲ. ಒಳ್ಳೇಯ ಸಂಬಳದಲ್ಲಿದ್ದ ಮಗ ಎರಡು ತಿಂಗಳ ಮನೆಯಲ್ಲಿ ಇದ್ದಾನೆ ಎಂದರೆ ಹಣದ ಕೊರತೆಯಾಗಲಿ ಅಥವಾ ಊಟಕ್ಕೆ ತೊಂದರೆ ಆಗಿರಲಿಲ್ಲ. ಇದು ಕೇವಲ ಅಕ್ಕ ಪಕ್ಕದವರಲ್ಲಿ ತನ್ನ ಸಂಸಾರ ಹೀಗಾಗಿದೆ ಎಂದು ಅನುಕಂಪ ಗಿಟ್ಟಿಸಲು ಮಾಡುವ ಉಪಾಯವಷ್ಟೆ.
ಸಣ್ಣ ಸಣ್ಣ ಸುಳ್ಳುಗಳನ್ನು ಪೊಣಿಸಿ, ಹೌದೌದೌ ಎನ್ನುವ ಮಾತುಗಳನ್ನು ಆಡಿ ನಂಬಿಸಿ ಅನುಕಂಪ ಗಿಟ್ಟಿಸುವುದು ಒಂದು ಕಲೆ. ಆದರೆ ನಿಜವಾಗಿ ಅಸಾಹಾಯಕರಾದವರು ಅನುಕಂಪವನ್ನು ಪಡೆಯಲು ಸುತಾರಾಂ ಒಪ್ಪುವುದಿಲ್ಲ. ದೇಹದ ಯಾವುದೋ ಅಂಗಾಂಗ ವೈಪಲ್ಯ ಇದ್ದ ವ್ಯಕ್ತಿ ಅನುಕಂಪಕ್ಕಾಗಿ ಕಾಯದೆ ತನಗೆ ತಿಳಿದ ಸಣ್ಣ ಕೆಲಸವನ್ನಾದರೂ ಮಾಡುತ್ತಾನೆ. ಮನೆ ಮಠ ಕಳೆದುಕೊಂಡವನು ಸಹ ಬೇಡುವುದಿಲ್ಲ ದುಡಿಯಲು ಮುಂದಾಗುತ್ತಾನೆ. ಅವನಲ್ಲಿ ಒಂದು ಛಲ ಇರುತ್ತದೆ. ನಾನು ದುಡಿದು ತಿನ್ನಬೇಕು. ಯಾರೂ ಕೂಡ ಪುಕ್ಕಟೆಯಾದ ಸಹಾಯವನ್ನು ಮಾಡಬಾರದು. ಹಾಗೆ ಸಹಾಯ ತೆಗೆದುಕೊಂಡು ತಿರುಗಿ ಸಹಾಯ ಮಾಡಲಾಗದಿದ್ದರೆ ಅದು ತೃಪ್ತಿಯನ್ನು ನೀಡುವುದಿಲ್ಲ. ನಾನು ಜನರ ಕಣ್ಣಿಗೆ ಅನುಕಂಪ ಪಡೆಯುವ ವ್ಯಕ್ತಿಯಾಗಬಾರದು ಎಂದು.
ನನ್ನ ಸ್ನೇಹಿತೆಗೆ ವಾಟ್ಸಾಪ್ ಗ್ರೂಪಿನಲ್ಲಿ ಒಬ್ಬಳು ಹೆಂಗಸು ಪರಿಚಯವಾದಳು. ಅವಳು ಈಕೆಗೆ ಪ್ರತ್ಯೇಕ ಮೆಸೆಜನ್ನು ಕಳುಹಿಸಿದಳು. ನಾಲ್ಕಾರು ದಿನ ಊಟ ಆಯಿತೇ? ಎಲ್ಲರು ಸೌಖ್ಯವೇ? ನೀವು ಎಲ್ಲಿರುವುದು? ಈ ತರಹದ ಸಾಮಾನ್ಯ ಪ್ರಶ್ನೋತ್ತರಗಳು ನಡೆದವು. ನಂತರದ ದಿನದಲ್ಲಿ ಶುರುವಾಯಿತು ನೋಡಿ. ನನ್ನ ಸ್ನೇಹಿತೆಗೆ ಗೆಳತಿಯಾದವಳ ಗೋಳು. ‘ನನ್ನ ಗಂಡನಿಗೆ ನನ್ನ ಮೇಲೆ ಸಂಶಯ. ಹಾಗಾಗಿ ನನಗೆ ಸ್ವಾತಂತ್ರವಿಲ್ಲ. ನಾನು ಮನೆಯಲ್ಲಿಯೇ ಇರಬೇಕು. ಆಫೀಸ್‍ಗೆ ಹೋಗುವಾಗ ಹಾಗೂ ಹೊರಗಡೆ ಹೋಗುವಾಗ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗುತ್ತಾನೆ. ಅಪ್ಪನ ಮನೆಯವರು ತುಂಬಾ ಬಡವರು. ಅವರನ್ನು ನನ್ನ ಗಂಡನೇ ಸಾಕುತ್ತಿದ್ದಾನೆ. ನನಗೆ ಒಂದು ರೂಪಾಯನ್ನು ಕೊಡುವುದಿಲ್ಲ. ಕರೆನ್ಸಿ ಹಾಕಿಸುವುದು ಕಷ್ಟ. ಒಂದು ವಾರದಿಂದ ಮನೆಯಲ್ಲಿರುವ ವೈಪೈ ತೆಗೆದು ಹೋಗಿಲ್ಲ ಹಾಗಾಗಿ ಮೆಸೆಜಿಸುತ್ತಿದ್ದೇನೆ’ ಇವಳಿಗೆ ಅವಳ ಮಾತು ಕೇಳಿ ಕರುಳು ಚುರಕ್ ಎಂದಿದೆ. ಡೈವರ್ಸ್ ಕೊಟ್ಟು ಬಿಡು ಅನ್ನಲು ಅವಳ ತವರು ಕುಟುಂಬ ಅವನ ಆಶ್ರಯದಲ್ಲಿದೆ. ಹೆಣ್ಣಿಗೆ ಎಂಥಹ ಪರಿಸ್ಥಿತಿ ಎಂದು ಮನಸ್ಸು ಭಾರವಾಗಿಸಿಕೊಂಡು ‘ನೋಡಮ್ಮ ನಿನ್ನ ಪೋನಿಗೆ ನೆಟ್ ಪ್ಯಾಕ್ ಮತ್ತೆ ಕರೆನ್ಸಿ ನಾನು ಹಾಕುತ್ತೇನೆ. ಕಾಲಿ ಆದ ನಂತರ ಹೇಳು ಅಂದಳು.
ಮೂರು ತಿಂಗಳ ಕಾಲ ನೆಟ್ ಪ್ಯಾಕ್ ಜೊತೆಗೆ ಕರೆನ್ಸಿ ಹಣ ಕೂಡ ತುಂಬಿದಳು. ಒಂದು ದಿನ ಅವಳ ನಂಬರಿನಿಂದ ಕಾಲ್ ಬಂದಾಗ, ‘ತಾನು ಆಸ್ಪತ್ರೆಯಲ್ಲಿ ಇರುವುದಾಗಿಯೂ ನನ್ನ ಗಂಡ ದುಡ್ಡು ಕೊಡುವುದಿಲ್ಲ ಎಂದು ನನ್ನ ಬಳಿ ಮತ್ತು ಡಾಕ್ಟರ್ ಬಳಿ ಜಗಳವಾಡಿದ್ದಾನೆ ಎಂದು, ಹಾಗೂ ಇಂಥಹ ಅಕೊಂಟಿಗೆ ಆಸ್ಪತ್ರೆ ಬಿಲ್ ತುಂಬಿ ಸಹಾಯ ಮಾಡಿ’ ಎಂದು ಗೋಗರೆದಳು. ಈಕೆಗೆ ಏನು ಮಾಡಬೇಕು ತಿಳಿಯದೇ ಕಿರಿಕಿರಿ ಎನ್ನಿಸಿ ಗಂಡನಿಗೆ ವರದಿ ಒಪ್ಪಿಸಿದಳು. ಆತ ಪೋಲಿಸರ ಸಹಾಯದಿಂದ ಆ ನಂಬರಲ್ಲಿರುವ ವ್ಯಕ್ತಿಯನ್ನು ಹುಡುಕಿದಾಗ ಆ ವ್ಯಕ್ತಿ ಹೆಣ್ಣಾಗಿರಲಿಲ್ಲ. ಹೆಣ್ಣಿನ ದನಿಯಲ್ಲಿ ಮಿಮಿಕ್ರಿ ಮಾಡಿ ಸುಳ್ಳನ್ನು ಹೇಳಿ ಅನುಕಂಪ ಗಿಟ್ಟಿಸಿಕೊಂಡು ಹಲವಾರು ಜನರಲ್ಲಿ ದುಡ್ಡು ಕೀಳುತ್ತಿದ್ದ.
ಅನುಕಂಪ ಗಿಟ್ಟಿಸಿಕೊಳ್ಳು ಹೇಳುವುದೆಲ್ಲ ಸುಳ್ಳುಗಳೇ ಆಗಿರುತ್ತದೆ. ಈ ರೀತಿಯ ಅನುಕಂಪಕ್ಕಾಗಿ ಈಗೀಗ ಹಲವರು ಸಾಲು ಹಚ್ಚಿದ್ದಾರೆ. ವಿಚಾರ ಸಣ್ಣದು ಎನ್ನಿಸಬಹುದು. ಆದರೆ ಕೆಲವು ಇದೆ ಅನುಕಂಪದ ನೆಪದಲ್ಲಿ ಅನೇಕ ಸಂಕಷ್ಟವನ್ನು ಎದುರಿಸಿದವರು ಇದ್ದಾರೆ. ಅವರಿಗೆ ಬೇಕಾಗಿರುವ ಲಾಭವನ್ನು ಅನುಕಂಪ ಬರುವಂತ ಮಾತನಾಡಿ ಪಡೆಯುತ್ತಾರೆ. ನಿಜವಾದ ಅನುಕಂಪ ತೋರಬೇಕಾಗಿದ್ದು ಯಾರಿಗೆ ಎಂದು ಅರಿಯದಿರುವುದು ನಮ್ಮದೇ ತಪ್ಪು. ಸೂಕ್ಷ್ಮವಾಗಿ ಗಮನಿಸಿದರೆ ಅಂತವರ ಮಾತು ಪೊಳ್ಳೋ ಅಥವಾ ಸತ್ಯವೋ ಎಂದು ತಿಳಿಯುತ್ತದೆ. ನಂಬುವವರು ಇದ್ದಾಗ ಮಾತ್ರ ಆ ರೀತಿಯ ಮಾತುಗಳು ಆಡಲು ಸಾಧ್ಯವಾಗುತ್ತದೆ